Ukraine Russia Conflict: ಶಾಂತಿ ಸ್ಥಾಪನೆಗೆ ಭಾರತ ಕರೆ: ಉಕ್ರೇನ್‌ನಿಂದ ಭಾರತೀಯರ ಕರೆತಂದ ಏರ್‌ ಇಂಡಿಯಾ!

Published : Feb 23, 2022, 07:55 AM ISTUpdated : Feb 23, 2022, 08:13 AM IST
Ukraine Russia Conflict: ಶಾಂತಿ ಸ್ಥಾಪನೆಗೆ ಭಾರತ ಕರೆ: ಉಕ್ರೇನ್‌ನಿಂದ ಭಾರತೀಯರ ಕರೆತಂದ ಏರ್‌ ಇಂಡಿಯಾ!

ಸಾರಾಂಶ

*ರಷ್ಯಾ-ಉಕ್ರೇನ್‌ ಮಧ್ಯೆ ಯುದ್ಧದ ಕಾರ್ಮೋಡ ಕಳವಳಕಾರಿ *ಉಭಯ ದೇಶಗಳ ಮಧ್ಯೆ ಶಾಂತಿ ಮರುಕಳಿಸಲು ಯತ್ನಿಸಬೇಕು *ಉದ್ವಿಗ್ನತೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು

ನವದೆಹಲಿ (ಫೆ. 23): ರಷ್ಯಾ ಮತ್ತು ಉಕ್ರೇನ್‌ (Ukraine Russia Conflict) ಮಧ್ಯೆ ಉದ್ಭವವಾಗಿರುವ ಯುದ್ಧದ ಕಾರ್ಮೋಡದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ, ಆ ಎರಡೂ ದೇಶಗಳ ಮಧ್ಯೆ ಶಾಂತಿ ಮರುಕಳಿಸಬೇಕಿರುವುದು ತಕ್ಷಣದ ಆದ್ಯತೆಯಾಗಿದೆ ಎಂದು ವಿಶ್ವಸಂಸ್ಥೆ ಸಭೆಯಲ್ಲಿ ಪ್ರತಿಪಾದಿಸಿದೆ. ಈ ಉಭಯ ದೇಶಗಳ ಮಧ್ಯೆ ತಲೆದೋರಿದ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಕರೆಯಲಾಗಿತ್ತು. ಉಕ್ರೇನ್‌ ಬಂಡುಕೋರರಿರುವ ಎರಡು ಪ್ರಾಂತ್ಯಗಳನ್ನು ಸ್ವಾಯತ್ತ ಎಂದು ಗುರುತಿಸಬೇಕು ಎಂಬ ನಿರ್ಣಯಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮರ್‌ ಪುಟಿನ್‌ ಅವರು ಸಹಿಹಾಕಿದ ಬೆನ್ನಲ್ಲೇ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಕರೆದಿತ್ತು.

ಈ ಸಭೆಯಲ್ಲಿ ಮಾತನಾಡಿದ ಭಾರತದ ಪರ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಟಿ.ಎಸ್‌ ತಿರುಮೂರ್ತಿ ಅವರು, ‘ನಾವು ಈಗಾಗಲೇ ಉಕ್ರೇನ್‌ ಮತ್ತು ಉಕ್ರೇನ್‌ನ ಪೂರ್ವ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ರಷ್ಯಾದ ಘೋಷಣೆಗಳನ್ನು ಗಮನಿಸುತ್ತಿದ್ದೇವೆ. ಈ ಎಲ್ಲಾ ಬೆಳವಣಿಗೆಗಳು ಉಭಯ ದೇಶಗಳ ಭದ್ರತೆ ಮತ್ತು ಶಾಂತಿಗೆ ಭಂಗವಾಗುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿ ಎಲ್ಲಾ ದೇಶಗಳ ಕಾನೂನುಬದ್ಧ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು, ಉದ್ವಿಗ್ನತೆಯನ್ನು ಶಾಂತಗೊಳಿಸುವುದು ಮತ್ತು ದೀರ್ಘಾವಧಿ ಶಾಂತಿ ಮತ್ತು ಸ್ಥಿರತೆಯನ್ನು ಭದ್ರಪಡಿಸುವುದು ತಕ್ಷಣದ ಆದ್ಯತೆಯಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ: Ukraine Russia Conflict: ನೆರೆದೇಶಕ್ಕೆ ಸೈನಿಕರ ನುಗ್ಗಿಸಲು ರಷ್ಯಾ ಆದೇಶ: 2ನೇ ಮಹಾಯುದ್ಧದ ಬಳಿಕ ಘೋರ ಸಮರ?

ಉಕ್ರೇನ್‌ನಿಂದ ಭಾರತೀಯರ ಕರೆತಂದ ಏರ್‌ ಇಂಡಿಯಾ ವಿಮಾನ: ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ಭೀತಿ ಹಿನ್ನಲೆಯಲ್ಲಿ ತನ್ನ ಪ್ರಜೆಗಳನ್ನು ರಕ್ಷಿಸಲು ಭಾರತ ಮುಂದಾಗಿದ್ದು, ಭಾರತೀಯರ ಹೊತ್ತ ಮೊದಲ ಏರ್‌ ಇಂಡಿಯಾ ವಿಮಾನ ದಿಲ್ಲಿಗೆ ಮಂಗಳವಾರ ರಾತ್ರಿ ಆಗಮಿಸಿದೆ.

ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲು ಏರಿಂಡಿಯಾದ 3 ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ಮೊದಲ ಬ್ಯಾಚ್‌ನಲ್ಲಿ 250 ಜನರು ಭಾರತಕ್ಕೆ ಆಗಮಿಸಿದರು. ಇನ್ನೆರಡು ವಿಮಾನ ಫೆ. 24, 26ರಂದು ಕಾರ್ಯಾಚರಣೆ ನಡೆಸಲಿವೆ.

ಇದೇ ವೇಳೆ, ಇದರೊಂದಿಗೆ ಸಾಧ್ಯವಾದಷ್ಟುಬೇಗ ಉಕ್ರೇನ್‌ ಅನ್ನು ತೊರೆಯುವಂತೆ ಭಾರತದ ಪ್ರಜೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರತೀಯ ರಾಯಭಾರ ಕಚೇರಿ ಮತ್ತೊಮ್ಮೆ ಸಲಹೆ ನೀಡಿದೆ. ಅನಿವಾರ್ಯ ಇದ್ದರೆ ಮಾತ್ರ ಉಕ್ರೇನ್‌ನಲ್ಲಿ ಉಳಿದುಕೊಳ್ಳಿ ಎಂದು ಸೂಚಿಸಿದೆ. ಉಕ್ರೇನ್‌ನಲ್ಲಿ ಭಾರತೀಯ ಮೂಲದ 20 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Russia Ukraine Crisis: ಬಿಕ್ಕಟ್ಟಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಪ್ರಧಾನಿ ಮೋದಿ

ಅಮೆರಿಕ, ಬ್ರಿಟನ್‌, ಯುರೋಪ್‌ ಒಕ್ಕೂಟದಿಂದ ನಿರ್ಬಂಧ ಘೋಷಣೆ:  ಉಕ್ರೇನ್‌ (Ukraine) ಮೇಲೆ ಯುದ್ಧ ಸಾರುವ ಸನ್ನಾಹದಲ್ಲಿರುವ ರಷ್ಯಾಕ್ಕೆ ತೀಕ್ಷ$್ಣ ಪ್ರತಿಕ್ರಿಯೆ ನೀಡುವ ಬೆಳವಣಿಗೆಯೊಂದರಲ್ಲಿ ಅಮೆರಿಕ, ಬ್ರಿಟನ್‌ ಹಾಗೂ ಯುರೋಪ್‌ ಒಕ್ಕೂಟ ದೇಶಗಳು ನಿರ್ಬಂಧ ಘೋಷಿಸಿವೆ.

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಅವರು ಪೂರ್ವ ಉಕ್ರೇನ್‌ನ ರಷ್ಯಾ ಬೆಂಬ​ಲಿತ ಪ್ರದೇಶಗಳಲ್ಲಿ ವ್ಯಾಪಾರ ಹಾಗೂ ಹೂಡಿಕೆ​ಗಳನ್ನು ಸ್ಥಗಿತಗೊಳಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ರಷ್ಯಾದ ನಡೆ ಮಾಸ್ಕೋದ ಅಂತಾ​ರಾಷ್ಟ್ರೀಯ ಬದ್ಧತೆ​ಗಳಿಗೆ ವಿರುದ್ಧವಾಗಿದೆ ಮತ್ತು ಇನ್ನಷ್ಟುಆರ್ಥಿಕ ನಿರ್ಬಂಧ​ಗಳು ಶೀಘ್ರದಲ್ಲೇ ಜಾರಿ​ಯಾ​ಗಲಿವೆ ಎಂದು ಅಮೆ​ರಿಕದ ಶ್ವೇತಭವನ ಹೇಳಿದೆ.

ಬ್ರಿಟನ್‌ ನಿರ್ಬಂಧ: ಈ ನಡುವೆ ರಷ್ಯಾದ 5 ಬ್ಯಾಂಕುಗಳ ಮೇಲೆ ಬ್ರಿಟನ್‌ ಆರ್ಥಿಕ ದಿಗ್ಬಂಧನ ಘೋಷಿಸಿದೆ. ಇದೇ ವೇಳೆ ರಷ್ಯಾದ ಮೂವರು ಕೋಟ್ಯಧಿಪತಿಗಳು ಬ್ರಿಟನ್‌ಗೆ ಆಗಮಿಸದಂತೆ ಹಾಗೂ ತನ್ನ ಜತೆ ವಹಿವಾಟು ನಡೆದದಂತೆ ಬ್ರಿಟನ್‌ ನಿರ್ಬಂಧ ವಿಧಿಸಿದೆ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಮಂಗಳವಾರ ಘೋಷಿಸಿದ್ದಾರೆ. ಕ್ಯಾಬಿನೆಟ್‌ ಸಭೆ ನಡೆಸಿದ ಬೋರಿಸ್‌ ಜಾನ್ಸನ್‌, ಇದು ಪಶ್ಚಿಮ ನೆರೆಯ ದೇಶದ ಮೇಲಿನ ‘ನವೀಕೃತ ದಾಳಿ’ ಎಂದು ಗುಡುಗಿದ್ದಾರೆ.

ಯುರೋಪ್‌ ಒಕ್ಕೂಟ: ಈ ನಡುವೆ, ಐರೋಪ್ಯ ಒಕ್ಕೂಟ ಕೂಡ ರಷ್ಯಾ ಮೇಲೆ ದಿಗ್ಬಂಧನ ಘೋಷಿಸಿದೆ. ಯುರೋಪ್‌ ಹಣಕಾಸು ಮಾರುಕಟ್ಟೆಯಲ್ಲಿ ರಷ್ಯಾ ಚಟುವಟಿಕೆ ನಿರ್ಬಂಧಿಸಲು ಒಕ್ಕೂಟ ನಿರ್ಧರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ