ವಾಟ್ಸಪ್‌ನಲ್ಲಿನ್ನು ಪಟಾಫಟ್‌ ವಿಡಿಯೋ ಸಂದೇಶ: ಶೀಘ್ರ ಹೊಸ ಸೇವೆ ಆರಂಭ

By Kannadaprabha News  |  First Published Jul 29, 2023, 12:11 PM IST

ಈಗಾಗಲೇ ಧ್ವನಿ ಸಂದೇಶಗಳನ್ನು ಕಳುಹಿಸುವ ಆಯ್ಕೆಯನ್ನು ಎಲ್ಲಾ ಬಳಕೆದಾರರಿಗೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಇನ್ನು ಮುಂದೆ ವಿಡಿಯೋ ಸಂದೇಶ ಕಳುಹಿಸಬಹುದಾಗಿದೆ. 


ಕ್ಯಾಲಿಫೋರ್ನಿಯಾ (ಜುಲೈ 29, 2023): ಧ್ವನಿ ಸಂದೇಶ ಕಳುಹಿಸುವ ರೀತಿಯಲ್ಲೇ ಪಟಾಫಟ್‌ 60 ಸೆಕೆಂಡ್‌ಗಳ ವಿಡಿಯೋ ಸಂದೇಶ ಕಳುಹಿಸುವ ಆಯ್ಕೆಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ವಾಟ್ಸಪ್‌ನ ಮಾತೃಸಂಸ್ಥೆ ಮೆಟಾ ತಿಳಿಸಿದೆ. ಈಗಾಗಲೇ ಧ್ವನಿ ಸಂದೇಶಗಳನ್ನು ಕಳುಹಿಸುವ ಆಯ್ಕೆಯನ್ನು ಎಲ್ಲಾ ಬಳಕೆದಾರರಿಗೆ ನೀಡಲಾಗಿದೆ. ಇದೇ ಮಾದರಿಯಲ್ಲಿ ಇನ್ನು ಮುಂದೆ ವಿಡಿಯೋ ಸಂದೇಶ ಕಳುಹಿಸಬಹುದಾಗಿದೆ. 

ಪ್ರಸಕ್ತ ಮೆಸೇಜ್‌ ಟೈಪ್‌ ಮಾಡಲು ಇರುವ ಸ್ಥಳದ ಪಕ್ಕದಲ್ಲೇ ಮೈಕ್‌ ಆಕಾರದ ಚಿಹ್ನೆ ಇದ್ದು, ಅದನ್ನು ಒತ್ತಿ ಹಿಡಿಯುವ ಮೂಲಕ ಧ್ವನಿ ಸಂದೇಶ ರೆಕಾರ್ಡ್‌ ಮಾಡಿ ಕಳುಹಿಸಬಹುದು. ಇದೇ ಮೈಕ್‌ ಚಿಹ್ನೆಯನ್ನು ವಿಡಿಯೋಗೆ ಬದಲಾಯಿಸಿಕೊಂಡು 60 ಸೆಕೆಂಡ್‌ ವಿಡಿಯೋ ಮಾಡಿ ಅದನ್ನು ತಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇರುವವರಿಗೆ ಕಳುಹಿಸಬಹುದು.

Tap to resize

Latest Videos

ಇದನ್ನು ಓದಿ:  ಚಾಟಿಂಗ್ ರಹಸ್ಯವಾಗಿಡಲು ವಾಟ್ಸ್‌ಆ್ಯಟ್‌ನಲ್ಲಿ ಬಂದಿದೆ ಚಾಟ್‌ ಲಾಕ್‌ ಫೀಚರ್‌: ಬಳಕೆ ಮಾಡುವುದು ಹೀಗೆ..

ಹೀಗೆ ರವಾನೆಯಾದ ವಿಡಿಯೋ ಸಂದೇಶ, ಅದನ್ನು ಸ್ವೀಕರಿಸಿದವರ ಮೊಬೈಲ್‌ನಲ್ಲಿ ವೃತ್ತಾಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಇದು ಸ್ವಯಂಚಾಲಿತವಾಗಿ ಧ್ವನಿ ಇಲ್ಲದೇ ಪ್ಲೇ ಆಗಲಿದ್ದು, ಅದರ ಮೇಲೆ ಮುಟ್ಟುವ ಮೂಲಕ ಧ್ವನಿಯನ್ನು ಆಲಿಸಬಹುದಾಗಿದೆ.

ಶುಭ ಸಂದೇಶಗಳನ್ನು ತಿಳಿಸುವಾಗ, ಜೋಕ್‌ಗಳಿಗೆ ನಗುವುದನ್ನು ಕಳಿಸಲು ಅಥವಾ ಯಾರಿಗಾದರೂ ಶುಭಾಶಯ ಕಳುಹಿಸಲು ಇದು ಸಹಕಾರಿಯಾಗಲಿದೆ. ಸದ್ಯಕ್ಕೆ ಇದು ಪ್ರಾಯೋಗಿಕ ಹಂತದಲ್ಲಿದ್ದು, ಶೀಘ್ರವೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಮೆಟಾ ಹೇಳಿದೆ.

ಇದನ್ನೂ ಓದಿ: ವಾಟ್ಸಾಪ್‌ನಿಂದ ಹೊಸ ಫೀಚರ್‌ ರಿಲೀಸ್‌: ಇನ್ಮುಂದೆ ಒಂದೇ ವಾಟ್ಸಾಪ್‌ ಖಾತೆ ಮೂಲಕ 4 ಫೋನ್‌ಗಳಲ್ಲಿ ಬಳಕೆ!

click me!