
ನವದೆಹಲಿ (ಸೆ.30): ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ (Flydubai) ವಿಮಾನದ ಕಾಕ್‌ಪಿಟ್‌ನಲ್ಲಿ (Cockpit) ನಡೆದ ಭೀಕರ ಹಿಂಸಾತ್ಮಕ ಸಂಘರ್ಷದ ವೇಳೆ ಭಾರತೀಯ ಮೂಲದ ಪೈಲಟ್ ಸಾಹಸ ಜಗತ್ತಿಗೆ ಗೊತ್ತಾಗಿದೆ.. ತೀವ್ರ ರಕ್ತಸ್ರಾವ ಹಾಗೂ ಚಾಕು ಇರಿತದ ಗಾಯಗಳ ನಡುವೆಯೂ ಧೈರ್ಯಗುಂದದ ಕ್ಯಾಪ್ಟನ್, ಸಹ-ಪೈಲಟ್ ವಿಮಾನವನ್ನು ಪತನಗೊಳಿಸಲು ನಡೆಸಿದ ಸಂಚನ್ನು ವಿಫಲಗೊಳಿಸಿ ಸುಮಾರು 180 ಇಸ್ರೇಲಿ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.
ಈ ಹೀರೋ ಪೈಲಟ್ ಅವರನ್ನು ಭಾರತದ ಸ್ಮಿತ್ ಮಾಛರ್ (Smit Machhar) ಎಂದು ಗುರುತಿಸಲಾಗಿದೆ. ಕಾಕ್‌ಪಿಟ್‌ನಲ್ಲಿ ನಡೆದ ತೀವ್ರ ಘರ್ಷಣೆಯ ನಂತರ ವಿಮಾನವನ್ನು ಸೌದಿ ಅರೇಬಿಯಾದ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ (Emergency Landing) ಮಾಡಲಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಘಟನೆಯು ಯಾವುದೇ ವಿಮಾನ ಅಪಹರಣ (Hijack) ಅಲ್ಲ ಎಂಬುದನ್ನು ಇಸ್ರೇಲ್ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಬುಧವಾರ ಇಸ್ರೇಲ್‌ನ ಪ್ರಮುಖ ವೆಬ್‌ಸೈಟ್ 'ವೈನೆಟ್' (Ynet) ಅಧಿಕಾರಿಗಳನ್ನು ಉಲ್ಲೇಖಿಸಿ ಪ್ರಕಟಿಸಿರುವ ವರದಿಯ ಪ್ರಕಾರ, ಫ್ಲೈದುಬೈ ಸಂಸ್ಥೆಯ 'ಎಫ್‌ಝಡ್ 1073' (FZ1073) ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಾಛರ್ ಹಾಗೂ ಓಮನ್ ದೇಶದ ಪ್ರಜೆಯಾಗಿದ್ದ ಸಹ-ಪೈಲಟ್ ನಡುವೆ ಭೀಕರ ಸಂಘರ್ಷ ಏರ್ಪಟ್ಟಿತ್ತು.
ಓಮನ್ ಮೂಲದ ಕೋ-ಪೈಲಟ್ ವಿಮಾನವನ್ನು ಉದ್ದೇಶಪೂರ್ವಕವಾಗಿ ಪತನಗೊಳಿಸಲು (Crash) ಯತ್ನಿಸುತ್ತಿದ್ದಾನೆ ಎಂಬ ಶಂಕೆ ವ್ಯಕ್ತವಾಗುತ್ತಿದ್ದಂತೆಯೇ, ಅದನ್ನು ತಡೆಯಲು ಭಾರತೀಯ ಕ್ಯಾಪ್ಟನ್ ಆತನೊಂದಿಗೆ ಹೋರಾಟ ನಡೆಸಿದ್ದಾರೆ. ಈ ವೇಳೆ ಕೋ-ಪೈಲಟ್ ಚಾಕುವಿನಿಂದ ದಾಳಿ ನಡೆಸಿದ್ದರೂ, ಗಾಯಗೊಂಡ ಕ್ಯಾಪ್ಟನ್‌ಗೆ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ಸಹ-ಪೈಲಟ್‌ನನ್ನು ನಿಯಂತ್ರಿಸಲು ನೆರವಾಗಿದ್ದಾರೆ. ಘಟನೆಯಲ್ಲಿ ಇಬ್ಬರೂ ಪೈಲಟ್‌ಗಳು ಗಾಯಗೊಂಡಿದ್ದು, ಸೌದಿ ಅರೇಬಿಯಾದ 'ತಬುಕ್' (Tabuk) ವಿಮಾನ ನಿಲ್ದಾಣದ ಅಧಿಕಾರಿಗಳು ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದುಬೈನಿಂದ ಹೊರಟಿದ್ದ ಈ ವಿಮಾನವು ಸೌದಿ ಅರೇಬಿಯಾದ ಆಕಾಶಮಾರ್ಗದಲ್ಲಿ ಸಾಗುತ್ತಿದ್ದಾಗ ಹಠಾತ್ತನೆ 'ಎಮರ್ಜೆನ್ಸಿ ಸಿಗ್ನಲ್' ರವಾನಿಸಿ ಅತ್ಯಂತ ವೇಗವಾಗಿ ಕೆಳಮುಖವಾಗಿ ಇಳಿಯಲು ಆರಂಭಿಸಿತು. ತಕ್ಷಣವೇ ಜಾಗರೂಕರಾದ ಪೈಲಟ್ ವಿಮಾನವನ್ನು ಸೌದಿಯ ತಬುಕ್ ನಗರದತ್ತ ತಿರುಗಿಸಿದರು. ಆರಂಭದಲ್ಲಿ ವಿಮಾನ ಅಪಹರಣಗೊಂಡಿರಬಹುದು ಎಂಬ ಶಂಕೆಯಿಂದ ಇಸ್ರೇಲ್ ಅಧಿಕಾರಿಗಳು ತಕ್ಷಣವೇ ತಮ್ಮ 'ಫೈಟರ್ ಜೆಟ್'ಗಳನ್ನು ಆಕಾಶಕ್ಕೆ ಹಾರಿಸಿ ಭದ್ರತೆ ಹೆಚ್ಚಿಸಿದ್ದರು. ಆದರೆ ನಂತರ ಇದು ಅಪಹರಣವಲ್ಲ ಎಂಬುದು ಖಚಿತವಾಯಿತು.
ಘಟನೆ ಕುರಿತು ಪ್ರತಿಕ್ರಿಯಿಸಿರುವ 'ಫ್ಲೈದುಬೈ' ಸಂಸ್ಥೆಯು, "ಎಲ್ಲಾ ಪ್ರಯಾಣಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಘಟನೆಗೆ ನಿಖರವಾದ ಕಾರಣ ಮತ್ತು ಉದ್ದೇಶ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಅಧಿಕೃತ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿಯುವವರೆಗೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು" ಎಂದು ಮನವಿ ಮಾಡಿದೆ.
ಘಟನೆಯ ತೀವ್ರತೆಯ ಕುರಿತು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, "ವಿಮಾನದಲ್ಲಿದ್ದ ಬಹುತೇಕ ಎಲ್ಲ ಪ್ರಯಾಣಿಕರೂ ಇಸ್ರೇಲಿ ಪ್ರಜೆಗಳಾಗಿದ್ದರು. ವಿಮಾನವು ಇಸ್ರೇಲ್ ಗಡಿಯ ಸಮೀಪಕ್ಕೆ ತಲುಪುತ್ತಿದ್ದಂತೆಯೇ, ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ವಿಮಾನದಲ್ಲಿದ್ದ ಎಲ್ಲರನ್ನೂ ಕೊಲ್ಲುವ ಉದ್ದೇಶದಿಂದ ಆತ ವಿಮಾನವನ್ನು ಪತನಗೊಳಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಾಹಸ ಮೆರೆದು 180 ಜನರ ಜೀವ ರಕ್ಷಿಸಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಾಛರ್ ಅವರ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಈಗ ಜಗತ್ತಿನಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ