ತಮ್ಮ ಜೀವದ ಹಂಗು ತೊರೆದು ಬೇರೆಯವರ ಜೀವವನ್ನು ಉಳಿಸಿದ ಪುಣ್ಯಾತ್ಮರನ್ನು ಗುರುತಿಸಿ ಅವರಿಗೆ ಶೌರ್ಯ ಪ್ರಶಸ್ತಿ ನೀಡುತ್ತಿದೆ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್. ೨೦೧೯ನೇ ಸಾಲಿನ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಮತ್ತು ಅವರ ವಿವರ ಇಲ್ಲಿದೆ. ಎಲ್ಲರಿಗೂ ಅಭಿವಂದನೆ.
ಪ್ರಸನ್ನ ಹೆಬ್ಬಾರ್
ಕಳಸ, ಮೂಡಿಗೆರೆ ತಾಲೂಕು, ಚಿಕ್ಕಮಗಳೂರು
undefined
2016ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಕುಟುಂಬವೊಂದು ಕಾರಿನಲ್ಲಿ ಕಳಸ-ಹೊರನಾಡು ಪ್ರವಾಸ ಕೈಗೊಂಡಿತ್ತು. ಕಳಸದಿಂದ ೮ ಕಿ. ಮೀ.ದೂರದ ಊರಿನಲ್ಲಿ ಬರುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಸುಮಾರು ೬೦ ಅಡಿ ಆಳದ ಪ್ರಪಾತಕ್ಕೆ ಬಿತ್ತು. ಅದೃಷ್ಟವಶಾತ್ ಕಾರು ಮರಕ್ಕೆ ಸಿಕ್ಕಿಕೊಂಡಿತ್ತು. ಈ ಕಾರಿನ ಹಿಂದೆಯೇ ಬರುತ್ತಿದ್ದ ಪ್ರಸನ್ನ ಹೆಬ್ಬಾರ್ ತಕ್ಷಣವೇ ಇವರ ಸಹಾಯಕ್ಕೆ ಧಾವಿಸಿ, ನಾಲ್ಕೂ ಜನರ ಪ್ರಾಣ ಉಳಿಸಿದ್ದರು. ಅವರು ಬರುವುದು ಕೊಂಚ ತಡವಾದರೂ ಕಾರು ಪ್ರಪಾತಕ್ಕೆ ಬೀಳುವುದರಲ್ಲಿತ್ತು.
ಶುಭಾ
ಬೆಂಗಳೂರು
ಶುಭಾ ಬೆಂಗಳೂರಿನ ವಿಜಯನಗರದಲ್ಲಿ ಆಭರಣದ ಅಂಗಡಿ ಇಟ್ಟುಕೊಂಡಿದ್ದಾರೆ. ಪತಿ ಜಗದೀಶ್ ಹೊರಗೆ ಹೋಗಿದ್ದ ಸಂರ್ಭದಲ್ಲಿ ಶುಭ ಒಬ್ಬರೇ ಚಿನ್ನದ ಅಂಗಡಿಯಲ್ಲಿ ಇದ್ದದ್ದನ್ನು ಗಮನಿಸಿದ ಕಳ್ಳ ಒಡವೆ ಕೊಳ್ಳುವ ನೆಪದಲ್ಲಿ ಬಂದಿದ್ದ. ಒಂದು ಸರ ಕೊಂಡು ಅದಕ್ಕೆ 1.20 ಲಕ್ಷ ರುಪಾಯಿ ಬಿಲ್ ಆಗಿತ್ತು. ಹಣ ಪಾವತಿಗಾಗಿ ಎರಡು ಡೆಬಿಟ್ ಕಾರ್ಡ್‌ಗಳನ್ನು ನೀಡುವ ನೆವ ಹೇಳಿ ಸರವನ್ನು ಜೇಬಿಗೆ ಹಾಕಿಕೊಂಡು ಓಡಿ ಹೋಗಲು ಯತ್ನಿಸಿದ್ದ. ಆಗ ಶುಭ ಕಳ್ಳನ ಹಿಂದೆಯೇ ಓಡಿ, ಜೋರಾಗಿ ಕೂಗಿಕೊಂಡು ಅಕ್ಕ ಪಕ್ಕದ ಅಂಗಡಿಯವರ ಸಹಾಯದಿಂದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ರವಿ
ಅಕ್ಕಿಹೆಬ್ಬಾಳು, ಮಂಡ್ಯ
2018ರ ಫೆಬ್ರವರಿಯಲ್ಲಿ ಹೇಮಾವತಿ ನದಿಯಲ್ಲಿ ಏಕಾಏಕಿ ಪ್ರವಾಹ ಬಂತು. ಈ ವೇಳೆ ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ಐವರು ಹೆಂಗಸರು ಹಾಗೂ ಇಬ್ಬರು ಗಂಡಸರು ಸೇರಿ ಒಟ್ಟು ೭ ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರು. ಈ ವೇಳೆ ತಕ್ಷಣ ಕಾರ್ಯಪ್ರವೃತ್ತರಾದ ಅಕ್ಕಿಹೆಬ್ಬಾಳಿನ ರವಿ ಅವರು ಟ್ಯೂಬ್ ಸಹಾಯದಿಂದ ನದಿಗೆ ಇಳಿದು ಏಳು ಮಂದಿಯನ್ನೂ ಸಾವಿನ ದವಡೆಯಿಂದ ಕಾಪಾಡಿದ್ದರು.
ಗಿರಿಧರ ಹರಿಕಂತ್ರ
ಕಾರವಾರ
ಕೂರ್ಮಗಡ ನರಸಿಂಹ ಜಾತ್ರೆಗೆ ತೆರಳಿದ್ದ ಭಕ್ತರು ಪ್ರಯಾಣಿಸುತ್ತಿದ್ದ ದೋಣಿ ಕಾಳಿ ಸಂಗಮದ ಬಳಿ ಮುಳುಗಿ ೧೬ ಮಂದಿ ಸಾವನ್ನಪ್ಪಿದ್ದರು. ಇದೇ ಘಟನೆಯಲ್ಲಿ ಅದೃಷ್ಟವಶಾತ್ ೬ ಮಂದಿ ಬದುಕುಳಿದಿದ್ದರು. ಇವರನ್ನು ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಗಿರಿಧರ ಹರಿಕಂತ್ರ. ದೋಣಿ ಮುಳುಗುವ ವೇಳೆ ಸ್ವಲ್ಪವೇ ದೂರದಲ್ಲಿ ಗಿರಿಧರ್ ತನ್ನ ಭಾವನಾದ ಗಣಪತಿ ಉಳ್ವೇಕರ್ ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯ್ಕ ಪ್ರಯಾಣಿಸುತ್ತಿದ್ದರು. ಈ ವೇಳೆ ಸಮುದ್ರಕ್ಕೆ ಹಾರಿದ ಗಿರಿಧರ್ ಆರು ಮಂದಿಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದರು.
ದೀಪು ಮತ್ತು ಸಾತ್ವಿಕ್ (ಅಂಗನವಾಡಿ ಮಕ್ಕಳು)
ಅಪ್ಪೇಗೌಡನಹಳ್ಳಿ, ಶಿಡ್ಲಘಟ್ಟ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ
ಪುಟಾಣಿ ಮಕ್ಕಳಾದ ಸಾತ್ವಿಕ್, ದೀಪು ಹಾಗೂ ಪೂರ್ವಿಕಾ ಆಡವಾಡುತ್ತಿದ್ದರು, ಈ ವೇಳೆ ಬಾಲಕಿ ಪೂರ್ವಿಕ ನಿರ್ಮಾಣ ಹಂತದಲ್ಲಿದ್ದ ಮನೆಯ ನೀರಿನ ಸಂಪಿಗೆ ಬೀಳುತ್ತಾಳೆ. ಅದೇ ವೇಳೆಗೆ ಸಾತ್ವಿಕ್ ಮತ್ತು ದೀಪು ತಕ್ಷಣ ಸಂಪ್‌ಗೆ ಇಳಿದು ಪೂರ್ವಿಕಾಳನ್ನು ನೀರಿನಿಂದ ಎತ್ತಿ ಆಕೆಯ ಜೀವ ಉಳಿಸಿದ್ದರು. ಮೂರು ಮಂದಿ ಮುಳುಗುವಷ್ಟು ಆಳವಾಗಿದ್ದ ಸಂಪಿನಲ್ಲಿ ಮುಕ್ಕಾಲು ಭಾಗ ನೀರಿತ್ತು. ಈ ಪುಟಾಣಿಗಳು ಗೆಳತಿಯ ಪ್ರಾಣ ರಕ್ಷಣೆಗೆ ದೊಡ್ಡ ಸಾಹಸವನ್ನೇ ಮಾಡಿ ಒಂದು ಜೀವ ಕಾಪಾಡಿದ್ದರು.
ರಿಯಾಜ್ ಮತ್ತು ತೌಸಿಫ್
ದುರ್ಗಾನಗರ, ಖಾನಾಪುರ, ಬೆಳಗಾವಿ
ವೃತ್ತಿಯಲ್ಲಿ ಕಾರು ಚಾಲಕರಾಗಿರುವ ರಿಯಾಜ್, 2019ರ ಜನವರಿ 11ರಂದು ಮಧ್ಯಾಹ್ನ ಸ್ನೇಹಿತ ತೌಸಿಫ್ ಜತೆಗೆ ಖಾನಾಪುರದಿಂದ ಬೆಳಗಾವಿಗೆ ಹೊರಟ್ಟಿದ್ದರು. ಈ ವೇಳೆ ಕೊಲ್ಹಾಪುರ-ಹೈದರಾಬಾದ್ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ಕಡೆಯಿಂದ ಖಾನಾಪುರ ಕಡೆಗೆ ಬರುತ್ತಿತ್ತು. ರೈಲ್ವೆ ಹಳಿಯ ಮೇಲೆ ಬೃಹತ್ ಮರವೊಂದು ಮುರಿದು ಬಿದ್ದಿತ್ತು. ಇದನ್ನು ಗಮನಿಸಿದ ರಿಯಾಜ್ ರೈಲು ನಿಲ್ಲಿಸುವಂತೆ ಸನ್ನೆ ಮಾಡುತ್ತಾ ರೈಲಿಗೆ ಅಭಿಮುಖವಾಗಿ ಹಳಿಗಳ ಮೇಲೆ ಓಡಿದ್ದರು. ಇದರಿಂದ ಸಾವಿರಾರು ಜನರ ಪ್ರಾಣ ಉಳಿದಿತ್ತು. ರಿಯಾಜ್ ತನ್ನ ಪ್ರಾಣವನ್ನೂ ಲೆಕ್ಕಿಸದೇ ಈ ಸಾಹಸ ಮಾಡಿದ್ದರು.
ಚಿನ್ನಸ್ವಾಮಿ
ಕೆಎಸ್‌ಆರ್‌ಟಿಸಿ ಬಸ್ ಚಾಲಕ, ಗುಂಡ್ಲುಪೇಟೆ ಘಟಕ, ಚಾಮರಾಜನಗರ ಜಿಲ್ಲೆ
2017ರ ಅಕ್ಟೋಬರ್ 8ರಂದು ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವಾಗ ಬೆಟ್ಟದ ತಿರುವಿನಲ್ಲಿ ರಸ್ತೆ ಕಿರಿದಾಗಿದ್ದರಿಂದ ಬಸ್ ನಿಯಂತ್ರಣ ಕಳೆದುಕೊಂಡು ಪ್ರಪಾತದತ್ತ ಚಲಿಸಿದೆ. ಇಳಿಜಾರಿದ್ದಿದ್ದರಿಂದ ಬ್ರೇಕ್ ಹಾಕಿದರೂ ಬಸ್ ಮುಂದಕ್ಕೆ ಚಲಿಸಿದೆ. ೬೦ ಪ್ರಯಾಣಿಕರಿದ್ದ ಬಸ್ ಇನ್ನೇನು ಪ್ರಪಾತಕ್ಕೆ ಬೀಳಬೇಕು ಎನ್ನುವಷ್ಟರಲ್ಲಿ ಹ್ಯಾಂಡ್ ಬ್ರೇಕ್ ಹಿಡಿದು ಹೇಗೋ ಬಸ್ ನಿಯಂತ್ರಣಕ್ಕೆ ಪಡೆದಿದ್ದರು ಚಿನ್ನಸ್ವಾಮಿ. ಪ್ರಯಾಣಿಕರನ್ನು ಕೂಡಲೇ ಕೆಳಗಿಳಿಯುವಂತೆ ಸೂಚಿಸಿ, ಪ್ರಯಾಣಿಕರು ಕೆಳಗಿಳಿದ ಬಳಿಕ ಬಸ್ ನಿಲ್ಲಿಸಿ, ಹಿಂಬದಿ ಬಾಗಿಲ ಮೂಲಕ ಇಳಿದಿದ್ದರು.
ಹನುಮಂತ ಶಿವಪುರ
ಹಂಪಿ ರಸ್ತೆಯ ಗಾಳೆಮ್ಮನಗುಡಿ ಬಳಿಯ ತುಂಗಭದ್ರ ಎಚ್‌ಎಲ್ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಅಂಜಲಿ ಮತ್ತು ಆಕೆಯ ಸಹೋದರಿ ಹೋಗಿರುತ್ತಾರೆ. ಈ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದ ಆ ಇಬ್ಬರು ಸಹೋದರಿಯರನ್ನು ರಕ್ಷಣೆ ಮಾಡಿದ್ದವರು ಹನುಮಂತ ಶಿವಪುರ. ಕಾಲು ಜಾರಿ ಬಿದ್ದು ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಈ ಇಬ್ಬರು ಹೆಣ್ಣು ಮಕ್ಕಳ ಸಹಾಯಕ್ಕೆ ಅದೇ ತಾನೆ ಕೂಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಮಲಪನಗುಡಿ ನಿವಾಸಿ ಹನುಮಂತ ಶಿವಪುರ ಬಂದಿದ್ದರು. ಜೀವದ ಹಂಗು ತೊರೆದು ಕಾಲುವೆಗೆ ಇಳಿದು ಆ ಇಬ್ಬರು ಸಹೋದರಿಯರ ಪ್ರಾಣ ಉಳಿಸಿದ್ದರು.
ನೇತ್ರಾವತಿ ಚವ್ಹಾಣ
(ಸಹೋದರನ ಜೀವ ಉಳಿಸಿ ಅಸುನೀಗಿದ ಬಾಲಕಿ)
ವಡ್ಡರ ಹೊಸೂರ, ಹುನಗುಂದ, ಬಾಗಲಕೋಟೆ
ಬಟ್ಟೆ ತೊಳೆಯಲು ನೀರಿನ ಕ್ವಾರಿಗೆ ಹೋಗಿದ್ದ ನೇತ್ರಾವತಿಯನ್ನು ಇಬ್ಬರು ಸಹೋದರರಾದ ಮುತ್ತುರಾಜ್ ಮತ್ತು ಗಣೇಶ ಬಂದಿರುತ್ತಾರೆ. ಈ ವೇಳೆ ಇಬ್ಬರು ಸಹೋದರರು ಕ್ವಾರಿಯಲ್ಲಿ ಈಜಾಡುತ್ತಿರುವಾಗ ನೀರಿನ ಸೆಳವಿಗೆ ಸಿಲುಕುತ್ತಾರೆ. ತಕ್ಷಣ ನೀರಿಗೆ ಹಾರಿದ ಬಾಲಕಿ ನೇತ್ರಾವತಿ ಮುತ್ತುರಾಜ್ ಎಂಬಾತನನ್ನು ದಡಕ್ಕೆ ಎಳೆದು ತಂದು ಆತನನ್ನ ಬದುಕಿಸುತ್ತಾಳೆ. ಮತ್ತೆ ಇನ್ನೊಬ್ಬ ಸಹೋದರ ಗಣೇಶನನ್ನು ಉಳಿಸಲು ಮತ್ತೊಮ್ಮೆ ನೀರಿಗೆ ಜಿಗಿದಾಗ ಆತನೊಂದಿಗೆ ಆಕೆಯೂ ಸಾವನ್ನಪ್ಪುತ್ತಾಳೆ. ಒಬ್ಬ ಸಹೋದರನ ಜೀವ ಉಳಿಸಿ ತನ್ನ ಜೀವವನ್ನ ಬಲಿಕೊಟ್ಟು ನೇತ್ರಾವತಿಗೆ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿಗಳು ಬಂದಿವೆ. ತನ್ನ ಪ್ರಾಣವನ್ನೇ ಬಲಿ ಕೊಟ್ಟು ಸಹೋದರನ ಪ್ರಾಣವನ್ನು ಉಳಿಸಿದ್ದಳು ಈ ಹುಡುಗಿ.
ಈಶ್ವರ ಕೋಡಿಹಳ್ಳಿ
ಕೆಎಸ್‌ಆರ್‌ಟಿಸಿ ಚಾಲಕ, ಗದಗ ವಿಭಾಗ ಮತ್ತು ಈರಣ್ಣ, ಲಾರಿ ಚಾಲಕ, ಯಲ್ಲಾಪುರ
ಗದಗ ಡಿಪೋದಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿರುವ ಈಶ್ವರ ಕೋಡಿಹಳ್ಳಿ ಪ್ರತಿನಿತ್ಯವೂ ಗದಗ ನಿಂದ ಕಾರವಾರಕ್ಕೆ ತೆರಳುವ ಬಸ್‌ಗೆ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು ಅದೇ ರೀತಿ 2018ರ ಡಿಸೆಂಬರ್ 30ರಂದು ಬಸ್ ಗದಗ ನಿಂದ ಕಾರವಾರಕ್ಕೆ ಹೊರಟಿದ್ದು ಬಸ್ ಯಲ್ಲಾಪರದ ಮುಂದೆ ಅರಬೈಲ್ ಘಾಟ್‌ನಲ್ಲಿ ಬ್ರೇಕ್ ಫೇಲ್ ಆಗಿದೆ. ಈಶ್ವರ ಧೈರ್ಯವಾಗಿ ಮುಂದೆ ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಗುದ್ದಿದ್ದಾನೆ. ಇದರಿಂದ ಗಾಬರಿಯಾದ ಲಾರಿ ಚಾಲಕ ಈರಣ್ಣ ಅಲ್ಲಿಂದಲೇ ಹೀಗೇಕೆ ಎಂದು ಸನ್ನೆ ಮೂಲಕ ಕೇಳಿದಾಗ, ಬಸ್ ಬ್ರೇಕ್ ಫೇಲ್ ಆಗಿರುವ ವಿಚಾರ ತಿಳಿಯುತ್ತದೆ. ನಂತರ ಈಶ್ವರ್ ಕೋಡಿಹಳ್ಳಿ ಮತ್ತು ಈರಣ್ಣ ಇಬ್ಬರೂ ಸೇರಿ ಪ್ರಯಾಣಿಕರ ಪ್ರಾಣ ಕಾಪಾಡಿದ್ದಾರೆ.
ಎಚ್.ಎಚ್. ವೆಂಕಟೇಶ್
ಹಾಸನ
2016 ಡಿಸೆಂಬರ್ 25 ಆಲೂರು ತಾಲೂಕು ನಾಗನೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸಾರ್ವಜನಿಕರು ಮತ್ತು ಅಧಿಕಾರಿಗಳ ಮೇಲೆ ದಾಳಿ ಮಾಡಿತ್ತು. ಈ ವೇಳೆ ವೆಂಕಟೇಶ್ ಅವರು ತಮ್ಮ ಬಳಿ ಇದ್ದ ಡಬ್ಬಲ್ ಬ್ಯಾರಲ್ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಮತ್ತು ಆನೆಯ ಕಾಲಿಗೆ ಗುಂಡು ಹೊಡೆದು ಸಾರ್ವಜನಿಕರು ಮತ್ತು ಅಧಿಕಾರಿಗಳ ಪ್ರಾಣ ಕಾಪಾಡಿದ್ದರು. ವೆಂಕಟೇಶ್ ಈ ಧೈರ್ಯ ತೋರದಿದ್ದರೆ ಅಧಿಕಾರಿ, ಪರಿಸರವಾದಿಗಳು ಸಲಗನ ದಾಳಿಗೆ ತುತ್ತಾಗುತ್ತಿದ್ದರು.
ಎನ್. ಮೂರ್ತಿ
ಪೊಲೀಸ್ ಕಾನ್ಸ್‌ಟೇಬಲ್, ಬಾಣಸವಾಡಿ ಎಸಿಪಿ ಕಚೇರಿ
2013ರ ಮಲ್ಲೇಶ್ವರಂ ಬಾಂಬ್ ಬ್ಲಾಸ್ಟ್, ಕೆಂಗೇರಿಯ ರೈಲ್ವೆ ಹಳಿ ಬಳಿ ನಡೆಯುತ್ತಿದ್ದ ಸೀರಿಯಲ್ ಮರ್ಡರ್ ಮಿಸ್ಟರಿ ರಿವೀಲ್ ಹಾಗೂ ಇತ್ತೀಚ್ಚೆಗೆ ಬೆಂಗಳೂರಿನಲ್ಲಿ ನಡೆದ ಶೂಟೌಟ್ ಪ್ರಕರಣಗಳಲ್ಲಿ ಎನ್. ಮೂರ್ತಿಯರವ ದಕ್ಷ ಕಾರ್ಯ ಶ್ಲಾಘನೀಯ. ಸದ್ಯ ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು 2017ರಲ್ಲಿ ಡಿಜೆ ಹಳ್ಳಿಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಯಾಜ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿಶೀಟರ್ ಇಬ್ಬರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿದ್ದರು
ನಾಗೇಂದ್ರನ್
ಸಿವಿಲ್ ಡಿಫೆನ್ಸ್
ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿದ್ರು ಸೇವೆ ಮಾಡ್ಬೇಕು ಎನ್ನುವ ಕಾರಣಕ್ಕೆ ಸಿವಿಲ್ ಡಿಫೆನ್ಸ್ ಸೇರಿದವರು ನಾಗೇಂದ್ರನ್. ಇಂದು ರಾಜ್ಯದಲ್ಲಿ ಎಲ್ಲಿಯೇ ವಿಪತ್ತು ಸಂಭವಿಸಿದರೂ ಅಲ್ಲಿ ಇವರು ಮತ್ತು ಇವರ ತಂಡ ಇರುತ್ತದೆ. ಬೆಂಗಳೂರು ಜಲ ಪ್ರವಾಹ, ಮಡಿಕೇರಿ ಪ್ರವಾಹದಲ್ಲಿ ಇವರ ಕಾರ್ಯ ಅನನ್ಯ. ಮಡಿಕೇರಿಯಲ್ಲಿ ದುರ್ಗಮ ಹಾದಿಯಲ್ಲಿ ಹೋಗಿ ಒಬ್ಬ ವೃದ್ಧೆಯ ರಕ್ಷಣೆ ಮಾಡಿದ್ದರು. ಎಲ್ಲೇ ಬೆಂಕಿ ಬಿದ್ದರೂ, ಪ್ರಾಕೃತಿಕ ವಿಕೋಪಗಳಾದರೂ ನಾಗೇಂದ್ರನ್ ತಂಡ ಕಟ್ಟಿಕೊಂಡು ಅಲ್ಲಿರುತ್ತಾರೆ. ಇವರ ಕಾರ್ಯವೈಖರಿಗೆ ಮುಖ್ಯಮಂತ್ರಿ ಪದಕ ಕೂಡ ಸಿಕ್ಕಿದೆ.
ಪಿಎಸ್‌ಐ ಅಶ್ವಿನಿ
ಜೀವನ್ ಭೀಮಾ ನಗರ, ಬೆಂಗಳೂರು
ಪೊಲೀಸ್ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದರೆ ಅಂತಹವರ ಮೇಲೆ ಶೂಟೌಟ್ ಮಾಡಿ ಎಂಬ ಹೊಸ ಆದೇಶವೊಂದನ್ನು ಬೆಂಗಳೂರು ಪೊಲೀಸ್ ಕಮೀಷನರ್ ಹೊರಡಿಸಿದ್ದರು. ಈ ಆದೇಶ ಹೊರಬೀಳಲು ಮುಖ್ಯ ಕಾರಣ ಖಡಕ್ ಅಧಿಕಾರಿ ಅಶ್ವಿನಿ. 2017 ರಲ್ಲಿ ಪಿಎಸ್‌ಐ ಅಶ್ವಿನಿ ಮೇಲೆ ನಡುರಾತ್ರಿಯಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಆದರೂ ದುಷ್ಕರ್ಮಿಗಳನ್ನು ಹಿಡಿದು ಜೈಲಿಗಟ್ಟಿದ್ದರು ಇವರು. ರಾಜ್ಯದ್ಯಂತ ಈ ಪ್ರಕರಣ ಸುದ್ದಿಯಾಗುತ್ತಿದ್ದಂತೆಯೇ ಕಮೀಷನರ್ ಸುನೀಲ್ ಕುಮಾರ್ ಈ ಆದೇಶ ಹೊರಡಿಸಿದ್ದರು. ಪೊಲೀಸ್ ಕುಟುಂಬದಲ್ಲೇ ಹುಟ್ಟಿ ಪೊಲೀಸ್ ಅಧಿಕಾರಿಯಾದ ಅಶ್ವಿನಿ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳನ್ನ ಬೇಧಿಸಿದ್ದಾರೆ.
ಚೇತನ್
ನೆಲಮಂಗಲ, ಬೆಂಗಳೂರು
ಮೊನ್ನೆ ಬೆಂಗಳೂರು ಏರ್ ಶೋ ಆರಂಭಕ್ಕೂ ಮುನ್ನ ನಡೆದ ಏರ್ ಕ್ರಾಶ್ ದುರ್ಘಟನೆಯಲ್ಲಿ ಓರ್ವ ಪೈಲೆಟ್ ಸಾವನ್ನಪ್ಪಿ, ಇಬ್ಬರು ಪೈಲೆಟ್‌ಗಳು ಗಾಯಗೊಂಡಿದ್ದರು. ಹೀಗೆ ಗಾಯಗೊಂಡಿದ್ದ ಇಬ್ಬರ ಪೈಲೆಟ್‌ಗಳನ್ನು ರಕ್ಷಿಸಿ ಆರೈಕೆ ಮಾಡಿದ್ದು ಚೇತನ್ ಮತ್ತು ಆತನ ಸ್ನೇಹಿತರು. ವಿಮಾನ ಬಿದ್ದ ತಕ್ಷಣ ಅದರ ಹತ್ತಿರ ಹೋಗಲು ಹೆಚ್ಚಿನವರ ಹೆದರುತ್ತಿದ್ದಾಗ ಚೇತನ್ ಮತ್ತು ಸ್ನೇಹಿತರು ಪೈಲೆಟ್ ಬಳಿಗೆ ಹೋಗಿ ಅವರಿಗೆ ಧೈರ್ಯ ತುಂಬಿ ಆಂಬುಲೆನ್ಸ್‌ಗೆ ಕಾಲ್ ಮಾಡಿದ್ದರು. ಅಲ್ಲದೆ ವಿಮಾನ ಸಿಡಿಯುವುದನ್ನು ಗಮನಿಸಿ ಎಲ್ಲರನ್ನೂ ದೂರಕ್ಕೆ ಸ್ಥಳಾಂತರಿಸಿದ್ದರು.