
ಕ್ರಿಕೆಟ್ ಅಂದ್ರೆ ವಿರಾಟ್ ಕೊಹ್ಲಿ, ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್ ಎಂಬಷ್ಟರ ಮಟ್ಟಿಗೆ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಇದೀಗ ಕೊಹ್ಲಿಯ ಪುಟ್ಟ ಅಭಿಮಾನಿಯೊಬ್ಬನ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅದರ ಹ್ಯಾಪಿ ಎಂಡಿಂಗ್ ಎಲ್ಲರ ಮನ ಗೆದ್ದಿದೆ.
ಐಪಿಎಲ್ 2026ರ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋಟೆಲ್ ಹೊರಗೆ ಪುಟ್ಟ ಬಾಲಕನೊಬ್ಬ ಬ್ಯಾಟ್ ಹಿಡಿದು ಗಂಟೆಗಟ್ಟಲೆ ಕಾಯುತ್ತಿದ್ದ. ತನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ಆಟೋಗ್ರಾಫ್ ಪಡೆಯಬೇಕು ಎಂಬುದು ಅವನ ಕನಸಾಗಿತ್ತು. ಕೊಹ್ಲಿ ಹೊರಬಂದ ಕ್ಷಣ ಬಾಲಕ ಸಂತಸದಿಂದ ಅವರತ್ತ ಓಡಲು ಯತ್ನಿಸಿದ್ದ. ಆದರೆ ಭದ್ರತಾ ಸಿಬ್ಬಂದಿ ತಡೆದ ಕಾರಣ ಅವನಿಗೆ ಕೊಹ್ಲಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ.
ಆಟೋಗ್ರಾಫ್ ಸಿಗಲಿಲ್ಲ ಎಂಬ ನಿರಾಸೆಯಿಂದ ಬಾಲಕ ಭಾವುಕನಾದ. ತನ್ನ ಕೈಯಲ್ಲಿದ್ದ ಬ್ಯಾಟ್ ಅನ್ನು ನೆಲಕ್ಕೆ ಎಸೆದು ಕಣ್ಣೀರು ಹಾಕುತ್ತಾ ಪೋಷಕರ ಕಡೆಗೆ ಓಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದು ಎಲ್ಲರ ಮನಸ್ಸು ಮುಟ್ಟಿತು.
ಈ ವಿಡಿಯೋ ಗಮನಿಸಿದ ಐಪಿಎಲ್ ಮಾಜಿ ಮುಖ್ಯಸ್ಥ Lalit Modi ಬಾಲಕನ ನಿರಾಸೆ ನೋಡಿ ಸ್ಪಂದಿಸಿದರು. ಬಾಲಕನನ್ನು ಹುಡುಕಿಸಿ, ಅವನ ಕನಸು ನನಸಾಗಿಸಲು ಮುಂದಾದರು. ಬಳಿಕ ವಿರಾಟ್ ಕೊಹ್ಲಿ ಸಹಿಯಿರುವ ವಿಶೇಷ IPL ಬ್ಯಾಟ್‌ನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದರು. ಈ ಸುದ್ದಿ ಹೊರಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಲಲಿತ್ ಮೋದಿ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.
ಕುಟುಂಬ ಸದಸ್ಯರ ಪ್ರಕಾರ, ವಿರಾಟ್ ಸಹಿಯಿರುವ ಬ್ಯಾಟ್ ಸಿಗಲಿದೆ ಎಂಬ ಸುದ್ದಿ ಕೇಳಿದ ಕ್ಷಣ ಬಾಲಕನ ಮುಖದಲ್ಲಿ ನಗು ಮರಳಿತ್ತು. ಕೆಲವೇ ದಿನಗಳ ಹಿಂದೆ ನಿರಾಸೆಯಿಂದ ಕಣ್ಣೀರು ಹಾಕಿದ್ದ ಆತ, ಈಗ ತನ್ನ ಕನಸು ನನಸಾಗುತ್ತಿದೆ ಎಂಬ ಸಂತೋಷದಲ್ಲಿ ತೇಲುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವರು "ಒಂದು ಆಟೋಗ್ರಾಫ್ ಅಭಿಮಾನಿಗೆ ಎಷ್ಟು ಅಮೂಲ್ಯ ಎಂಬುದನ್ನು ಈ ಘಟನೆ ತೋರಿಸಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಈ ಘಟನೆಯ ಬಳಿಕ ನೆಟ್ಟಿಗರು ಎರಡು ವಿಚಾರಗಳನ್ನು ಚರ್ಚಿಸುತ್ತಿದ್ದಾರೆ. ಒಂದು ಕಡೆ ವಿರಾಟ್ ಕೊಹ್ಲಿಯ ಮೇಲಿನ ಅಭಿಮಾನಿಗಳ ಪ್ರೀತಿ ಎಷ್ಟಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮತ್ತೊಂದೆಡೆ, ಬಾಲಕನ ನಿರಾಸೆಯನ್ನು ಅರ್ಥಮಾಡಿಕೊಂಡು ಅವನ ಕನಸು ನನಸಾಗಿಸಲು ಮುಂದಾದ ಲಲಿತ್ ಮೋದಿ ಅವರ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಕಣ್ಣೀರಿನಿಂದ ಆರಂಭವಾದ ಈ ಕಥೆ ಈಗ ಸಂತೋಷದ ನಗುವಿನೊಂದಿಗೆ ಅಂತ್ಯ ಕಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ.