
ಇಸ್ಲಾಮಾಬಾದ್: ವೈರಿರಾಷ್ಟ್ರ ಪಾಕಿಸ್ತಾನದಲ್ಲಿ ಮತ್ತೆ ಕೋಲಾಹಲ ಸೃಷ್ಟಿಯಾಗಿದೆ. ಆಪರೇಷನ್ ಸಿಂದೂರ ಬಳಿಕ ಪಾಕಿಸ್ತಾನದ ಲಾಹೋರ್‌ನಲ್ಲಿ ಮೂರು ಸ್ಪೋಟಗಳು ಸಂಭವಿಸಿವೆ. ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ, ಲಾಹೋರ್‌ನಲ್ಲಿ ಡ್ರೋನ್ ಮೂಲಕ ದಾಳಿ ನಡೆದಿದೆ. ಲಾಹೋರ್ ವಿಮಾನ ನಿಲ್ದಾಣಗಳ ಬಳಿ ನಡೆದ ಸ್ಫೋಟದ ಸದ್ದು ಕಿಲೋಮೀಟರ್ ದೂರವರೆಗೆ ಕೇಳಿಸಿದೆ. ಈ ಸ್ಪೋಟದ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಸೈರನ್ ಸದ್ದು ಮೊಳಗಿದೆ ಎಂದು ಅಲ್ಲಿನ ಪೊಲೀಸರೇ ದೃಢಪಡಿಸಿದ್ದಾರೆ. ಸ್ಫೋಟದ ಬಳಿಕ ಜನರು ಭಯದಿಂದ ಓಡಿ ಹೋಗುತ್ತಿರುವ ಮತ್ತು ಹೊಗೆ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಪ್ರಕಾರ, ಪಾಕಿಸ್ತಾನದ ಪೊಲೀಸರು ಮತ್ತು ಅಧಿಕಾರಿಗಳು ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಲಾಹೋರ್‌ನ ಗೋಪಾಲನಗರ ಮತ್ತು ನಾಸಿರಾಬಾದ್ ಪ್ರದೇಶ ಹಾಗೂ ವಾಲ್ಟನ್ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ಫೋಟದ ಸದ್ದು ಕೇಳಿದೆ. ಸ್ಫೋಟದ ಸದ್ದು ಕೇಳುತ್ತಿದ್ದಂತೆ ಜನರು ಭಯದಿಂದ ಮನೆಗಳಿಂದ ಹೊರ ಬಂದಿದ್ದಾರೆ. ಕೆಲವರು ದಟ್ಟವಾದ ಹೊಗೆ ನೋಡಿರೋದಾಗಿಯೂ ಹೇಳಿದ್ದಾರೆ.
ವಾಲ್ಟನ್ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಡ್ರೋನ್ ದಾಳಿ ನಡೆದಿರೋದರಿಂದ ಲಾಹೋರ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಸದ್ಯದ ವರದಿಗಳ ಪ್ರಕಾರ ಇದನ್ನು ಡ್ರೋನ್ ದಾಳಿ ಎಂದು ಹೇಳಲಾಗುತ್ತಿದ್ದು ಆದರೆ ದೃಢಪಟ್ಟಿಲ್ಲ. ಮತ್ತೆ ಕೆಲವು ವರದಿಗಳ ಪ್ರಕಾರ, ವಾಲ್ಟನ್ ವಿಮಾನ ನಿಲ್ದಾಣದ ಬಳಿ ಪಾಕಿಸ್ತಾನಿ ಸೇನಾ ಘಟಕವಿರುವ ಸ್ಥಳದಲ್ಲಿ ಈ ಸ್ಫೋಟ ಸಂಭವಿಸಿದೆ. ಸದ್ಯ ಮುಂಜಾಗ್ರತ ಕ್ರಮವಾಗಿ ಕರಾಚಿ ನಿಲ್ದಾಣದಲ್ಲಿಯೂ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗುತ್ತಿದೆ.
ಪಾಕ್‌ನಲ್ಲಿ ಆತಂಕದ ಹಲ್-ಚಲ್
ಮೇ 7ರ ಬೆಳಗಿನ ಜಾವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂದೂರ ಹೆಸರಿನಲ್ಲಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 80 ರಿಂದ 90 ಉಗ್ರರು ಸತ್ತಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯ ಬೆನ್ನಲ್ಲೇ ಲಾಹೋರ್ ಭಾಗದಲ್ಲಿ ಮೂರು ಕಡೆ ಡ್ರೋನ್ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ದಾಳಿಯನ್ನು ಯಾರು ನಡೆಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Operation Sindoor: ಭಾರತ-ಪಾಕ್ ಉದ್ವಿಗ್ನತೆ ಉಲ್ಬಣದ ಬಗ್ಗೆ ರಷ್ಯಾ ಕಳವಳ
ಪಾಕಿಸ್ತಾನದಲ್ಲಿ ರೆಡ್ ಅಲರ್ಟ್
ಭಾರತದ ಏರ್‌ಸ್ಟ್ರೈಕ್ ಬೆನ್ನಲ್ಲೇ ಪಾಕಿಸ್ತಾನದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ತುರ್ತು ಸೇವೆಗೆ ಸನ್ನದ್ದರಾಗಿರುವಂತೆ ಆದೇಶಿಸಲಾಗಿದೆ. ದೇಶದ ವಾಯುಮಾರ್ಗವನ್ನು ಮುಂದಿನ 24 ರಿಂದ 36 ಗಂಟೆಯವರೆಗೆ ಬಂದ್ ಮಾಡಲಾಗಿದೆ. ಇಸ್ಲಾಮಾಬಾದ್ ಮತ್ತು ಪಂಜಾಬ್ ಭಾಗದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಭದ್ರತಾ ಸಿಬ್ಬಂದಿ ಮತ್ತು ಸೇನೆಗಳಿಗೆ ಅಲರ್ಟ್ ಆಗಿರುವಂತೆ ಸೂಚನೆಯನ್ನು ಪಾಕ್ ಸರ್ಕಾರ ನೀಡಿದೆ. ಈ ನಡುವೆ ಹೇಳಿಕೆ ನೀಡಿರುವ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಭಾರತ ತನ್ನ ಆಕ್ರಮಣದಿಂದ ಹಿಂದೆ ಸರಿದ್ರೆ ಈ ಉದ್ವಘ್ನತೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
ಪಾಕ್‌ನಲ್ಲಿ ಉಗ್ರರಿಲ್ಲ ಎಂದ ತರಾರ್‌ಗೆ ಪತ್ರಕರ್ತೆ ಚಾಟಿ!
ಪಾಕಿಸ್ತಾನ ಉಗ್ರ ಪೋಷಕ ದೇಶವಲ್ಲ. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕ್‌ನಲ್ಲಿ ಉಗ್ರರ ನೆಲೆಗಳೇ ಇಲ್ಲ ಎಂದು ವಿದೇಶಿ ಟಿವಿ ಸಂವಾದದಲ್ಲಿ ಪಾಲ್ಗೊಂಡಿದ್ದ ಪಾಕ್ ವಾರ್ತಾ ಸಚಿವ ಅತಾವುಲ್ಲಾ ತರಾರ್ ಪೇಚಿಗೆ ಸಿಲುಕಿದ್ದಾರೆ. ಸ್ಕೈ ನ್ಯೂಸ್ ಪತ್ರಕರ್ತೆ ಯಾಲ್ದಾ ಹಕೀಂ ಜತೆ ಅವರು ಮಾತನಾಡುವಾಗ ಪಾಕಲ್ಲಿ ಉಗ್ರರಿಲ್ಲ ಎಂದರು. ಇದಕ್ಕೆ ಕೂಡಲೇ ತಿರುಗೇಟು ನೀಡಿದ ಯಾಲ್ದಾ, ‘ಹಾಗಿದ್ದರೆ ಅಲ್ ಖೈದಾ ಸಂಸ್ಥಾಪಕ ಒಸಾಮ ಬಿನ್ ಲಾಡೆನ್ ಇದ್ದದ್ದು ಎಲ್ಲಿ? ಆತ ಹತ್ಯೆ ಆಗಿದ್ದು ಎಲ್ಲಿ?’ ಎಂದು ಕೇಳಿ ತರಾರ್‌ರ ಬಾಯಿ ಮುಚ್ಚಿಸಿದರು.
ಇದನ್ನೂ ಓದಿ: ಆಪರೇಷನ್ ಸಿಂದೂರ್: ಪಾಕಿಸ್ತಾನಕ್ಕೆ ಚಾಯ್ ಕಪ್ ತೋರಿಸಿ ಟ್ರೋಲ್ ಮಾಡಿದ ಶಿಖರ್ ಧವನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ