ಸಿಮ್‌ ಕಾರ್ಡ್‌ ಪಡೆಯಲು ಇನ್ಮುಂದೆ ಬಯೋಮೆಟ್ರಿಕ್‌ ಕಡ್ಡಾಯ: ಹೊಸ ಟೆಲಿಕಾಂ ಮಸೂದೆಯ ಪ್ರಮುಖಾಂಶ ಹೀಗಿದೆ..

By Kannadaprabha NewsFirst Published Dec 19, 2023, 1:28 PM IST
Highlights

ಟೆಲಿಕಮ್ಯುನಿಕೇಷನ್ಸ್‌ ಮಸೂದೆ-2023ನ್ನು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದರು. ಹಳೆಯ ಟೆಲಿಗ್ರಾಫ್‌ ಕಾಯ್ದೆ, ಇಂಡಿಯನ್‌ ವೈರ್‌ಲೆಸ್‌ ಟೆಲಿಗ್ರಾಫಿ ಕಾಯ್ದೆ ಹಾಗೂ ಟೆಲಿಗ್ರಾಫ್‌ ವೈರ್ಸ್‌ ಕಾಯ್ದೆಯನ್ನು ರದ್ದುಪಡಿಸಿ ಈ ಹೊಸ ಮಸೂದೆ ಸಿದ್ಧಪಡಿಸಲಾಗಿದೆ.

ನವದೆಹಲಿ (ಡಿಸೆಂಬರ್ 19, 2023):  ಮೊಬೈಲ್‌ ಫೋನ್‌ ಸಿಮ್‌ ಕಾರ್ಡ್‌ ಖರೀದಿಗೆ ಬಯೋಮೆಟ್ರಿಕ್‌ ಕಡ್ಡಾಯಗೊಳಿಸುವ ದೂರಸಂಪರ್ಕ ಮಸೂದೆ-2023 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದೆ. ಟೆಲಿಫೋನ್‌ ಕದ್ದಾಲಿಕೆಗೆ 3 ವರ್ಷ ಜೈಲು ಹಾಗೂ 2 ಕೋಟಿ ರೂ. ದಂಡ ವಿಧಿಸುವುದು, ತುರ್ತು ಸಂದರ್ಭದಲ್ಲಿ ಟೆಲಿಕಾಂ ಕಂಪನಿಯ ಮೊಬೈಲ್‌ ನೆಟ್‌ವರ್ಕ್‌ ಅನ್ನು ಜಪ್ತಿ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಅಂಶವೂ ಈ ವಿಧೇಯಕದಲ್ಲಿದೆ.

ತುರ್ತು ಸಂದರ್ಭ ಅಥವಾ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಸಂದರ್ಭದಲ್ಲಿ ಯಾವುದೇ ಟೆಲಿಕಾಂ ಕಂಪನಿಯ ಮೊಬೈಲ್‌ ನೆಟ್‌ವರ್ಕನ್ನು ವಶಪಡಿಸಿಕೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಕ್ಕೆ ನೀಡುವ ನೂತನ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಇದನ್ನು ಓದಿ: ದೇಶದ ಸುರಕ್ಷತೆಗಾಗಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸ್ವಾಧೀನ, ಕೇಂದ್ರದ ಹೊಸ ಮಸೂದೆ!

ಟೆಲಿಕಮ್ಯುನಿಕೇಷನ್ಸ್‌ ಮಸೂದೆ - 2023ನ್ನು ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಲೋಕಸಭೆಯಲ್ಲಿ ಸೋಮವಾರ ಮಂಡಿಸಿದರು. ಅದರಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರು ಪ್ರಕಟಣೆಯ ಉದ್ದೇಶದಿಂದ ಕಳುಹಿಸುವ ಸಂದೇಶಗಳನ್ನು ಕದ್ದು ಓದುವುದನ್ನು ಶಿಕ್ಷಾರ್ಹ ಅಪರಾಧವಾಗಿಸಲಾಗಿದೆ. ಹಳೆಯ ಟೆಲಿಗ್ರಾಫ್‌ ಕಾಯ್ದೆ, ಇಂಡಿಯನ್‌ ವೈರ್‌ಲೆಸ್‌ ಟೆಲಿಗ್ರಾಫಿ ಕಾಯ್ದೆ ಹಾಗೂ ಟೆಲಿಗ್ರಾಫ್‌ ವೈರ್ಸ್‌ ಕಾಯ್ದೆಯನ್ನು ರದ್ದುಪಡಿಸಿ ಈ ಹೊಸ ಮಸೂದೆ ಸಿದ್ಧಪಡಿಸಲಾಗಿದೆ.

ಹೊಸ ಮಸೂದೆಯ ಪ್ರಮುಖಾಂಶ:
1. ತುರ್ತು ಸಂದರ್ಭ, ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ಸಂದರ್ಭ, ರಕ್ಷಣಾ ಉದ್ದೇಶಕ್ಕೆ, ದೇಶದ ಸಾರ್ವಭೌಮತೆ ಕಾಪಾಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸರ್ಕಾರದಿಂದ ಈ ಉದ್ದೇಶಕ್ಕೆ ನೇಮಿಸಲ್ಪಟ್ಟ ಅಧಿಕಾರಿಯ ಆದೇಶದೊಂದಿಗೆ ಯಾವುದೇ ಟೆಲಿಕಾಂ ಕಂಪನಿಯ ಮೊಬೈಲ್‌ ನೆಟ್‌ವರ್ಕನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಬಹುದು.
2. ಮೇಲೆ ಹೇಳಿದ ಉದ್ದೇಶಕ್ಕಾಗಿ ಇಬ್ಬರು ವ್ಯಕ್ತಿಗಳು ಅಥವಾ ಕಂಪನಿಗಳು ಅಥವಾ ಯಾವುದೇ ಉಪಕರಣಗಳ ನಡುವೆ ವಿನಿಮಯವಾಗುವ ಸಂದೇಶವನ್ನು ಸರ್ಕಾರ ತಡೆಹಿಡಿಯಬಹುದು ಅಥವಾ ಓದಬಹುದು.
3. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರು ಪ್ರಕಟಣೆಯ ಉದ್ದೇಶದಿಂದ ಕಳುಹಿಸುವ ಸಂದೇಶವನ್ನು ಯಾರೂ ಕದ್ದು ನೋಡುವಂತಿಲ್ಲ ಅತವಾ ತಡೆಹಿಡಿಯುವಂತಿಲ್ಲ. ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ಇಂತಹ ಸಂದೇಶಗಳ ವಿನಿಮಯವನ್ನು ನಿಷೇಧಿಸಿದ್ದರೆ ಮಾತ್ರ ಸರ್ಕಾರ ಪತ್ರಕರ್ತರ ಸಂದೇಶ ವೀಕ್ಷಿಸಬಹುದು.
4. ಸಂದೇಶಗಳನ್ನು ಅಕ್ರಮವಾಗಿ ವೀಕ್ಷಿಸಿದರೆ 3 ವರ್ಷದವರೆಗೆ ಜೈಲುಶಿಕ್ಷೆ, 2 ಕೋಟಿ ರು.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
5. ಟೆಲಿಕಾಂ ಸಂಬಂಧಿ ವ್ಯಾಜ್ಯಗಳ ಇತ್ಯರ್ಥಕ್ಕೆ ನ್ಯಾಯಮಂಡಳಿ ರಚಿಸುವುದು.
6. ಸಿಮ್‌ ಪಡೆಯಲು ಬಯೋಮೆಟ್ರಿಕ್‌ ಕಡ್ಡಾಯ

ವಾಟ್ಸಪ್‌ ಸ್ಟೇಟಸ್‌ಗೆ ಇನ್ಮುಂದೆ ಎಚ್‌ಡಿ ಫೋಟೋ, ವಿಡಿಯೋ ಶೇರ್‌ ಮಾಡಲು ಹೀಗೆ ಮಾಡಿ..

click me!