Covid 19 Crisis: ಚೀನಾ ಸೇರಿ 6 ದೇಶಗಳಲ್ಲಿ ಮತ್ತೆ ಕೊರೋನಾ ಆರ್ಭಟ

Published : Mar 16, 2022, 08:05 AM ISTUpdated : Mar 16, 2022, 08:57 AM IST
Covid 19 Crisis: ಚೀನಾ ಸೇರಿ 6 ದೇಶಗಳಲ್ಲಿ ಮತ್ತೆ ಕೊರೋನಾ ಆರ್ಭಟ

ಸಾರಾಂಶ

*ಚೀನಾ, ಕೊರಿಯಾದಲ್ಲಿ ಕೋವಿಡ್‌ ಸ್ಫೋಟ ಮುಂದುವರಿಕೆ: ಚೀನಾದಲ್ಲಿ ಒಂದೇ ದಿನದಲ್ಲಿ ಕೊರೋನಾ ಕೇಸು ದ್ವಿಗುಣ *5280 ಹೊಸ ಕೇಸು: 13 ನಗರಗಳ 3 ಕೋಟಿ ಜನರಿಗೆ ಲಾಕ್ಡೌನ್‌: ಕೊರಿಯಾದಲ್ಲಿ 5ನೇ ದಿನವೂ 3 ಲಕ್ಷಕ್ಕಿಂತ ಹೆಚ್ಚು ಕೇಸು *ಅಮೆರಿಕದಲ್ಲಿ ಮತ್ತೆ ಕೋವಿಡ್‌ ಏರಿಕೆ ಆತಂಕ: ಅಮೆರಿಕದ ಕೊಳಚೆ ನೀರು ಮಾದರಿ ವಿಶ್ಲೇಷಣೆ  

ಬೀಜಿಂಗ್‌/ಸೋಲ್‌ (ಮಾ. 16): ಕಳೆದ 2 ತಿಂಗಳು ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳನ್ನು ಕಾಡಿದ್ದ ಮಾರಕ ಒಮಿಕ್ರೋನ್‌ ರೂಪಾಂತರಿ ವೈರಸ್‌ ಇದೀಗ ಚೀನಾ ಮತ್ತು ದಕ್ಷಿಣಾ ಕೊರಿಯಾ ದೇಶಗಳನ್ನು ಮತ್ತಷ್ಟುಆವರಿಸಿಕೊಂಡಿದ್ದು ಭಾರೀ ಸೋಂಕು, ಸಾವಿಗೆ ಕಾರಣವಾಗಿದೆ. ಚೀನಾದಲ್ಲಿ ಮಂಗಳವಾರ 5280 ಹೊಸ ಕೇಸು ದೃಢಪಟ್ಟಿದೆ. ಇದು ಸೋಮವಾರ ದಾಖಲಾಗಿದ್ದ ಪ್ರಮಾಣಕ್ಕಿಂತ ದ್ವಿಗುಣ. ಸೋಂಕು ನಿಗ್ರಹ ವಿಷಯದಲ್ಲಿ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಪ್ರದರ್ಶಿಸುತ್ತಿದ್ದರೂ, ಹೊಸ ಪ್ರಕರಣಗಳ ಮೇಲೆ ನಿಯಂತ್ರಣ ಸಾಧ್ಯವಾಗದೇ ಇರುವುದು ಸರ್ಕಾರವನ್ನು ಆತಂಕಕ್ಕೆ ಗುರಿ ಮಾಡಿದೆ. 

ಅದರಲ್ಲೂ ಸ್ಥಳೀಯವಾಗಿ ಹಬ್ಬುತ್ತಿರುವ ಪ್ರಕರಣಗಳೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 13 ನಗರಗಳನ್ನು ಪೂರ್ಣ ಲಾಕ್ಡೌನ್‌ಗೆ ಒಳಪಡಿಸಲಾಗಿದೆ. ಹೀಗೆ ಲಾಕ್ಡೌನ್‌ಗೆ ಒಳಪಟ್ಟನಾಗರಿಕರ ಸಂಖ್ಯೆ 3 ಕೋಟಿಯಷ್ಟಿದೆ. ಇದಲ್ಲದೇ ಹಲವು ನಗರಗಳನ್ನು ಭಾಗಶಃ ನಿರ್ಬಂಧಕ್ಕೆ ಒಳಪಡಿಸಲಾಗಿದ್ದು, ಸೀಮಿತ ಕಾರ್ಯಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಚೀನಾದಲ್ಲಿ 2019ರಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ಬಳಿಕ ಇದುವರೆಗೂ 1.16 ಲಕ್ಷ ಜನರಿಗೆ ಸೋಂಕು ತಗುಲಿದೆ, 3636 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ.

ಇದನ್ನೂ ಓದಿCovid Crisis: 22 ತಿಂಗಳ ಬಳಿಕ ಸೋಂಕಿತರ ಸಂಖ್ಯೆ 100ರ ಆಸುಪಾಸಿಗೆ..!

ಕೊರಿಯಾದಲ್ಲೂ ಆತಂಕ: ಈ ನಡುವೆ ದಕ್ಷಿಣ ಕೊರಿಯಾದಲ್ಲಿ ಮಂಗಳವಾರ 3.62 ಲಕ್ಷ ಹೊಸ ಕೇಸು ದೃಢಪಟ್ಟಿದ್ದು, ದಾಖಲೆಯ 293 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕು ಮತ್ತು ಸಾವು ಎರಡೂ ಈವರೆಗಿನ ಗರಿಷ್ಠ ಪ್ರಮಾಣವಾಗಿದೆ. ಜೊತೆಗೆ ದೇಶದಲ್ಲಿ ಹೊಸ ಸೋಂಕಿನ ಪ್ರಮಾಣವು ಸತತ 5 ದಿನಗಳಿಂದ 3 ಲಕ್ಷಕ್ಕಿಂತ ಹೆಚ್ಚೇ ದಾಖಲಾಗುತ್ತಿದೆ.

ಇತರೆಡೆ: ಉಳಿದಂತೆ ಮಂಗಳವಾರ ಅತಿ ಹೆಚ್ಚು ಪ್ರಕರಣ ದಾಖಲಾದ ದೇಶಗಳೆಂದರೆ ವಿಯೆಟ್ನಾಂ 1.61 ಲಕ್ಷ, ಜರ್ಮನಿ 1.01 ಲಕ್ಷ, ಬ್ರಿಟನ್‌ 47181, ನೆದರ್‌ಲೆಂಡ್‌ 45892, ರಷ್ಯಾ 41055, ಆಸ್ಟ್ರಿಯಾ 37125, ಜಪಾನ್‌ 35846, ಆಸ್ಪ್ರೇಲಿಯಾ 34047ದಲ್ಲಿ ಪ್ರಕರಣ ದಾಖಲಾಗಿದೆ.

ಅಮೆರಿಕದಲ್ಲಿ ಮತ್ತೆ ಕೋವಿಡ್‌ ಏರಿಕೆ ಆತಂಕ: ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್‌ ಸಾವು, ನೋವಿಗೆ ಸಾಕ್ಷಿಯಾಗಿದ್ದ ಅಮೆರಿಕದಲ್ಲಿ ಇದೀಗ ಮತ್ತೆ ಕೋವಿಡ್‌ ಸೋಂಕು ಏರಿಕೆಯಾಗುವ ಭೀತಿ ಎದುರಾಗಿದೆ. ಇದು ಕಳೆದೊಂದು ವಾರದಿಂದಷ್ಟೇ ಹೊಸ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆ ದಾಖಲಿಸುತ್ತಿದ್ದ ದೇಶದಲ್ಲಿ ಆತಂಕ ಸೃಷ್ಟಿಸಿದೆ.

ಅಮೆರಿಕದ ಸೆಂಟ​ರ್‍ಸ್ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌ (ಸಿಡಿಸಿ) ಸಂಸ್ಥೆಯು ದೇಶಾದ್ಯಂತ 530 ಕೊಳಚೆ ನಿಗಾ ಪ್ರದೇಶಗಳಿಂದ ಸಂಗ್ರಹಿಸಿದ ನೀರಿನ ಮಾದರಿಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದು, ಈ ವೇಳೆ ಹಲವು ಸ್ಥಳಗಳಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ: Omicron Crisis: ಕರ್ನಾಟಕದಲ್ಲಿ ಒಮಿಕ್ರೋನ್‌ನ ಉಪತಳಿ ಹೆಚ್ಚಳ: ಮತ್ತೆ ಹೆಚ್ಚಿದ ಆತಂಕ

ಫೆ.1ರಿಂದ ಫೆ.10ರ ಅವಧಿಯಲ್ಲಿ ನಡೆಸಿದ ಕೊಳಚೆ ನೀರಿನ ಮಾದರಿ ವಿಶ್ಲೇಷಣೆಯ ಫಲಿತಾಂಶಕ್ಕೂ, ಮಾ.1ರಿಂದ 10ರ ಅವಧಿಯಲ್ಲಿ ನಡೆಸಿದ ಮಾದರಿಯ ಫಲಿತಾಂಶಕ್ಕೂ ಭಾರೀ ವ್ಯತ್ಯಾಸ ಕಂಡುಬಂದಿದೆ. ಫೆಬ್ರುವರಿಯ ವರದಿಯ ಅನ್ವಯ 530 ಕೇಂದ್ರಗಳ ಪೈಕಿ ಶೇ.89ರಷ್ಟುಸ್ಥಳಗಳಲ್ಲಿ ಸೋಂಕು ಇಳಿಕೆಯಾಗಿದ್ದು, ಶೇ.5ರಲ್ಲಿ ಸ್ಥಿರ ಮತ್ತು ಶೇ.15ರಲ್ಲಿ ಏರಿಕೆ ಕಂಡುಬಂದಿದೆ. ಇನ್ನು ಮಾರ್ಚ್ ವರದಿ ಅನ್ವಯ ಶೇ.59 ಪ್ರದೇಶಗಳಲ್ಲಿ ಇಳಿಕೆ, ಶೇ.5 ಪ್ರದೇಶಗಳಲ್ಲಿ ಸ್ಥಿರ, ಶೇ.36ರಷ್ಟುಕಡೆ ಸೋಂಕಿನ ಪ್ರಮಾಣ ಏರಿಕೆಯಾಗಿರುವ ಸುಳಿವು ಸಿಕ್ಕಿದೆ. ಇದು ಸೋಂಕಿನ ಪ್ರಮಾಣ ಅಳೆಯಲು ನಿಖರ ಮಾಹಿತಿ ಅಲ್ಲದೇ ಹೋದರೂ, ಏರಿಳಿಕೆಯ ಸುಳಿವು ನೀಡುತ್ತದೆ ಎಂದು ಸಿಡಿಸಿ ವರದಿ ಹೇಳಿದೆ.

ಕೊಳಚೆ ನೀರಿನಲ್ಲಿ ಪತ್ತೆಯಾಗುವ ವೈರಸ್‌ ಪ್ರಮಾಣವು ಎಷ್ಟುಜನರಿಗೆ ಸೋಂಕು ತಗುಲಿದೆ ಎಂಬುದರ ಮಾಹಿತಿ ನೀಡುವುದಿಲ್ಲ. ಆದರೆ ನೀರಿನಲ್ಲಿ ವೈರಸ್‌ ಸಾಂದ್ರತೆ ಹೆಚ್ಚಿದ್ದರೆ ಈ ಪ್ರದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ ಎಂಬುದರ ಸುಳಿವು ನೀಡುತ್ತದೆ. ಬಹಳಷ್ಟುಪ್ರಕರಣಗಳಲ್ಲಿ ಸೋಂಕಿನ ಲಕ್ಷಣ ಇರುವುದಿಲ್ಲ. 

ಅಂಥವರಿಂದ ಇತರರಿಗೆ ಸೋಂಕು ಹಬ್ಬುವ ಸಾಧ್ಯತೆ ಇರುತ್ತದೆ. ಹೀಗೆ ರೋಗ ಲಕ್ಷಣ ಇಲ್ಲದವರು, ರೋಗ ಲಕ್ಷಣ ಇಲ್ಲದವರು ತಮ್ಮ ಮಲ, ಮೂತ್ರವನ್ನು ವಿಸರ್ಜಿಸಿದಾಗ ಅದು ಕೊಳಚೆಗೆ ಸೇರುತ್ತದೆ. ಅಂಥ ನೀರನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಆ ಪ್ರದೇಶದಲ್ಲಿನ ಸೋಂಕಿನ ಏರಿಳಿಕೆ ಕಂಡುಬರುತ್ತದೆ.

ಇದುವರೆಗೂ ಅಮೆರಿಕದಲ್ಲಿ 8 ಕೋಟಿಗೂ ಹೆಚ್ಚು ಜನರಿಗೆ ಸೋಂಕು ಬಂದಿದ್ದು, 9.91 ಲಕ್ಷ ಜನರು ಸಾವನ್ನಪ್ಪಿದ್ದಾರೆ. ನಿತ್ಯ 20-30 ಸಾವಿರ ಕೇಸು ದಾಖಲಾಗುತ್ತಿದ್ದು, 200-300 ಜನರು ಸಾವನ್ನಪ್ಪುತ್ತಿದ್ದಾರೆ. ಈಗಲೂ 2.3 ಕೋಟಿ ಸಕ್ರಿಯ ಸೋಂಕಿತರಿದ್ದು, 4000ಕ್ಕೂ ಹೆಚ್ಚು ಜನರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ