
ಈಗಿನ ಯುವಕರು, ಮದುವೆ – ಮಕ್ಕಳಿಂದ ದೂರ ಓಡ್ತಿದ್ದಾರೆ. ಮದುವೆ ಆಗ್ತಿದ್ದಂತೆ ಜವಾಬ್ದಾರಿ ತಲೆ ಮೇಲೆ ಬರುತ್ತೆ. ಮಕ್ಕಳಾದ್ರೆ ಜವಾಬ್ದಾರಿ ಡಬಲ್ ಆಗುತ್ತೆ. ಖರ್ಚು ಹೆಚ್ಚಾಗುತ್ತೆ. ಮಕ್ಕಳ ಬಗ್ಗೆ ಕಂಟೆಂಟ್ ಕ್ರಿಯೇಟರ್ ಹೇಳಿಕೆಯೊಂದು ಈಗ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಿದೆ.
ಕಂಟೆಂಟ್ ಕ್ರಿಯೇಟರ್ ವಿಕ್ಯಾತ್ ಸಿಂಗ್, ಮಕ್ಕಳ ಬಗ್ಗೆ ತಮ್ಮ ಲೆಕ್ಕಾಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಲು ಸಿಕ್ಕಾಪಟ್ಟೆ ಖರ್ಚಾಗುತ್ತೆ. ಹಾಗಾಗಿ ನನಗೆ ಮಕ್ಕಳು ಬೇಡ ಅಂತ ವಿಕ್ಯಾತ್ ಸಿಂಗ್ ಹೇಳಿದ್ದಲ್ಲದೆ, ಅದಕ್ಕೆ ಸಂಬಂಧಿಸಿದಂತೆ ಖರ್ಚಿನ ಮಾಹಿತಿ ನೀಡಿದ್ದಾರೆ. ವಿಕ್ಯಾತ್ ಸಿಂಗ್ ಪ್ರಕಾರ, ಭಾರತದಲ್ಲಿ ಒಂದು ಮಗುವನ್ನು ಬೆಳೆಸಲು ಸುಮಾರು 1 ರಿಂದ 2 ಕೋಟಿ ರೂಪಾಯಿ ಖರ್ಚಾಗಬಹುದು ಅಂತ ವಿಕ್ಯಾತ್ ಸಿಂಗ್ ಹೇಳಿದ್ದಾರೆ.
ಅವರ ಲೆಕ್ಕದ ಪ್ರಕಾರ ಹೆರಿಗೆಗೆ 3 ಲಕ್ಷ, ಮಗುವಿನ ಮೊದಲ ಎರಡು ವರ್ಷದ ಅಗತ್ಯಗಳಿಗೆ 6 ಲಕ್ಷ ಖರ್ಚಾಗುತ್ತದೆ. 2 ರಿಂದ 18 ವರ್ಷದವರೆಗೆ ಮಕ್ಕಳ ಆಹಾರಕ್ಕೆ 18 ರಿಂದ 20 ಲಕ್ಷ ಖರ್ಚಾಗುತ್ತದೆ. ಶಿಕ್ಷಣಕ್ಕೆ ಸುಮಾರು 33 ಲಕ್ಷ ಖರ್ಚಾಗುತ್ತದೆ. ಮನರಂಜನೆ ಮತ್ತು ಆರೋಗ್ಯ ರಕ್ಷಣೆಗೆ ಸುಮಾರು 13 ಲಕ್ಷ ಖರ್ಚಾಗುತ್ತದೆ. ದೊಡ್ಡ ಮನೆ ಅಥವಾ ಬಾಡಿಗೆ ಮನೆಗೆ 32 ಲಕ್ಷ ಖರ್ಚು ಬರುತ್ತದೆ. ಇನ್ನು ಬಟ್ಟೆ ಮತ್ತು ಗ್ಯಾಜೆಟ್ಗಳು ಸೇರಿ 10 ರಿಂದ 20 ಲಕ್ಷ ಖರ್ಚಾಗುತ್ತದೆ ಎಂದು ವಿಕ್ಯಾತ್ ಲೆಕ್ಕಾಚಾರ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಕ್ಯಾತ್ ಈ ಅಭಿಪ್ರಾಯದ ಬಗ್ಗೆ ಪರ ಹಾಗೂ ವಿರೋಧ ಪ್ರತಿಕ್ರಿಯೆ ಬಂದಿದೆ. ಅನೇಕರು ಇದನ್ನು ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವರು ಇದನ್ನು ವಿರೋಧಿಸಿದ್ದಾರೆ. ಮಗುವನ್ನು ಬೆಳೆಸುವುದು ದುಬಾರಿಯಾಗಿರುವುದು ಸತ್ಯ. ಒಳ್ಳೆಯ ಶಿಕ್ಷಣ, ಆರೋಗ್ಯ ಸೇವೆ, ಇಂದಿನ ಜೀವನಶೈಲಿ ಇವೆಲ್ಲ ಖರ್ಚನ್ನು ಹೆಚ್ಚಿಸಿವೆ. ಆದರೆ ಪ್ರತಿಯೊಂದು ಕುಟುಂಬವೂ ಒಂದೇ ರೀತಿಯ ಜೀವನ ನಡೆಸುವುದಿಲ್ಲ. ಕೆಲವರು ಸರ್ಕಾರಿ ಶಾಲೆಯಲ್ಲಿ ಓದಿಸಿ ಉತ್ತಮ ಭವಿಷ್ಯ ಕಟ್ಟುತ್ತಾರೆ. ಇನ್ನೂ ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಶಾಲೆ ಆಯ್ಕೆ ಮಾಡುತ್ತಾರೆ. ಹೀಗಾಗಿ ಮಗು ಬೆಳೆಸಲು ಎರಡು ಕೋಟಿ ಬೇಕೇ ಬೇಕು ಎನ್ನುವುದು ಎಲ್ಲರಿಗೂ ಅನ್ವಯಿಸುವ ಸತ್ಯವಲ್ಲ ಎಂದಿದ್ದಾರೆ. ಅಲ್ದೆ ಜೀವನಶೈಲಿ, ನಗರ, ಆದಾಯ ಮತ್ತು ಆಯ್ಕೆಗಳ ಮೇಲೆ ಇದು ಅವಲಂಬಿತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇಷ್ಟೇ ಅಲ್ಲ ಕೆಲವರು ಹಣ ಮುಖ್ಯವಾದ್ರೂ ಜೀವನದಲ್ಲಿ ಮಗುವಿನ ಪ್ರೀತಿ, ಅದಕ್ಕೆ ನಾವು ನೀಡುವ ಸಮಯ, ಉತ್ತಮ ಸಂಸ್ಕಾರ ಮತ್ತು ಕುಟುಂಬದ ಬೆಂಬಲಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ.