ವೆನಿಜುವೆಲಾ ಬಳಿಕ ಗ್ರೀನ್‌ಲ್ಯಾಂಡ್‌ ಮೇಲೆ ಟ್ರಂಪ್‌ ಕಣ್ಣು

Kannadaprabha News   | Kannada Prabha
Published : Jan 08, 2026, 06:07 AM IST
Donald Trump on Greenland

ಸಾರಾಂಶ

ವೆನಿಜುವೆಲಾದ ಮೇಲಿನ ದಾಳಿ ಬಳಿಕ, ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾ ದೇಶಗಳಿಗೂ ಇದೇ ಗತಿ ಕಾಣಿಸುವುದಾಗಿ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಇದ್ದಕ್ಕಿದ್ದಂತೆ ತಮ್ಮ ಗಮನವನ್ನು ವಿಶ್ವದ ಅತಿದೊಡ್ಡ ದ್ವೀಪರಾಷ್ಟ್ರ ಗ್ರೀನ್‌ಲ್ಯಾಂಡ್‌ನತ್ತ ತಿರುಗಿಸಿದ್ದಾರೆ

ವಾಷಿಂಗ್ಟನ್: ವೆನಿಜುವೆಲಾದ ಮೇಲಿನ ದಾಳಿ ಬಳಿಕ, ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾ ದೇಶಗಳಿಗೂ ಇದೇ ಗತಿ ಕಾಣಿಸುವುದಾಗಿ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಇದ್ದಕ್ಕಿದ್ದಂತೆ ತಮ್ಮ ಗಮನವನ್ನು ವಿಶ್ವದ ಅತಿದೊಡ್ಡ ದ್ವೀಪರಾಷ್ಟ್ರ ಗ್ರೀನ್‌ಲ್ಯಾಂಡ್‌ನತ್ತ ತಿರುಗಿಸಿದ್ದಾರೆ. ‘ಗ್ರೀನ್‌ಲ್ಯಾಂಡ್‌ ಅಮೆರಿಕದ ಭಾಗ. ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ನಮಗೆ ಗ್ರೀನ್‌ಲ್ಯಾಂಡ್ ಅಗತ್ಯವಿದೆ’ ಎಂದು ಕಳೆದ 3 ದಿನಗಳಲ್ಲಿ ನಾಲ್ಕಾರು ಬಾರಿ ಹೇಳಿದ್ದಾರೆ.

ಅಧ್ಯಕ್ಷ ಟ್ರಂಪ್‌ರ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ದಾಳಿಯ ಕುರಿತು ಆತಂಕ ಹುಟ್ಟುಹಾಕುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಗ್ರೀನ್‌ಲ್ಯಾಂಡ್‌ ನೆರವಿಗೆ ಧಾವಿಸಿರುವ ಯುರೋಪಿಯನ್‌ ದೇಶಗಳು, ಅಮೆರಿಕದ ಇಂಥ ಯಾವುದೇ ಯತ್ನವನ್ನು ತಡೆಯಲು ಎಲ್ಲಾ ಯತ್ನ ನಡೆಸುವುದಾಗಿ ಎಚ್ಚರಿಸಿವೆ.

ಗ್ರೀನ್‌ಲ್ಯಾಂಡ್‌ ಮೇಲೇಕೆ ಟ್ರಂಪ್ ಕಣ್ಣು?:

ಪ್ರಪಂಚದ ಅತಿ ದೊಡ್ಡ ದ್ವೀಪವಾದ ಗ್ರೀನ್‌ಲ್ಯಾಂಡ್‌, ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶ. ಉತ್ತರ ಅಟ್ಲಾಂಟಿಕ್ ಮಹಾಸಾಗರದ ಭಾಗದಲ್ಲಿ ಬರುವ ದ್ವೀಪವು ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ ಯುರೋಪ್ ಮತ್ತು ಉತ್ತರ ಅಮೆರಿಕದ ನಡುವೆ ಇದೆ. ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕದ ದೊಡ್ಡ ವಾಯುನೆಲೆ ಇದೆ. ಇಲ್ಲಿ ಸೇನಾನೆಲೆಯನ್ನು ಬಲಪಡಿಸಿಕೊಂಡರೆ, ಅಮೆರಿಕವು ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದಿಂದ ಬರುವ ಯಾವುದೇ ಕ್ಷಿಪಣಿಗಳನ್ನು ತಡೆಯಬಹುದು. ಅದೇ ರೀತಿ, ಏಷ್ಯಾ ಅಥವಾ ಯುರೋಪ್ ಕಡೆಗೆ ಕ್ಷಿಪಣಿಗಳನ್ನು ಅಥವಾ ಹಡಗುಗಳನ್ನು ಗ್ರೀನ್‌ಲ್ಯಾಂಡ್‌ನಿಂದ ಸುಲಭವಾಗಿ ಉಡಾಯಿಸಬಹುದು.

ಖನಿಜ ಸಂಪತ್ತು ಅಧಿಕ:

ಗ್ರೀನ್‌ಲ್ಯಾಂಡ್‌ನಲ್ಲಿ ಅಪರೂಪದ ಖನಿಜಗಳು ಹೇರಳವಾಗಿವೆ. ಇವು ಮೊಬೈಲ್, ಎಲೆಕ್ಟ್ರಿಕ್‌ ವಾಹನ, ಸೆಮಿಕಂಡಕ್ಟರ್‌, ಬಾಂಬ್‌ಗಳು ಮತ್ತು ಇತರ ಶಸ್ತ್ರಾಸ್ತ್ರ ತಯಾರಿಕೆಗೆ ಅತ್ಯಂತ ಅಗತ್ಯ. ಸದ್ಯ ಅಮೆರಿಕ ಈ ವಸ್ತುಗಳಿಗಾಗಿ ಬಹುತೇಕ ಚೀನಾದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಗ್ರೀನ್‌ಲ್ಯಾಂಡ್‌ ವಶವಾದರೆ ಹಲವು ಆಯಾಮದಲ್ಲಿ ತನಗೆ ಲಾಭ ಆಗುತ್ತದೆ ಎಂದು ಅಮೆರಿಕದ ಲೆಕ್ಕಾಚಾರ. ಈ ಕಾರಣಕ್ಕಾಗಿ ಟ್ರಂಪ್‌ ಪದೇ ಪದೇ ಗ್ರೀನ್‌ಲ್ಯಾಂಡ್‌ ತಮ್ಮದು ಎಂದು ಹೇಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಯುರೋಪ್‌ ವಿರೋಧ:

ಗ್ರೀನ್‌ಲ್ಯಾಂಡ್‌ ತಮಗೆ ಸೇರಿದ್ದು ಎನ್ನುತ್ತಿರುವ ಟ್ರಂಪ್‌ ಹೇಳಿಕೆಗೆ ಯುರೋಪಿಯನ್ ನಾಯಕರು ಕಿಡಿ ಕಾರಿದ್ದಾರೆ. ಫ್ರಾನ್ಸ್‌, ಜರ್ಮನಿ, ಇಟಲಿ, ಪೋಲೆಂಡ್, ಸ್ಪೇನ್‌ ಮತ್ತು ಬ್ರಿಟನ್‌ ನಾಯಕರು ಅಮೆರಿಕದ ವಿರುದ್ಧ ಒಂದಾಗಿದ್ದು, ‘ಗ್ರೀನ್‌ಲ್ಯಾಂಡ್ ಅದರ ಜನರಿಗೆ ಸೇರಿದ್ದು. ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಧರಿಸುವ ವಿಚಾರ ಡೆನ್ಮಾರ್ಕ್‌ಗೆ ಮಾತ್ರ ಬಿಟ್ಟದ್ದು’ ಎಂದು ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೆಸ್ಲೆ ಮಕ್ಕಳ ಆಹಾರ ವಿಷಯುಕ್ತ ಅಂಶ ಪತ್ತೆ:25 ದೇಶದಲ್ಲಿ ವಾಪಸ್‌
ಅಟ್ಲಾಂಟಿಕ್‌ನಲ್ಲಿ ಯುದ್ಧದ ಭೀತಿ: ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ; ಪುಟಿನ್ ಸೇನೆ ಕೆಂಡಾಮಂಡಲ!