ಕ್ಷಿಪಣಿ ಬಳಿಕ ಈಗ 28 ಡ್ರೋನ್ ಬಳಸಿ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಈ ದಾಳಿಗೆ ನೂರಾರು ಕಟ್ಟಡ ನಾಶವಾಗಿದ್ದು, ಬೆಂಕಿಗೆ ಆಹುತಿಯಾಗಿದೆ. ಅಲ್ಲದೆ, 8 ಜನರು ಮೃತಪಟ್ಟಿದ್ದಾರೆ ಎಂದೂ ಉಕ್ರೇನ್ ಸರ್ಕಾರ ಮಾಹಿತಿ ನೀಡಿದೆ.
ಕೀವ್: ಕಳೆದ ವಾರವಷ್ಟೇ ಉಕ್ರೇನ್ (Ukraine) ಮೇಲೆ ಮತ್ತೆ ದಾಳಿ ಆರಂಭಿಸಿದ್ದ ರಷ್ಯಾ (Russia), ಈ ಬಾರಿ ತನ್ನ ಯುದ್ಧದ (War) ವರಸೆ ಬದಲಿಸಿದ್ದು, ಕ್ಷಿಪಣಿ (missile) ಬದಲು 28 ಆತ್ಮಾಹುತಿ ಡ್ರೋನ್‌ಗಳನ್ನು (Drone) ಬಳಸಿ ದಾಳಿ ನಡೆಸಿದೆ. ಇರಾನಿ ನಿರ್ಮಿತ ಶಹೀದ್ (ಕ್ಯಾಮಿಕೇಜ್) ಡ್ರೋನ್ (Kamikaze Drone) ದಾಳಿ ನಡೆಸಿದೆ. ಇದರಿಂದಾಗಿ ಕೀವ್ (Kyiv) ನಗರವು ಸ್ಫೋಟದಿಂದ ತತ್ತರಿಸಿದೆ ಹಾಗೂ ನೂರಾರು ಕಟ್ಟಡಗಳು ಬೆಂಕಿಗೆ ಆಹುತಿ ಆಗಿವೆ. ಇನ್ನು, ಈ ದಾಳಿಯಲ್ಲಿ 8 ಜನರು ಬಲಿಯಾಗಿದ್ದಾರೆ ಎಂದು ಉಕ್ರೇನ್ ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ರಷ್ಯಾ ಉಕ್ರೇನ್ ಮೇಲೆ ಮತ್ತಷ್ಟು ದಾಳಿ ನಡೆಸಿದ್ದು, ಇದು ಸದ್ಯಕ್ಕೆ ನಿಲ್ಲವ ಸೂಚನೆಗಳು ಕಾಣಿಸುತ್ತಿಲ್ಲ.
ಶಹೀದ್ ಡ್ರೋನ್‌ಗಳಲ್ಲಿ ಸ್ಫೋಟಕ ತುಂಬಿ ನಿರ್ದಿಷ್ಟ ಗುರಿ ನಿಗದಿಪಡಿಸಿ ಪ್ರಯೋಗಿಸಲಾಗುತ್ತದೆ. ನಿರ್ದಿಷ್ಟ ಗುರಿಗೆ ಅವು ತಲುಪಿ ಸ್ಫೋಟಗೊಂಡು ಭಾರಿ ಸಾವು ನೋವು, ವಿನಾಶ ಉಂಟುಮಾಡುತ್ತವೆ. ಕ್ಷಿಪಣಿಯಷ್ಟೇ ಇವು ಶಕ್ತಿಶಾಲಿ ಆಗಿವೆ. ಕಳೆದ ವರ್ಷ ಇರಾನ್‌ನಿಂದ 1000 ಶಹೀದ್ ಡ್ರೋನ್‌ಗಳನ್ನು ರಷ್ಯಾ ಖರೀದಿಸಿತ್ತು. ಅವನ್ನು ಈಗ ಪ್ರಯೋಗಿಸುತ್ತಿದೆ.
‘ಕೀವ್ ಮೇಲೆ 28 ಡ್ರೋನ್ ಬಳಸಲಾಗಿದೆ. 13 ಡ್ರೋನ್‌ಗಳನ್ನು ಉಕ್ರೇನ್ ಸೇನೆ ಹೊಡೆದುರುಳಿಸಿದೆ’ ಎಂದು ಉಕ್ರೇನ್ ಸರ್ಕಾರ ಹೇಳಿದೆ. ದಾಳಿಯ ತೀವ್ರತೆಗೆ ಕೀವ್‌ನಲ್ಲಿ ಅಪಾರ್ಟ್‌ಮೆಂಟೊಂದು ಸಂಪೂರ್ಣ ಧ್ವಂಸಗೊಂಡಿದ್ದು ಕಂಡುಬಂತು. ಅದರೊಳಗೆ ಸಿಲುಕಿದ್ದ 18 ಮಂದಿಯನ್ನು ರಕ್ಷಿಸಲಾಗಿದೆ. ನಗರದಾದ್ಯಂತ ಭಾರಿ ಹೊಗೆ ಕಟ್ಟಡದ ಅವಶೇಷಗಳು ಸರ್ವೇಸಾಮಾನ್ಯವಾಗಿವೆ. ಕೆಲವು ಡ್ರೋನ್‌ಗಳನ್ನು ಪತ್ರಿಕಾ ಛಾಯ್ರಾಹಕರರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನು ಓದಿ: ವಯಾಗ್ರಾ ಸೇವಿಸಿ ಉಕ್ರೇನಿಗಳ ಮೇಲೆ Russia ಯೋಧರ ರೇಪ್!
ದಾಳಿಯನ್ನು ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ, ‘ಹಗಲು ರಾತ್ರಿ ನಮ್ಮನ್ನು ಬೆಚ್ಚಿ ಬೀಳಿಸುವ ಯತ್ನ ನಡೆದಿವೆ. ಕ್ಯಾಮಿಕೇಜ್ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ದಾಳಿ ನಡೆಯುತ್ತಿದೆ. ನಮ್ಮ ನಗರಗಳನ್ನು ವೈರಿಗಳು ದಾಳಿ ಮಾಡಬಲ್ಲವು. ಆದರೆ ನಮ್ಮ ಬಲವನ್ನು ಉಡುಗಿಸಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.
ರಷ್ಯಾದ 13 ಜನರು ಬಲಿ..!
ಇನ್ನು, ಉಕ್ರೇನ್ ಮೇಲೆ ದಾಳಿ ಮಾಡಬೇಕಾಗಿದ್ದ ವಿಮಾನ ಉಕ್ರೇನ್ ಗಡಿ ಬಳಿ ಕ್ರ್ಯಾಶ್ ಆಗಿದೆ. ರಷ್ಯಾದ ನೈರುತ್ಯ ಭಾಗದಲ್ಲಿರುವ ಯೇಯ್ಸ್ಕ್ (Yeysk) ಎಂಬ ನಗರದ ಜನವಸತಿ ಪ್ರದೇಶದ ಮೇಲೆ ಈ ವಿಮಾನ ಅಪ್ಪಳಿಸಿದ್ದು, ಈ ಘಟನೆಯಲ್ಲಿ ಕನಿಷ್ಠ 13 ಜನ ಮೃತಪಟ್ಟಿದ್ದಾರೆ ಹಾಗೂ 19 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಕ್ರೇನ್ NATO ಜೊತೆ ಸೇರಿದರೆ ಮೂರನೇ ಮಹಾಯುದ್ಧ: ರಷ್ಯಾ ಅಧಿಕಾರಿಗಳಿಂದ ಎಚ್ಚರಿಕೆ
ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ರಷ್ಯಾ 5 ಆತ್ಮಾಹುತಿ ಡ್ರೋನ್ ದಾಳಿ ನಡೆಸಿದೆ. ಅಲ್ಲದೆ, ಸುಮಿ (Sumy) ಹಾಗೂ ಡ್ನಿಪ್ರೊಪೆಟ್ರೋವ್ಸ್ಕ್ (Dnipropetrovsk) ಪ್ರದೇಶಗಳ ವಿದ್ಯುತ್ ಸೌಲಭ್ಯಗಳ ಮೇಲೆ ದಾಳಿ ನಡೆಸಿದ್ದು, ಇದರಿಂದ ನೂರಾರು ನಗರ ಹಾಗೂ ಗ್ರಾಮಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಮಾಹಿತಿ ನೀಡಿದ್ದಾರೆ.
ಇನ್ನು, ರಷ್ಯಾ ದಾಳಿಗೆ ಕೀವ್‌ನಲ್ಲಿ 4 ಜನರು ಬಲಿಯಾಗಿದ್ದಾರೆ. ಈ ಪೈಕಿ, ಗರ್ಭಿಣಿ ಹಾಗೂ ಆಕೆಯ ಪತಿ ಸಹ ಮೃತಪಟ್ಟಿದ್ದಾರೆ. ಅಲ್ಲದೆ, ಈಶಾನ್ಯ ಭಾಗವಾದ ಸುಮಿಯಲ್ಲೂ ನಾಲ್ವರು ಬಲಿಯಾಗಿದ್ದಾರೆ ಎಂದು ಉಕ್ರೇನ್ ಸರ್ಕಾರ ಮಾಹಿತಿ ನೀಡಿದೆ. ಈ ಮಧ್ಯೆ, ರಷ್ಯಾಗೆ ಇರಾನ್ ಸರ್ಕಾರ ಡ್ರೋನ್‌ಗಳನ್ನು ಒದಗಿಸುತ್ತಿದ್ದು, ಈ ಹಿನ್ನೆಲೆ ಇರಾನ್ ವಿರುದ್ಧ ಯುರೋಪಿಯನ್ ಒಕ್ಕೂಟ ನಿರ್ಬಂಧಗಳನ್ನು ಹೇರಬೇಕೆಂದು ಡಿಮಿಟ್ರೋ ಕುಲೇಬಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Russia - Ukraine War: ರಷ್ಯಾ ಭಯೋತ್ಪಾದಕ ದೇಶ ಎಂದು ವಿಶ್ವ ಸಂಸ್ಥೆಯಲ್ಲಿ ಖಂಡಿಸಿದ ಉಕ್ರೇನ್