
ನವದೆಹಲಿ (ಏ. 23): ಭಾರತ ಹಾಗೂ ಬ್ರಿಟನ್ ನಡುವೆ ರಕ್ಷಣೆ, ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಬಂಧ ಗಟ್ಟಿಗೊಳಿಸಲು ಹಾಗೂ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಈ ವರ್ಷಾಂತ್ಯದೊಳಗೆ ಸಹಿ ಹಾಕಲು ಉಭಯ ದೇಶಗಳ ಪ್ರಧಾನಿಗಳು ನಿರ್ಧರಿಸಿದ್ದಾರೆ. ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಹಲವು ಮಾತುಕತೆಗಳಲ್ಲಿ ಒಪ್ಪಂದಗಳು ಅಂತಿಮಗೊಂಡಿವೆ. ಇದೇ ವೇಳೆ, ಅಣು ಇಂಧನ, ಪವನ ಶಕ್ತಿ ಶಿಕ್ಷಣ ಕ್ಷೇತ್ರ ಹಾಗೂ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ 6 ಪ್ರತ್ಯೇಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಗುರುವಾರ ಗುಜರಾತ್‌ಗೆ ಆಗಮಿಸಿದ್ದ ಬೋರಿಸ್ ಜಾನ್ಸನ್ ಶುಕ್ರವಾರ ದೆಹಲಿಯಲ್ಲಿ ಮೋದಿ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದರು. ನಂತರ ಇಬ್ಬರೂ ಪ್ರಧಾನಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೇಕ್ ಇನ್ ಇಂಡಿಯಾಕ್ಕೆ ಬ್ರಿಟನ್ ಬೆಂಬಲ: ‘ಉಭಯ ದೇಶಗಳ ನಡುವೆ ಭೂಮಿ, ಸಮುದ್ರ, ಆಕಾಶ ಹಾಗೂ ಸೈಬರ್ ಲೋಕದಲ್ಲಿ ರಕ್ಷಣಾ ಸಹಭಾಗಿತ್ವವನ್ನು ಗಟ್ಟಿಗೊಳಿಸಲು ನಿರ್ಧರಿಸಲಾಗಿದೆ. ಭಾರತದ ಜೊತೆ ನಾವು ಹೊಸ ಫೈಟರ್ ಜೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಕೈಜೋಡಿಸಲಿದ್ದೇವೆ. ಹಾಗೆಯೇ ಸಮುದ್ರದ ಮೂಲಕ ಎದುರಾಗುವ ವಿಪತ್ತುಗಳನ್ನು ಎದುರಿಸಲು ಜಂಟಿಯಾಗಿ ಕೆಲಸ ಮಾಡಲಿದ್ದೇವೆ. ರಕ್ಷಣಾ ಕ್ಷೇತ್ರದಲ್ಲಿ ‘ಮೇಕ್ ಇನ್ ಇಂಡಿಯಾ’ ಗುರಿ ಸಾಧಿಸಲು ಬ್ರಿಟನ್ ಬೆಂಬಲ ನೀಡಲಿದೆ’ ಎಂದು ಬೋರಿಸ್ ಜಾನ್ಸನ್ ಹೇಳಿದರು.
ಇದನ್ನೂ ಓದಿ: ಯೋಗಿ ಬಳಿಕ ಬ್ರಿಟನ್ ಪ್ರಧಾನಿಯಿಂದಲೂ ಬುಲ್ಡೋಜರ್ ಪಾಲಿಟಿಕ್ಸ್
ಮುಕ್ತ ವ್ಯಾಪಾರ ಒಪ್ಪಂದ: ನಂತರ ಮಾತನಾಡಿದ ಪ್ರಧಾನಿ ಮೋದಿ, ‘ಭಾರತ-ಬ್ರಿಟನ್ ನಡುವಿನ ಸಹಭಾಗಿತ್ವದಲ್ಲಿ ಉತ್ತಮ ಪ್ರಗತಿಯಾಗಿದೆ. ಈ ವರ್ಷಾಂತ್ಯದೊಳಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ. ರಕ್ಷಣಾ ಕ್ಷೇತ್ರ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಬ್ರಿಟನ್ ಜೊತೆ ಭಾರತದ ಸಂಬಂಧ ಇನ್ನಷ್ಟುಗಟ್ಟಿಯಾಗಲಿದೆ’ ಎಂದು ಹೇಳಿದರು.
ಇದೇ ವೇಳೆ ಉಭಯ ನಾಯಕರ ನಡುವೆ ರಷ್ಯಾ-ಉಕ್ರೇನ್ ಸಮರ, ವಿವಿಧ ದೇಶಗಳ ಭದ್ರತಾ ವ್ಯವಸ್ಥೆ, ಇಂಡೋ-ಪೆಸಿಫಿಕ್ ಮಹಾಸಾಗರದಲ್ಲಿನ ಬೆಳವಣಿಗೆಗಳು, ಅಷ್ಘಾನಿಸ್ತಾನದ ಅಣು ಇಂಧನ, ಪವನ ಶಕ್ತಿ, ಭಯೋತ್ಪಾದನೆ, ಶಿಕ್ಷಣ, ಹೈಡ್ರೋಜನ್ ಸೈನ್ಸ್, ಗ್ರೀನ್ ಗ್ರಿಡ್ ಮುಂತಾದ ವಿಚಾರಗಳ ಬಗ್ಗೆ ಮಾತುಕತೆ ನಡೆಯಿತು ಹಾಗೂ 6 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಮೋದಿ ನನ್ನ ಖಾಸಾ ದೋಸ್ತ್: ಜಾನ್ಸನ್: ‘ನನಗೆ ಸಚಿನ್, ಅಮಿತಾಭ್ ರೀತಿ ಅನ್ನಿಸ್ತಿದೆ’: ಪ್ರಧಾನಿ ಮೋದಿ ನನ್ನ ಖಾಸಾ ದೋಸ್‌್ತ ಇದ್ದಂತೆ ಎಂದು ಹೇಳಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಹಲವು ಬಾರಿ ಮೋದಿ ಅವರನ್ನು ‘ನರೇಂದ್ರ’ ಎಂದು ಮೊದಲ ಹೆಸರಿನಿಂದ ಸಂಬೋಧಿಸುವ ಮೂಲಕ ಅತ್ಯಂತ ಆತ್ಮೀಯತೆ ಪ್ರದರ್ಶಿಸಿದರು. ‘ಥ್ಯಾಂಕ್ಯೂ ಮೈ ಫ್ರೆಂಡ್ ನರೇಂದ್ರ. ನೀವು ನನ್ನ ಖಾಸಾ ದೋಸ್‌್ತ. ಭಾರತದ ಎರಡು ದಿನಗಳ ಭೇಟಿ ಅದ್ಭುತವಾಗಿತ್ತು’ ಎಂದು ಜಾನ್ಸನ್ ಹೇಳಿದರು. ಇದೇ ವೇಳೆ, ಗುಜರಾತ್‌ನಲ್ಲಿ ಸಿಕ್ಕ ಸ್ವಾಗತದಿಂದ ‘ನನಗೆ ಸಚಿನ್ ತೆಂಡೂಲ್ಕರ್ ಹಾಗೂ ಅಮಿತಾಭ್ ಬಚ್ಚನ್ ರೀತಿಯ ಭಾವನೆ ಉಂಟಾಯಿತು’ ಎಂದೂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ