ವಾಟ್ಸಪ್‌ನಲ್ಲಿ ಶೀಘ್ರ ಬರುತ್ತೆ ಇನ್ನೂ 138 ಹೊಸ ಇಮೋಜಿಗಳು..!

By Suvarna News  |  First Published Aug 5, 2020, 12:20 PM IST

ಸಂವಹನಕ್ಕೆ ಭಾಷೆ ಮಾತ್ರ ಮುಖ್ಯವೇ..? ಖಂಡಿತಾ ಅಲ್ಲ, ನಾವು-ನೀವು ಮಾಡುವ ಸಂಜ್ಞೆಗಳು, ಹಾವ-ಭಾವಗಳಲ್ಲೂ ಸಂವಹನಗಳಿವೆ, ಕಣ್ಣಿನ ಮೂಲಕವೂ ನಾವು ಸಂದೇಶವನ್ನು ರವಾನಿಸಬಹುದು. ಇನ್ನು 100 ಪದದಲ್ಲಿ ಹೇಳಬೇಕಾಗಿದ್ದನ್ನು ಒಂದು ಫೋಟೋ ಹೇಳುತ್ತದೆ ಎಂದು ಹೇಳುತ್ತಾರಲ್ಲ. ಹಾಗೆಯೇ, ಮೊಬೈಲ್‌ನಲ್ಲಿ ಬಹಳಷ್ಟು ಬಾರಿ ಚಾಟಿಂಗ್ ಮಾಡುವಾಗ ಕೇವಲ ಪದಗಳಲ್ಲೇ ಹೇಳಬೇಕೆಂದೂ ಇಲ್ಲ, ಅದಕ್ಕಾಗಿ ಸ್ಟಿಕ್ಕರ್‌ಗಳು, ಜಿಫ್‌ಗಳು ಹಾಗೂ ಇಮೋಜಿಗಳನ್ನು ಕ್ರಿಯೇಟ್ ಮಾಡಲಾಗಿದೆ. ಈಗ ವಾಟ್ಸಪ್‌ನಲ್ಲೂ ಹೊಸ ಇಮೋಜಿಗಳು ಬರುತ್ತಿವೆ. ಎಷ್ಟು..? ಏನು..? ಎತ್ತ.. ಎಂಬುದರ ಬಗ್ಗೆ ನೋಡೋಣ ಬನ್ನಿ…


ಹತ್ತು ಪದದಲ್ಲಿ ಹೇಳುವ ಭಾವನೆ, ಮಾತುಗಳನ್ನು ಒಂದು ಇಮೋಜಿ ಹೇಳುತ್ತದೆ. ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ಆ್ಯಪ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಇಮೋಜಿಗಳ ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇದನ್ನು ಬಳಸದೇ ಇರುವವರು ಕಡಿಮೆಯೇ. ಕೆಲವೊಂದು ಕಮೆಂಟ್‌ಗಳು ಸೇರಿದಂತೆ ಅಕ್ಷರ ರೂಪದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದರೂ ಕೊನೆಗೊಮ್ಮೆ ಅದಕ್ಕೆ ಹೋಲುವಂತಹ ಇಮೋಜಿಯನ್ನಿಡುವ ಅಲಿಖಿತ ಸಂಪ್ರದಾಯವನ್ನು ಹಲವರು ರೂಢಿಸಿಕೊಂಡು ಬಂದಿದ್ದಾರೆ. 

ಚಾಟಿಂಗ್‌ನಂತಹ ವೇಳೆ ಕೆಲವು ಸಂದರ್ಭಗಳಲ್ಲಿ ಕೇವಲ ಇಮೋಜಿಗಳ ಮೂಲಕವೇ ಫನ್ನಿಯಾಗಿ ಮಾತುಕತೆ ನಡೆಸುವುದನ್ನೂ ನಾವು ನೋಡಿರುತ್ತೇವೆ, ಹಾಗೆ ಮಾಡಿರುತ್ತೇವೆ ಸಹ. ಈಗಾಗಲೇ ಹಲವಾರು ಇಮೋಜಿಗಳು ಮೊಬೈಲ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿವೆ. ಕಾಲಕ್ಕನುಗುಣವಾಗಿ ಹೊಸ ಹೊಸ ಇಮೋಜಿಗಳು ಹುಟ್ಟಿಕೊಳ್ಳುತ್ತಲೂ ಇವೆ. ಇನ್ನು ಇವುಗಳಿಗೆ ಪರ್ಯಾಯವಾಗಿ ಕೆಲವೊಂದು ಜಿಫ್ ಮಾದರಿಗಳೂ ಲಭ್ಯವಾಗುತ್ತಿವೆ. ಆದರೆ, ಇಮೋಜಿಗಳು ಕೊಡುವ ಖುಷಿಯೇ ಬೇರೆ ಎಂದು ಬಹುತೇಕ ಬಳಕೆದಾರರು ಅಭಿಪ್ರಾಯಪಡುತ್ತಾರೆ. 

ಇದನ್ನು ಓದಿ: ಭಾರತೀಯ ಓದುಗರ ಬಳಿ ವಾರದ ಕಾಫಿ ದುಡ್ಡು ಕೇಳುತ್ತಿದೆ ವಿಕಿಪೀಡಿಯಾ…!

ಈಗ ಹೊಸ ಇಮೋಜಿಗಳನ್ನು ಪರಿಚಯಿಸಲು ಫೇಸ್ಬುಕ್ ಒಡೆತನದ ವಾಟ್ಸಪ್ ಸಿದ್ಧಗೊಂಡಿದೆ. ಅತಿ ಶೀಘ್ರದಲ್ಲೇ ಹಲವು ರೀತಿಯ, ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಇಮೋಜಿಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ. ಹೀಗಾಗಿ ಶೀಘ್ರದಲ್ಲಿ 138 ಹೊಸ ಇಮೋಜಿಗಳು ಬಳಕೆಗೆ ಲಭಿಸಲಿದೆ. 



ಸಾಫ್ಟ್‌ವೇರ್ ಅಪ್ಡೇಟ್ ಮಾಡಿಕೊಳ್ಳಿ
ನೂತನ ಇಮೋಜಿಗಳು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಹೊಸ ಆ್ಯಂಡ್ರಾಯ್ಡ್ ಬೆಟಾ ವರ್ಶನ್ ಅನ್ನು ಹೊಂದಿರಬೇಕು. 2.20.197.6 ವರ್ಶನ್ ಹೊಂದಿದವರಿಗೆ ನೂತನ ಇಮೋಜಿಗಳು ಬಳಕೆಗೆ ಲಭ್ಯವಾಗುತ್ತವೆ ಎಂದು WABetaInfo  (ವಾಬೆಟಾಇನ್ಫೋ) ಮಾಹಿತಿ ನೀಡಿದೆ. 

ಹೊಸ ಇಮೋಜಿಯಲ್ಲೇನಿರಲಿದೆ..?
ಹೊಸ ಇಮೋಜಿಯಲ್ಲಿ ಹೊಸ ಹೊಸ ವೃತ್ತಿ, ಕ್ಷೇತ್ರಗಳಿಗೂ ಪ್ರಾಧಾನ್ಯತೆ ಕೊಡಲಾಗಿದೆ. ಇಲ್ಲಿ ನಿಮಗೆ ಚೆಫ್ ಸಿಗುತ್ತಾನೆ, ನಮ್ಮ ಅನ್ನದಾತ ಕೃಷಿಕನೂ ಬರುತ್ತಾನೆ, ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಪೇಂಟರ್ ಕೂಡಾ ಬಣ್ಣ ಹಚ್ಚುತ್ತಾನೆ, ಇದಲ್ಲದೆ ಕೆಲವು ಜನಾಂಗೀಯ ಇಮೋಜಿಗಳನ್ನೂ ಅಭಿವೃದ್ಧಿಪಡಿಸಲಾಗಿದೆಯಂತೆ, ಇನ್ನು ವೀಲ್ಹ್‌ಚೇರ್ ಸಿಂಬೋಲ್ ಅನ್ನು ಹೋಲುವ ಕೆಲವು ಸಿಂಬೋಲಿಕ್ ಇಮೋಜಿಗಳೂ ಬರುತ್ತವೆ ಎಂದು WABetaInfo ಹೇಳಿದೆ. ಹೀಗಾಗಿ ಹೊಸ ಬೆಟಾ ವರ್ಶನ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ಹೇಳಲಾಗಿದೆ. 

ಇದನ್ನು ಓದಿ: ವಾಟ್ಸಪ್ ನಲ್ಲಿ 50 ಮಂದಿ ಜೊತೆ ವಿಡಿಯೋ ಕಾಲ್ ಮಾಡೋದು ಹೀಗೆ..!

ಇಮೋಜಿಗೂ ಒಂದು ದಿನವಿದೆ..!
ಈ ಇಮೋಜಿಗಳಿಗೂ ಒಂದು ವಿಶೇಷ ದಿನವಿದೆ, ಇದರ ಹಿಂದೆ ಒಂದು ಕಥೆಯೂ ಇದೆ. ಜಪಾನ್‌ನಲ್ಲಿ ಈ ಇಮೋಜಿಗಳು ಹುಟ್ಟಿಕೊಂಡಿದ್ದು, ಎನ್‌ಟಿಟಿ ಡೊಕೊಮೋ ಸಂಸ್ಥೆಯಲ್ಲಿದ್ದ ಶಿಗೇತಕ ಕುರಿಟ ಎಂಬುವರು ಇದನ್ನು ಕಂಡುಹಿಡಿದ ಖ್ಯಾತಿಯನ್ನು ಪಡೆದಿದ್ದಾರೆ. 1990ರ ದಶಕದಲ್ಲಿ ಇದರ ಹುಟ್ಟಿನ ಬಳಿಕ ಅನೇಕ ವಿಸ್ತೃತರೂಪವನ್ನು ಈ ಇಮೋಜಿಗಳು ಪಡೆಯುತ್ತಾ ಹೋದವು. ಈ ಎಳೆಯನ್ನು ಹಿಡಿದುಕೊಂಡ ಖ್ಯಾತ ಟೆಲಿಕಾಂ ಕಂಪನಿ ವೋಡಾಫೋನ್ ತನ್ನ ಜಾಹೀರಾತಿನಲ್ಲಿ ಇಮೋಜಿಗಳ ಮಾದರಿಯನ್ನು ಬಳಸಿ ಜನಮನ ಗೆದ್ದಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. 2003ರಲ್ಲಿ ಇಮೋಜಿ ಪದವು ಪ್ರಸಿದ್ಧ ಆಕ್ಸ್‌ಫರ್ಡ್ ನಿಘಂಟಿನಲ್ಲೂ ಸೇರಿಸಲಾಗಿತ್ತು.

2014ರಲ್ಲಿ ವಿಶ್ವ ಇಮೋಜಿ ದಿನವನ್ನು ನಿಗದಿಪಡಿಸಲಾಯಿತಾದರೂ, ಪ್ರಸಿದ್ಧ ಆ್ಯಪಲ್ ತನ್ನ ಐಫೋನ್, ಐಪ್ಯಾಡ್ ಗಳಿಗಾಗಿ ತಯಾರಿಸಿದ ಇಮೋಜಿಗಳ ಕ್ಯಾಲೆಂಡರ್ ಅನ್ನು ಜುಲೈ 17ರಂದು ಬಿಡುಗಡೆಗೊಳಿಸಿತು. ಹೀಗಾಗಿ ಈ ದಿನವನ್ನೇ ವಿಶ್ವ ಇಮೋಜಿಗಳ ದಿನವನ್ನಾಗಿ ಆಚರಿಸಲಾಯಿತು. 

ಇದನ್ನು ಓದಿ: ಅಲಾರಾಂ ರೀತಿ ನಿಮ್ಮ G-Mail ಮೆಸೇಜ್‌ ಸ್ನೂಜ್ ಮಾಡಿ..!

ಕಾಲಕ್ಕೆ ರೂಪಾಂತರ
ಕಾಲಕಾಲಕ್ಕೆ ಇಮೋಜಿಗಳು ಬದಾಲವಣೆ ಹೊಂದಿ ಈಗಂತೂ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಸಾಫ್ಟ್‌ವೇರ್‌ಗಳಲ್ಲಿ ತರಹೇವಾರು ಮಾದರಿಯಲ್ಲಿ ಬಳಕೆಯಾಗುತ್ತಲಿದೆ. ಅದೆಷ್ಟೋ ಫನ್ನಿ ಇಮೋಜಿಗಳನ್ನು ನಾವೀಗ ಬಳಸುತ್ತಲೂ ಇದ್ದೇವೆ. ಹೀಗಾಗಿ ಇಮೋಜಿಗಳೂ ಕೆಲವು ರೂಪಾಂತರಗಳನ್ನು ಪಡೆದುಕೊಳ್ಳುತ್ತಲೇ ಬಂದಿದೆ. 

click me!