ಐದು ಮಂದಿಗೆ 2019 ನೇ ಸಾಲಿನ ಏಪ್ರಿಲ್ ಫೂಲ್ ಕನ್ನಡಿಗ ಪ್ರಶಸ್ತಿ

By Web Desk  |  First Published Apr 1, 2019, 2:57 PM IST

ಈ ಜಗತ್ತಿನಲ್ಲಿ ಅಸಾಧ್ಯವನ್ನು ಸಾಧಿಸುವ ಛಲಗಾರರಿದ್ದಾರೆ. ಎಷ್ಟೇ ಕಷ್ಟ ಬಂದರೂ ಅವರು ತಮ್ಮ ದಾರಿಯಿಂದ ವಿಚಲಿತರಾಗುವುದಿಲ್ಲ. ಅಂಥ ಮಹಾನ್ ಸಾಧಕರ ಪಟ್ಟಿಗೆ ಸೇರುವ ಕನ್ನಡ್ ಪ್ರೇಕ್ಷಕ್ ಅವರನ್ನು ಏಪ್ರಿಲ್ ಕನ್ನಡಿಗ ಎಂದು ಗುರುತಿಸಿ ಗೌರವಿಸುತ್ತಿದ್ದೇವೆ. ಯಾರ್ಯಾರು ಈ ಗೌರವಕ್ಕೆ ಭಾಜನರಾಗಿದ್ದಾರೆ? ಇಲ್ಲಿದೆ ನೋಡಿ. 


ಈ ಜಗತ್ತಿನಲ್ಲಿ ಅಸಾಧ್ಯವನ್ನು ಸಾಧಿಸುವ ಛಲಗಾರರಿದ್ದಾರೆ. ಎಷ್ಟೇ ಕಷ್ಟ ಬಂದರೂ ಅವರು ತಮ್ಮ ದಾರಿಯಿಂದ ವಿಚಲಿತರಾಗುವುದಿಲ್ಲ. ಅಂಥ ಮಹಾನ್ ಸಾಧಕರ ಪಟ್ಟಿಗೆ ಸೇರುವ ಕನ್ನಡ್ ಪ್ರೇಕ್ಷಕ್ ಅವರನ್ನು ಏಪ್ರಿಲ್ ಕನ್ನಡಿಗ
ಎಂದು ಗುರುತಿಸಿ ಗೌರವಿಸುತ್ತಿದ್ದೇವೆ. ಯಾರ್ಯಾರು ಆ ಐದು ಮಂದಿ? ಇಲ್ಲಿದೆ ನೋಡಿ. 

ಕನ್ನಡ ಪ್ರೇಕ್ಷಕ್

Tap to resize

Latest Videos

undefined

ಅವರು ಮೂರು ದಶಕಗಳಿಂದ ಕನ್ನಡ ಸಿನಿಮಾವನ್ನೇ ನೋಡುತ್ತಾ ಬಂದವರು. ಇಡೀ ಊರು, ಗೆಳೆಯರು, ಅವರ ಕುಟುಂಬ ಎಲ್ಲರೂ ಅವರನ್ನು ವಿರೋಧಿಸಿದರೂ ವಿಚಲಿತರಾಗದೇ ಪ್ರತಿಯೊಂದು ಕನ್ನಡ ಸಿನಿಮಾವನ್ನೂ ನೋಡುತ್ತಾ ಬಂದಿದ್ದಾರೆ. ರೀಮೇಕ್ ಸಿನಿಮಾಗಳನ್ನೂ ಕೂಡ ಒರಿಜಿನಲ್ ಸಿನಿಮಾ ನೋಡಿದಷ್ಟೇ ಪ್ರೀತಿಯಿಂದ ನೋಡುವ ಇವರು ಕಳೆದ ವರ್ಷ ಮೂರು ಡಬ್ಬಿಂಗ್ ಸಿನಿಮಾಗಳನ್ನು ನೋಡಿ ಸಾಧನೆ ಮಾಡಿದ್ದಾರೆ.

ಎಷ್ಟೇ ಕೆಟ್ಟ ಸಿನಿಮಾ ಬಂದರೂ ನಗುತ್ತಲೇ ನೋಡುವ ಕನ್ನಡ್ ಪ್ರೇಕ್ಷಕ್ ತಮ್ಮ ಕಣ್ಣು ಮತ್ತು ಕಿವಿಗಳನ್ನು ಕಳೆದುಕೊಂಡು ಎರಡು ದಶಕಗಳೇ ಆಗಿವೆ. ಕಣ್ಣು ಕಾಣದೇ ಇದ್ದರೂ ಕಿವಿ ಕೇಳದೇ ಇದ್ದರೂ ಇಪ್ಪತ್ತು ವರ್ಷಗಳಿಂದ ಕನ್ನಡ ಸಿನಿಮಾಗಳನ್ನು ನೋಡುತ್ತಲೇ ಬರುತ್ತಿರುವ ಇವರಿಗ ಈ ಸಲದ ಏಪ್ರಿಲ್ ಕನ್ನಡಿಗ ಪ್ರಶಸ್ತಿ ನೀಡಲಾಗಿದೆ. ಕಣ್ಣು ಕಾಣಿಸುತ್ತಿದ್ದಾಗ, ಕಿವಿ ಕೇಳಿಸುತ್ತಿದ್ದಾಗ ಸಿನಿಮಾ ನೋಡುವುದು ಕಷ್ಟ ಆಗುತ್ತಿತ್ತು. ಆದರೆ ಈಗ ಇನ್ನೂ ಸಂತೋಷದಿಂದ ಸಿನಿಮಾ ನೋಡುತ್ತೇನೆ. ನನ್ನಂಥ ಇನ್ನೂ ಅನೇಕ ಮಂದಿ ಕನ್ನಡ ಸಿನಿಮಾ ನೋಡುವಂತೆ ಮಾಡುವುದೇ ನನ್ನ ಉದ್ದೇಶ ಎಂದು ಕನ್ನಡ್ ಪ್ರೇಕ್ಷಕ್ ಹೇಳಿದ್ದಾರೆ.

ಸೀರಿಯಲ್ ಸೇವರ್

ಕತೆ ಏನೆಂದು ಅರ್ಥವಾಗದೇ ಹೋದರೂ ಸೀರಿಯಲ್ ನೋಡುವ ಸೀರಿಯಲ್ ಸೌಮ್ಯ ಅವರನ್ನು ಸೀರಿಯಲ್ ಸೇವರ್ ಎಂದೇ ಕಿರುತೆರೆ ವಲಯ ಗುರುತಿಸುತ್ತಿದೆ. ಎಲ್ಲಾ ಸೀರಿಯಲ್ಲುಗಳನ್ನು ಅವರು ಶ್ರದ್ಧೆಯಿಂದ ನೋಡುತ್ತಾರೆ. ಪ್ರತಿದಿನವೂ ಸುಮಾರು ಐದು ಲೀಟರ್ ಕಣ್ಣೀರು ಸುರಿಸುತ್ತಾರೆ. ಸಮಾಜದ ವಿರೋಧ ಹಾಗೂ ಕುಟುಂಬದ ಆಕ್ಷೇಪದ ನಡುವೆಯೇ ಅವರು ಸೀರಿಯಲ್ ನೋಡಿಕೊಂಡು ಬಂದಿದ್ದಾರೆ ಎನ್ನುವುದೇ ಅವರ ಸಾಧನೆ.

ನಿನಗೆ ನಾನು ಬೇಕೋ ಸೀರಿಯಲ್ ಬೇಕೋ ಎಂದು ಸ್ವಂತವಾಗಿ ತಾಳಿ ಕಟ್ಟಿದ ಗಂಡ ಹೇಳಿದಾಗ, ಆತ ಕಟ್ಟಿದ ತಾಳಿಯನ್ನು ಆತನ ಕೈಗೆ ಕೊಟ್ಟು ಅಗ್ನಿಸಾಕ್ಷಿ ಸೀರಿಯಲ್ಲನ್ನು ನೋಡಿ ಕಣ್ಣೀರು ಹಾಕಿದ ಖ್ಯಾತಿ ಇವರದು. ಪುಟ್ಟಗೌರಿ ಮದುವೆ ಧಾರಾವಾಹಿಯನ್ನು ನೋಡುತ್ತಿದ್ದಾಗ ಪುಟ್ಟಗೌರಿಗೆ ತೊಂದರೆ ಆಗಬಾರದು ಎಂದು ರಾತ್ರಿಯೆಲ್ಲ ದೇವರ ಪೂಜೆ ಮಾಡಿದವರು ಇವರು. ಇವರು ವಾಸಿಸುವ ಧಾರಾವಾಹಿ ಗ್ರಾಮದಲ್ಲಿ ಯಾರೇ ಬಂದು ಈ ಸೀರಿಯಲ್ಲಿನಲ್ಲಿ ನಿನ್ನೆ ಏನಾಯಿತು ಎಂದು ಕೇಳಿದರೆ ಮೂವತ್ತೆರಡು ವಾರಗಳ ಕತೆಯನ್ನೂ ಇವರು ಬ್ರೇಕ್ ಸಮೇತ ಹೇಳಬಲ್ಲರು.

ಭಾಷಣ್ ಕೇಳ್ಕರ್

ಯಾವುದೇ ಸಾಹಿತಿಯ ಭಾಷಣವೇ ಆದರೂ ಎರಡೂ ಕಿವಿಯಿಂದ ಕೇಳಬಲ್ಲ ಭಾಷಣ್ ಕೇಳ್ಕರ್ ಮೂಲತಃ ಕಿವಿಯೂರಿನವರು. ಇವರು ಕಳೆದ ಐವತ್ತು ವರ್ಷದಿಂದ ಭಾಷಣ ಕೇಳುತ್ತಾ ಬಂದಿದ್ದಾರೆ. ಎಂಥಾ ಆಸಕ್ತಿಹೀನ ಭಾಷಣವನ್ನೂ ನಗುನಗುತ್ತಾ ಕೇಳಬಲ್ಲ ಇವರು ಕಳೆದ ಎಂಬತ್ತು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷ ಭಾಷಣವನ್ನು ಕೇಳಿದ್ದಾರೆ.

ಇಬ್ರಾಹಿಂ ಅವರ ಭಾಷಣವನ್ನೂ ರಂಧ್ರಶೇಖರ ಮುಂಭಾರರ ಭಾಷಣವನ್ನೂ ಬರಹಳ್ಳಿ ಕಾಲಸುಬ್ರಹ್ಮಣ್ಯ ಅವರ ಭಾಷಣವನ್ನೂ ಕೇಳಿರುವ ಇವರು ಇತ್ತೀಚಿಗೆ ವಿಷಯಶಂಕರ ಅವರ ಸುದೀರ್ಘ ಭಾಷಣ ಕೇಳಿದರೂ ಮೂರ್ಛೆ ಹೋಗದೇ ಇದ್ದ ಮಹಾತ್ಮರು. ಇವರನ್ನು ಈಗಲೂ ಅನೇಕರು ಭಾಷಣ ಕೇಳಲು ಕರೆಯುತ್ತಲೇ ಇರುತ್ತಾರೆ. ಈಗೀಗ ಕಿವಿ ಕೇಳದೇ ಇರುವುದರಿಂದ ಭಾಷಣ ಕೇಳುವುದು ಸುಲಭವಾಗಿದೆ, ಕಿವಿ ಕೇಳುತ್ತಿದ್ದ ದಿನಗಳಲ್ಲಿ ತುಂಬ ಕಷ್ಟಪಟ್ಟಿದ್ದೆ ಎಂದು ಭಾಷಣ್ ಕೇಳ್ಕರ್ ವಿನಮ್ರವಾಗಿ ಹೇಳುತ್ತಾರೆ.

ಇವರು ಕಳೆದ ಐವತ್ತು ವರ್ಷಗಳಿಂದ ಟೂ ವೀಲರ್ ಓಡಿಸುತ್ತಿದ್ದಾರೆ. ಬೆಂಗಳೂರಿನ ವೈಟ್ ಟಾಪಿಂಗ್, ಮೆಟ್ರೋ, ಫ್ಲೈಓವರ್ ಮುಂತಾದ ಹಲವಾರು ಸಮಸ್ಯೆಗಳ ನಡುವೆಯೂ ಟೂ ವೀಲರ್ ಓಡಿಸುತ್ತಾ ಜೀವಂತವಾಗಿರುವ ಇವರು, ಕನ್ನಡಿಗರಿಗೆ ಮಾದರಿ ಆಗಿದ್ದಾರೆ. ಎರಡು ಚಕ್ರಗಳ ವಾಹನ ಓಡಿಸುವುದರಲ್ಲಿ ಪರಿಣತರಾದ ಇವರು ಲಾರಿಗಳ ನಡುವೆ, ಕಿತ್ತು ಹೋದ ಫ್ಲೈ ಓವರುಗಳಲ್ಲಿ, ಮುರಿದು ಬಿದ್ದ ಸೇತುವೆಗಳಲ್ಲಿ, ಹೊಂಡ ಬಿದ್ದ ರಸ್ತೆಗಳಲ್ಲಿ ಟೂ ವೀಲರ್ ಓಡಿಸಬಲ್ಲರು. ಎರಡು ಚಕ್ರ ಕೊಟ್ಟರೆ ಸಾಕು, ಈ ಮಹಾನಗರಕ್ಕೆ ನಾಲ್ಕು ಚಕ್ರ ಬೇಕಾಗಿಲ್ಲ. ಎರಡು ಚಕ್ರಗಳಲ್ಲೇ ದೇಶ ಗೆಲ್ಲಬಲ್ಲೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವಿಷ್ಣು ಕೈಯಲ್ಲಿ ಒಂದು ಚಕ್ರ, ನನ್ನ ಕೈಯಲ್ಲಿ ಎರಡು ಚಕ್ರ ಎಂದು ಹೇಳುವ ಟೂ ವೀಲರ್ ತಿಮ್ಮಪ್ಪ ಭವಿಷ್ಯದ ಚಕ್ರಪಾಣಿ ಎಂದೇ ಮಾಧ್ಯಮ ಗುರುತಿಸಿದೆ. ಇವರಿಗೆ ಪರಮ ದ್ವಿಚಕ್ರವೀರ ಪ್ರಶಸ್ತಿ ನೀಡಲು ಸೂಚಿಸಲಾಗಿದೆ.

ಫೇಸ್‌ಬುಕ್ ಪ್ರಸನ್ನ

ಇವರು ಬೆಳಗಾಗೆದ್ದು ಮೊದಲು ನೋಡುವುದೇ ಫೇಸ್‌ಬುಕ್ಕನ್ನು. ಯಾರು ಏನೇ ಬರೆದರೂ ಲೈಕ್ ಒತ್ತುವ ಫೇಸ್‌ಬುಕ್ ಪ್ರಸನ್ನ ಇದುವರೆಗೆ ಎಂಟು ನೂರು ಸಾವಿನ ಸುದ್ದಿಗೆ ಲೈಕ್ ಒತ್ತಿದ್ದಾರೆ. ಎರಡು ಸಾವಿರ ಆ್ಯಕ್ಸಿಡೆಂಟ್ ಸುದ್ದಿಗಳಿಗೆ ಲೈಕ್
ಮಾಡಿದ್ದಾರೆ. ಎಡಪಂಥೀಯರಾಗಲೀ ಬಲಪಂಥೀಯರಾಗಲೀ ಯಾವುದೇ ಭೇದ ಮಾಡದೇ ಲೈಕ್ ಒತ್ತುವ ಪ್ರಸನ್ನ ಅವರು ಯಾವ ಪೋಸ್ಟನ್ನೂ ಓದಲಿಕ್ಕೆ ಹೋಗುವುದಿಲ್ಲ. ಓದದೇ ಲೈಕು ಒತ್ತುತ್ತೇನೆ, ನಮ್ಮಿಂದ ಮತ್ತೊಬ್ಬರಿಗೆ ಸಂತೋಷ ಸಿಕ್ಕಿದರೆ ಸಿಕ್ಕಲಿ. ಲೈಕು ಕೊಡುವುದಕ್ಕೇಕೆ ಚೌಕಾಸಿ ಮಾಡಬೇಕು ಎಂದು ಕೇಳುವ ಫೇಸ್‌ಬುಕ್ ಪ್ರಸನ್ನ ಅವರು ಟೀವಿ, ಮೊಬೈಲು, ಕಂಪ್ಯೂಟರು ಎಲ್ಲಾ ಕಡೆ ಫೇಸ್ಬುಕ್ಕು ಹಾಕಿಸಿಕೊಂಡಿದ್ದಾರೆ.

 

click me!