ಕೊರೋನಾ ಕೊಲ್ಲಲು ಮಷೀನ್ ರೆಡಿ; ಹತ್ರ ಬಂದ್ರೆ ಡೆಡ್ಲಿ ವೈರಸ್‌ ಢಮಾರ್

By Kannadaprabha NewsFirst Published Jul 9, 2020, 8:03 AM IST
Highlights

ಶೇ.99.8ರಷ್ಟು ಕೊರೋನಾ ವೈರಸ್‌ಗಳನ್ನು ಕೊಲ್ಲುವ ಯಂತ್ರವೊಂದನ್ನು ಅಮೆರಿಕಾ ವಿಜ್ಞಾನಿಗಳ ತಂಡ ಪತ್ತೆಹಚ್ಚಿದೆ. ಕೊರೋನಾಗೆ ಮದ್ದು ಮದ್ದು ಅರೆಯಲು ಕಂಗಾಲಾಗಿದ್ದವರ ನಡುವೆ ಹೊಸ ಆಶಾಕಿರಣವೊಂದು ಹೊರಹೊಮ್ಮಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹೂಸ್ಟನ್‌(ಜು.09): ಜಗತ್ತನ್ನು ಕಾಡುತ್ತಿರುವ ಕೊರೋನಾ ವೈರಸ್‌ಗೆ ಔಷಧ ಅಥವಾ ಲಸಿಕೆ ಬರುವುದಕ್ಕೂ ಮುನ್ನವೇ ವಿಜ್ಞಾನಿಗಳು ಈ ವೈರಸ್ಸನ್ನು ‘ಹಿಡಿದು ಕೊಲ್ಲುವ’ ಯಂತ್ರವೊಂದನ್ನು ಆವಿಷ್ಕರಿಸಿದ್ದಾರೆ. 

ಕಚೇರಿ, ಆಸ್ಪತ್ರೆ, ಶಾಲೆ, ವಿಮಾನ ಮುಂತಾದ ಮುಚ್ಚಿದ ಸ್ಥಳಗಳಲ್ಲಿ ಈ ಯಂತ್ರವನ್ನು ಇಟ್ಟರೆ ಅಲ್ಲಿ ಶೇ.99.8ರಷ್ಟು ಕೊರೋನಾ ವೈರಸ್‌ಗಳು ನಾಶವಾಗುತ್ತವೆ ಎಂದು ಇದನ್ನು ಕಂಡುಹಿಡಿದವರು ಹೇಳಿಕೊಂಡಿದ್ದಾರೆ. ತನ್ಮೂಲಕ ಈ ಮಹಾಮಾರಿ ವೈರಸ್‌ನಿಂದ ಕಂಗೆಟ್ಟಿರುವ ಜಗತ್ತಿಗೆ ಹೊಸ ಆಶಾಕಿರಣವೊಂದು ಗೋಚರಿಸಿದಂತಾಗಿದೆ.

ಅಮೆರಿಕದ ಹೂಸ್ಟನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದನ್ನು ಆವಿಷ್ಕರಿಸಿದ್ದು, ಈ ಬಗ್ಗೆ ‘ಮಟೀರಿಯಲ್ಸ್‌ ಟುಡೇ ಫಿಸಿಕ್ಸ್‌’ ಜರ್ನಲ್‌ನಲ್ಲಿ ಸಂಶೋಧನಾ ಪ್ರಬಂಧವನ್ನೂ ಪ್ರಕಟಿಸಿದ್ದಾರೆ. ಅವರ ಪ್ರಕಾರ, ಈ ಯಂತ್ರದ ಫಿಲ್ಟರ್‌ನಲ್ಲಿ ಒಮ್ಮೆ ಕೊರೋನಾ ವೈರಸ್‌ ಹಾದುಹೋದರೆ ತಕ್ಷಣ ಅದು ನಾಶವಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ನಿಕೆಲ್‌ ಫೋಮ್‌ ಬಳಸಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆ. ನಿಕೆಲ್‌ ಫೋಮ್‌ 200 ಡಿಗ್ರಿ ಸೆಲ್ಸಿಯಸ್‌ನಷ್ಟು ಕಾದು ವೈರಸ್‌ಗಳನ್ನು ಆಕರ್ಷಿಸಿ ಕೊಲ್ಲುತ್ತದೆ. ಕೇವಲ ಕೊರೋನಾ ವೈರಸ್‌ ಅಷ್ಟೇ ಅಲ್ಲ, ಅಂಥ್ರಾಕ್ಸ್‌ ಬ್ಯಾಕ್ಟೀರಿಯಾಗಳನ್ನೂ ಇದು ಕೊಲ್ಲುತ್ತದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಗುಡ್‌ನ್ಯೂಸ್‌ : ಯುರೋಪ್‌ನಲ್ಲಿ ಅತ್ಯಧಿಕ ಕೇಸ್ ನಂತರ ಕೊರೋನಾ ಇಳಿಕೆ, ನಮ್ಮಲ್ಲೂ ಹೀಗೇ ಆಗ್ಬೋದಾ..?

‘ಈ ಯಂತ್ರವನ್ನು ವಿಮಾನ ನಿಲ್ದಾಣ, ವಿಮಾನಗಳು, ಕಚೇರಿ ಕಟ್ಟಡಗಳು, ಶಾಲೆ-ಕಾಲೇಜು, ಹಡಗು ಮುಂತಾದ ಮುಚ್ಚಿದ ಸ್ಥಳದಲ್ಲಿ ಇರಿಸಬಹುದು. ಅಲ್ಲಿನ ವಾತಾವರಣಕ್ಕೆ ಕೊರೋನಾ ವೈರಸ್‌ ಬಿಡುಗಡೆಯಾದರೆ ತಕ್ಷಣ ಈ ಯಂತ್ರ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಈ ಯಂತ್ರದ ಡೆಸ್ಕ್‌ಟಾಪ್‌ ಮಾದರಿಯನ್ನೂ ನಾವು ಅನ್ವೇಷಿಸುತ್ತಿದ್ದೇವೆ. ಅದು ತಯಾರಾದ ನಂತರ ಕಚೇರಿಯಲ್ಲಿ ಕೆಲಸ ಮಾಡುವವರು ತಮ್ಮ ಟೇಬಲ್‌ ಮೇಲೆ ಪುಟ್ಟಯಂತ್ರ ಇರಿಸಿಕೊಂಡರೆ ಅವರ ಸುತ್ತಮುತ್ತ ಗಾಳಿಯಲ್ಲಿ ಬರುವ ಕೊರೋನಾ ವೈರಸ್‌ ತಕ್ಷಣ ನಾಶವಾಗುತ್ತದೆ’ ಎಂದು ಸಂಶೋಧನಾ ಪ್ರಬಂಧದ ಬರಹಗಾರ ಝಿಫೆಂಗ್‌ ರೆನ್‌ ಹೇಳಿದ್ದಾರೆ.

ಈ ಯಂತ್ರದ ವಾಣಿಜ್ಯಕ ಉತ್ಪಾದನೆ ಆರಂಭವಾದ ಮೇಲೆ ಮೊದಲಿಗೆ ಇವುಗಳನ್ನು ಶಾಲೆ-ಕಾಲೇಜು, ಸಂಚಾರ ವ್ಯವಸ್ಥೆ, ಆಸ್ಪತ್ರೆಗಳು ಮುಂತಾದ ಸ್ಥಳಗಳಿಗೆ ಒದಗಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕೊರೋನಾ ವೈರಸ್‌ ಗಾಳಿಯಲ್ಲಿ ಕನಿಷ್ಠ ಮೂರು ತಾಸು ಉಳಿಯುವುದರಿಂದ ಈ ಯಂತ್ರವು ವೈರಸ್‌ ವಾತಾವರಣಕ್ಕೆ ಬಿಡುಗಡೆಯಾದ ಕೂಡಲೇ ಅದನ್ನು ಕೊಂದರೆ ಒಬ್ಬರಿಂದ ಒಬ್ಬರಿಗೆ ಹರಡುವುದು ತಪ್ಪುತ್ತದೆ. ಕೊರೋನಾ ವೈರಸ್‌ 70 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಬದುಕುವುದಿಲ್ಲ. ನಾವು ಈ ಯಂತ್ರದಲ್ಲಿ 200 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣತೆ ಸೃಷ್ಟಿಯಾಗುವಂತೆ ನೋಡಿಕೊಂಡಿದ್ದೇವೆ. ಹೀಗಾಗಿ ವೈರಸ್‌ ಬದುಕುಳಿಯುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ. ಆದರೆ, ಕೈಗೆ ಅಥವಾ ಮೈಗೆ ಅಂಟಿಕೊಂಡ ಕೊರೋನಾ ವೈರಸ್ಸನ್ನೂ ಇದು ಆಕರ್ಷಿಸಿ ಕೊಲ್ಲುತ್ತದೆಯೇ ಎಂಬ ಬಗ್ಗೆ ವಿಜ್ಞಾನಿಗಳು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
 

click me!