ಸತತ 3 ದಿನಗಳ ಕಾಲ 3 ಅನುಮಾನಾಸ್ಪದ ವಸ್ತುಗಳು ಪತ್ತೆಯಾಗುತ್ತಿದೆ. ಈ ಹಿನ್ನೆಲೆ ಏಲಿಯೆನ್‌ಗಳ ಕಾಟವೂ ಇರಬಹುದು ಎಂದು ಅಮೆರಿಕ ಏರ್‌ಫೋರ್ಸ್ ಜನರಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ (ಫೆಬ್ರವರಿ 13, 2023): ಅಮೆರಿಕದಲ್ಲಿ ಒಂದು ವಾರದ ಹಿಂದೆ ಚೀನಾದ ಶಂಕಿತ ಗೂಢಚಾರಿ ಬಲೂನ್ ಪತ್ತೆಯಾದ ಬಳಿಕ ಜಗತ್ತಿನ ಹಲವೆಡೆ ತಲ್ಲಣ ಸೃಷ್ಟಿಸಿದೆ. ಬಳಿಕ, ಆ ಬಲೂನ್ ಅನ್ನು ಹೊಡೆದುರುಳಿಸಿದ ನಂತರ ಚೀನಾ ಅಮೆರಿಕಕ್ಕೆ ಪ್ರತ್ಯುತ್ತರ ನೀಡೋದಾಗಿ ಎಚ್ಚರಿಕೆಯನ್ನೂ ನೀಡಿತ್ತು. ಬಳಿಕ ಭಾರತ, ಕೆನಡಾ, ಲ್ಯಾಟಿನ್ ಅಮೆರಿಕ ಸೇರಿ ಹಲವು ದೇಶಗಳಲ್ಲೂ ಈ ಬಲೂನ್ ಹಾದುಹೋಗಿದೆ ಎಂಬ ವರದಿಗಳು ಬಂದವು. ಆ ಬೆನ್ನಲ್ಲೇ ಅಮೆರಿಕದಲ್ಲಿ ಮತ್ತೊಂದು ಅನುಮಾನಾಸ್ಪದ ವಸ್ತು ಪತ್ತೆಯಾಯ್ತು. ಅದನ್ನೂ ಸಹ ಅಮೆರಿಕ ಸೇನೆ ಹೊಡೆದುರುಳಿಸಿದೆ. ಆದರೆ, ಅದೇನು ಗ್ರಹಚಾರವೋ ಏನೋ.. ಅಮೆರಿಕಕ್ಕೆ ಮತ್ತಷ್ಟು ಆಘಾತ ಉಂಟು ಮಾಡುವಂತೆ ಸತತ 3 ದಿನಗಳ ಕಾಲ 3 ಅನುಮಾನಾಸ್ಪದ ವಸ್ತುಗಳು ಪತ್ತೆಯಾಗುತ್ತಿದೆ. ಈ ಹಿನ್ನೆಲೆ ಏಲಿಯೆನ್‌ಗಳ ಕಾಟವೂ ಇರಬಹುದು ಎಂದು ಅಮೆರಿಕ ಏರ್‌ಫೋರ್ಸ್ ಜನರಲ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಭಾನುವಾರದಂದು ಗುರುತಿಸಲಾಗದ ವಸ್ತುಗಳನ್ನು ಹೊಡೆದುರುಳಿಸಿದ ಸರಣಿ ಘಟನೆಗಳು ಸತತ 3 ದಿನ ನಡೆದಿದೆ. ಈ ಹಿನ್ನೆಲೆ, ಉತ್ತರ ಅಮೆರಿಕಾದ ವಾಯುಪ್ರದೇಶದ ಮೇಲ್ವಿಚಾರಣೆಯ ಯುಎಸ್ ಏರ್ ಫೋರ್ಸ್ ಜನರಲ್ ವಿದೇಶಿಯರು ಅಥವಾ ಯಾವುದೇ ಇತರ ವಿವರಣೆಯನ್ನು ತಳ್ಳಿಹಾಕುವುದಿಲ್ಲ ಎಂದು ಹೇಳಿದ್ದಾರೆ. ಅಮೆರಿಕದ ಗುಪ್ತಚರ ತಜ್ಞರು ಈ ಬಗ್ಗೆ ಮಾಹಿತಿ ನೀಡಬೇಕೆಂದೂ ಅವರು ಹೇಳಿದ್ದಾರೆ.
ಇದನ್ನು ಓದಿ: ಸ್ಪೈ ಬಲೂನ್ ಆಯ್ತು; ಈಗ 40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಮತ್ತೊಂದು ವಸ್ತು ಹೊಡೆದುರುಳಿಸಿದ ಅಮೆರಿಕ
ಯುಎಸ್ ಯುದ್ಧವಿಮಾನಗಳು ಆಕಾಶದಲ್ಲಿ ಹಾರಾಡುತ್ತಿದ್ದ 3 ವಸ್ತುಗಳನ್ನು ಸತತ 3 ದಿನ ಹೊಡೆದುರುಳಿಸಿದ್ದು, ಈ ವಸ್ತುಗಳು ಭೂಮಿಯಿಂದ ಹೊರಗಿನಿಂದ ಬಂದಿರಬಹುದಾ ಎಂದು ಕೇಳಿದ್ದಕ್ಕೆ, ನಾನು ಏನನ್ನೂ ತಳ್ಳಿಹಾಕುವುದಿಲ್ಲ. ಈ ಬಗ್ಗೆ ಅಮೆರಿಕದ ಗುಪ್ತಚರ ಸಮುದಾಯ ಹಾಗೂ ಕೌಂಟರ್ ಇಂಟೆಲಿಜೆನ್ಸ್ ಸಮುದಾಯ ಲೆಕ್ಕಾಚಾರ ಹಾಕಲು ಬಿಡುತ್ತೇನೆ ಎಂದು ಯುಎಸ್ ಏರ್ ಫೋರ್ಸ್ ಜನರಲ್ ಗ್ಲೆನ್ ವ್ಯಾನ್‌ಹೆರ್ಕ್ ಹೇಳಿದ್ದಾರೆ.
ಈ ಹಂತದಲ್ಲಿ ಉತ್ತರ ಅಮೆರಿಕದ ಮೇಲೆ ಪ್ರತಿ ಬೆದರಿಕೆ ಅಥವಾ ಸಂಭಾವ್ಯ ಆತಂಕವನ್ನು ನಿರ್ಣಯಿಸುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕದ ನಾರ್ತ್ ಅಮೇರಿಕನ್ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (NORAD) ಮತ್ತು ನಾರ್ದರ್ನ್ ಕಮಾಂಡ್ ಮುಖ್ಯಸ್ಥ ಗ್ಲೆನ್ ವ್ಯಾನ್‌ಹೆರ್ಕ್ ಹೇಳಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಆದೇಶದ ಮೇರೆಗೆ ಯುಎಸ್-ಕೆನಡಾ ಗಡಿಯಲ್ಲಿರುವ ಹ್ಯುರಾನ್ ಸರೋವರದ ಮೇಲೆ ಯುಎಸ್ ಎಫ್ -16 ಫೈಟರ್ ಜೆಟ್ ಅಷ್ಟಭುಜಾಕೃತಿಯ ಆಕಾರದ ವಸ್ತುವನ್ನು ಹೊಡೆದುರುಳಿಸಿದ ನಂತರ ಭಾನುವಾರ ಪೆಂಟಗನ್ ಸುದ್ದಿಗೋಷ್ಠಿಯಲ್ಲಿ ಗ್ಲೆನ್ ವ್ಯಾನ್‌ಹೆರ್ಕ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲೂ ಚೀನಾದ ಸ್ಪೈ ಬಲೂನ್: ಸೇನಾ ಕವಾಯತು ವೇಳೆ ಅಂಡಮಾನ್ ದ್ವೀಪದಲ್ಲಿ ಸಂಚಾರ..!
ಫೆಬ್ರವರಿ 4 ರಂದು ಚೀನಾದ ಶಂಕಿತ ಗೂಢಚಾರಿ ಬಲೂನ್ ಅನ್ನು ಹೊಡೆದುರುಳಿಸಿದ ನಂತರ ಶುಕ್ರವಾರದಿಂದ ಅಮೆರಿಕ ಯುದ್ಧವಿಮಾನಗಳು ಅಲ್ಲಿನ ವಾಯುನೆಲೆಯಲ್ಲಿ ಕಾಣಿಸಿಕೊಂಡ 3 ಅನುಮಾನಾಸ್ಪದ ವಸ್ತುಗಳನ್ನು ಸತತ 3 ದಿನ ಹೊಡೆದುರುಳಿಸಿದ್ದಾರೆ. ಇನ್ನು, ಈ ಯಾವುದೇ ವಸ್ತುಗಳು ಭೂಮಿಯಿಂದ ಹೊರಗಿನ ಗ್ರಹದಿಂದ ಬಂದಿವೆ ಎಂದು ಸೂಚಿಸುವ ಯಾವುದೇ ಪುರಾವೆಗಳನ್ನು ಮಿಲಿಟರಿ ಈವರೆಗೆ ಗಮನಿಸಿಲ್ಲ ಎಂದು ಸುದ್ದಿಗೋಷ್ಠಿ ಬಳಿಕ ಮತ್ತೊಬ್ಬರು ಅಮೆರಿಕ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ. ಆದರೂ, ಇತ್ತೀಚಿನ ಮೂರು ವಸ್ತುಗಳು ಎಲ್ಲಿಂದ ಬರುತ್ತಿವೆ ಎಂಬುದನ್ನು ತಕ್ಷಣ ನಿರ್ಧರಿಸಲು ಮಿಲಿಟರಿಗೆ ಸಾಧ್ಯವಾಗಲಿಲ್ಲ ಎಂದು ಗ್ಲೆನ್ ವ್ಯಾನ್‌ಹೆರ್ಕ್ ವರದಿಗಾರರಿಗೆ ತಿಳಿಸಿದರು.
ಅಲ್ಲದೆ, ನಾವು ಅವುಗಳನ್ನು ಒಂದು ಕಾರಣಕ್ಕಾಗಿ ವಸ್ತುಗಳು ಎಂದು ಕರೆಯುತ್ತಿದ್ದೇವೆ, ಬಲೂನ್‌ಗಳಲ್ಲ ಎಂದೂ ಜಂಟಿ ಯುಎಸ್-ಕೆನಡಿಯನ್ ನಾರ್ತ್ ಅಮೇರಿಕನ್ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ (NORAD) ಮತ್ತು ಯುಎಸ್ ಏರ್ ಫೋರ್ಸ್ ನಾರ್ದರ್ನ್ ಕಮಾಂಡ್‌ನ ಮುಖ್ಯಸ್ಥರಾಗಿರುವ ಗ್ಲೆನ್ ವ್ಯಾನ್‌ಹೆರ್ಕ್ ಹೇಳಿದ್ದಾರೆ.
ಪೆಂಟಗನ್ ಇತ್ತೀಚಿನ ವರ್ಷಗಳಲ್ಲಿ UFO ಗಳು ಕಾಣಿಸಿಕೊಂಡ ಬಗ್ಗೆ ಹೊಸ ಪ್ರಯತ್ನವನ್ನು ಕೈಗೊಂಡಿದ್ದರಿಂದ ಈ ಘಟನೆಗಳು ಸಂಭವಿಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಅಮೆರಿಕ ಮಾತ್ರವಲ್ಲ, ಕೆನಡಾ, ಲ್ಯಾಟಿನ್ ಅಮೆರಿಕದಲ್ಲೂ ಚೀನಾದ ಗುಪ್ತಚರ ಬಲೂನ್ ಪ್ರತ್ಯಕ್ಷ!