ಭೀಕರ ಕಾಳ್ಗಿಚ್ಚಿನ ನಡುವೆಯೇ ಮೊಲದ ರಕ್ಷಣೆ ಮಾಡಿದ 'ಹೀರೋ': ಮನಕಲಕುವ ವಿಡಿಯೋ ವೈರಲ್​

By Suchethana D  |  First Published Jan 10, 2025, 7:43 PM IST

ಲಾಸ್​ ಏಂಜಲಿಸ್​ನಲ್ಲಿ ಉಂಟಾದ ಭೀಕರ ಕಾಳ್ಗಿಚ್ಚಿನ ನಡುವೆಯೇ ವ್ಯಕ್ತಿಯೊಬ್ಬ ಮೊಲದ ರಕ್ಷಣೆ ಮಾಡಿರುವ ವಿಡಿಯೋ ವೈರಲ್​ ಆಗಿದೆ.
 


ನಿನ್ನೆ ಗುರುವಾರ,  ಅಮೆರಿಕದ ಲಾಸ್‌ ಏಂಜಲಿಸ್​ನ ಹಾಲಿವುಡ್​ ಬೆಟ್ಟದಲ್ಲಿ ನಡೆದ ಶತಮಾನದ ಭೀಕರ ಕಾಳ್ಗಿಚ್ಚು ಇನ್ನೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. . 7500 ಅಗ್ನಿಶಾಮಕ ದಳ, 1162 ಅಗ್ನಿಶಾಮಕ ವಾಹನ, 23 ನೀರು ಸರಬರಾಜುದಾರರು, 31 ಹೆಲಿಕಾಪ್ಟರ್, 53 ಬುಲ್ಡೋಜರ್‌ಗಳು ಬಂದರೂ ಅಗ್ನಿಯನ್ನು ನಂದಿಸಲು ಸಾಧ್ಯವಾಗದಂಥ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದರ ಭಯಾನಕತೆ ಅರ್ಥವಾದೀತು.  ಈ ಭಾಗದಲ್ಲಿ ಮಳೆಯ ಅಭಾವ ಈ ವರ್ಷ ಉಂಟಾಗಿದ್ದ ಕಾರಣದಿಂದಲೂ ಇದು ಕಷ್ಟಸಾಧ್ಯವಾಯಿತು. ಲಾಸ್ ಏಂಜಲಿಸ್‌ನಲ್ಲಿ ನೀರಿನ ಅಭಾವದಿಂದಾಗಿ ಅಗ್ನಿಶಾಮಕ ದಳದವರು ಸಾಕಷ್ಟು ಸವಾಲು ಎದುರಿಸಬೇಕಾಗುತ್ತಿದೆ. ಸುತ್ತಲಿನ ಈಜುಕೊಳಗಳು ಮತ್ತು ಕೊಳಗಳಿಂದ ನೀರು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗಿದೆ. ಫೈರ್ ಎಂದು ಕರೆಯಲ್ಪಡುವ ಅಗ್ನಿ ಹಾಲಿವುಡ್ ಹಿಲ್ಸ್‌ನಲ್ಲಿ ಕಾಣಿಸಿಕೊಂಡಿದೆ.  20ಕ್ಕೂ ಅಧಿಕ ಎಕರೆಗೆ ಆರಂಭದಲ್ಲಿ ವ್ಯಾಪಿಸಿರುವ ಈ ಬೆಂಕಿ, ರನ್ಯಾನ್ ಕ್ಯಾನ್ಯನ್ ಮತ್ತು ವಾಟಲ್ಸ್ ಪಾಕ್​ಗಳನ್ನು ಸಂಪೂರ್ಣವಾಗಿ ಆಹುತಿ ಪಡೆದಿದೆ. 

ಇನ್ನೂ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಇದರ ನಡುವೆಯೇ, ಕಳ್ಳತನದ ಭೀತಿಯೂ ಇಲ್ಲಿ ಶುರುವಾಗಿದೆ. ಈ ಕಾಳ್ಗಿಚ್ಚಿಗೆ ಕಾರಣ ಏನು ಎಂಬ ಬಗ್ಗೆ ಇದಾಗಲೇ ವಿವಿಧ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ವ್ಯಕ್ತಿಯೊಬ್ಬ ಬೆಂಕಿ ಹಚ್ಚಿರಬಹುದು ಎನ್ನಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಕೂಡ. ಅಗ್ನಿಗೆ ಆಹುತಿಯಾಗಿರುವ ಸ್ಥಳದಲ್ಲಿಯೇ ಏನಾದರೂ ಸಿಗಬಹುದು ಎನ್ನುವ ಕಾರಣಕ್ಕೆ ಚೋರ ಭಯದಿಂದ ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಲಿವುಡ್ ಬೌಲೆವಾರ್ಡ್‌ನಿಂದ ಸಮೀಪವೇ ನಡೆದಿರುವ ಈ ಘಟನೆಯಿಂದ  ಹಾಲಿವುಡ್‌ ಹಿಲ್​ನ ಹೃದಯಭಾಗದಲ್ಲಿ ವಾಸಿಸುತ್ತಿರುವ ಮತ್ತಷ್ಟು ಜನರನ್ನು ಜಾಗ ಖಾಲಿ ಮಾಡುವಂತೆ ಸೂಚಿಸಲಾಗಿದೆ.  ಕಾಳ್ಗಿಚ್ಚು ಹಬ್ಬಿರುವ ಪ್ರದೇಶವನ್ನು ಕಾನೂನುಬದ್ಧವಾಗಿ ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಲಾಗಿದೆ  ಎಂದು ಲಾಸ್ ಏಂಜಲಿಸ್‌ ಅಗ್ನಿಶಾಮಕ ಇಲಾಖೆ ತಿಳಿಸಿದೆ. 

Tap to resize

Latest Videos

ಶತಮಾನದ ಭೀಕರ ಕಾಳ್ಗಿಚ್ಚಿಗೆ ಹಾಲಿವುಡ್​ ಅಂತ್ಯ? ಕಣ್ಣೆದುರೇ ಸೆಲೆಬ್ರಿಟಿಗಳ ಮನೆಗಳು ಧಗಧಗ- ವಿಡಿಯೋಗಳು ವೈರಲ್​

ಇದರ ನಡುವೆಯೇ ಮನಕಲಕುವ ವಿಡಿಯೋ ಒಂದು ವೈರಲ್​ ಆಗಿದೆ. ಮಾನವೀಯತೆ ಇನ್ನೂ ಜೀವಂತ ಆಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು. ಕಾಳ್ಗಿಚ್ಚು ಇದಾಗಲೇ ಮನುಷ್ಯರನ್ನು ಮಾತ್ರವಲ್ಲದೇ ಹಲವು ಪ್ರಾಣಿ-ಪಕ್ಷಿಗಳ ಆಹುತಿ ಪಡೆದಿದೆ. ಮೊಲವೊಂದು ಎಲ್ಲಿ ಹೋಗುವುದು ಎಂದು ತಿಳಿಯದೇ ಭಯದಿಂದ ಓಡಿಹೋಗುತ್ತಿತ್ತು. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಬೆಂಕಿಯನ್ನೂ ಗಮನಿಸದೇ ಆ ಮೊಲದ ರಕ್ಷಣೆಗೆ ಓಡಿದ್ದನ್ನು ನೋಡಬಹುದು. ಆದರೆ ಆ ಮೊಲ ಭಯದಿಂದ ಅತ್ತ ಕಡೆ ಓಡಿ ಹೋದಾಗ, ಅದನ್ನು ಹೇಗೆ ರಕ್ಷಣೆ ಮಾಡುವುದು ಎಂದು ತಿಳಿಯದೇ ವ್ಯಕ್ತಿ ತೊಳಲಾಡಿದ್ದು ಈ ವಿಡಿಯೋದಲದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಬಳಿಕ ಆ ಮೊಲ ಅದೃಷ್ಟವಶಾತ್​ ವಾಪಸ್​ ಓಡಿ ಬಂದಾಗ, ಅದರ ಹಿಂದೆಯೇ ಓಡಿದ ವ್ಯಕ್ತಿ ಅದನ್ನು ರಕ್ಷಣೆ ಮಾಡಿದ್ದಾನೆ. ಇದರ ಮನಕಲುಕುವ ವಿಡಿಯೋ ವೈರಲ್​ ಆಗಿದೆ. 

ಅಷ್ಟಕ್ಕೂ, ಅಮೆರಿಕದ ಅತಿ ದೊಡ್ಡ ದುರಂತವಾಗಿರುವ ಕಾಳ್ಗಿಚ್ಚು ಇಡೀ ದೇಶವನ್ನಷ್ಟೇ ಅಲ್ಲದೇ, ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ಐದು ಜನ ಪ್ರಾಣ ಕಳೆದಕೊಂಡಿದ್ದು, ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಲಾಸ್ ಏಂಜಲೀಸ್ ಮತ್ತು ಸುತ್ತಮುತ್ತ ಉರಿಯುತ್ತಿರುವ ಕಾಳ್ಗಿಚ್ಚು ಹಾಲಿವುಡ್​ ಸೆಲೆಬ್ರಿಟಿಗಳಾದ ಬಿಲ್ಲಿ ಕ್ರಿಸ್ಟಲ್, ಮ್ಯಾಂಡಿ ಮೂರ್ ಮತ್ತು ಪ್ಯಾರಿಸ್ ಹಿಲ್ಟನ್ ಸೇರಿದಂತೆ ಹಲವಾರು ಮಂದಿಯ ಮನೆಗಳನ್ನು ಕಣ್ಣೆದುರೇ ಸುಟ್ಟು ಭಸ್ಮ ಮಾಡಿದೆ. ಕೋಟ್ಯಂತರ ರೂಪಾಯಿಗಳ ಬೆಲೆಬಾಳುವ ವಸ್ತುಗಳು ಧಗಧಗನೆ ಹೊತ್ತಿಕೊಂಡು ಉರಿದಿವೆ. ಪ್ರಾಣ ಉಳಿಸಿಕೊಂಡರೆ ಸಾಕು ಎನ್ನುವಷ್ಟರಮಟ್ಟಿಗೆ ಸೆಲೆಬ್ರಿಟಿಗಳು ಸೇರಿದಂತೆ ಜನರು ಸ್ಥಳದಿಂದ ಮಾತ್ರವಲ್ಲದೇ ಊರಿನಿಂದಲೇ ಕಾಲ್ಕಿಳುತ್ತಿದ್ದಾರೆ.

 ಅತ್ತ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲೂ ಈ ಕಾಡ್ಗಚ್ಚಿನ ಪ್ರಭಾವ ಕಾಣಿಸಿಕೊಂಡಿದ್ದು, ಹೊಗೆ ಮತ್ತು ಧೂಳು ಪ್ರದೇಶದಾದ್ಯಂತ ಹಬ್ಬಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕ್ಯಾಲಿಫೋರ್ನಿಯಾದಲ್ಲಿ ವಿದ್ಯುತ್‌ ಸಂಪರ್ಕ ಕಡಿತ ಕೂಡ ಉಂಟಾಗಿದೆ. ಈ ವಿನಾಶವು ಪರಮಾಣು ಬಾಂಬ್‌ ಸ್ಫೋಟದ ನಂತರದ ಪರಿಣಾಮಕ್ಕೆ ಹೋಲಿಸಲಾಗಿದೆ.  ಲಾಸ್ ಏಂಜಲಿಸ್ ಕೌಂಟಿ ಶೆರಿಫ್ ರಾಬರ್ಟ್ ಲೂನಾ ಅವರು ಈ ವಿನಾಶವು  ಪರಮಾಣು ಬಾಂಬ್ ಬಿದ್ದಂತೆ ತೋರುತ್ತಿದೆ ಎಂದಿದ್ದಾರೆ. 

ಲಾಸ್ ಏಂಜಲಿಸ್ ಕಾಡ್ಗಿಚ್ಚಿಗೆ ಮನೆ ಕಳೆದುಕೊಂಡ ಹಾಲಿವುಡ್ ಸೆಲೆಬ್ರಿಟಿಗಳಿವರು

click me!