
ಹೆಚ್ಚು ಸಂಬಳವೇ ಜೀವನದಲ್ಲಿ ಸಂತೋಷ, ನೆಮ್ಮದಿ ತಂದುಕೊಡುವ ಮೂಲ ಅಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವ ಘಟನೆ ನಡೆದಿತ್ತು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 34 ವರ್ಷದ ಆಸ್ಟ್ರೇಲಿಯಾದ ಗ್ರೇಸ್ ಮೆಕ್‌ಕ್ಲೆಲ್ಯಾಂಡ್, ವರ್ಷಕ್ಕೆ ಸುಮಾರು ₹6.6 ಮಿಲಿಯನ್ ಸಂಬಳ ಪಡೆಯುತ್ತಿದ್ದ ತನ್ನ ಕೆಲಸವನ್ನು ತೊರೆದು ರಿಸೆಪ್ಶನಿಸ್ಟ್ ಆಕೆ ಕೆಲಸ ಮಾಡುತ್ತಿದ್ದಾರೆ. ಅವರ ಸಂಬಳ ಸುಮಾರು 40% ರಷ್ಟು ಕಡಿಮೆಯಾಯಿತು, ಆದರೆ ಅವರು ಮೊದಲಿಗಿಂತ ಹೆಚ್ಚು ಸಂತೋಷ, ಶಾಂತ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಇದನ್ನು ಕೇಳಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಈಗಿನ ಜನರೇಶನ್ ಕಠಿಣ ಪರಿಶ್ರಮ ಪಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅಥವಾ ಈಗಿನ ಯುವಕರು ತಮ್ಮ ಇಷ್ಟದಂತೆ ಸುಂದರ ಜೀವನ ನಡೆಸುತ್ತಿದ್ದಾರೆಯೇ?
ಯುವತಿ ಹೇಳುವಂತೆ, ಆಕೆಗೆ ವರ್ಷಕ್ಕೆ 66 ಲಕ್ಷ ಸಂಬಳ ಫಾರಿನ್ ಟ್ರಿಪ್ ಎಲ್ಲವೂ ಇತ್ತು. ಹೆಚ್ಚಿನ ಸಂಬಳ ಇದ್ದರೂ ಕೆಲಸದ ಒತ್ತಡ ಅತಿಯಾಗಿತ್ತು. ದಿನವಿಡೀ ಕೆಲಸದ ಒತ್ತಡದಲ್ಲೇ ಕಾಲ ಕಳೆಯುತ್ತಿದ್ದ ಕಾರಣ, ಕಚೇರಿಯಿಂದ ಮನೆಗೆ ಬಂದ ಬಳಿಕ ಯಾವುದೇ ಕೆಲಸ ಮಾಡಲು ಶಕ್ತಿ ಉಳಿಯುತ್ತಿರಲಿಲ್ಲ. ಕುಟುಂಬದವರ ಜೊತೆ ಸಮಯ ಕಳೆಯಲು, ಸ್ನೇಹಿತರನ್ನು ಭೇಟಿ ಮಾಡಲು ಅಥವಾ ತನ್ನ ಹವ್ಯಾಸಗಳಿಗೆ ಸಮಯ ಮೀಸಲಿಡಲು ಸಾಧ್ಯವಾಗುತ್ತಿರಲಿಲ್ಲ. ಈ ಪರಿಸ್ಥಿತಿ ಆಕೆಯ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ಈ ಕಾರಣದಿಂದ ಮೊದಲು ಮತ್ತೊಂದು ಉದ್ಯೋಗಕ್ಕೆ ಬದಲಾದರೂ ಅಲ್ಲಿ ಕೂಡ ಸಮಾಧಾನ ಸಿಗಲಿಲ್ಲ. ಕೊನೆಗೆ ಕೆಲಸದ ಒತ್ತಡ ಕಡಿಮೆ ಇರುವ ರಿಸೆಪ್ಷನಿಸ್ಟ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು. ಸಂಬಳ ಕಡಿಮೆಯಾದರೂ ಈಗ ನೆಮ್ಮದಿಯಿಂದ ಬದುಕುತ್ತಿದ್ದೇನೆ. ಕೆಲಸದ ಬಳಿಕ ಕುಟುಂಬ, ಸ್ನೇಹಿತರು ಮತ್ತು ನನಗಾಗಿ ಸಮಯ ಸಿಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವರು "ಹಣಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ" ಎಂದು ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇಂತಹ ನಿರ್ಧಾರ ಎಲ್ಲರಿಗೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೂ ಇತ್ತೀಚಿನ ಯುವ ಪೀಳಿಗೆಯಲ್ಲಿ ಉತ್ತಮ ವರ್ಕ್-ಲೈಫ್ ಬ್ಯಾಲೆನ್ಸ್, ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಸಂತೋಷಕ್ಕೆ ಹೆಚ್ಚಿನ ಮಹತ್ವ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ