ತಮಗೆ ಸೆರೆಸಿಕ್ಕ ಹಮಾಸ್ ಉಗ್ರನ ವಿಚಾರಣೆ ವೇಳೆ ಉಗ್ರನೊಬ್ಬ ನೀಡಿದ ಹೇಳಿಕೆಗಳನ್ನು ರೆಕಾರ್ಡ್ ಮಾಡಿರುವ ಇಸ್ರೇಲ್ ಸೇನೆ, ಅವುಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹಲವು ಘೋರ ವಿಷಯಗಳಿವೆ.
ಟೆಲ್ ಅವಿವ್ (ಅಕ್ಟೋಬರ್ 25, 2023): ಹಮಾಸ್ ಉಗ್ರರು ಇಸ್ರೇಲ್‌ಗೆ ನುಗ್ಗಿದಾಗ ಮೆರೆದ ಪೈಶಾಚಿಕತೆಯ ಒಂದೊಂದೇ ಪ್ರಸಂಗಗಳು ದಿನಗಳೆದಂತೆ ಹೊರಬರುತ್ತಿವೆ. ‘ಉಗ್ರರಿಗೆ ಇಸ್ರೇಲ್‌ಗೆ ನುಗ್ಗಿ ಅಲ್ಲಿನ ಜನರನ್ನು ಅಪಹರಣ ಮಾಡಲು ಹಮಾಸ್ ನಾಯಕರು ಸೂಚನೆ ನೀಡಿದ್ದರು ಹಾಗೂ ಅಪಹರಣ ಮಾಡಿ ಕರೆತಂದರೆ ಭಾರಿ ಹಣ ನೀಡಲಾಗುವುದು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ನೀಡಲಾಗುವುದು ಎಂಬ ಆಮಿಷ ಒಡ್ಡಲಾಗಿತ್ತು’ ಎಂದು ಕೆಲವು ಬಂಧಿತ ಉಗ್ರರ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ತಮಗೆ ಸೆರೆಸಿಕ್ಕ ಹಮಾಸ್ ಉಗ್ರನ ವಿಚಾರಣೆ ವೇಳೆ ಉಗ್ರನೊಬ್ಬ ನೀಡಿದ ಹೇಳಿಕೆಗಳನ್ನು ರೆಕಾರ್ಡ್ ಮಾಡಿರುವ ಇಸ್ರೇಲ್ ಸೇನೆ, ಅವುಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಈ ವಿಷಯಗಳಿವೆ.
‘ಇಸ್ರೇಲ್‌ನಿಂದ ಗಾಜಾಕ್ಕೆ ಜನರನ್ನು ಒತ್ತೆಯಾಳಾಗಿ ಕರೆತಂದರೆ ನಮಗೆ ಅಪಾರ್ಟ್‌ಮೆಂಟ್ ಹಾಗೂ 8 ಲಕ್ಷ ರು. ಬಹುಮಾನ ನೀಡುವುದಾಗಿ ಭರವಸೆ ನೀಡಲಾಗಿತ್ತು. ವಯಸ್ಸಾದ ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಲು ನಮಗೆ ಸೂಚಿಸಲಾಗಿತ್ತು. ಮನೆಯ ಎಲ್ಲರನ್ನೂ ಹತ್ಯೆಗೈದು, ಸಾಧ್ಯವಾದಷ್ಟು ಒತ್ತೆಯಾಳುಗಳನ್ನು ಅಪಹರಿಸಲು ಹೇಳಲಾಗಿತ್ತು. ದಾಳಿ ವೇಳೆ ನಾನು 2 ಮನೆಗಳನ್ನು ಸುಟ್ಟು ಹಾಕಿದೆ’ ಎಂದು ಉಗ್ರನೊಬ್ಬ ಹೇಳಿದ್ದಾನೆ.
ಇದನ್ನು ಓದಿ: 2024ಕ್ಕೆ ಮತ್ತೊಂದು ಯುದ್ಧ ಕಾದಿದೆಯಾ? ಹಮಾಸ್ ದಾಳಿ ಹಿಂದಿದೆ ಸೌದಿ - ಇಸ್ರೇಲ್ ದೋಸ್ತಿ ತರ್ಕ!
ಅಲ್ಲದೆ, ‘ಇಸ್ರೇಲ್‌ಗೆ ನುಗ್ಗಿದಾಗ ನೆಲದ ಮೇಲೆ ಬಿದ್ದಿದ್ದ ಮಹಿಳೆಯೊಬ್ಬಳ ಮೃತದೇಹಕ್ಕೂ ನಾನು ಶೂಟ್ ಮಾಡುತ್ತಿದ್ದೆ. ಆಗ ನಮ್ಮ ಕಮಾಂಡರ್ ಗುಂಡುಗಳನ್ನು ಶವಕ್ಕೆ ಹೊಡೆದು ವೇಸ್ಟ್ ಮಾಡಬೇಡ ಎಂದು ನನಗೆ ಹೇಳಿದರು’ ಎಂದಿದ್ದಾನೆ. ‘ಕೊಲೆಯಾದ ಮಹಿಳೆಯ ನಾಯಿ ಮನೆಯಿಂದ ಹೊರಬಂತು. ನಾನು ಅದನ್ನೂ ಶೂಟ್ ಮಾಡಿದೆ. ಬಳಿಕ ನೆಲದ ಮೇಲೆ ಸತ್ತುಬಿದ್ದಿದ್ದ ದೇಹಕ್ಕೂ ಶೂಟ್ ಮಾಡುತ್ತಿದ್ದೆ’ ಎಂದಿದ್ದಾನೆ.
ಒತ್ತೆಯಲ್ಲಿದ್ದ ಇಬ್ಬರು ವೃದ್ಧೆಯರ ಬಿಡುಗಡೆ
ಹಮಾಸ್ ಉಗ್ರರು, ಯೊಚೇವ್ಡ್ ಲಿಫ್‌ಶಿಟ್ಜ್ (85), ನೂರಿತ್ ಕೂಪರ್ (79) ಎಂಬ ಇಬ್ಬರು ಇಸ್ರೇಲಿ ವೃದ್ಧ ಮಹಿಳೆಯರಿಗೆ ಆಹಾರ ಮತ್ತು ನೀರನ್ನು ನೀಡಿ ಬಳಿಕ ಬಿಡುಗಡೆ ಮಾಡಿದ ವಿಡಿಯೋವನ್ನು ಇಸ್ರೇಲಿ ಸೇನಾ ಪಡೆ ಹಂಚಿಕೊಂಡಿದೆ. ಇಬ್ಬರನ್ನು ಈಜಿಪ್ಟ್‌ನೊಂದಿಗೆ ಇರುವ ರಫಾ ಗಡಿಯ ಮೂಲಕ ಗಾಜಾದಿಂದ ಹೊರಗೆ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಯಿತು. ಆದರೆ ಇವರ ಇಬ್ಬರೂ ಗಂಡಂದಿರು ಇನ್ನೂ ಉಗ್ರರ ವಶದಲ್ಲೇ ಇದ್ದಾರೆ. ಇದಕ್ಕೂ ಮೊದಲು ಅಮೆರಿಕ ಮೂಲದ ಇಬ್ಬರನ್ನು ಉಗ್ರರು ಬಿಡುಗಡೆ ಮಾಡಿದ್ದರು. 200ಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಒತ್ತೆಯಾಳಾಗಿರಿಸಿಕೊಂಡಿದೆ.
ಇದನ್ನು ಓದಿ: ಉತ್ತರ ಗಾಜಾ ತೊರೆಯಲು ಇಸ್ರೇಲ್ ಎಚ್ಚರಿಕೆ: ದಕ್ಷಿಣಕ್ಕೆ ಹೋಗದಿದ್ದರೆ ಉಗ್ರರೆಂದು ಪರಿಗಣಿಸುತ್ತೇವೆ ಎಂದು ವಾರ್ನಿಂಗ್!
ಉಗ್ರರಿಂದ ನರಕ ಹಿಂಸೆ ಅನುಭವಿಸಿ ಬಂದೆವು..
ಹಮಾಸ್ ಉಗ್ರರಿಂದ ಬಿಡುಗಡೆಯಾದ ಇಬ್ಬರು ಒತ್ತೆಯಾಳುಗಳು ಅಲ್ಲಿನ ನರಕಯಾತನೆ ಅನುಭವಿಸಿದೆವು ಎಂದು ತಿಳಿಸಿದ್ದು, ಅಲ್ಲಿನ ಭಯಾನಕ ಲೋಕದ ಕುರಿತು ಅನುಭವ ಹಂಚಿಕೊಂಡಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಡುಗಡೆಯಾದ ಇಬ್ಬರು ಒತ್ತೆಯಾಳು ಮಹಿಳೆಯರು, ‘ಉಗ್ರರು ನಮ್ಮನ್ನು ಬಲವಂತವಾಗಿ ಬೈಕ್‌ನಲ್ಲಿ ಎಳೆದೊಯ್ದು ಬಳಿಕ ತಮ್ಮ ಅಡಗುತಾಣದಲ್ಲಿ 2 ವಾರ ಇರಿಸಿದ್ದರು. ಅಲ್ಲಿ ಕೆಲವರು ನಮಗೆ ಕೋಲಿನಿಂದ ಹೊಡೆಯುತ್ತಿದ್ದರು. ಅಡಗುತಾಣವು ಸುರಂಗ ಮಾರ್ಗದಲ್ಲಿತ್ತು. ಅದು ಜೇಡರ ಬಲೆಯಂತಿತ್ತು. ನಮಗೆ ಜೇಡರ ಬಲೆಯೊಳಗೆ ಸಿಕ್ಕಿಕೊಂಡಂತಹ ಅನುಭವವಾಗುತ್ತಿತ್ತು’ ಎಂದರು.
ಇದನ್ನು ಓದಿ: ಗಾಜಾ - ಈಜಿಪ್ಟ್ ಗಡಿ ಓಪನ್: ಆಹಾರ, ನೀರು, ಔಷಧ ಇಲ್ಲದೆ ಪರದಾಡುತ್ತಿದ್ದ ಗಾಜಾ ನಿವಾಸಿಗಳು ನಿರಾಳ