ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ!

By Kannadaprabha NewsFirst Published Sep 21, 2020, 7:36 AM IST
Highlights

ಭಟ್ಕಳ ಉಗ್ರ ರಿಯಾಜ್‌ಗೆ ಪಾಕ್‌ನಿಂದ ವಿಐಪಿ ಭದ್ರತೆ!| 21 ಉಗ್ರರಿಗೆ ರಾಜಾತಿಥ್ಯ ನೀಡುತ್ತಿರುವ ಪಾಕ್‌

ಇಸ್ಲಾಮಾಬಾದ್(ಸೆ.21)‌: ಉಗ್ರ ನಿಗ್ರಹ ವಿಷಯದಲ್ಲಿ ಪದೇ ಪದೇ ಗೋಸುಂಬೆತನ ಪ್ರದರ್ಶಿಸುತ್ತಿರುವ ಪಾಕಿಸ್ತಾನ 1993ರ ಮುಂಬೈ ಸ್ಫೋಟ ಸಂಚುಕೋರ ದಾವೂದ್‌ ಇಬ್ರಾಹಿಂ ಹಾಗೂ ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆ ಮುಖ್ಯಸ್ಥನಾಗಿರುವ ಕರ್ನಾಟಕದ ಭಟ್ಕಳ ಮೂಲದ ರಿಯಾಜ್‌ ಭಟ್ಕಳ್‌ ಸೇರಿದಂತೆ 21 ಕುಖ್ಯಾತ ಉಗ್ರರಿಗೆ ರಾಜಾತಿಥ್ಯ ಮುಂದುವರೆಸಿರುವ ವಿಷಯ ಬೆಳಕಿಗೆ ಬಂದಿದೆ.

ಪಾಕ್‌ ಗಡೀಲಿ 300 ಕೋಟಿ ರೂ. ಡ್ರಗ್ಸ್‌ ಎಸೆದು ಪರಾರಿ!

ಈ ಉಗ್ರರಿಗೆ ವಿಐಪಿಗಳಿಗೆ ನೀಡುವ ಭದ್ರತೆ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಪಾಕಿಸ್ತಾನದಿಂದ ಈ ರೀತಿ ರಾಜಾತಿಥ್ಯ ಪಡೆಯುತ್ತಿರುವವರ ಪಟ್ಟಿಯನ್ನು ಅದು ಪ್ರಕಟಿಸಿದೆ.

ಪ್ಯಾರಿಸ್‌ ಮೂಲದ ‘ಹಣಕಾಸು ಕಾರ್ಯಪಡೆ’ಯ ವಾರ್ಷಿಕ ಸಭೆ ಸದ್ಯದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಈ ವರದಿ ಪಾಕಿಸ್ತಾನದ ಸಂಕಷ್ಟವನ್ನು ಇನ್ನಷ್ಟುಹೆಚ್ಚಿಸುವ ಸಾಧ್ಯತೆ ಇದೆ. ಹಣಕಾಸು ಕಾರ್ಯಪಡೆಯು 2018ರಲ್ಲೇ ಪಾಕಿಸ್ತಾನವನ್ನು ಬೂದುಪಟ್ಟಿ(ಉಗ್ರರಿಗೆ ನೆಲೆ, ಹಣಕಾಸು ನೆರವು ನೀಡುವ ದೇಶಗಳು)ಗೆ ಸೇರಿಸಿದೆ. ಇದರಿಂದ ಹೊರಬರಲು 2020ರ ಫೆಬ್ರುವರಿ ಒಳಗೆ ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿತ್ತು. ನಂತರ ಅದನ್ನು ಜೂನ್‌ಗೆ ಬಳಿಕ ಕೋವಿಡ್‌ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ಗೆ ವಿಸ್ತರಿಸಲಾಗಿತ್ತು.

ಈ ವಿಷಯವನ್ನು ಹಣಕಾಸು ಕಾರ್ಯಪಡೆ ಗಂಭೀರವಾಗಿ ಪರಿಗಣಿಸಿ, ಅದನ್ನು ಬೂದುಪಟ್ಟಿಯಿಂದ ಕಪ್ಪುಪಟ್ಟಿ(ಉಗ್ರ ನಿಗ್ರಹದಲ್ಲಿ ಅಸಹಕಾರ)ಗೆ ಸೇರಿಸಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್‌ ಭಾರೀ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ ಐಎಂಎಫ್‌, ಎಡಿಬಿ, ವಿಶ್ವಬ್ಯಾಂಕ್‌ನಿಂದ ನಿಷೇಧಕ್ಕೆ ಒಳಗಾಗುವ, ಸಾಲ ಸೌಲಭ್ಯ ನಿರಾಕರಣೆಗೆ ಒಳಗಾಗುವ, ಅಂತಾರಾಷ್ಟ್ರೀಯ ನಿಷೇಧಕ್ಕೆ ಮತ್ತು ವಹಿವಾಟು ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.

ಮಗು ಗಂಡಾ ಎಂದು ನೋಡಲು ಗರ್ಭಿಣಿ ಪತ್ನಿ ಹೊಟ್ಟೆ ಸೀಳಿದ 5 ಹೆಣ್ಣುಮಕ್ಕಳ ತಂದೆ!

ಕರ್ನಾಟಕದ ಭಟ್ಕಳ ಮೂಲದ ರಿಯಾಜ್‌ ಎಂಜಿನಿಯರಿಂಗ್‌ ಪದವೀಧರ. ಸಿಮಿ ಸಂಘಟನೆಯಲ್ಲಿ ಈತ ಗುರುತಿಸಿಕೊಂಡಿದ್ದ. ಬಳಿಕ ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯ ಟಾಪ್‌ ಕಮಾಂಡರ್‌ ಆಗಿ ಗುರುತಿಸಿಕೊಂಡಿದ್ದ. 2006ರ ಜುಲೈ 11ರಂದು 11 ನಿಮಿಷಗಳ ಅಂತರದಲ್ಲಿ ಮುಂಬೈನ ಲೋಕಲ್‌ ರೈಲುಗಳಲ್ಲಿ 7 ಸರಣಿ ಬಾಂಬ್‌ಗಳು ಸ್ಫೋಟಗಳು 209 ಮಂದಿ ಸಾವಿಗೀಡಾಗಿದ್ದರು. ಆ ಪ್ರಕರಣದ ಮುಖ್ಯ ರೂವಾರಿ ಈತ. ಹೈದರಾಬಾದ್‌, ಜೈಪುರ, ಅಹಮದಾಬಾದ್‌, ದೆಹಲಿ ಸರಣಿ ಸ್ಫೋಟಗಳಲ್ಲೂ ಈತ ಮಾಸ್ಟರ್‌ ಮೈಂಡ್‌ ಆಗಿದ್ದು, ದೇಶದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಯೂರಿದ್ದಾನೆ.

ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಜಮಾತ್‌ ಉಗ್ರ ಹಫೀಜ್‌ ಸಯೀದ್‌, ಜೈಷ್‌ ಉಗ್ರ ಮಸೂದ್‌ ಅಜರ್‌ ಸೇರಿದಂತೆ 88 ಉಗ್ರರ ವಿರುದ್ಧ ಹಲವು ನಿರ್ಬಂಧ ಹೇರಿತ್ತು. ಅವರ ಬ್ಯಾಂಕ್‌ ಖಾತೆ ಮುಟ್ಟುಗೋಲು ಹಾಕಿ, ವಿದೇಶ ಪ್ರಯಾಣಕ್ಕೆ ನಿಷೇಧ ಹೇರಿತ್ತು. ಆದರೆ ಅದೇ ಪಟ್ಟಿಯಲ್ಲಿ ಹಲವು ಉಗ್ರರಿಗೆ ಸ್ವತಃ ತಾನೇ ರಾಜಾತಿಥ್ಯ ನೀಡುತ್ತಿರುವ ವಿಷಯ, ಉಗ್ರ ನಿಗ್ರಹ ವಿಷಯದಲ್ಲಿ ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡಿದೆ.

click me!