
ವಾಷಿಂಗ್ಟನ್ ಡಿಸಿ (ಅ.1) Flydubai FZ1073 ವಿಮಾನದಲ್ಲಿ ಆಗಸದಲ್ಲಿ ಹಾರುತ್ತಿರುವಾಗಲೇ ನಡೆದ ಭೀಕರ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Israeli Prime Minister Benjamin Netanyahu) ಅವರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ. ಈ ಘಟನೆಯಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್(Indian pilot Captain Smith Machar) ಅವರಿಗೆ ಸಹ ಪೈಲಟ್ ಚಾಕುವಿನಿಂದ ಇರಿದಿದ್ದಾನೆ. ಬಳಿಕ ವಿಮಾನವನ್ನು ಅಪಘಾತಕ್ಕೀಡು ಮಾಡಲು ಒಮನ್ ಪೈಲಟ್ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್ 35000 ಅಡಿ ಎತ್ತರದ ಆಗಸದಲ್ಲಿ ವಿಮಾನ ಹಾರುತ್ತಿರುವಾಗ ನಡೆದ ಈ ಭಯಾನಕ ದಾಳಿ ಬಗ್ಗೆ ನೆತನ್ಯಾಹು ಅವರೊಂದಿಗೆ ಚರ್ಚಿಸಿರುವುದಾಗಿ ಹೇಳಿದರು. ದಾಳಿ ನಡೆಸಿದ ವ್ಯಕ್ತಿ ಒಂದೋ ಭಯೋತ್ಪಾದಕನಿರಬೇಕು ಅಥವಾ ಮಾನಸಿಕ ಸ್ಥಿಮಿತ ಕಳೆದುಕೊಂಡವನಿರಬೇಕು ಎಂದು ಹೇಳಿದ್ದಾರೆ. ಆದ್ರೂ ಅಂಥ ಸಂದರ್ಭದಲ್ಲೂ ಪ್ರಾಣ ಲೆಕ್ಕಿಸದೆ 180 ಇಸ್ರೇಲಿಗರ ಪ್ರಾಣ ಉಳಿಸಿದ ಭಾರತ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮಾತ್ರ ರಿಯಲ್ ಹೀರೋ ಎಂದು ಶ್ಲಾಘಿಸಿದರು.
ಪೈಲಟ್ ಸ್ಮಿತ್ ಮಚ್ಚಾರ್ ತುಂಬಾ ಗಂಭೀರ ಸ್ಥಿತಿಯಲ್ಲಿದ್ದರು. ಆದರೂ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಒಂದು ರೀತಿಯಲ್ಲಿ ಹೀರೋ ಆದರು ಎಂದು ಟ್ರಂಪ್ ಹೇಳಿದ್ದಾರೆ. ಇದರೊಂದಿಗೆ ದಾಳಿಕೋರನನ್ನ ತಡೆಯಲು ಬಂದ ಸಹ ಪ್ರಯಾಣಿಕರೊಬ್ಬರು ನಡೆಸಿದ ಅದ್ಭುತ ಮಧ್ಯಪ್ರವೇಶವನ್ನು ಕೂಡ ಟ್ರಂಪ್ ಶ್ಲಾಘಿಸಿದರು.
Flydubai ಪ್ರಯಾಣಿಕ ಯಾನಿವ್ ಹಯೂನ್ ಅವರು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಭೇಟಿಯಾಗಿ ಕಾಕ್‌ಪಿಟ್ ಪ್ರವೇಶಿಸಲು ತಾವು ನಡೆಸಿದ ಪ್ರಯತ್ನದ ಬಗ್ಗೆ ವಿವರಿಸಿದ್ದಾರೆ. ನಾನು ಇತರ ಪ್ರಯಾಣಿಕರು ಸೇರಿ ದಾಳಿಕೋರನನ್ನು ತಡೆಯಲು ಮುಂದಾದೆವು. ಆ ವ್ಯಕ್ತಿಯನ್ನು ಕುತ್ತಿಗೆ ಬಿಗಿದು ಹಿಡಿದು ಕಾಕ್‌ಪಿಟ್‌ನಿಂದ ಹೊರಗೆ ಎಳೆದ ನಂತರ ಮತ್ತೆ ವಿಮಾನದ ನಿಯಂತ್ರಣಕ್ಕೆ ಸಹಾಯ ಮಾಡಲು ಮುಂದಾದೆ ಎಂದು ಅವರು ಹೇಳಿದ್ದಾರೆ ಎಂದು CNN ವರದಿ ಮಾಡಿದೆ.
ಪ್ರಯಾಣಿಕ ಯಾನಿವ್ ಹಯೂನ್ ಅವರನ್ನು ನೆತನ್ಯಾಹು 'ನಿಜವಾದ ಹೀರೋ' ಎಂದು ಕರೆದಿದ್ದಾರೆ. 'ಯಾನಿವ್, ನೀನು ನಿಜವಾದ ಹೀರೋ. ಇಸ್ರೇಲ್ ಸಿಂಹಗಳ ರಾಷ್ಟ್ರ! ಎಂದು ನೆತನ್ಯಾಹು Xನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಮಾನವು ಸಾವಿರಾರು ಅಡಿ ಕೆಳಗೆ ಕುಸಿದ ಬಳಿಕ ಸಿಬ್ಬಂದಿ ಮತ್ತು ಪ್ರಯಾಣಿಕರು ಮಧ್ಯಪ್ರವೇಶಿಸಿದರು. ನಂತರ ವಿಮಾನ ಸುರಕ್ಷಿತವಾಗಿ ಸೌದಿ ಅರೇಬಿಯಾದಲ್ಲಿ ಇಳಿಯಿತು ಎಂದು Fox News ವರದಿ ಮಾಡಿದೆ.
ದಾಳಿಯ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕ್ಯಾಪ್ಟನ್ ಮಚ್ಚಾರ್ ಮತ್ತು ಪ್ರಯಾಣಿಕರು ತೋರಿದ ಧೈರ್ಯಕ್ಕೆ ಭಾರತೀಯ ಮತ್ತು ಇಸ್ರೇಲಿ ರಾಜತಾಂತ್ರಿಕ ಕಚೇರಿಗಳು ಸೇರಿದಂತೆ ಜಾಗತಿಕ ವಿಮಾನಯಾನ ಕ್ಷೇತ್ರದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇಸ್ರೇಲ್ ವಿದೇಶಾಂಗ ಸಚಿವಾಲಯವೂ ಕ್ಯಾಪ್ಟನ್ ಮಚ್ಚಾರ್ ಅವರನ್ನು ಹೀರೋ ಎಂದು ಶ್ಲಾಘಿಸಿದೆ. ಕಾಕ್‌ಪಿಟ್‌ನಲ್ಲಿ ಇರಿತಕ್ಕೊಳಗಾದ ಬಳಿಕವೂ ಅವರು ದಾಳಿಕೋರನ ವಿರುದ್ಧ ಹೋರಾಡಿ, ಗಂಭೀರವಾಗಿ ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು ಎಂದು ಸಚಿವಾಲಯ ಹೇಳಿದೆ.
'ಈ ವ್ಯಕ್ತಿ ಹೀರೋ. Flydubai Flight 1073ರ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಕಾಕ್‌ಪಿಟ್‌ನಲ್ಲಿ ಇರಿತಕ್ಕೊಳಗಾದ ಬಳಿಕವೂ ಹೋರಾಡಿದರು. ಗಂಭೀರವಾಗಿ ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಇಸ್ರೇಲಿ ಪ್ರಯಾಣಿಕರು ಮತ್ತು ಎಮಿರೇಟ್ ಸಿಬ್ಬಂದಿ ಮಧ್ಯಪ್ರವೇಶಿಸಿ ಎಲ್ಲ ಪ್ರಯಾಣಿಕರನ್ನು ರಕ್ಷಿಸಲು ಸಾಧ್ಯವಾಯಿತು. ಅವರ ಅಸಾಧಾರಣ ಧೈರ್ಯದಿಂದ ನೂರಾರು ಜನರ ಜೀವ ಉಳಿಯಿತು. ಭಾರತೀಯರು, ಇಸ್ರೇಲಿಗಳು, ಎಮಿರೇಟಿಗಳು ಬೇರೆ ಬೇರೆ ದೇಶಗಳ ಜನರು ಒಂದಾಗಿ ತೋರಿದ ಅಸಾಧಾರಣ ಧೈರ್ಯ ಇದು. ಕ್ಯಾಪ್ಟನ್ ಮಚ್ಚಾರ್ ಅವರು ಶೀಘ್ರವಾಗಿ ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ' ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ Xನಲ್ಲಿ ಪೋಸ್ಟ್ ಮಾಡಿದೆ.
ಇನ್ನು ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಕೂಡ ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.
'ಇಸ್ರೇಲಿ, ಭಾರತೀಯ ಮತ್ತು ಯುಎಇ ಜನರೊಂದಿಗೆ ಸೇರಿ Flydubai FZ1073 ವಿಮಾನದ ಅನುಭವಿ ಮತ್ತು ಪ್ರತಿಭಾವಂತ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಜೀವಕ್ಕಾಗಿ ಪ್ರಾರ್ಥಿಸುತ್ತೇನೆ. ಅವರ ಧೈರ್ಯ ಹಾಗೂ ಇತರ ಇಸ್ರೇಲಿ ಮತ್ತು ಎಮಿರೇಟಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಧೈರ್ಯ 180 ಜನರ ಜೀವ ಉಳಿಸಿದೆ. ಭಯೋತ್ಪಾದನೆಯ ವಿರುದ್ಧ ಒಂದಾಗಿ ನಿಲ್ಲೋಣ' ಎಂದು ಅಜರ್ Xನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೂ ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದೆ.
Flydubai FZ1073 ವಿಮಾನದ ಧೈರ್ಯಶಾಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಹೃತ್ಪೂರ್ವಕ ಗೌರವ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಗಾಯಗೊಂಡಿದ್ದರೂ, ಕ್ಯಾಪ್ಟನ್ ಮಚ್ಚಾರ್ ಅವರು ತೋರಿದ ಧೈರ್ಯ, ಸ್ಥೈರ್ಯ ಮತ್ತು ಕರ್ತವ್ಯನಿಷ್ಠೆಯಿಂದ ವಿಮಾನದಲ್ಲಿದ್ದ ನೂರಾರು ಜೀವ ಉಳಿಸಿದರು. ಅವರು ಶೀಘ್ರವಾಗಿ ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ' ಎಂದು ರಾಯಭಾರ ಕಚೇರಿ ಹೇಳಿದೆ.
ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಕೂಡ ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.
'ಆಕಾಶದಲ್ಲಿ ಧೈರ್ಯವೇ ಎಲ್ಲವನ್ನೂ ನಿಯಂತ್ರಿಸಿತು. Flydubai FZ1073 ವಿಮಾನದ ಧೈರ್ಯಶಾಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಗೌರವ ಸಲ್ಲಿಸುತ್ತೇವೆ. ವಿಮಾನದಲ್ಲಿದ್ದ ಧೈರ್ಯಶಾಲಿ ಜನರೊಂದಿಗೆ ಅವರು ನಿಂತು, ಊಹಿಸಲೂ ಸಾಧ್ಯವಾಗದ ದುರಂತವನ್ನು ತಪ್ಪಿಸಿ ವಿಮಾನವನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡಿದರು. ಅವರು ಶೀಘ್ರವಾಗಿ ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ” ಎಂದು ಕ್ವಾತ್ರಾ Xನಲ್ಲಿ ಹೇಳಿದ್ದಾರೆ.
ಕ್ಯಾಪ್ಟನ್ ಮಚ್ಚಾರ್ ಅನುಭವಿ ಪೈಲಟ್ ಆಗಿದ್ದು ಪ್ರಸ್ತುತ ಯುಎಇ ಮೂಲದ Flydubai ವಿಮಾನಯಾನ ಸಂಸ್ಥೆಯಲ್ಲಿ ನೇರ ನೇಮಕಾತಿ ಮೂಲಕ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ವಾಣಿಜ್ಯ ವಿಮಾನಯಾನ ಕ್ಷೇತ್ರದಲ್ಲಿ 13 ವರ್ಷಕ್ಕೂ ಹೆಚ್ಚು ಅನುಭವ ಹೊಂದಿದ್ದಾರೆ. ಒಟ್ಟು 9,750 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಅವರು, ಬಹುತೇಕ Boeing 737 (B737) ವಿಮಾನಗಳ ಹಾರಾಟ ನಡೆಸಿದ ಅನುಭವಿಯಾಗಿದ್ದಾರೆ. Flydubai ಸೇರುವ ಮೊದಲು ಅವರು ಭಾರತೀಯ ವಿಮಾನಯಾನ ಸಂಸ್ಥೆಯೊಂದರಲ್ಲಿ 11 ವರ್ಷ ಕೆಲಸ ಮಾಡಿದ್ದರು. ಅಲ್ಲಿ Line Training Captain ಆಗಿ ಸೇವೆ ಸಲ್ಲಿಸಿದ್ದರು.
ಈ ನಡುವೆ ಬುಧವಾರ ನಡೆದ ಈ ಘಟನೆ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಮತ್ತು ಇಸ್ರೇಲ್‌ನಿಂದ Flydubai ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ ಎಂದು CNN ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ