
ಲಂಡನ್ : ವಿದೇಶಗಳಲ್ಲಿ ಕೂಲಿ ಮತ್ತು ಸೇವಾ ವೆಚ್ಚಗಳು (Service Cost) ಭಾರತಕ್ಕಿಂತ ಎಷ್ಟೋ ಪಟ್ಟು ದುಬಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಯುಕೆಯಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ತಮ್ಮ ಮನೆಯ ಮೇಲ್ಛಾವಣಿಯ ಮಳೆನೀರು ಹರಿಯುವ ಚರಂಡಿ (Roof Gutter) ಸ್ವಚ್ಛಗೊಳಿಸಲು ಪಾವತಿಸಿದ ಹಣದ ವಿವರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರರಾದ ಭಾರತೀಯ ಮಹಿಳೆ ಮಂಜು ಶೇಖಾವತ್ ಪರ್ಮಾರ್ ಅವರು ತಮ್ಮ ಮನೆಯ ಡ್ರೈನೇಜ್ ಕಸ ತೆಗೆಯುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ವಿವರಿಸಿರುವಂತೆ, ಕೆಲಸಗಾರನೊಬ್ಬ ಏಣಿ ಬಳಸಿ ಮೇಲಕ್ಕೇರಿ ಮೇಲ್ಛಾವಣಿಯ ಅಂಚಿನಲ್ಲಿ ಜಮೆಯಾಗಿದ್ದ ಒಣ ಎಲೆಗಳು ಹಾಗೂ ಮಣ್ಣನ್ನು ಬಕೆಟ್‌ಗೆ ತುಂಬಿ ಸ್ವಚ್ಛಗೊಳಿಸಿದ್ದಾನೆ. ಕಸ ಕೂಡ ಸ್ವಲ್ಪವೇ ಸ್ವಲ್ಪ ಇತ್ತು.
ಆದರೆ, ಈ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ತಗೆದುಕೊಂಡದ್ದು ಕೇವಲ 20 ನಿಮಿಷಗಳು! ಈ 20 ನಿಮಿಷಗಳ ಸಣ್ಣ ಕೆಲಸಕ್ಕಾಗಿ ಆ ವ್ಯಕ್ತಿ 92 ಬ್ರಿಟಿಷ್ ಪೌಂಡ್‌ಗಳನ್ನು ಅಂದರೆ ಭಾರತೀಯ ರೂಪಾಯಿ ಮೌಲ್ಯ ಸರಿ ಸುಮಾರು 12,000 ರೂಪಾಯಿ ಶುಲ್ಕವಾಗಿ ತೆಗೆದುಕೊಂಡು ಹೊರಟು ಹೋಗಿದ್ದಾನೆ. ಭಾರತದಲ್ಲಿ ಇಡೀ ದಿನ ದುಡಿದರೂ 1000 ರೂ ವೇತನವಿಲ್ಲ.
"ಕೇವಲ 20 ನಿಮಿಷದ ಕೆಲಸಕ್ಕೆ 12,000 ರೂಪಾಯಿ ಪಾವತಿಸಿದ್ದೇವೆ. ಭಾರತದಲ್ಲಿ ನೀವು ವಾಸಿಸುವ ಪ್ರದೇಶಗಳಲ್ಲಿ ಮೇಲ್ಛಾವಣಿಯ ಚರಂಡಿ ಸ್ವಚ್ಛಗೊಳಿಸಲು ಎಷ್ಟು ಖರ್ಚಾಗುತ್ತದೆ?" ಎಂದು ಮಂಜು ಅವರು ವೀಕ್ಷಕರನ್ನು ಪ್ರಶ್ನಿಸಿದ್ದಾರೆ.
ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
"ವಿದೇಶಗಳಲ್ಲಿ ಶ್ರಮಕ್ಕೆ ಮತ್ತು ಸೇವೆಗೆ ಕೊಡುವ ಬೆಲೆ ಅತ್ಯಂತ ದುಬಾರಿ ಎಂಬುದಕ್ಕೆ ಇದೇ ಸಾಕ್ಷಿ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
"ಭಾರತದಲ್ಲಿ ಇದೇ ಕೆಲಸವನ್ನು ಕೆಲವೇ ನೂರು ರೂಪಾಯಿಗಳಲ್ಲಿ ಮುಗಿಸಬಹುದು, ಇಷ್ಟೊಂದು ಹಣ ವ್ಯತ್ಯಾಸ ನಿಜಕ್ಕೂ ಆಶ್ಚರ್ಯ ತರಿಸುತ್ತದೆ" ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ವಿದೇಶಿ ಜೀವನದ ಹೊಳಪಿನ ನಡುವೆ ಇಂತಹ ದೈನಂದಿನ ನಿರ್ವಹಣಾ ವೆಚ್ಚಗಳು ಭಾರತೀಯ ಮೂಲದ ಕುಟುಂಬಗಳಿಗೆ ಎಷ್ಟು ದುಬಾರಿಯಾಗಿ ಪರಿಣಮಿಸುತ್ತವೆ ಎಂಬುದಕ್ಕೆ ಈ ಘಟನೆಗೆ ಹಿಡಿದ ಕನ್ನಡಿಯಾಗಿದೆ.