
ವಿಮಾನ ಏರ್ತಿದ್ದಂತೆ ಜನರು ಕೆಳಗೆ ನೋಡುವ ಆತುರದಲ್ಲಿರ್ತೇವೆ. ಅದೆಷ್ಟೇ ಬಾರಿ ವಿಮಾನ ಹತ್ತಿದ್ರೂ ಎತ್ತರದಿಂದ ಭೂಮಿ ನೋಡುವ ಖುಷಿಯೇ ಬೇರೆ. ನಾವು ಈ ಖುಷಿ ಅನುಭವಿಸ್ತಿದ್ರೆ ಪೈಲಟ್ ಕಣ್ಮುಚ್ಚಿ ಗೊರಕೆ ಹೊಡೆಯುತ್ತಿರುತ್ತಾರೆ. ಅಚ್ಚರಿ ಅನ್ನಿಸಿದ್ರೂ ಇದು ಸತ್ಯ. ಯುರೋಪಿಯನ್ ಕಾಕ್ಪಿಟ್ ಅಸೋಸಿಯೇಷನ್ (ECA) ನಡೆಸಿದ ಸಮೀಕ್ಷೆಯಲ್ಲಿ ಇಂತಹ ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. 7,200 ಪೈಲಟ್ಗಳನ್ನು ಒಳಗೊಂಡ ಈ ಸಮೀಕ್ಷೆ ಮಾಹಿತಿ ಆಸಕ್ತಿಕರವಾಗಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಇತ್ತೀಚೆಗೆ ಬಿಡುಗಡೆಯಾದ ಅಧ್ಯಯನದಲ್ಲಿ ಅನೇಕ ಪೈಲಟ್ಗಳು ವಿಮಾನ ಹಾರಿಸುವ ಸಂದರ್ಭದಲ್ಲಿ ನಿದ್ರೆಗೆ ಜಾರಿರುವುದಾಗಿ ತಿಳಿದುಬಂದಿದೆ. ಯುರೋಪಿಯನ್ ಕಾಕ್ಪಿಟ್ ಅಸೋಸಿಯೇಷನ್ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಪೈಲಟ್ಗಳ ಪೈಕಿ ಶೇಕಡಾ 76.8ರಷ್ಟು ಮಂದಿ, ಕಳೆದ ನಾಲ್ಕು ವಾರಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ವಿಮಾನ ಹಾರಿಸುವಾಗ ನಿಯಂತ್ರಣದ ಮೇಲಿನ ತಮ್ಮ ಗಮನ ಕ್ಷಣಕಾಲ ತಪ್ಪಿರುವುದಾಗಿ ಒಪ್ಪಿಕೊಂಡಿದ್ದಾರೆ.
ವಿಮಾನ ಹಾರಿಸುವಾಗ ಕೆಲವೇ ಸೆಕೆಂಡುಗಳ ಕಾಲ ಅರಿವಿಲ್ಲದೆ ನಿದ್ರೆಗೆ ಜಾರುವುದನ್ನು ಮೈಕ್ರೋಸ್ಲೀಪ್ (Microsleep) ಎಂದು ಕರೆಯಲಾಗುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಇದು ಕೆಲವೇ ಸೆಕೆಂಡುಗಳ ಕಾಲ ಇರುವ ಅಲ್ಪಾವಧಿಯ ನಿದ್ರೆ.
ಇಂತಹ ನಿದ್ರೆಗೆ ಜಾರಿದ ವ್ಯಕ್ತಿಗೆ ತಾನು ನಿದ್ರಿಸಿದ್ದೇನೆ ಎಂಬ ಅರಿವೇ ಇರುವುದಿಲ್ಲ. ಕೆಲವೊಮ್ಮೆ ಕಣ್ಣು ತೆರೆದಿದ್ದರೂ ಮೆದುಳು ಸುತ್ತಮುತ್ತಲಿನ ಮಾಹಿತಿಯನ್ನು ಸರಿಯಾಗಿ ಗ್ರಹಿಸುತ್ತಿರುವುದಿಲ್ಲ. ವಾಹನ ಅಥವಾ ವಿಮಾನ ಚಲಾಯಿಸುವವರಲ್ಲಿ ಇಂತಹ ಸ್ಥಿತಿ ಉಂಟಾದರೆ ಗಂಭೀರ ಸುರಕ್ಷತಾ ಅಪಾಯ ಎದುರಾಗಬಹುದು.
ನಿದ್ರೆಯ ಕೊರತೆಯು ಮೈಕ್ರೋಸ್ಲೀಪ್ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಪೈಲಟ್ಗಳ ಪೈಕಿ ಶೇಕಡಾ 38.8ರಷ್ಟು ಮಂದಿ ತಮಗೆ ಸಾಮಾನ್ಯವಾಗಿ ಅಥವಾ ಯಾವಾಗಲೂ ಸಾಕಷ್ಟು ವಿಶ್ರಾಂತಿ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ನಿರಂತರ ಆಯಾಸ ಎದುರಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ವಿಮಾನ ಚಾಲನೆಯ ವೇಳೆ ಕಾಕ್ಪಿಟ್ನಲ್ಲಿರುವ ಶಾಂತ ವಾತಾವರಣ ಮತ್ತು ಆಯಾಸವಿದ್ದರೂ ಕೆಲಸ ಮುಂದುವರಿಸಬೇಕಾದ ಒತ್ತಡವೂ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ಆಯಾಸ ಅಥವಾ ಅನಾರೋಗ್ಯದಿಂದ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಗ ಅದನ್ನು ವರದಿ ಮಾಡುವುದಾಗಿ ಶೇಕಡಾ 37.2ರಷ್ಟು ಪೈಲಟ್ಗಳು ತಿಳಿಸಿದ್ದಾರೆ. ಆದರೆ ಶೇಕಡಾ 24.2ರಷ್ಟು ಮಂದಿ ತಾವು ಆಯಾಸಗೊಂಡಿದ್ದರೂ ಅದನ್ನು ವರದಿ ಮಾಡದೆ ವಿಮಾನ ಹಾರಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಶಿಕ್ಷೆಯಾಗಬಹುದು ಅಥವಾ ಆಡಳಿತ ಮಂಡಳಿಯ ಅಸಮಾಧಾನಕ್ಕೆ ಗುರಿಯಾಗಬಹುದು ಎಂಬ ಭಯವೇ ಪ್ರಮುಖ ಕಾರಣ.
ಅಧ್ಯಯನದಲ್ಲಿ ಕಮಾಂಡರ್ಸ್ ಡಿಸ್ಕ್ರೆಷನ್ (Commander's Discretion) ಎಂಬ ನಿಯಮದ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಈ ನಿಯಮದಡಿ, ಕೆಲವು ಸಂದರ್ಭಗಳಲ್ಲಿ ವಿಮಾನದ ಕಮಾಂಡರ್ ಪೈಲಟ್ಗೆ ನಿಗದಿಪಡಿಸಿದ ವಿಮಾನ ಕರ್ತವ್ಯದ ಅವಧಿಯನ್ನು ವಿಸ್ತರಿಸಲು ಮತ್ತು ಅಗತ್ಯ ವಿಶ್ರಾಂತಿಯ ಅವಧಿಯನ್ನು ಕಡಿಮೆ ಮಾಡಲು ಅವಕಾಶವಿರುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇಕಡಾ 38.3ರಷ್ಟು ಮಂದಿ ಕಳೆದ ತಿಂಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಈ ಅವಕಾಶವನ್ನು ಬಳಸಿಕೊಂಡಿರುವುದಾಗಿ ಹೇಳಿದ್ದಾರೆ. ಶೇಕಡಾ 15.2ರಷ್ಟು ಮಂದಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ