ಅಲಾರಾಂ ರೀತಿ ನಿಮ್ಮ G-Mail ಮೆಸೇಜ್‌ ಸ್ನೂಜ್ ಮಾಡಿ..!

Suvarna News   | Asianet News
Published : Aug 04, 2020, 07:23 PM IST
ಅಲಾರಾಂ ರೀತಿ ನಿಮ್ಮ G-Mail ಮೆಸೇಜ್‌ ಸ್ನೂಜ್ ಮಾಡಿ..!

ಸಾರಾಂಶ

ಕಾಲವನ್ನು ನಿಲ್ಲಿಸಲಾಗಲ್ಲ, ಜೊತೆಗೆ ಮತ್ತೆ ರಿವೈಂಡ್ ಮಾಡಿಕೊಂಡು ಜೀವನ ನಡೆಸಲೂ ಆಗಲ್ಲ. ನಡೆದ ಘಟನೆಗಳನ್ನು ಮನಸ್ಸಿನಲ್ಲಿ ರಿವೈಂಡ್ ಮಾಡಿಕೊಳ್ಳಬಹುದಷ್ಟೇ. ಆದರೆ, ತಂತ್ರಜ್ಞಾನ ಹಾಗಲ್ಲ. ಅದಿರುವುದೇ ನಮ್ಮ ಉಪಯೋಗಕ್ಕಾಗಿ. ಕೆಲವೊಮ್ಮೆ ತಂತ್ರಜ್ಞಾನಗಳು ಅದೆಷ್ಟು ಬಳಕೆದಾರರಸ್ನೇಹಿಯಾಗಿರುತ್ತದೆ ಎಂದರೆ ನಮ್ಮ ಕೆಲಸವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಅವುಗಳಲ್ಲಿ ಸಾಕಷ್ಟು ಆಯ್ಕೆಗಳು ನಮಗೆ ಅನುಕೂಲಕರವಾಗಿರುತ್ತವೆ. ಆದರೆ, ಬಹಳಷ್ಟನ್ನು ನಾವು ನೋಡಿದ್ದರೂ ಆ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಈಗ ನಮ್ಮ ಪ್ರತಿ ಕೆಲಸದಲ್ಲೂ ಛಾಪು ಮೂಡಿಸಿರುವ ಜಿ-ಮೇಲ್‌ಗಳಲ್ಲೂ ಸಾಕಷ್ಟು ಇಂತಹ ಅಂಶಗಳಿದ್ದರೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಜಿ-ಮೇಲ್‌ನಲ್ಲಿ ಸ್ನೂಜ್ ಆಪ್ಷನ್ ಇದ್ದು, ನಿಮಗೆ ಬೇಕಾದ ಸಮಯ ಹಾಗೂ ದಿನಾಂಕವನ್ನು ನಿಗದಿಪಡಿಸಿ, ಆ ಸಮಯದಲ್ಲಿ ಓದಿಕೊಳ್ಳಬಹುದು. ಈ ಸ್ನೂಜ್ ಆಯ್ಕೆ ಏನು..? ಎತ್ತ..? ಎಂಬ ಬಗ್ಗೆ ಗಮನಹರಿಸೋಣ...

ಬೆಳಗ್ಗೆ ಮುಂಚೆ ಏಳಬೇಕೆಂದು ನಾವು ಅಲಾರಾಂನಲ್ಲಿ ಟೈಂ ನಿಗದಿಪಡಿಸಿಕೊಂಡು ಮಲಗಿರುತ್ತೇವೆ. ನಾವು ಫಿಕ್ಸ್ ಮಾಡಿಟ್ಟ ಟೈಂಗೆ ಅಲಾರಾಂ ಏನೋ ಹೊಡೆದುಕೊಳ್ಳುತ್ತೆ ಆದರೆ, ನಮಗೆ ಏಳೋಕೆ ಆ ಸಮಯದಲ್ಲಿ ಆಗಲ್ಲ, ಹಾಗೂ ಹೀಗೂ ಕಣ್ಣನ್ನು ಸಣ್ಣಗೆ ಬಿಟ್ಟುಕೊಂಡೇ ಸ್ನೂಜ್‌ಗೆ ಹಾಕುತ್ತೇವೆ. ಮತ್ತೆ ಒಂದ್ಹತ್ತು ನಿಮಿಷ ರಿಲೀಫ್... ಪುನಃ ಅಲಾರಾಂ ಹೊಡೆದುಕೊಳ್ಳುತ್ತೆ... ಈಗ ಹೇಳಲು ಹೊರಟಿರುವ ವಿಷಯ ಅಂದ್ರೆ ಈ ಅಲಾರಾಂ ರೀತಿ ನೀವು ನಿಮ್ಮ ಜಿ-ಮೇಲ್ (G-Mail) ಗೆ ಬರುವ ಸಂದೇಶವನ್ನೂ ಸ್ನೂಜ್ ಮಾಡಬಹುದು...!

ಹೌದು. ಇಂಥದ್ದೊಂದು ಫೀಚರ್ ಜಿ-ಮೇಲ್‌ನಲ್ಲಿ ಬಹಳ ಹಿಂದಿನಿಂದ ಇದೆಯಾದರೂ ಬಹಳಷ್ಟು ಜನಕ್ಕೆ ಆ ಬಗ್ಗೆ ತಿಳಿದಿರುವುದಿಲ್ಲ. ಒಮ್ಮೊಮ್ಮೆ ಜಿ-ಮೇಲ್ ಅನ್ನು ಆಪರೇಟ್ ಮಾಡುವಾಗಲೂ ಸ್ನೂಜ್ ಆಪ್ಷನ್ ಕಂಡಿರುತ್ತದೆ. ಆದರೆ, ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಆ ಸಮಯದಲ್ಲಿ ಬೇಕಾಗಿದ್ದ ವಿಷಯದ ಬಗ್ಗೆ ಗಮನಹರಿಸಲಾಗಿರುತ್ತದೆ. ಆದರೆ, ಇಂಥದ್ದೊಂದು ಫೀಚರ್ ಅನ್ನು ನೀವು ಸಮರ್ಪಕವಾಗಿ ಬಳಸಿಕೊಂಡು ನಿಮ್ಮ ಅಗತ್ಯಕ್ಕೆ ತಕ್ಕಂತೆ ದುಡಿಸಿಕೊಳ್ಳಬಹುದು.

ಇದನ್ನು ಓದಿ: ವಾಟ್ಸಪ್ ನಲ್ಲಿ 50 ಮಂದಿ ಜೊತೆ ವಿಡಿಯೋ ಕಾಲ್ ಮಾಡೋದು ಹೀಗೆ..!

ಎಲ್ಲ ಸಮಯವೂ ಒಂದೇ ರೀತಿ ಇರುವುದಿಲ್ಲ. ಈಗ ಅಂಗೈನಲ್ಲೇ ಪ್ರಪಂಚವಿದ್ದರೂ, ಎಲ್ಲವೂ ನಿಮಗೆ ಮೊಬೈಲ್‌ನಲ್ಲಿಯೇ ಲಭ್ಯವಾದರೂ ಕೆಲವೊಂದು ಬಾರಿ, ಕೆಲವೊಂದು ಸನ್ನಿವೇಶದಲ್ಲಿ ಎಲ್ಲ ಸಂಗತಿಗಳನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ಇದೇ ರೀತಿ ಜಿ-ಮೇಲ್ ಸಂದೇಶವೂ ಆಗಿರುತ್ತದೆ. ನೀವು ಕೆಲವು ಪ್ರಮುಖ ಮೀಟಿಂಗ್‌ನಲ್ಲಿಯೋ, ಯಾರದ್ದೋ ಜೊತೆ ಮಾತುಕತೆಯಲ್ಲೋ, ಇಲ್ಲವೇ ಕೆಲಸದ ಒತ್ತಡದಿಂದಾಗಿಯೋ ಜಿ-ಮೇಲ್‌ಗೆ ಮೆಸೇಜ್ ಬಂದಿರುವುದನ್ನು ನೋಡಿದರೂ ಅದನ್ನು ಸಂಪೂರ್ಣವಾಗಿ ಓದಲು ಆಗಿರುವುದಿಲ್ಲ. ಕೆಲವೊಮ್ಮೆ ಓಪನ್ ಮಾಡಿ ವಾಪಸ್ ಅದರಿಂದ ನಿರ್ಗಮಿಸಿರುತ್ತೇವೆ. ಆಗ ಆ ಮೇಲ್ “ರೀಡ್” ಆಗಿರುವುದರಿಂದ ಸಂದೇಶ ಕಣ್ತಿಪ್ಪಿಯೂ ಹೋಗಬಹುದು, ನಮಗೆ ಮರೆತೂ ಹೋಗಬಹುದು. ಇಂಥ ಸನ್ನಿವೇಶ ಎದುರಾಗದಿರಲಿ ಎಂದೇ ಸ್ನೂಜ್ ಎಂಬ ಆಪ್ಷನ್ ಅನ್ನು ಜಿ-ಮೇಲ್‌ನಲ್ಲಿ ಕೊಡಲಾಗಿದೆ. 



ಹೌದು ನೀವು ಈ ಸ್ನೂಜ್ ಆಯ್ಕೆಯನ್ನು ಬಳಸಿದರೆ, ನಿಮಗೆ ಯಾವ ಸಮಯಕ್ಕೆ ಆ ಸಂದೇಶವನ್ನು ಓದಬೇಕೆಂದು ಅನ್ನಿಸುತ್ತದೋ ಆ ಸಮಯಕ್ಕೆ ಸಮಯ ಹಾಗೂ ಬೇಕಿದ್ದಲ್ಲಿ ದಿನಾಂಕವನ್ನೂ ನಿಗದಿ ಮಾಡಬಹುದಾಗಿದೆ. ನೀವು ಕೊಟ್ಟ ಸಮಯಕ್ಕೆ ಸರಿಯಾಗಿ ಜಿ-ಮೇಲ್‌ನಲ್ಲಿ ಆ ಸಂದೇಶದ ನೋಟಿಫಿಕೇಶನ್ ಪುನಃ ನಿಮ್ಮ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಸಂದೇಶ ಮರೆತುಹೋಗುವ ಕಿರಿಕಿರಿ ತಪ್ಪುತ್ತದೆ. ನೀವು ಇ-ಮೇಲ್ ಸ್ನೂಜ್ ಮಾಡೋದು ಹೇಗೆ ಎಂಬ ಬಗ್ಗೆ ಈಗ ನೋಡೋಣ.

ಇದನ್ನು ಓದಿ: ಭಾರತೀಯ ಓದುಗರ ಬಳಿ ವಾರದ ಕಾಫಿ ದುಡ್ಡು ಕೇಳುತ್ತಿದೆ ವಿಕಿಪೀಡಿಯಾ…!

ಡೆಸ್ಕ್‌ಟಾಪ್‌ನಲ್ಲಾದರೆ ಹೀಗೆ ಸ್ನೂಜ್ ಮಾಡಿ

• ಜಿ-ಮೇಲ್ ಬ್ರೌಸರ್ ಅನ್ನು ಓಪನ್ ಮಾಡಿರಿ

• ಜಿ-ಮೇಲ್ ಖಾತೆಗೆ ಸೈನ್-ಇನ್ ಆಗಿರಿ

• ಇನ್ ಬಾಕ್ಸ್‌ನಲ್ಲಿ ಕಾಣುವ ಇ-ಮೇಲ್ ಮೇಲೆ ರೈಟ್ (ಬಲ) ಕ್ಲಿಕ್ ಮಾಡಿದಾಗ ಸ್ನೂಜ್ ಆಪ್ಷನ್ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ

• ಅಲ್ಲಿ ನಿಮಗೆ ದಿನಾಂಕ ಹಾಗೂ ಸಮಯದ ಕ್ಯಾಲೆಂಡರ್ ಅನ್ನು ತೋರಿಸುತ್ತದೆ. ನಿಮಗೆ ಯಾವ ಸಮಯ ಬೇಕು ಎಂಬುದನ್ನು ನಿಗದಿಪಡಿಸಿಕೊಳ್ಳಿ.

• ದಿನಾಂಕ ಹಾಗೂ ಸಮಯವನ್ನು ನಿಗದಿ ಮಾಡಿದ ನಂತರ ಸೇವ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ

ಇದನ್ನು ಓದಿ: ವಾಟ್ಸಪ್‌ಗೆ ಬಂತು ಮೆಸ್ಸೆಂಜರ್ ರೂಮ್; ಅದನ್ನು ಹೀಗೆ ಬಳಸಿ…!

ಆ್ಯಂಡ್ರಾಯ್ಡ್ / ಐಒಎಸ್ ಮೊಬೈಲ್‌ನಲ್ಲಾದರೆ ಹೀಗೆ ಸ್ನೂಜ್ ಮಾಡಿ

• ನಿಮ್ಮ ಸ್ಮಾರ್ಟ್ ಫೋನ್ ಜಿ-ಮೇಲ್ ಓಪನ್ ಮಾಡಿ

• ನೀವು ಹೋಲ್ಡ್ ಮಾಡಲು ಇಚ್ಛಿಸುವ ಇ-ಮೇಲ್ ಮೇಲೆ ಕೆಲಕ್ಷಣ ಒತ್ತಿಹಿಡಿಯಿರಿ

• ಹೀಗೆ ಒತ್ತಿಹಿಡಿದಾಗ ಆ ಮೆಸೇಜ್ ಸೆಲೆಕ್ಟ್ ಆಗಿ ಬಲಭಾಗದ ಮೇಲ್ತುದಿಯಲ್ಲಿ ಮೂರು ಡಾಟ್‌ಗಳು ಕಾಣುತ್ತವೆ. ಅದರ ಮೇಲೆ ಕ್ಲಿಕ್ ಮಾಡಬೇಕು

• ಆ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿದಾಗ ಸ್ನೂಜ್ ಆಪ್ಷನ್ ಕಾಣುತ್ತದೆ

• ಅಲ್ಲಿ ನೀವು ಸಮಯ ಹಾಗೂ ದಿನಾಂಕವನ್ನು ನಿಗದಿಪಡಿಸಬೇಕು 

• ಹೀಗೆ ಸಮಯ ಹಾಗೂ ದಿನಾಂಕವನ್ನು ನಿಗದಿಪಡಿಸಿದ ಮೇಲೆ  ಸೇವ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ನೀವು ನಿಗದಿ ಮಾಡಿದ ಸಮಯ ಹಾಗೂ ದಿನಾಂಕದಂದು ಇನ್ ಬಾಕ್ಸ್‌ನಲ್ಲಿ ಮತ್ತೆ ಆ ಮೆಸೇಜ್ ಕಾಣುತ್ತದೆ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್