2021ಕ್ಕೆ 5ಜಿ: ಅಂಬಾನಿ ಸುಳಿವು| 2ಜಿ ಬಳಸುವವರು 5ಜಿ ಬಳಸುವಂತಾಗಬೇಕು| ಇದಕ್ಕಾಗಿ ಸರ್ಕಾರ ಹೊಸ ನೀತಿ ರೂಪಿಸಬೇಕು
ನವದೆಹಲಿ(ಡಿ.09): ದೂರ ಸಂಪರ್ಕ ಕ್ಷೇತ್ರದಲ್ಲಿ ಹಲವು ಹೊಸತನಗಳಿಗೆ ವೇದಿಕೆಯಾಗಬಲ್ಲ 5ಜಿ ಮೊಬೈಲ್ ತಂತ್ರಜ್ಞಾನವನ್ನು 2021ರ ದ್ವಿತಿಯಾರ್ಧದ ವೇಳೆ ಭಾರತಕ್ಕೆ ಪರಿಚಯಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಂಬಾನಿ ‘ಡಿಟಿಟಲ್ ತಂತ್ರಜ್ಞಾನದಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಆ ಅಗ್ರಸ್ಥಾನವನ್ನು ನಾವು ಕಾಪಾಡಿಕೊಳ್ಳಬೇಕಾದರೆ 5ಜಿ ತಂತ್ರಜ್ಞಾನ ಜಾರಿಗೆ ಅಗತ್ಯವಾದ ನೀತಿಗಳಿಗೆ ತ್ವರಿತಗತಿ ನೀಡಬೇಕು ಮತ್ತು ಅದನ್ನು ಎಲ್ಲರಿಗೂ ಸಿಗುವಂತೆ ಹಾಗೂ ಅಗ್ಗವಾಗಿರುವಂತೆ ನೋಡಿಕೊಳ್ಳಬೇಕು. ಭಾರತವು ಈ ವಿಷಯದಲ್ಲಿ ಅಗ್ರಗಣ್ಯವಾಗಿರುವಂತೆ ನೋಡಿಕೊಳ್ಳಲು 2021ರ ದ್ವಿತಿಯಾರ್ಧದಲ್ಲಿ ಜಿಯೋ 5ಜಿ ಸೇವೆಯಲ್ಲಿ ಕ್ರಾಂತಿ ಮಾಡುವ ಭರವಸೆಯನ್ನು ನಾನು ನೀಡುತ್ತೇನೆ. ಜಿಯೋದ 5ಜಿ ಸೇವೆಗೆ ಅಗತ್ಯವಾದ ಹಾರ್ಡ್‌ವೇರ್, ನೆಟ್‌ವರ್ಕ್ ಮತ್ತು ಇತರೆ ಎಲ್ಲಾ ತಂತ್ರಜ್ಞಾನ ಉಪಕರಣಗಳು ಕೂಡಾ ದೇಶೀಯವಾಗಿಯೇ ಅಭಿವೃದ್ಧಿಪಡಿಸಿದ್ದಾಗಿದೆ. ಆತ್ಮನಿರ್ಭರ ಭಾರತದ ದೂರದೃಷ್ಟಿತ್ವದಲ್ಲಿ ಜಿಯೋ 5ಜಿ ಸೇವೆ ಪ್ರಮುಖ ಪುರಾವೆಯಾಗಲಿದೆ’ ಎಂದು ಹೇಳಿದ್ದಾರೆ.
ದೇಶದ 300 ದಶಲಕ್ಷ ಜನರು ಈಗಲೂ 2ಜಿ ಯುಗದಲ್ಲಿದ್ದಾರೆ. ಈ ಜನರಿಗೆ ಕೂಡ ಕೈಕೆಟಕುವ ದರದಲ್ಲಿ ಸ್ಮಾರ್ಟ್ ಫೋನ್ ದೊರಬೇಕು. ಇದಕ್ಕಾಗಿ ಹೊಸ ತುರ್ತು ನೀತಿಯನ್ನು ಸರ್ಕಾರ ರಚಿಸಬೇಕು. ಇದರಿಂದಾಗಿ ಅವರು ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಸಂಪೂರ್ಣ ಭಾರತ ಕೇಂದ್ರೀಕೃತ 5ಜಿ ಮೊಬೈಲ್ ತಂತ್ರಜ್ಞಾನವು ಅಸ್ತಿತ್ವದ ಸಮಸ್ಯೆಎದುರಿಸಬೇಕಾಗಿ ಬರಬಹುದು ಮತ್ತು ನಾವೀನ್ಯತೆ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಪ್ರತಿಸ್ಪರ್ಧೆ ಸಂಸ್ಥೆಯಾದ ಏರ್‌ಟೆಲ್ ಕಳವಳ ವ್ಯಕ್ತಪಡಿಸಿದೆ.