ಬಾಂಗ್ಲಾದೇಶ ಸರ್ಕಾರ, ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದೇಶದ ಪ್ರಥಮ ಜಲಾಂತರ್ಗಾಮಿ ನೆಲೆ, ಬಿಎನ್ಎಸ್ ಶೇಖ್ ಹಸೀನಾ' ವನ್ನು ಕಾಕ್ಸ್ ಬಜಾ಼ರ್ ಪ್ರದೇಶದ, ಪೆಕುವಾ ಎಂಬಲ್ಲಿ ಅಧಿಕೃತವಾಗಿ ಉದ್ಘಾಟಿಸಿದ್ದಾರೆ. ಇದರ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ವಿವರಿಸಿದ್ದಾರೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ.
ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಢಾಕಾ: ಮಾರ್ಚ್ 23, 2023ರಂದು ಬಾಂಗ್ಲಾದೇಶ ಸರ್ಕಾರ ತನ್ನ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ, ಬಾಂಗ್ಲಾದೇಶದ ಪ್ರಥಮ ಜಲಾಂತರ್ಗಾಮಿ ನೆಲೆ, ಬಿಎನ್ಎಸ್ ಶೇಖ್ ಹಸೀನಾ' ವನ್ನು ಪ್ರಧಾನಿ ಶೇಖ್ ಹಸೀನಾ ಅವರು ಕಾಕ್ಸ್ ಬಜಾ಼ರ್ ಪ್ರದೇಶದ, ಪೆಕುವಾ ಎಂಬಲ್ಲಿ ಅಧಿಕೃತವಾಗಿ ಉದ್ಘಾಟಿಸಿದ್ದಾರೆ ಎಂದು ತಿಳಿಸಿತು. ಈ ವ್ಯವಸ್ಥೆಯನ್ನು ಉದ್ಘಾಟಿಸಿದ ಬಾಂಗ್ಲಾ ಪ್ರಧಾನಿ, ಇದೊಂದು ಅತ್ಯಾಧುನಿಕ ಜಲಾಂತರ್ಗಾಮಿ ನೆಲೆ ಎಂದು ಶ್ಲಾಘಿಸಿದ್ದು, ಇದು ಬಾಂಗ್ಲಾದೇಶದ ಸಾಗರ ಗಡಿಗಳನ್ನು ರಕ್ಷಿಸುವ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗಲಿದೆ ಎಂದಿದ್ದಾರೆ.
ಶೇಖ್ ಹಸೀನಾ ಅವರು ಬಂಗಾಳ ಕೊಲ್ಲಿಯ ಮೂಲಕ ಸಂಚರಿಸುವ ನೌಕೆಗಳೂ ಸಹ ಈ ನೆಲೆ ಒದಗಿಸುವ ಸಹಕಾರವನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ. ಅವರು ತನ್ನ ಸರ್ಕಾರ "ಫೋರ್ಸಸ್ ಗೋಲ್ 2030" ಎಂಬ ಯೋಜನೆಯಡಿ ಸೇನಾ ಪಡೆಗಳನ್ನು ಆಧುನೀಕರಿಸುವ ಗುರಿ ಹೊಂದಿದೆ ಎಂದಿದ್ದಾರೆ. ಅದರೊಡನೆ ದೇಶೀಯ ಶಿಪ್ ಯಾರ್ಡ್ ಗಳಲ್ಲಿ ಬಾಂಗ್ಲಾದೇಶ ಮತ್ತು ವಿದೇಶಗಳಿಗೆ ಬೇಕಾದ ಹಡಗುಗಳನ್ನು ನಿರ್ಮಿಸಲಾಗುತ್ತದೆ ಎಂದಿದ್ದಾರೆ.
ಬಾಂಗ್ಲಾದೇಶದ ನೌಕಾಪಡೆ ಈಗಾಗಲೇ ಖುಲ್ನಾ ಶಿಪ್‌ಯಾರ್ಡ್‌ನಲ್ಲಿ ಐದು ಗಸ್ತು ನೌಕೆಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ದೊಡ್ಡ ನೌಕೆಗಳೂ ಸೇರಿವೆ ಎಂದಿದ್ದಾರೆ. ಕಳೆದ 14 ವರ್ಷಗಳಲ್ಲಿ, ಬಾಂಗ್ಲಾದೇಶದ ನೌಕಾಪಡೆ 31 ನೌಕೆಗಳನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದ್ದು, ಅವುಗಳಲ್ಲಿ ನಾಲ್ಕು ಫ್ರಿಗೇಟ್‌ಗಳು, ಆರು ಕಾರ್ವೆಟ್‌ಗಳು, ನಾಲ್ಕು ಸೀಜ಼ೆಬಲ್ ಗಸ್ತು ನೌಕೆಗಳು, ಐದು ಗಸ್ತು ನೌಕೆಗಳು ಮತ್ತು ಎರಡು ತರಬೇತಿ ನೌಕೆಗಳು ಸೇರಿವೆ.
ಈ ಜಲಾಂತರ್ಗಾಮಿ ನೆಲೆಯ ನಿರ್ಮಾಣಕ್ಕಾಗಿ ಸೆಪ್ಟೆಂಬರ್ 2019ರಲ್ಲಿ ಚೀನಾ ಮತ್ತು ಬಾಂಗ್ಲಾದೇಶಗಳು ಸಹಿ ಹಾಕಿದ್ದವು. ಇದರ ನಿರ್ಮಾಣದ ಆರಂಭ ಸಮಾರಂಭ ಫೆಬ್ರವರಿ 2021ರಲ್ಲಿ ನೆರವೇರಿತು. ಇತ್ತೀಚೆಗೆ ನಿರ್ಮಾಣಗೊಂಡ ಈ ಜಲಾಂತರ್ಗಾಮಿ ನೆಲೆ ಆರು ಜಲಾಂತರ್ಗಾಮಿ ನೌಕೆಗಳನ್ನು ಮತ್ತು ಎಂಟು ನೌಕಾಪಡೆಯ ಹಡಗುಗಳನ್ನು ಏಕಕಾಲದಲ್ಲಿ ಹೊಂದಬಲ್ಲದು.
ಕಾರ್ಯತಂತ್ರದ ಮಹತ್ವ
2016ರಲ್ಲಿ, ಕ್ಸಿ ಜಿನ್‌ಪಿಂಗ್ ಮೂರು ದಶಕಗಳಲ್ಲಿ ಸಾಂಪ್ರದಾಯಿಕವಾಗಿ ಭಾರತದೊಡನೆ ಸಶಕ್ತ ಸಂಬಂಧ ಹೊಂದಿದ್ದ ರಾಷ್ಟ್ರವಾದ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಮೊದಲ ಚೀನೀ ಪ್ರಧಾನಿ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು. ಕ್ಸಿ ಜಿನ್‌ಪಿಂಗ್ ಅವರ ಭೇಟಿಯ ನಂತರ, ಬಾಂಗ್ಲಾದೇಶ ಚೀನಾದಿಂದ ಎರಡು ಜಲಾಂತರ್ಗಾಮಿಗಳನ್ನು ಖರೀದಿಸಿತು. ಚೀನಾದ ತಜ್ಞರು ಬಾಂಗ್ಲಾದೇಶದಲ್ಲಿ ಜಲಾಂತರ್ಗಾಮಿ ನೆಲೆ ನಿರ್ಮಿಸುವ ಭರವಸೆ ನೀಡಿದರು. ಈ ಬೆಳವಣಿಗೆ ಪ್ರಾಂತೀಯವಾಗಿ ಭಾರತಕ್ಕೂ ಒಂದು ಹೊಸ ತಲೆನೋವಾಗಿ ಪರಿಣಮಿಸಿತು.
ಕಳೆದ ಕೆಲ ವರ್ಷಗಳ ಅವಧಿಯಲ್ಲಿ, ಬಾಂಗ್ಲಾದೇಶ ತನ್ನ ನೆರೆ ರಾಷ್ಟ್ರವಾದ ಮಯನ್ಮಾರ್ ಬಳಿ ವಾಯುನೆಲೆಗಳನ್ನು ಸ್ಥಾಪಿಸಿ, ದೇಶಾದ್ಯಂತ ಹೊಸ ಕಾಂಟೋನ್ಮೆಂಟ್‌ಗಳನ್ನು ನಿರ್ಮಿಸಿ, ನೌಕಾಪಡೆಗೆ ಹೊಸ ಫ್ರಿಗೇಟ್‌ಗಳನ್ನು ಸೇರಿಸಿಕೊಂಡು ತನ್ನ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿತು. ಅಂತಾರಾಷ್ಟ್ರೀಯ ನ್ಯಾಯಾಲಯ ಈಗಾಗಲೇ ಬಾಂಗ್ಲಾದೇಶ ತನ್ನ ನೆರೆಹೊರೆಯ ರಾಷ್ಟ್ರಗಳಾದ ಮಯನ್ಮಾರ್ ಮತ್ತು ಭಾರತದೊಡನೆ ಹೊಂದಿದ್ದ ಜಲ ಗಡಿ ವಿವಾದಗಳನ್ನು ಪರಿಹರಿಸಿದ್ದು, ಬಾಂಗ್ಲಾದೇಶ ಬಂಗಾಳ ಕೊಲ್ಲಿಯಲ್ಲಿ ತೈಲ ಹುಡುಕಾಟ ನಡೆಸಲು ಅಂತಾರಾಷ್ಟ್ರೀಯ ಸಹಕಾರ ಹೊಂದಲು ಸಾಧ್ಯವಾಗುತ್ತದೆ.
ಅಧಿಕಾರಿಗಳು ಈ ಒಪ್ಪಂದದ ಪ್ರಕಾರ 111,631 ಚದರ ಕಿಲೋಮೀಟರ್ ವ್ಯಾಪ್ತಿಯ ಸಾಗರ ಪ್ರದೇಶಕ್ಕೆ ಬಾಂಗ್ಲಾದೇಶದ ಸ್ವಾಮ್ಯವಿದೆ ಎಂದಿದ್ದು, ಇದು ಬಾಂಗ್ಲಾದೇಶದ ಒಟ್ಟು ಭೂಪ್ರದೇಶಕ್ಕೆ ಸಮಾನವಾಗಿದೆ ಎನ್ನಲಾಗಿದೆ. ಬಾಂಗ್ಲಾದೇಶದ ಸಾಗರ ಪ್ರದೇಶಗಳು ನೈಸರ್ಗಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶ ತನ್ನ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಈ ಪ್ರಯತ್ನಗಳು ಮಾನವ ಕಳ್ಳ ಸಾಗಾಣಿಕೆ ಮತ್ತು ವಸ್ತುಗಳ ಕಳ್ಳಸಾಗಣೆ ತಡೆಯುವ, ಮೀನುಗಾರರನ್ನು ರಕ್ಷಿಸುವ ಮತ್ತು ವ್ಯಾಪಾರಿ ಹಡಗುಗಳ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ಗುರಿಯನ್ನೂ ಹೊಂದಿವೆ.
ವಿಶ್ವದ ಅತಿ ಉದ್ದದ ಐಷಾರಾಮಿ ನದಿಯಾನ ಗಂಗಾ ವಿಲಾಸ..! ಕ್ರೂಸ್ ಹಡಗು ಯಾನದ ವೈಶಿಷ್ಟ್ಯ ಹೀಗಿದೆ..
ಸುಲಭವಾದ ಪ್ರಯಾಣಗಳು
ನವೆಂಬರ್ 2016ರಲ್ಲಿ, ಎರಡು ಜಲಾಂತರ್ಗಾಮಿಗಳಾದ "ಬಿಎನ್ಎಸ್ ನವಜಾತ್ರಾ" ಮತ್ತು "ಬಿಎನ್ಎಸ್ ಜೊಯ್‌ಜಾತ್ರಾ" ಗಳು ಬಾಂಗ್ಲಾದೇಶದ ನೌಕಾಪಡೆಗೆ ಸೇರ್ಪಡೆಗೊಂಡು, ಆ ದೇಶ ತನ್ನ ಮಿಲಿಟರಿಯ ಕುರಿತು ಹೊಂದಿದ್ದ ಗುರಿಯಂತೆ ಬಾಂಗ್ಲಾ ನೌಕಾಪಡೆಯನ್ನು ಮೂರು ಆಯಾಮದ ಪಡೆಯನ್ನಾಗಿ ಪರಿವರ್ತಿಸಿದವು. ಈ ಎರಡೂ ಜಲಾಂತರ್ಗಾಮಿಗಳು 035ಜಿ ವರ್ಗಕ್ಕೆ ಸೇರಿದ್ದು, 76 ಮೀಟರ್ ಉದ್ದ ಮತ್ತು 7.6 ಮೀಟರ್ ಅಗಲವಾಗಿವೆ. ಅವುಗಳಲ್ಲಿ ಟಾರ್ಪೆಡೋಗಳು ಮತ್ತು ಮೈನ್‌ಗಳನ್ನು ಅಳವಡಿಸಲಾಗಿದ್ದು, ಶತ್ರುಗಳ ನೌಕೆಗಳು ಮತ್ತು ಜಲಾಂತರ್ಗಾಮಿಗಳ ಮೇಲೆ ದಾಳಿ ನಡೆಸಬಲ್ಲವು.
ಅಧಿಕಾರಿಗಳ ಪ್ರಕಾರ, ಮಿಂಗ್ ವರ್ಗದ ಎರಡು ಜಲಾಂತರ್ಗಾಮಿಗಳು ಪ್ರಸ್ತುತ ಚಿತ್ತಗಾಂಗ್ ನಲ್ಲಿರುವ ಬಾಂಗ್ಲಾದೇಶದ ಅತಿದೊಡ್ಡ ನೌಕಾನೆಲೆಯಾದ ಬಿಎನ್ಎಸ್ ಇಸ್ಸಾ ಖಾನ್ ನೆಲೆಯಾಗಿವೆ. ಚಿತ್ತಗಾಂಗ್ ಬಂದರನ್ನು ಸುತ್ತುವರಿಯುವ ಕರ್ಣಾಫುಲಿ ನದಿಯಲ್ಲಿ ಜಲಾಂತರ್ಗಾಮಿಗಳನ್ನು ಡಾಕಿಂಗ್ ನಡೆಸುವುದು ಬಾಂಗ್ಲಾದೇಶ ನೌಕಾಪಡೆಗೆ ಸವಾಲಾಗಿದ್ದು, ಜಲಾಂತರ್ಗಾಮಿಗಳ ಓಡಾಟಕ್ಕಾಗಿ ಇತರ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾಗಿತ್ತು. ಯಾವುದೇ ವೈಮಾನಿಕ ದಾಳಿಗಳಿಂದ ಜಲಾಂತರ್ಗಾಮಿಗಳು ಹಾನಿಯಾಗದಂತೆ ಡಾಕಿಂಗ್ ಪ್ರದೇಶದ ಸುತ್ತ ಜಲಾಂತರ್ಗಾಮಿ ನೌಕೆಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಬೇಕಾಗಿತ್ತು.
ವಿಶ್ವದ ಅತೀ ಉದ್ದದ ನದಿ ಹಡಗು ಯಾನಕ್ಕೆ ಜ.13ಕ್ಕೆ ಪ್ರಧಾನಿ ಚಾಲನೆ
ಇಂತಹ ಸಮಸ್ಯೆಗಳನ್ನು ಎದುರಿಸಲು, ಬಾಂಗ್ಲಾದೇಶ ಸರ್ಕಾರ ಚೀನಾದೊಡನೆ ಸಹಯೋಗ ಹೊಂದಿ, ಈ ನೂತನ ಜಲಾಂತರ್ಗಾಮಿ ನೌಕಾ ನೆಲೆಯನ್ನು ಸ್ಥಾಪಿಸಲು ತೀರ್ಮಾನಿಸಿತು. ಬಾಂಗ್ಲಾದೇಶ ಭಾರತ ಮತ್ತು ಮಯನ್ಮಾರ್‌ಗಳೊಡನೆ ಗಡಿ ಹಂಚಿಕೊಳ್ಳುವುದರಿಂದ, ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಕಷ್ಟಕರವಾಗಿತ್ತು ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.