ದೂರದ ದಕ್ಷಿಣ ಆಫ್ರಿಕಾದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ವ್ಯಕ್ತಿ| ದಕ್ಷಿಣ ಆಫ್ರಿಕಾದಿಂದ ಚೆನ್ನೈಗೆ ರೋಗಿ ಏರ್‌ಲಿಫ್ಟ್| ಏರ್ ಆ್ಯಂಬುಲೆನ್ಸ್‌ನಲ್ಲಿ ಅತಿದೊಡ್ಡ ಆಪರೇಷನ್
ಚೆನ್ನೈ(ಮೇ.12): ದೂರದ ದಕ್ಷಿಣ ಆಫ್ರಿಕಾದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಸೋಮವಾರ ಸಂಜೆ ಚೆನ್ನೈಗೆ ಕರೆತರಲಾಗಿದೆ. ಇದು ಭಾರತೀಯ ಏರ್ ಆ್ಯಂಬುಲೆನ್ಸ್‌ವೊಂದು ನಡೆಸಿದ ಅತಿ ದೂರದ ರಕ್ಷಣಾ ಕಾರ್ಯಾಚರಣೆಯಾಗಿದೆ.
ಇಂಟರ್‌ನ್ಯಾಷನಲ್ ಕ್ರಿಟಿಕಲ್ ಕೇರ್ ಏರ್ ಟ್ರಾನ್ಸ್‌ಫರ್ ಟೀಮ್ (ಐಸಿಎಟಿಟಿ)ನ ಲಿಯರ್‌ಜೆಟ್-45 ಏರ್ ಆ್ಯಂಬುಲೆನ್ಸ್ ನಾಲ್ಕು ದಿನಗಳ ಕಾರ್ಯಾಚರಣೆಯ ಬಳಿಕ ಸೋಮವಾರ ಸಂಜೆ 6 ಗಂಟೆಗೆ ಚೆನ್ನೈಗೆ ಬಂದಿಳಿದಿದೆ.
ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ಬ್ಯಾಂಕ್ ಆಫ್ ಬರೋಡಾ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರುವ ನೆಲ್ಲೂರು ಮೂಲದ ವಿಜಯ್ ಯಾಸಮ್ (47) ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಭಾರತಕ್ಕೆ ಬಂದು ಚಿಕಿತ್ಸೆ ಮುಂದುವರಿಸಲು ಮತ್ತು ಕುಟುಂಬ ಸದಸ್ಯರನ್ನು ಸೇರಿಕೊಳ್ಳಲು ಬಯಸಿದ್ದರು. ಹೀಗಾಗಿ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿಗಳು ಐಸಿಎಟಿಟಿಯನ್ನು ಸಂಪರ್ಕಿಸಿ ಆರ್ ಆ್ಯಂಬುಲೆನ್ಸ್ ಸೇವೆಗೆ ಬೇಡಿಕೆ ಇಟ್ಟಿದ್ದರು.
ಕೊರೋನಾ ವೈರಸ್ ಲಾಕ್‌ಡೌನ್ ನಡುವೆಯೂ ಎಲ್ಲ ಅಡೆತಡೆಗಳನ್ನು ನಿವಾರಿಸಿ ಏರ್ ಆ್ಯಂಬುಲೆನ್ಸ್ ಎರಡು ದಿನಗಳ ಹಿಂದೆ ಜೊಹಾನ್ಸ್‌ಬರ್ಗ್ ತಲುಪಿದ್ದು, ವಿಜಯ್ ಅವರನ್ನು ಭಾರತಕ್ಕೆ ಕರೆತಂದಿದೆ.
ಈ ಕಾರ್ಯಾಚರಣೆಯಲ್ಲಿ ಒಬ್ಬ ವೈದ್ಯ, ಒರ್ವ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಇಬ್ಬರು ಪೈಲಟ್‌ಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಮುನ್ನ 2004ರಲ್ಲಿ ಮಿರಾಜ್-2000 ವಿಮಾನದ ಮೂಲಕ ಇದೇ ರೀತಿಯ ವೈದ್ಯಕೀಯ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.