ಅಟ್ಲಾಂಟಿಕ್‌ನಲ್ಲಿ ಯುದ್ಧದ ಭೀತಿ: ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ; ಪುಟಿನ್ ಸೇನೆ ಕೆಂಡಾಮಂಡಲ!

Published : Jan 08, 2026, 12:19 AM IST
 Atlantic War Threat US Seizes Russian Oil Tanker Putins Army Vows Revenge

ಸಾರಾಂಶ

ವೆನೆಜುವೆಲಾದಿಂದ ತೈಲ ಹೊತ್ತು ಬರುತ್ತಿದ್ದ ರಷ್ಯಾದ ಧ್ವಜ ಹೊಂದಿರುವ ತೈಲ ಟ್ಯಾಂಕರ್ ಅನ್ನು ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿದೆ. ಈ ಕ್ರಮವನ್ನು 'ಸಮುದ್ರ ದರೋಡೆ' ಎಂದು ಕರೆದಿರುವ ರಷ್ಯಾ, ತನ್ನ ಯುದ್ಧನೌಕೆಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ.

ವಾಷಿಂಗ್ಟನ್/ಮಾಸ್ಕೋ: ಅಟ್ಲಾಂಟಿಕ್ ಸಾಗರವು ಈಗ ಜಾಗತಿಕ ಸಂಘರ್ಷದ ಅಖಾಡವಾಗಿ ಮಾರ್ಪಟ್ಟಿದೆ. ವೆನೆಜುವೆಲಾದಿಂದ ತೈಲ ಹೊತ್ತು ಬರುತ್ತಿದ್ದ ರಷ್ಯಾದ ಧ್ವಜ ಹೊಂದಿರುವ 'ಮರಿನೆರಾ' ತೈಲ ಟ್ಯಾಂಕರ್ ಅನ್ನು ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿದ್ದು, ರಷ್ಯಾ ಈ ಕ್ರಮವನ್ನು 'ಸಮುದ್ರ ದರೋಡೆ' ಎಂದು ಟೀಕಿಸಿದೆ.

ಕಡಲ್ಗಳ್ಳತನ ಎಂದು ಕಿಡಿ ಕಾರಿದ ರಷ್ಯಾ

ರಷ್ಯಾದ ಧ್ವಜ ಹೊತ್ತ ಟ್ಯಾಂಕರ್ ಅನ್ನು ಅಮೆರಿಕ ವಶಪಡಿಸಿಕೊಂಡಿರುವುದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ರಷ್ಯಾ ಕಿಡಿಕಾರಿದೆ. ಇದು ಅಮೆರಿಕ ಮಾಡುತ್ತಿರುವ ಹಗಲು ದರೋಡೆ' ಎಂದು ರಷ್ಯಾದ ಸಾರಿಗೆ ಸಚಿವಾಲಯ ಆಕ್ರೋಶ ಹೊರಹಾಕಿದೆ. ಅಮೆರಿಕದ ಪಡೆಗಳು ಹಡಗನ್ನು ಹತ್ತಿದ ತಕ್ಷಣ ಅದರೊಂದಿಗಿನ ಸಂಪರ್ಕ ಕಡಿತಗೊಂಡಿದ್ದು, ರಷ್ಯಾದ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳು ಈಗ ಘಟನಾ ಸ್ಥಳದತ್ತ ಧಾವಿಸಿವೆ ಎಂದು ವರದಿಯಾಗಿದೆ.

ನಾಗರಿಕರ ಸುರಕ್ಷತೆಗೆ ಮಾಸ್ಕೋ ಆಗ್ರಹ

ತೈಲ ಟ್ಯಾಂಕರ್‌ನಲ್ಲಿರುವ ರಷ್ಯಾದ ನಾಗರಿಕರ ಸುರಕ್ಷತೆಯ ಬಗ್ಗೆ ರಷ್ಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ರಷ್ಯಾದ ವಿದೇಶಾಂಗ ಸಚಿವಾಲಯವು, 'ನಮ್ಮ ನಾಗರಿಕರ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಅವರೊಂದಿಗೆ ಮಾನವೀಯವಾಗಿ ನಡೆದುಕೊಳ್ಳಬೇಕು. ಹಡಗಿನಲ್ಲಿರುವ ಸಿಬ್ಬಂದಿಯನ್ನು ತಕ್ಷಣವೇ ವಾಪಸ್ ಕಳುಹಿಸಲು ಅಮೆರಿಕ ಕ್ರಮ ಕೈಗೊಳ್ಳಬೇಕು' ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಅಂತರರಾಷ್ಟ್ರೀಯ ಕಡಲ ಕಾನೂನು ಉಲ್ಲಂಘನೆ ಆರೋಪ

1982 ರ ವಿಶ್ವಸಂಸ್ಥೆಯ ಕಡಲ ಕಾನೂನನ್ನು ಉಲ್ಲೇಖಿಸಿರುವ ರಷ್ಯಾ, ಯಾವುದೇ ದೇಶವು ಮತ್ತೊಂದು ದೇಶದ ನೋಂದಾಯಿತ ಹಡಗಿನ ಮೇಲೆ ಬಲಪ್ರಯೋಗ ಮಾಡುವ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದೆ. ಪುಟಿನ್ ಅವರ ಆಪ್ತ ಶಾಸಕ ಆಂಡ್ರೇ ಕ್ಲಿಶಾಸ್, ಅಮೆರಿಕದ ಈ ನಡೆಯು ಸ್ಪಷ್ಟವಾದ ಕಡಲ್ಗಳ್ಳತನವಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ, ಎಂದು ಗುಡುಗಿದ್ದಾರೆ.

ಅಮೆರಿಕಕ್ಕೆ ಸಾಥ್ ನೀಡಿದ ಬ್ರಿಟನ್

ಈ ಕಾರ್ಯಾಚರಣೆಯಲ್ಲಿ ಬ್ರಿಟನ್ ಅಮೆರಿಕದ ಬೆನ್ನಿಗೆ ನಿಂತಿದೆ. ಬ್ರಿಟಿಷ್ ರಾಯಲ್ ಏರ್ ಫೋರ್ಸ್ ತನ್ನ ವಿಮಾನಗಳ ಮೂಲಕ ಈ ಕಾರ್ಯಾಚರಣೆಯ ಮೇಲೆ ನಿಗಾ ಇರಿಸಿ ಅಮೆರಿಕಕ್ಕೆ ಸಹಾಯ ಮಾಡಿದೆ. ಅಂತರರಾಷ್ಟ್ರೀಯ ಕಾನೂನಿನ ವ್ಯಾಪ್ತಿಯಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಸಮರ್ಥಿಸಿಕೊಂಡಿದೆ.

ಶ್ಯಾಡೋ ಫ್ಲೀಟ್ ಮತ್ತು ಚಾಣಾಕ್ಷ ಕಾರ್ಯಾಚರಣೆ

ವೆನೆಜುವೆಲಾಗೆ ಸಂಬಂಧಿಸಿದ 'ಬೆಲ್ಲಾ 1' ಮತ್ತು 'ಸೋಫಿಯಾ' ಎಂಬ ಎರಡು ತೈಲ ಟ್ಯಾಂಕರ್‌ಗಳನ್ನು ಅಮೆರಿಕ ವಶಪಡಿಸಿಕೊಂಡಿದೆ. ಇವುಗಳನ್ನು 'ಶ್ಯಾಡೋ ಫ್ಲೀಟ್' (ಗುಪ್ತ ನೌಕೆಗಳು) ಎಂದು ಕರೆಯಲಾಗಿದೆ. ಬೆನ್ನಟ್ಟುವಿಕೆಯ ಸಮಯದಲ್ಲಿ ಈ ಹಡಗುಗಳು ತಮ್ಮ ಧ್ವಜವನ್ನು ಬದಲಾಯಿಸಿ ಅಮೆರಿಕದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದವು ಎಂದು ಯುಎಸ್ ಗೃಹ ಇಲಾಖೆಯ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ತಿಳಿಸಿದ್ದಾರೆ.

ಟ್ರಂಪ್ ಆಡಳಿತದ ಬಿಗಿ ಪಟ್ಟು

ವೆನೆಜುವೆಲಾದ ತೈಲ ಮಾರಾಟದ ಮೇಲೆ ಟ್ರಂಪ್ ಆಡಳಿತವು 'ಆಯ್ದ' ನಿರ್ಬಂಧಗಳನ್ನು ವಿಧಿಸುತ್ತಿದೆ. ಶ್ವೇತಭವನದ ಉಪ ಮುಖ್ಯಸ್ಥ ಸ್ಟೀಫನ್ ಮಿಲ್ಲರ್, ಯುಎಸ್ ಕಾನೂನು ಮತ್ತು ರಾಷ್ಟ್ರೀಯ ಭದ್ರತೆಗೆ ಅನುಗುಣವಾಗಿ ನಡೆಯುವವರಿಗೆ ಮಾತ್ರ ಸಮುದ್ರ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ಕಾರ್ಯಾಚರಣೆಯು ಕೇವಲ ಒಂದು ದಿನದ ಕೆಲಸವಲ್ಲ, ವಾರಗಳ ಕಾಲ ನಡೆಸಿದ ಕಠಿಣ ಪರಿಶ್ರಮದ ಫಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಅಟ್ಲಾಂಟಿಕ್ ಸಾಗರದಲ್ಲಿ ಉಭಯ ದೇಶಗಳ ನೌಕಾಪಡೆಗಳು ಮುಖಾಮುಖಿಯಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ಆತಂಕ ಮನೆಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಸ ಯೋಗ್ಯವಾಗಿತ್ತಾ ಮಂಗಳ ಗ್ರಹ? ನೀರಿನಿಂದ ರೂಪುಗೊಂಡಿರುವ 8 ಅಸಾಮಾನ್ಯ ಗುಹೆ ಪತ್ತೆ
ಮಡುರೋ ಪದಚ್ಯುತಿ ಮಾಡಿದ್ದಕ್ಕೆ ₹25000 ಕೋಟಿ ಮೌಲ್ಯದ 5 ಕೋಟಿ ಬ್ಯಾರಲ್‌ ತೈಲ ಗಿಫ್ಟ್‌!