Russia Ukraine Crisis: 31 ಕನ್ನಡಿಗರು ತವರಿಗೆ ವಾಪಸ್:‌ ಸಚಿವ ಜೋಶಿ, ಅಶೋಕ್‌ ಸ್ವಾಗತ

By Kannadaprabha NewsFirst Published Feb 28, 2022, 5:41 AM IST
Highlights

*ಆಪರೇಷನ್‌ ಗಂಗಾ ಮೂಲಕ 4 ವಿಮಾನಗಳಲ್ಲಿ ಆಗಮನ
*ದೆಹಲಿ, ಮುಂಬೈ ಮೂಲಕ ಬೆಂಗಳೂರಿಗೆ ಬಂದ ಮಕ್ಕಳು
*ತವರಿಗೆ ಬಂದ ಮಕ್ಕಳಿಗೆ ಸಚಿವ ಜೋಶಿ, ಅಶೋಕ್‌ ಸ್ವಾಗತ

ಬೆಂಗಳೂರು (ಫೆ. 28): ಉಕ್ರೇನ್‌ನಲ್ಲಿ ಸಿಲುಕಿರುವವರ ರಕ್ಷಣೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಅಪರೇಷನ್‌ ಗಂಗಾ ಏರ್‌ಲಿಫ್ಟ್‌ನಲ್ಲಿ ಕರ್ನಾಟಕ ಮೂಲದ 31 ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.ಉಕ್ರೇನ್‌ ಗಡಿಭಾಗಗಳಿಂದ ಈವರೆಗೂ ಭಾರತಕ್ಕೆ ಬಂದ ನಾಲ್ಕೂ ವಿಮಾನಗಳಲ್ಲಿಯೂ ರಾಜ್ಯ ವಿದ್ಯಾರ್ಥಿಗಳಿದ್ದರು. ಶನಿವಾರ ರಾತ್ರಿ 8.30ಕ್ಕೆ ಮುಂಬೈಗೆ ಬಂದ ಮೊದಲ ವಿಮಾನದಲ್ಲಿ 12, 2ನೇ ವಿಮಾನದಲ್ಲಿ 13, ಭಾನುವಾರ ಬಂದ ಮೊದಲ ವಿಮಾನದಲ್ಲಿ 5 ಮತ್ತು ಎರಡನೇ ವಿಮಾನದಲ್ಲಿ ಒಬ್ಬ ವಿದ್ಯಾರ್ಥಿ ಇದ್ದರು. 

ಬಳಿಕ ಇವರೆಲ್ಲಾ ಪ್ರತ್ಯೇಕ ವಿಮಾನಗಳಲ್ಲಿ ಭಾನುವಾರ ರಾತ್ರಿ ಬೆಂಗಳೂರಿಗೆ ಬಂದಿಳಿದರು. ಈ ಎಲ್ಲಾ ವಿದ್ಯಾರ್ಥಿಗಳಿಗೆ ದೆಹಲಿ ಮತ್ತು ಮುಂಬೈನಿಂದ ಬೆಂಗಳೂರಿಗೆ ಆಗಮಿಸಲು ರಾಜ್ಯ ಸರ್ಕಾರದಿಂದ ಉಚಿತ ಟಿಕೆಟ್‌ ವ್ಯವಸ್ಥೆ ಮಾಡಿತ್ತು.

Latest Videos

ಜೋಶಿ, ಅಶೋಕ್‌ ಅವರಿಂದ ಸ್ವಾಗತ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12 ವಿದ್ಯಾರ್ಥಿಗಳ ಮೊದಲ ತಂಡವನ್ನು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಕಂದಾಯ ಸಚಿವ ಆರ್‌.ಅಶೋಕ್‌, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನೋಡಲ್‌ ಅಧಿಕಾರಿ ಮನೋಜ್‌ ರಾಜನ್‌ ಬರಮಾಡಿಕೊಂಡರು.

ಇದನ್ನೂ ಓದಿ: Russia Ukraine Crisis: ಯುದ್ಧಪೀಡಿತ ದೇಶದಿಂದ ಒಂದೇ ದಿನ 688 ಭಾರತೀಯರ ರಕ್ಷಣೆ

ವಿದ್ಯಾರ್ಥಿಗಳ ಬರುವ ಹಿನ್ನೆಲೆ ಅವರ ಪೋಷಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಯುದ್ಧ ಭೂಮಿಯಿಂದ ಬದುಕುಳಿದು ಬಂದ ಮಕ್ಕಳನ್ನು ಕಂಡಕೂಡಲೇ ಪೋಷಕರು ಮತ್ತು ತವರಿನಲ್ಲಿ ಫೋಷಕರನ್ನು ಕಂಡ ಕೂಡಲೇ ಮಕ್ಕಳ ಕಣ್ಣಂಚಲ್ಲಿ ನೀರು ತುಂಬಿತ್ತು. ಪೋಷಕರು ಮಕ್ಕಳನ್ನು ಬಿಗಿದಪ್ಪಿಕೊಂಡು ಸಂತಸಪಟ್ಟರು. ಬಳಿಕ ವಿದ್ಯಾರ್ಥಿಗಳ ಜೊತೆ ಸಚಿವರು ಮಾತುಕತೆ ನಡೆಸಿದರು. ಉಕ್ರೇನ್‌ನಲ್ಲಿ ಉಳಿದ ವಿದ್ಯಾರ್ಥಿಗಳೊಂದಿಗೆ ವೀಡಿಯೋ ಕಾಲ್‌ ಮಾಡಿ ಧೈರ್ಯ ತುಂಬಿದರು.

ಈ ವೇಳೆ ಮಾತನಾಡಿದ ಸಚಿವ ಅಶೋಕ್‌, ‘ಉಕ್ರೇನ್‌ನಿಂದ ಇನ್ನುಳಿದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ವಿದೇಶಾಂಗ ಸಚಿವರ ಜೊತೆ ಮುಖ್ಯಮಂತ್ರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಸಹಾಯವಾಣಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವ ಜೊತೆಗೆ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: Russia Ukraine Crisis: ಉಕ್ರೇನ್‌ನ 2ನೇ ದೊಡ್ಡ ನಗರಕ್ಕೆ ರಷ್ಯಾ ಸೇನೆ ಲಗ್ಗೆ

375 ಮಂದಿ ಬಾಕಿ: ಉಕ್ರೇನ್‌ನಿಂದ ತೆರವು ಕಾರ್ಯಾಚರಣೆಗಾಗಿ ಇದುವರೆಗೂ 406 ಕನ್ನಡಿಗರು ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ 31 ಜನ ಆಗಮಿಸಿದ್ದು, ಇನ್ನೂ 375 ಜನ ಉಕ್ರೇನ್‌ನಲ್ಲೇ ಬಾಕಿ ಉಳಿದಿದ್ದಾರೆ.

ಉಕ್ರೇನ್‌ನಲ್ಲಿ ಬಾಂಬ್‌ ಸದ್ದುಗಳನ್ನು ಕೇಳಿ ಅಲ್ಲಿಯೇ ಜೀವ ಬಿಡುತ್ತೇವೆ ಎಂದುಕೊಂಡಿದ್ದೆವು. ಸ್ಥಳೀಯ ರಾಯಭಾರಿ ಕಚೇರಿ ಸಿಬ್ಬಂದಿ ಸೂಕ್ತ ಸಮಯಕ್ಕೆ ಬಂದು ಗಡಿ ಭಾಗಕ್ಕೆ ಕರೆತಂದರು. ವಿಶೇಷ ವಿಮಾನ ಕಲ್ಪಿಸಿ, ಯಾವುದೇ ಸಮಸ್ಯೆ ಇಲ್ಲದೆ ಅತ್ಯಂತ ಸುರಕ್ಷಿತವಾಗಿ ನಮ್ಮನ್ನು ಭಾರತಕ್ಕೆ ಕರೆತರಲಾಯಿತು. -ಇಂಚರ, ಬೆಂಗಳೂರು

ಎರಡು ದಿನಗಳಿಂದ ನೆಟ್‌ವರ್ಕ್ ಸಮಸ್ಯೆಯಾಗಿ ಪೋಷಕ ಸಂಪರ್ಕವೂ ಕಡಿತವಾಗಿತ್ತು. ಊಟ ಕೂಡಾ ಖಾಲಿಯಾಗುವ ಹಂತದಲ್ಲಿತ್ತು. ಮುಂದೆ ಏನು ಎಂಬ ಕಲ್ಪನೆಯೂ ಇರಲಿಲ್ಲ. ಭಾರತಕ್ಕೆ ಆಗಮಿಸುತ್ತಿದ್ದಂತೆ ಜೀವಬಂದಂತಾಗಿದೆ. -ಡಿ.ರೇಖಾ, ತುಮಕೂರು

ಬಂಕರ್‌ಗಳಲ್ಲಿ ಎರಡು ದಿನ ಬದುಕು ಅತ್ಯಂತ ಕಠಿಣವಾಗಿತ್ತು. ವಾಯುದಾಳಿ ಹಿನ್ನೆಲೆ ಜೋರು ಶಬ್ಧಗಳನ್ನು ಕೇಳಿಸಿಕೊಂಡು ಭಯದಲ್ಲಿಯೇ ಜೀವಿಸುತ್ತಿದ್ದೆವು. ಯಾವಾಗ ಭಾರತದಿಂದ ನಮ್ಮನ್ನು ಕರೆದಿಕೊಳ್ಳುತ್ತಾರೋ ಎಂದು ಎದುರುನೋಡುತ್ತಿದ್ದೆವು. ಇಂದಿಗೂ ನಮ್ಮ ಸ್ನೇಹಿತರು ಅಲ್ಲಿಯೇ ಉಳಿದಿದ್ದು, ಶೀಘ್ರ ಕರೆಸಿಕೊಳ್ಳಬೇಕು. - ತುಷಾರ್‌ ಮಧು, ಬೆಂಗಳೂರು

ಯುದ್ಧ ಎಂದು ಕೇಳಿ ಬುಧವಾರದಿಂದಲೇ ಸಾಕಷ್ಟುಭಯವಾಗಿತ್ತು. ಮಗಳು ಜೀವಂತವಾಗಿ ಮರಳಿ ಬಂದರೆ ಸಾಕು ಎನಿಸಿತ್ತು. ಎರಡು ದಿನದಿಂದ ಸಂಪರ್ಕ ಕಡಿತವಾಗಿ ಏನು ಮಾಡಬೇಕು ಎಂದು ದಿಕ್ಕು ತೋರಲಿಲ್ಲ. ಶನಿವಾರ ರಾತ್ರಿ ಮಗಳು ಕರೆಮಾಡಿ ಹೊರಟಿರುವುದಾಗಿ ತಿಳಿಸಿದಾಗ ಸಮಾಧಾನವಾಯಿತು. ಸುರಕ್ಷಿತವಾಗಿ ಮಕ್ಕಳು ಮನೆ ಸೇರಿದ್ದು, ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. - ಭಾಗ್ಯಲಕ್ಷ್ಮೇ, ಪೋಷಕರು

ಪ್ರತಿ ವಿಮಾನ ಹಾರಾಟಕ್ಕೆ 1.10 ಕೋಟಿ ರು. ಖರ್ಚು: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್‌ ಗಂಗಾ’ ಹೆಸರಿನಲ್ಲಿ ಏರ್‌ಲಿಫ್ಟ್‌ ಆರಂಭಿಸಿರುವ ಸರ್ಕಾರ ಏರ್‌ ಇಂಡಿಯಾದ ಪ್ರತಿ ವಿಮಾನ ಹಾರಾಟಕ್ಕೆ 1.10 ಕೋಟಿ ರು.ಗೂ ಅಧಿಕ ಹಣವನ್ನು ನೀಡಬೇಕಾಗಿದೆ.

ಏರ್‌ ಇಂಡಿಯಾದ ಡ್ರೀಮ್‌ಲೈನರ್‌ ವಿಮಾನಗಳನ್ನು ಹಾರಾಟ ಮಾಡಲು ಗಂಟೆಗೆ 7ರಿಂದ 8 ಲಕ್ಷ ರು. ಖರ್ಚು ಬರುತ್ತದೆ. ದೂರ, ಪ್ರಯಾಣ ಅವಧಿಯನ್ನು ಆಧರಿಸಿ ಹೋಗಿ ಬರುವ ವೆಚ್ಚ ನಿರ್ಧಾರವಾಗಲಿದೆ. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ಪ್ರತಿ ವಿಮಾನಕ್ಕೆ 1.10 ಕೋಟಿ ರು.ಗೂ ಅಧಿಕ ಹಣ ನೀಡುತ್ತಿದೆ. ಡ್ರೀಮ್‌ಲೈನರ್‌ ವಿಮಾನಗಳ ಸಂಚಾರಕ್ಕೆ ಪ್ರತಿ ಗಂಟೆಗೆ 5 ಟನ್‌ ಇಂಧನ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್‌ನಿಂದ ಆಗಮಿಸುತ್ತಿರುವ ಭಾರತೀಯರಿಂದ ಸರ್ಕಾರ ಹಣ ಪಡೆಯುತ್ತಿಲ್ಲ.

click me!