* ಹಾರುವಾಗಲೇ 2 ಪೈಲಟ್‌ಗಳು ಒಂದರಿಂದ ಇನ್ನೊಂದಕ್ಕೆ ಜಂಪ್
* ಒಂದು ವಿಮಾನದಿಂದ ಇನ್ನೊಂದಕ್ಕೆ ನೆಗೆಯುವ ಪೈಲಟ್‌ಗಳು
* ಇಂದು ಅಮೆರಿಕದಲ್ಲಿ ನಡೆಯಲಿದೆ ಡೇಂಜರ್ ಕಸರತ್ತು
ಕ್ಯಾಲಿಫೋರ್ನಿಯಾ(ಏ.24): ಹಾರುತ್ತಿರುವಾಗಲೇ ವಿಮಾನಗಳನ್ನು ಅದಲು ಬದಲು ಮಾಡಿಕೊಳ್ಳುವ ಅಪಾಯಕಾರಿ ಪ್ರದರ್ಶನವನ್ನು ಕ್ಯಾಲಿಫೋರ್ನಿಯಾದ ಇಬ್ಬರು ಪೈಲಟ್‌ಗಳು ಏ.24ರಂದು ಪ್ರದರ್ಶಿಸಲಿದ್ದಾರೆ.
ಪರಸ್ಪರ ಸಂಬಂಧಿಗಳಾದ ಲ್ಯೂಕ್ ಐಕೆನ್ಸ್ ಮತ್ತು ಆ್ಯಂಡಿ ಫಾರಿಂಗ್‌ಟನ್ ಎಂಬ ಈ ಪೈಲಟ್‌ಗಳೇ ಈ ಸಾಹಸಿಗಳು. ಇವರು ರೆಡ್‌ಬುಲ್ ಏರ್‌ಫೋರ್ಸ್ ಏವಿಯೇಶನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿಮಾನಗಳು ಹಾರುತ್ತಿರುವಂತೆಯೇ ಅವುಗಳನ್ನು ಪರಸ್ಪರ ಹತ್ತಿರಕ್ಕೆ ತಂದುಕೊಳ್ಳುತ್ತಾರೆ. ಆಗ ವಿಮಾನದಿಂದ ಹೊರಕ್ಕೆ ಹಾರಿ ಮತ್ತೊಂದು ವಿಮಾನಕ್ಕೆ ಹತ್ತಿಕೊಳ್ಳಲಿದ್ದಾರೆ. ಈ ಅಪಾಯಕಾರಿ ಪ್ರದರ್ಶನಕ್ಕಾಗಿ ಮಾ.6ರಿಂದ ಟೆಸ್ಟ್ ಡ್ರೈವ್ ಮಾಡುತ್ತಿದ್ದಾರೆ. ಇದಕ್ಕಾಗಿ ಒಂದೇ ಆಸನವುಳ್ಳ ಸೆನ್ನಾ 182 ಮಾದರಿಯ 2 ವಿಮಾನಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸುಮಾರು 14 ಸಾವಿರ ಅಡಿ ಎತ್ತರದಲ್ಲಿ ಪ್ರದರ್ಶನ ನೀಡಲಿದ್ದಾರೆ. ವಿಮಾನದಿಂದ ಸ್ಕೈ ಡೈವ್ ಮಾಡಿದ ನಂತರ ಮತ್ತೊಂದು ವಿಮಾನದ ಕಾಕ್‌ಪಿಟ್ ತಲುಪಿ ಅದನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಹಾರಾಟವನ್ನು ಮುಂದುವರೆಸಲಿದ್ದಾರೆ.
ಈ ಪ್ರದರ್ಶನವನ್ನು ರೆಡ್‌ಬುಲ್ ಏರ್‌ವೇಸ್‌ನ ವೆಬ್‌ಸೈಟ್ ನೇರ ಪ್ರಸಾರ ಮಾಡಲಿದೆ.
ಈ ಜೋಡಿ ಈಗಾಗಲೇ ಹಲವಾರು ಅಪಾಯಕಾರಿ ಪ್ರದರ್ಶನಗಳನ್ನು ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಲ್ಯೂಕ್ 25 ಸಾವಿರ ಅಡಿ ಎತ್ತರದಿಂದ ಪ್ಯಾರಾಚೂಟ್ ಇಲ್ಲದೇ ವಿಮಾನದಿಂದ ಸ್ಕೈಡೈವ್ ಮಾಡಿ ಬದುಕುಳಿದ್ದಾರೆ. ಆ್ಯಂಡಿ 27 ಸಾವಿರಕ್ಕೂ ಹೆಚ್ಚು ಬಾರಿ ಸ್ಕೈ ಡೈವಿಂಗ್, 1000 ಬಾರಿ ಬೇಸ್ ಡೈವಿಂಗ್ ಮಾಡಿದ್ದಾರೆ.