‘ಸಾವಿಗೀಡಾಗಿದ್ದ’ ಅಲ್‌ಖೈದಾ ಮುಖ್ಯಸ್ಥ ಪ್ರತ್ಯಕ್ಷ, ವಿಡಿಯೋ ಬಹಿರಂಗ!

By Suvarna NewsFirst Published Sep 13, 2021, 9:42 AM IST
Highlights

* ಐಮನ್‌ ಅಲ್‌ ಜವಾಹಿರಿ ವಿಡಿಯೋ ಬಿಡುಗಡೆ

* ‘ಸಾವಿಗೀಡಾಗಿದ್ದ’ ಅಲ್‌ಖೈದಾ ಮುಖ್ಯಸ್ಥ ಪ್ರತ್ಯಕ್ಷ

* ಅಮೆರಿಕ ಸೇನೆ ಹಿಂತೆಗೆತದ ಬಗ್ಗೆ ಉಗ್ರಗಾಮಿ ಪ್ರಸ್ತಾಪ

* ತಾಲಿಬಾನಿಂದ ಆಫ್ಘನ್‌ ವಶದ ಕುರಿತು ಉಲ್ಲೇಖವಿಲ್ಲ

* ಜನವರಿಯಲ್ಲಿ ಸಾವಿಗೀಡಾಗುವ ಮುನ್ನ ಶೂಟಿಂಗ್‌?

ಬೈರೂತ್‌(ಸೆ.13): ಅಲ್‌ಖೈದಾ ಪರಮೋಚ್ಚ ನಾಯಕ ಒಸಾಮಾ ಬಿನ್‌ ಲಾಡೆನ್‌ ಹತನಾದ ಬಳಿಕ ಆ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹುದ್ದೆಗೇರಿದ್ದ, ಕಳೆದ ವರ್ಷ ಅನಾರೋಗ್ಯದಿಂದ ಸಾವಿಗೀಡಾಗಿದ್ದಾನೆ ಎಂದು ಭಾವಿಸಲಾಗಿದ್ದ ಐಮನ್‌ ಅಲ್‌ ಜವಾಹಿರಿ ವಿಡಿಯೋವೊಂದು ಈಗ ಪ್ರತ್ಯಕ್ಷವಾಗಿರುವುದು ಸಂಚಲನಕ್ಕೆ ಕಾರಣವಾಗಿದೆ.

ಅಲ್‌ಖೈದಾ ಉಗ್ರರು ಅಮೆರಿಕದ ವಿಶ್ವ ವಾಣಿಜ್ಯ ಗೋಪುರಗಳನ್ನು ವಿಮಾನದಿಂದ ಡಿಕ್ಕಿ ಹೊಡೆಸಿ ನೆಲಕ್ಕುರುಳಿಸಿದ ಘೋರ ಘಟನೆಯ 20ನೇ ವರ್ಷಾಚರಣೆ ದಿನವಾದ ಶನಿವಾರವೇ ಜವಾಹಿರಿ ವಿಡಿಯೋ ಪ್ರತ್ಯಕ್ಷವಾಗಿದೆ. ಜಿಹಾದಿ ವೆಬ್‌ಸೈಟ್‌ಗಳ ಮೇಲೆ ನಿಗಾ ಇಟ್ಟಿರುವ ಸೈಟ್‌ ಗುಪ್ತಚರ ಸಂಸ್ಥೆ ಇದನ್ನು ಬಹಿರಂಗಪಡಿಸಿದೆ. ಇದು ಹಳೆಯ ವಿಡಿಯೋ ಇರಬಹುದು. ಜನವರಿಯಲ್ಲಿ ಜವಾಹಿರಿ ಸಾವಿಗೀಡಾಗಿರುವ ಸಾಧ್ಯತೆ ಇದ್ದು, ಅದಕ್ಕೆ ಮುನ್ನ ಚಿತ್ರೀಕರಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ವಿಡಿಯೋದಲ್ಲೇನಿದೆ?:

ಜೆರುಸಲೇಂ ಅನ್ನು ಎಂದಿಗೂ ಯಹೂದೀಕರಣ ಮಾಡಲಾಗದು ಎಂದು ವಿಡಿಯೋದಲ್ಲಿ ಹೇಳುವ ಜವಾಹಿರಿ, ಕಳೆದ ಜನವರಿಯಲ್ಲಿ ರಷ್ಯಾದ ಪಡೆಗಳ ಮೇಲೆ ಸಿರಿಯಾದಲ್ಲಿ ಅಲ್‌ಖೈದಾ ನಡೆಸಿದ ದಾಳಿಯನ್ನು ಪ್ರಶಂಸಿಸಿದ್ದಾನೆ. ಅಲ್ಲದೆ 20 ವರ್ಷಗಳ ಯುದ್ಧ ಕೊನೆಗಾಣಿಸಿ ಅಫ್ಘಾನಿಸ್ತಾನದಿಂದ ಅಮೆರಿಕ ಹಿಂದೆ ಸರಿಯುತ್ತಿರುವ ವಿಷಯವನ್ನೂ ಪ್ರಸ್ತಾಪಿಸಿದ್ದಾನೆ. ಆದರೆ ತಾಲಿಬಾನಿಗಳು ಅಫ್ಘಾನಿಸ್ತಾನ ಗದ್ದುಗೆಗೇರಿದ ವಿಷಯ ಈ ವಿಡಿಯೋದಲ್ಲಿ ಇಲ್ಲದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ರಷ್ಯಾ ಪಡೆಗಳ ಮೇಲೆ ಇದೇ ವರ್ಷ ಜ.1ರಂದು ದಾಳಿ ನಡೆದಿತ್ತು. ಅಫ್ಘಾನಿಸ್ತಾನದಿಂದ ಹಿಂದೆ ಸರಿಯುವುದಾಗಿ 2020ರ ಫೆಬ್ರವರಿಯಲ್ಲೇ ಅಮೆರಿಕ ಹಾಗೂ ತಾಲಿಬಾನ್‌ ಒಪ್ಪಂದ ಮಾಡಿಕೊಂಡಿದ್ದವು. ಹೀಗಾಗಿ ಈ ವಿಡಿಯೋ ಹಳೆಯದಿರಬಹುದು. ಜವಾಹಿರಿ 2021ರ ಜನವರಿ ಸುಮಾರಿಗೆ ಸಾವಿಗೀಡಾಗಿರಬಹುದು ಎಂದು ಸೈಟ್‌ ಸಂಸ್ಥೆ ಅಂದಾಜಿಸಿದೆ.

ಜವಾಹಿರಿ ವಿಡಿಯೋ 61 ನಿಮಿಷ, 37 ಸೆಕೆಂಡ್‌ ಇದ್ದು, ಅಲ್‌ಖೈದಾ ಸಂಘಟನೆಯ ಅಸ್‌- ಸಹಾಬ್‌ ಮಾಧ್ಯಮ ಪ್ರತಿಷ್ಠಾನ ಇದನ್ನು ಬಿಡುಗಡೆ ಮಾಡಿದೆ. ಜವಾಹಿರಿ ಅನಾರೋಗ್ಯದಿಂದ ಬಳಲುತ್ತಿದ್ದು, ಆತ ಸಾವಿಗೀಡಾಗಿದ್ದಾನೆ ಎಂಬ ವರದಿಗಳು 2020ರ ಕೊನೆಯಿಂದ ಹರಿದಾಡಿದ್ದವು. ಇದಕ್ಕೆ ಇಂಬು ನೀಡುವಂತೆ ಆತ ಬದುಕಿರುವುದಕ್ಕೆ ಯಾವುದೇ ವಿಡಿಯೋ ಅಥವಾ ಸಾಕ್ಷ್ಯ ಸಿಕ್ಕಿರಲಿಲ್ಲ.

click me!