ಪಾಕ್‌ನ ಗ್ವಾದಾರ್ ನೌಕಾನೆಲೆಯಲ್ಲಿ ಚೀನಾ ಬಲ ಹೆಚ್ಚಳ| ಗಡಿ ಬಿಕ್ಕಟ್ಟಿನ ನಡುವೆಯೇ ಚೀನಾದ ಹೊಸ ನಡೆ| ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಲ್ಲಿ ಗ್ವಾದಾರ್ ಬಂದರನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮ
ನವದೆಹಲಿ(ಜೂ.04): ಒಂದೆಡೆ ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ಮಾಡುತ್ತಲೇ, ಇನ್ನೊಂದೆಡೆ ಶಾಂತಿ ಮಂತ್ರ ಪಠಿಸುತ್ತಿರುವ ಚೀನಾ, ಪಾಕಿಸ್ತಾನದ ಗ್ವಾದಾರ್ ಬಂದರಿನಲ್ಲಿ ನೌಕಾನೆಲೆಯನ್ನು ಬಲಪಡಿಸುತ್ತಿರುವ ಮಾಹಿತಿ ಲಭ್ಯವಾಗಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಲ್ಲಿ ಗ್ವಾದಾರ್ ಬಂದರನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮವೂ ಇದೆ. ಈ ಮೂಲಕ ಅರಬ್ಬಿ ಸಮುದ್ರದಲ್ಲಿ ತನ್ನ ಹೆಜ್ಜೆಗುರುತು ಮೂಡಿಸುವ ಇರಾದೆ ಚೀನಾಗಿದೆ. ಈಗ ಅದೇ ಗ್ವಾದಾರ್ ಪೋರ್ಟ್‌ನಲ್ಲಿ ಹೊಸ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದು ಉಪಗ್ರಹ ಚಿತ್ರಗಳಲ್ಲಿ ಪತ್ತೆಯಾಗಿದೆ.
ಇಲ್ಲಿ ಹಾಗೂ ಕರಾಚಿ ಬಂದರಿನಲ್ಲಿ ನೂರಾರು ಚೀನಾ ಕೆಲಸಗಾರರು ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದ ಚೀನಾ ತನ್ನ ನೌಕಾನೆಲೆಯನ್ನು ಬಲಪಡಿಸುತ್ತಿರುವುದು ಸಾಬೀತಾಗಿದೆ ಎಂದು ಭದ್ರತಾ ತಜ್ಞರು ಹೇಳಿದ್ದಾರೆ.
ಗ್ವಾದಾರ್ ಬಂದರಿನಲ್ಲಿ ತನ್ನ ಶಕ್ತಿ ಬಲಪಡಿಸಿಕೊಂಡು, ಭಾರತದ ನೌಕಾಬಲಕ್ಕೆ ಕಡಿವಾಣ ಹಾಕಲು ಚೀನಾ ಮುಂದಾಗಿರುವುದರ ಸಂಕೇತವಿದು ಎಂದೂ ಹೇಳಲಾಗುತ್ತಿದೆ.