
ಥೈಲ್ಯಾಂಡ್‌ನಲ್ಲಿ ಅವಳಿ ಮಕ್ಕಳಿಗೆ ಪರಸ್ಪರ ಮದುವೆ ಮಾಡಿದಂತಹ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. 4 ವರ್ಷದ ಒಂದು ಹೆಣ್ಣು ಒಂದು ಗಂಡು ಅವಳಿ ಮಕ್ಕಳಿಗೆ ಮದುವೆ ಮಾಡಿದ್ದು, ಈ ವೀಡಿಯೋ ಅನೇಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಅವಳಿಗಳನ್ನು ನಮ್ಮ ಸಂಸ್ಕೃತಿ ಸೇರಿದಂತೆ ಬಹುತೇಕ ಸಂಸ್ಕೃತಿಯಲ್ಲಿ ಒಂದೇ ತಾಯಿಯ ಗರ್ಭದಿಂದ ಜನಿಸಿದ ಕಾರಣಕ್ಕೆ ಸೋದರರು ಅಥವಾ ಸೋದರಿಯರು ಎಂದು ಭಾವಿಸಲಾಗುತ್ತದೆ. ಅಣ್ಣ ತಂಗಿ ಹಾಗೂ ಅಕ್ಕ ತಮ್ಮನ ಮಧ್ಯೆ ಹೇಗೆ ಮದುವೆ ನಿಷಿದ್ಧವೋ ಹಾಗೆಯೇ ಹಾಗೆಯೇ ಅವಳಿಗಳ ನಡುವೆ ಯಾರೂ ಮದುವೆ ಮಾಡುವುದಿಲ್ಲ, ಆದರೆ ಥೈಲ್ಯಾಂಡ್‌ನಲ್ಲಿ ಒಂದೇ ತಾಯಿ ಗರ್ಭದಲ್ಲಿ ಜನಿಸಿದ ಅವಳಿಗಳಿಗೆ ಮದುವೆ ಮಾಡಿಸಲಾಗಿದೆ.
ಆದರೆ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಜೂನ್ 28ರಂದು ಥೈಲ್ಯಾಂಡ್‌ನ ಕಲಸೀನ್‌ನಲ್ಲಿರುವ ಪ್ರಚಾಯ್ ರೆಸಾರ್ಟ್‌ನಲ್ಲಿ ಈ ಅದ್ದೂರಿ ವಿವಾಹ ನಡೆದಿದೆ. ಕುಟುಂಬವೊಂದು ತಮಗೆ ಜನಿಸಿದ ಅವಳಿ ಮಕ್ಕಳಿಗೆ ಪರಸ್ಪರ ಮದುವೆ ಮಾಡಿದ್ದಾರೆ. ಈ ವೀಡಿಯೋದಲ್ಲಿ ಅವಳಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಮದುವೆಯ ಸಂಪ್ರದಾಯದಲ್ಲಿ ಭಾಗಿಯಾಗಿರುವುದನ್ನು ಕಾಣಬಹುದಾಗಿದೆ. ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ ಈ ಸಾಂಕೇತಿಕ ಮದುವೆಯ ಆಚರಣೆಯೂ ಸಂಪ್ರದಾಯವಂತೆ.
ರೆಸಾರ್ಟ್‌ನಲ್ಲಿ ನಡೆದ ಈ ಅದ್ದೂರಿ ಆಚರಣೆಯಲ್ಲಿ ಥಟ್ಸಾನಪೋರ್ನ್ ಸೊರ್ನ್‌ಚೈ ಮತ್ತು ಅವರ ಅವಳಿ ಸಹೋದರಿ ಥಟ್ಸಾಥಾರ್ನ್ ಪರಸ್ಪರ ಮದುವೆಯಾಗಿದ್ದಾರೆ. ಈ ಸಮಾರಂಭದಲ್ಲಿ ಬೌದ್ಧಸನ್ಯಾಸಿಗಳು ಭಾಗಿಯಾಗಿದ್ದು, ಅವರಿಗೆ ಅಲಂಕಾರಿಕ ವ್ಯವಸ್ಥೆ ಮಾಡಿರುವುದನ್ನು ಅಲ್ಲಿ ಕಾಣಬಹುದಾಗಿದೆ. 4 ವರ್ಷದ ವಧು ತನ್ನ ಅವಳಿ ಸಹೋದರನಿಗೆ ಹಾರ ಹಾಕಿ ಆತನ ಕೆನ್ನೆಗೆ ಮುತ್ತಿಕ್ಕಿ ವಿವಾಹದ ವಿಧಿ ವಿಧಾನಗಳನ್ನು ನಡೆಸುವುದನ್ನು ಕಾಣಬಹುದಾಗಿದೆ. ಹಲವಾರು ಬೌದ್ಧ ಸನ್ಯಾಸಿಗಳು ಈ ವಿಶಿಷ್ಟ ಆಚರಣೆಯಲ್ಲಿ ಭಾಗಿಯಾಗಿ ಈ ಪುಟ್ಟ ದಂಪತಿಗಳಿಗೆ ಆಶೀರ್ವದಿಸಿದ್ದಾರೆ.
ಈ ಮದುವೆಯಲ್ಲಿ ಕುಟುಂಬದವರು ಸಂಪ್ರದಾಯಿಕ ವರದಕ್ಷಿಣೆ ಮೆರವಣಿಗೆಯನ್ನು ಕೂಡ ಆಯೋಜಿಸಿದ್ದರು. ಇದರಲ್ಲಿ ಅವರು 4 ಮಿಲಿಯನ್ ಬಹ್ತ್ ಅಂದರೆ ಅಂದಾಜು 1,05,58,228 ಭಾರತೀಯ ರೂಪಾಯಿಯನ್ನು ವಧುವಿಗೆ ವರದಕ್ಷಿಣೆಯಾಗಿ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಈ ಅವಳಿಗಳ ತಾಯಿ ಜಾಂಗ್‌ಕಾನ್ ಸೊನಾಚಿ, ಈ ಅವಳಿಗಳು ಜೂನ್ 14ರಂದು ಜನಿಸಿದ್ದವು. ಈಗ ಮಕ್ಕಳಿಗೆ 4 ವರ್ಷ ತುಂಬಿದೆ. ಅವರು 14ನೇ ತಾರೀಕಿನಂದು ಜನಿಸಿದ್ದರಿಂದ ಮದುವೆಯನ್ನು 28ಕ್ಕೆ ಆಯೋಜಿಸಿದ್ದೆವು ಎಂದು ಹೇಳಿದ್ದಾರೆ.
ಥೈಲ್ಯಾಂಡ್‌ನಲ್ಲಿ ಅವಳಿಗಳಿಗೆ ಮದುವೆ ಏಕೆ?
ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ ಒಂದೇ ತಾಯಿ ಗರ್ಭದಲ್ಲಿ ಗಂಡು ಹೆಣ್ಣು ಮಗು ಜೊತೆಯಾಗಿ ಜನಿಸಿದರೆ ಅವರು ಹಿಂದಿನ ಜನ್ಮದಲ್ಲಿ ಪ್ರೇಮಿಗಳು ಆಗಿದ್ದರು.ಹೀಗಾಗಿ ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಮದುವೆ ಮಾಡದಿದ್ದರೆ ಅದು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಅವರ ಹಳೇ ಜನ್ಮದ ನಂಟಿನ ಜೊತೆಗೆ ಈ ದುರಾದೃಷ್ಟ ಅವರನ್ನು ಜೀವನಪೂರ್ತಿ ಕಾಡುತ್ತದೆ. ಹಾಗೆಯೇ ಅವರು ಮದುವೆಯಾಗದೇ ಹೋದರೆ ಅವರಿಗೆ ಅನಾರೋಗ್ಯ ಕಾಡುತ್ತದೆ ಹಾಗೂ ಆಗಾಗ ಅವರು ಹುಷಾರು ತಪ್ಪಿ ಸಾಯಲುಬಹುದು ಎಂಬ ಕಾರಣಕ್ಕೆ ಅವರಿಗೆ ಮದುವೆ ಮಾಡಲಾಗುತ್ತದೆ.
ಸಂಪ್ರದಾಯಿಕ ಬೌದ್ಧ ಧರ್ಮದ ಸಂಪ್ರದಾಯದಂತೆ ಈ ಮದುವೆ ನಡೆದಿದ್ದು, ಥೈಲ್ಯಾಂಡ್‌ನ ಸಂಪ್ರದಾಯಿಕ ಮದುವೆಯಲ್ಲಿ ಇರುವಂತಹ ಸಂಪ್ರದಾಯಗಳನ್ನೇ ಈ ಮದುವೆಯಲ್ಲೂ ಆಚರಿಸಲಾಗಿದೆ. ವರದಕ್ಷಿಣೆ, ಮೆರವಣಿಗೆ ಹಾಗೂ ಡಾನ್ಸ್ ಜೊತೆ ಬೌದ್ಧ ಧರ್ಮದ ಸನ್ಯಾಸಿಗಳು ಮಂತ್ರವನ್ನು ಪಠಿಸುವ ಮೂಲಕ ಈ ಮದುವೆಯಲ್ಲಿ ನವಜೋಡಿಗೆ ಶುಭಹಾರೈಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ