ಸಿಟಿಯವರನ್ನು ಕೈ ಬೀಸಿ ಕರೆಯುತ್ತಿದೆ ಹಳ್ಳಿ ಮನೆ ಅನಂತ ಸುಖ

By Web Desk  |  First Published Jul 29, 2019, 1:41 PM IST

ಬೆರಳುದ್ದ ಒಂದು ಹಸಿರು ಹಾವು ಇತ್ತೆಂದು ಮನೆಯಂಗಳದ ಸಂಪಿಗೆ ಮರವನ್ನು ಉರುಳಿಸಿ ಇಂಟರ್‌ಲಾಕ್‌ ಹಾಕಿಸಿ ಬಿಡು ಬೇಸಿಗೆಗೆ ನೆಲಸುಟ್ಟು ಕಾಲಿಡಲಾಗದೆ ಡ್ಯಾನ್ಸ್‌ ಮಾಡುವ ಭರಾಟೆ ಈಗ ಹಳ್ಳಿಮನೆಗೂ ಬಂದಿದೆ. ಬೇರು ಮೂಲದ ಹಸಿರು ಸುಖದ ಬದುಕನ್ನು ಕೈಯಾರೆ ಬದಲಿಸಿಕೊಂಡು ಬಿಸಿ ಉಸಿರೆಳೆದುಕೊಂಡು ಪರಿತಪಿಸುವ ಭ್ರಮೆಗಳೆಲ್ಲಾ ಬದಲಾಗಬೇಕು.


ಮಹಾನಗರದಿಂದ ಬಹುದೂರ ಹಸಿರು ಆವಾರದಲ್ಲಿ ಮನೆ ಕಟ್ಟಿಕೊಂಡು ಬದುಕುತ್ತಿರುವ ನನಗೆ ಮನೆಗೆ ಯಾರೇ ಬರಲಿ ಸಹಜವಾಗಿ ಕೇಳುವ ಒಂದೆರಡು ಪ್ರಶ್ನೆಗಳಿವೆ. ಅಂಗಳದಲ್ಲಿ ಕಾದು ನಿಲ್ಲಿಸಿ ಇಳಿಯುವ ಮುನ್ನವೇ, ‘ಇಲ್ಲಿ ಮೊಬೈಲ್‌ ರೇಂಜ್‌ ಸಿಗುತ್ತದೋ?’ ‘ಇಲ್ಲಿ ನೀವು ಹೇಗೆ ಬದುಕುತ್ತೀರಿ?’ ಮನೆಯ ಮಾಡಿಗೆ ಹಬ್ಬಿದ ಹಸಿರು ಬಳ್ಳಿ-ಪೊದೆಯನ್ನು ನೋಡಿ ಮತ್ತೊಂದು ಉಪ ಪ್ರಶ್ನೆ- ‘ಇಲ್ಲಿಗೆ ಹಾವುಗೀವು ಬರುವುದಿಲ್ಲವೋ?’

ಕೆಲವರಂತು ಮನೆಯೊಳಗೆ ಬರುವ ಮುನ್ನವೇ ಅಂಗಳದಲ್ಲೇ ಅಂಗೈಯಲ್ಲಿ ಮೊಬೈಲ್‌ ಇಟ್ಟುಕೊಂಡು ಸರಸರ ಸರಸರ ಆಚೆ ಈಚೆ ಸರ್ವೇರ್‌ ತರ ರೇಂಜ್‌ ಸಿಗುತ್ತದೇ ಎಂದು ಪರೀಕ್ಷಿಸುವುದುಂಟು. ಸ್ವಲ್ಪವೂ ರೇಂಜ್‌ ಸಿಗದಿದ್ದಾಗ ಅವರ ಮುಖದಲ್ಲಾಗುವ ಹಾವಭಾವಗಳಲ್ಲೇ ಅವರು ಕೇಳೆದೆಯೇ ಉಳಿಸಿಕೊಂಡ ಪ್ರಶ್ನೆಗಳನ್ನು ಊಹಿಸಬಹುದು. ನಾಗರಿಕ ಜಗತ್ತಿನಿಂದ ದೂರ ಉಳಿದು ಬದುಕುವ ನಾನು ಅವರಿಗೆ ತೀರಾ ಅನಾಗರಿಕನಂತೆ, ಯಾವುದಕ್ಕೂ ಪ್ರಯೋಜನವಿಲ್ಲದವನಂತೆ ಕಾಣಿಸುತ್ತಿರಬೇಕು!

Latest Videos

undefined

ಪರಿಸರವಾದಿ ಗೆಳೆಯ ಚಾರಣಿಗ ದಿವೇಶ ಹೊಳ್ಳ ಇತ್ತೀಚೆಗೆ ಎಂದಿನಂತೆ ಒಂದಷ್ಟು ಗೆಳೆಯರನ್ನು ಕಟ್ಟಿಕೊಂಡು ಚಾರಣಕ್ಕೆ ಕುಮಾರಪರ್ವತಕ್ಕೆ ಹೋಗಿದ್ದನಂತೆ. ಹೋದವರು ಬಹುಪಾಲು ಟೆಕ್ಕಿಗಳು. ಬೆಟ್ಟದ ತುದಿ ಬಂದಾಗ ನಡೆದು ಸುಸ್ತಾದ ಟೆಕ್ಕಿಯೊಬ್ಬ ಹೊಳ್ಳರಲ್ಲಿ ಕೇಳಿದನಂತೆ, ‘ಸರ್‌ ಇಲ್ಲಿ ಲಾಡ್ಜ್‌ ಎಲ್ಲಿದೆ? ಎಷ್ಟುದೂರ?’ ಎಂದು!

ನಮ್ಮ ಅಡಿಕೆ ತೋಟದ ನಡುನಡುವೆ ಮಳೆಗಾಲದ ನೀರು ಬಸಿದು ಹೋಗಲು ಮಾಡಿದ ಉಜಿರುಕಣಿ ಇದೆ. ಎರಡಡಿ ಅಗಲ, ಮೂರಡಿ ಆಳ, ಮೊನ್ನೆ ಒಂದಷ್ಟುಪೇಟೆಯ ಮಂದಿ ಮನೆಗೆ ಬಂದಾಗ ಅದರಲ್ಲಿ ಒಂದಷ್ಟುಮಕ್ಕಳು ತೋಟ ಮಾಡುವ ಉಮೇದಿನಿಂದ ಮನೆಯಂಗಳ ಇಳಿದು ಕೆಳಗೆ ಬಂದಿದ್ದರು. ಆ ಗುಂಪಿನಲ್ಲಿದ್ದ ಒಬ್ಬ ಹಳ್ಳಿ, ಕೃಷಿ ಮೂಲದ ಹುಡುಗ ಆ ಉಜಿರು ಕಣಿಯ ಆ ಕಡೆಯಿಂದ ಈ ಕಡೆಗೆ ಹಾರಿ ಉಳಿದವರನ್ನೂ ಹಾರುವಂತೆ ಪ್ರೇರೇಪಿಸಿದ. ಜಪ್ಪಯ್ಯ ಎಂದರೂ ಆ ಮಕ್ಕಳಿಗೆ ಹಾರಲಾಗಲಿಲ್ಲ. ಮತ್ತೆ ಮತ್ತೆ ಹಾರಿ ಹಾರಿ ತೋರಿಸುತ್ತಿದ್ದ ಕೃಷಿಮೂಲದ ರಮೇಶ ಅವರ ಪಾಲಿಗೆ ಹೀರೋ ಥರ ಕಂಡ. ರಮೇಶ ಆ ಬದಿಯಿಂದ ಈ ಬದಿಗೆ ಹಾರಿ ಎಷ್ಟೇ ಕರೆದರೂ ಆ ಮಕ್ಕಳಿಗೆ ಹಾರಲಾಗಲಿಲ್ಲ.

ನಾನು ಗಮನಿಸುತ್ತಿದ್ದೆ. ತೋಟದಿಂದ ತಿರುಗಿ ಮನೆಯೊಳಕ್ಕೆ ಬಂದ ಮೇಲೂ ರಮೇಶನನ್ನು ಅವರು ಅಸಾಧಾರಣ ಸಾಧನೆ ಮಾಡಿದವ ಎಂಬಂತೆ ನೋಡುತ್ತಿದ್ದರು. ಆ ಕಾರಣಕ್ಕಾಗಿಯೋ ಏನೋ ರಮೇಶನ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯಾಯಿತು. ಆ ಮಕ್ಕಳನ್ನು ಮತ್ತೆ ಕರೆದು ಕರೆದು ಆತ ಗುಂಪಾಗಿ ಗುಡ್ಡ ಏರಿದ. ಅಲ್ಲಿದ್ದ ಕಾಡು ಹಣ್ಣುಗಳನ್ನು ಪೊದೆ ಬಗ್ಗಿಸಿ, ಮರ ಏರಿ ಕೊಯ್ದು ಕೊಡತೊಡಗಿದ.

ತಿರುಗಿ ಗುಡ್ಡ ಇಳಿದು ಬಂದ ಆ ಗ್ಯಾಂಗ್‌ಗೆ ರಮೇಶನೇ ಲೀಡರ್‌ ಆಗಿ ಬದಲಾಗಿದ್ದ. ನಗರದ ಮಕ್ಕಳಿಗೆ ಹಳ್ಳಿ ಹುಡುಗನ ಮೇಲೆ ಪೂರ್ಣ ವಿಶ್ವಾಸ ಬೆಳೆದಿತ್ತು. ‘ರಮೇಶ ನಿನಗೆ ಚೇರೆ ಹಣ್ಣು ತಿನ್ನುವ ಕ್ರಮ ಗೊತ್ತುಂಟಾ?’ ಸುಮ್ಮನೆ ಕೇಳಿದೆ. ಹೌದು, ತುಂಬಾ ತುರುಚುವ ಆ ಹಣ್ಣನ್ನು ತಿನ್ನುವಾಗ ಸಿಪ್ಪೆ ತೆಗೆದು ಏಳು ಬಾರಿ ಬೇರೆ ಬೇರೆ ಸರೋಳಿ ಗಿಡದ ಎಲೆಯಲ್ಲಿ ಹಾಕುತ್ತಾ ಮಾನಬೇಕು.

ಪ್ರತಿ ಬಾರಿಯೂ ಎಲೆ ಬದಲಾಗಬೇಕು. ಆಗ ಮಾತ್ರ ಆ ಹಣ್ಣಿನ ಮೇಲಿರುವ ಸೂಕ್ಷ್ಮ ರೋಮಗಳು ಸರೋಳಿ ಎಲೆಗೆ ಅಂಟಿಕೊಂಡು ಇಲ್ಲವಾಗುತ್ತವೆ. ಇಲ್ಲದೇ ಹೋದರೆ ರೋಮಗಳೆಲ್ಲಾ ಬಾಯಿಯೊಳಗೆ, ಗಂಟಿಳೊಳಗೆ ಸಿಕ್ಕಿಹಾಕಿಕೊಂಡು ತಲೆ ಬಾತುಕೊಂಡು ನಮ್ಮ ಸ್ವರೂಪವೇ ವಿಕಾರಗೊಳ್ಳುತ್ತವೆ...

ರಮೇಶ ಇದೇ ಕ್ರಮದಲ್ಲಿ ಚೇರೆ ಹಣ್ಣು ತಿಂದಿದ್ದ. ಮತ್ತು ಎಲೆಯಿಂದ ಎಲೆಗೆ ಜಾರಿಸದೆಯೇ ತಿಂದು ಮುಖವೆಲ್ಲಾ ವಿಕಾರವಾಗಿ ಒಮ್ಮೆ ಅಪಹಾಸ್ಯಕ್ಕೀಡಾಗಿದ್ದ. ಹಣ್ಣು ತಿಂದು ಅರ್ಧಗಂಟೆಯಲ್ಲಿ ಜಾಂಬವಂತನಾದ. ಆ ಕತೆಯನ್ನು ಮಕ್ಕಳಿಗೆ ಹೇಳುವಾಗ ಜಗಲಿಯಲ್ಲಿ ಕೂತ ನಾನು ನವ ನಾಗರಿಕ ಮಕ್ಕಳನ್ನೇ ಗಮನಿಸುತ್ತಿದ್ದೆ. ಅವರೆಲ್ಲಾ ರಮೇಶನನ್ನು ಅನ್ಯಗ್ರಹದಿಂದ ಬಂದ ಅಪಾಯಕಾರಿ ಪ್ರಾಣಿಯನ್ನು ನೋಡಿದಷ್ಟೇ ಕುತೂಹಲದಿಂದ ಗಮನಿಸುತ್ತಿದ್ದರು.

ಹಳ್ಳಿಯಲ್ಲೇ ಹುಟ್ಟಿಬೆಳೆದ ಕನ್ನಡ ಶಾಲೆಯಲ್ಲಿ ಓದುವ ರಮೇಶ ಆರಂಭದಲ್ಲಿ ಪರಕೀಯನಾಗಿ ಈಗ ಆ ಇಡೀ ಗುಂಪನ್ನು ನಿಯಂತ್ರಿಸುವ ಮಟ್ಟಕ್ಕೆ ಕಾಣಿಸಿದ. ನನ್ನ ಮನೆಯಂಗಳದ ಒಂದಷ್ಟುಗಿಡಗಳನ್ನು ಅವರಿಗೆ ಪರಿಚಯಿಸುತ್ತಿದ್ದ. ಮತ್ತು ಪ್ರತಿ ಗಿಡವನ್ನು ಪರಿಚಯಿಸುವಾಗಲೂ ಅವನು ತಪ್ಪದೇ ಮರೆಯದೇ ಹೇಳುತ್ತಿದ್ದ ಮಾತು ಇದು ನಮ್ಮ ‘ಗುಡ್ಡೆ ಮನೆ’ಯಲ್ಲೂ ಇದೆ ಎಂಬುದು. ತಮ್ಮನೆಯಲ್ಲಿ ಹಸು ಇದೆ, ಕೋಳಿಯಿದೆ, ಜೇನು ಇದೆ ಹಕ್ಕಿಯ ಗೂಡೂ ಇದೆ ಎಂದೆಲ್ಲಾ ಅವ ಆ ಮಕ್ಕಳನ್ನು ಆಕರ್ಷಿಸುವ ಜತೆಗೆ ತನ್ನ ಅನುಭವವನ್ನು ವಿವರಿಸುತ್ತಿದ್ದ.

ಬರೀ ಒಬ್ಬ ರಮೇಶ ಅಲ್ಲ. ಒಂದು ಕಾಲದಲ್ಲಿ ಇಂಥ ನೂರಾರು ರಮೇಶರನ್ನು ನಮ್ಮ ಹಳ್ಳಿ, ಗ್ರಾಮಗಳು ಕಟ್ಟಿಕೊಂಡಿದ್ದವು. ಹತ್ತಾರು ವರ್ಷಗಳ ಹಿಂದೆ ನಾನು ಸೋಲಿಗರ ಬಿಳಿಗಿರಿ ರಂಗನ ಬೆಟ್ಟದ ಮೇಲೆ ಒಂದಷ್ಟುದಿನ ಉಳಿದಿದ್ದೆ. ಅಲ್ಲಿ ನಡೆದ ಎರಡು ಘಟನೆಗಳು ಇವತ್ತಿಗೂ ನೆನಪು. ಕಾಡು ಹಂದಿ ಹಾಯ್ದು ಒಬ್ಬ ಸೋಲಿಗನ ಹೊಟ್ಟೆಯಿಂದ ಕರುಳು ಜಾರಿತ್ತು. ಅದನ್ನು ಆತನೇ ಒಳಗಡೆ ಸೇರಿಸಿ ಬಟ್ಟೆಸುತ್ತಿಕೊಂಡು ಡಾ

ಸುದರ್ಶನ್‌ ವಿವೇಕಾನಂದ ಅಭಿವೃದ್ಧಿ ಕೇಂದ್ರಕ್ಕೆ ಬಂದಿದ್ದ. ಹೊಲಿಗೆ ಹಾಕಿ ಬೆಡ್‌ ಮೇಲೆ ಮಲಗಿಸಿದ್ದರು. ಒಂದಷ್ಟುಗಂಟೆಯಲ್ಲಿ ಆ ಸೋಲಿಗ ನಾಪತ್ತೆಯಾಗಿದ್ದ. ಹುಡುಕುವಾಗ ಆಸ್ಪತ್ರೆ ಪಕ್ಕದ ಪೋಡು ಒಳಗೆ ಬೆಂಕಿ ಹಾಕಿಕೊಂಡು ಚಳಿ ಕಾಯಿಸುತ್ತಾ ಕೂತಿದ್ದ.

ಬರೀ ಸೋಲಿಗರಷ್ಟೇ ಅಲ್ಲ, ಬಹುಪಾಲು ಬುಡಗಟ್ಟು ಜನಾಂಗದವರೆಲ್ಲಾ ಹೀಗೆಯೇ. ನಾಗರಿಕತೆ ಅವರಿಗೆ ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಕಾಡೇ ಅವರ ಮನೆ, ವಾಸಸ್ಥಾನ. ಅದರ ಅಂಗಾಂಗಗಳ ಸೂಕ್ಷ್ಮ ಪರಿಚಯ ಅವರಿಗೆ ಇರುತ್ತದೆ. ತಾನು ಬದುಕುವ ಭಾಗದ ಯಾವುದೇ ಗಿಡ ಮರ ಬಳ್ಳಿಗಳಿಗೆ ನೋವಾದರೆ ಅವರು ಸಹಿಸುವುದಿಲ್ಲ. ಜೇನು, ನೆಲ್ಲಿಕಾಯಿ, ಕಾಡುಹಣ್ಣು ಮುಂತಾದ ಉತ್ಪನ್ನಗಳನ್ನು ಕೊಯ್ಯುವಾಗ ಆಯಪಾಯ ನೋಡಿ ಯಾವುದಕ್ಕೂ ಗಾಯವಾಗದಂತೆ ಜಾಗೃತರಾಗುತ್ತಾರೆ.

ಅವರೆಂದೂ ಜೇನು ಸಂಗ್ರಹಿಸುವಾಗ ಬೆಂಕಿ ಹಾಕಿ ಹುಳುಗಳಿಗೆ ತೊಂದರೆ ಕೊಡಲಾರರು. ನೆಲ್ಲಿಕಾಯಿ ಕೊಯ್ಯುವಾಗ ಗೆಲ್ಲು ಮುರಿಯಲಾರರು. ಅಷ್ಟೇ ಅಲ್ಲ, ಅನಿವಾರ್ಯವಾಗಿ ಮರಗಳಿಗೆ ಕೊಡಲಿ ಇಡಬೇಕಾದ ಪ್ರಸಂಗ ಬಂದಾಗ ಮರದ ಬುಡಗಳಿಗೆ ನಮಿಸಿಯೇ ಕಡಿಯಲಾರಂಭಿಸುತ್ತಾರೆ. ಕಡಿದ ಮೇಲೆ ಬೊಡ್ಡೆಯ ಮೇಲೆ ಒಂದು ಕಲ್ಲಿಟ್ಟು ಕೈ ಮುಗಿಯುತ್ತಾರೆ.

ನಮ್ಮ ‘ಗುಡ್ಡೆ ಮನೆ’ಯ ರಮೇಶನಂತೆ ನನಗೆ ಬಿಳಿಗಿರಂಗನ ಬೆಟ್ಟದ ಮೇಲೂ ಒಬ್ಬ ಹತ್ತು ಹನ್ನರಡು ವರ್ಷದ ಹುಡುಗ ಅಡ್ಡವಾಗಿದ್ದ. ಅವನು ತೋರಿದ ದಾರಿಯಲ್ಲೇ ನಾನು ಸೋಲಿಗರು ಆರಾಧಿಸುವ ದೊಡ್ಡಸಂಪಿಗೆ ಮರವನ್ನು ನೋಡಲು ಹೋಗಿದ್ದೆ. ಆ ಹಾದಿಯುದ್ದ ಆ ಸೋಲಿಗ ಹೈದ ನನಗೆ ನೂರಾರು ಗಿಡಮರಬಳ್ಳಿಗಳ ಹೆಸರು ಹೇಳಿದ. ಅವುಗಳ ಬಳಕೆ- ಪ್ರಯೋಜನ, ಮನೆಮದ್ದಿನ ವಿಚಾರಗಳನ್ನು ಹೇಳಿದ್ದ. ಅವನ ಹಸಿರು ಜ್ಞಾನವನ್ನು ಕಂಡು ನಾನು ಬೆರಗಾಗಿದ್ದೆ.

ಮೊಬೈಲ್‌ ರೇಂಜ್‌ ಸಿಗದ ನನ್ನ ಮನೆಯ ಅಂಗಳ, ಗುಡ್ಡಯಂತೆ ಮನೆ ಮಾಡಿನ ಮೇಲೆ ಕೂತ ಹಸಿರು ಹೂವು, ಬಳ್ಳಿ ರಾಶಿ ನಡುವೆ ಹಾವು ಹುಡುಕುವ, ಅನಾಗರಿಕತೆಯನ್ನು ಹುಡುಕುವ, ನವನಾಗರಿಕತೆ ಇದೇ ಅಂಗಳದಲ್ಲಿ ಸಿಗುವ ಪರಿಶುದ್ಧ ಗಾಳಿ, ನೀರು, ಅನ್ನಕ್ಕೆ ಮೌಲ್ಯ ಕಟ್ಟಲಾರದು.

ಬೆರಳುದ್ದದ ಒಂದು ಹಸಿರು ಹಾವು ಬಂತೆಂದು ಅಂಗಳದ ಸಂಪಿಗೆ ಮರವನ್ನೇ ಕಡಿದುರುಳಿಸಿ ಇಂಟರ್‌ಲಾಕ್‌ ಹಾಕಿ ಬೇಸಗೆಯಲ್ಲಿ ಅದರ ಮೇಲೆ ಕಾಲಿಡಲಾರದೆ ಡ್ಯಾನ್ಸ್‌ ಮಾಡುವ ಭರಾಟೆ ಈಗ ಹಳ್ಳಿಮನೆಗಳಿಗೂ ಹಬ್ಬಿದೆ. ಹಾವು ಬದುಕುವ ಜಾಗವಾದ ದೇವರ ಕಾಡನ್ನು ಮಟ್ಟಸ ಮಾಡಿ ಅಲ್ಲಿ ‘ನಾಗಭವನ’ ಕಟ್ಟುವ, ರಾಜರಸ್ತೆ, ಮೊಬೈಲ್‌ ರೇಂಜ್‌, ಕರೆಂಟು, ವಾಸ್ತು ಇದ್ದರೇನೇ ಮನೆ ಬದುಕು ಎಂದೆಲ್ಲಾ ಭ್ರಮಿಸಿ ಹಳ್ಳಿ ಗ್ರಾಮ ಬೇರು ಮುರಿದ ಬದುಕನ್ನು ಕೈಯಾರೆ ಬದಲಿಸಿಕೊಂಡು ಬಿಸಿ ಉಸಿರೆಳೆದುಕೊಂಡು ಪರಿತಪಿಸುವವರ ಭ್ರಮೆಗಳೆಲ್ಲಾ ಬದಲಾಗಬೇಕು.

- ನರೇಂದ್ರ ರೈ ದೆರ್ಲ 

click me!