
ರಾಖಿ ಹಬ್ಬ ಎಂದರೆ ಕೇವಲ ಕೈಗೆ ರಾಖಿ ಕಟ್ಟುವುದು ಮಾತ್ರವಲ್ಲ. ಅಣ್ಣ-ತಂಗಿಯ ನಡುವಿನ ಪ್ರೀತಿ, ಕಾಳಜಿ ಮತ್ತು ರಕ್ಷಣೆಯ ಬಂಧವನ್ನು ನೆನಪಿಸುವ ವಿಶೇಷ ದಿನ. ಬಾರಿ ಆಗಸ್ಟ್ 28 ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ. ರಕ್ಷಾ ಬಂಧನಕ್ಕೆ ಈಗಲೇ ತಯಾರಿ ಶುರುವಾಗಿದೆ. ಅನೇಕರು ಸಹೋದರರಿಗೆ ರಾಖಿ ಕಳಿಸುವ ಕೆಲ್ಸದಲ್ಲಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಇದು ರಾಖಿಯ ಅರ್ಥವನ್ನು ಮನಮುಟ್ಟುವಂತೆ ಹೇಳುತ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ರಾಖಿ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕೈಯಲ್ಲಿ ಕೋಲು ಮತ್ತು ರಾಖಿ ಹಿಡಿದಿರುವ ಭಿಕ್ಷುಕನೊಬ್ಬ ಮಕ್ಕಳ ಬಳಿಗೆ ಬರುತ್ತಾನೆ. ಭಿಕ್ಷುಕನನ್ನು ನೋಡಿ ಮೊದಲು ಮಕ್ಕಳು ಓಡಿ ಹೋಗ್ತಾರೆ. ವಿದ್ಯಾರ್ಥಿಯೊಬ್ಬಳ ಬಳಿ ಬರುವ ಭಿಕ್ಷುಕ, ರಾಖಿ ನೀಡ್ತಾನೆ. ರಾಖಿ ಕಟ್ಟುವಂತೆ ಆಕೆಗೆ ರಾಖಿ ನೀಡ್ತಾನೆ. ಧೈರ್ಯ ಮಾಡಿ ಪುಟ್ಟ ಬಾಲಕಿ ಆತನ ಕೈಗೆ ರಾಕಿ ಕಟ್ಟುತ್ತಾಳೆ.
ರಾಖಿ ಕಟ್ಟಿದ ನಂತರ ಬಾಲಕಿ ಆತನ ಕೈಗೆ ಹಣೆ ತಾಗಿಸಿ ನಮಸ್ಕಾರ ಮಾಡ್ತಾಳೆ. ಆಕೆ ರಾಖಿ ಕಟ್ಟುತ್ತಿದ್ದಂತೆ ಆ ವ್ಯಕ್ತಿ ಬಾಲಕಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡ್ತಾನೆ. ಕ್ಷಣ ನಿಜಕ್ಕೂ ಮನಸ್ಸನ್ನು ಮುಟ್ಟುತ್ತದೆ. ಅಲ್ಲಿ ಹಣವಿಲ್ಲ, ಉಡುಗೊರೆಯಿಲ್ಲ, ಯಾವುದೇ ದೊಡ್ಡ ಮಾತುಗಳಿಲ್ಲ. ಇದೆಲ್ಲದರ ನಡುವೆ ಕಾಣಿಸುವುದು ಕೇವಲ ಮನುಷ್ಯತ್ವ.
ಭಿಕ್ಷೆ ಬೇಡುವವರನ್ನು ನಾವು ಸಾಮಾನ್ಯವಾಗಿ ಬಡತನ, ಬಟ್ಟೆ ಅಥವಾ ಸ್ಥಿತಿಯನ್ನು ನೋಡಿ ದೂರ ಇಡುತ್ತೇವೆ. ಅವರ ಬದುಕಿನ ಹಿಂದೆ ಎಂತಹ ನೋವು, ಹಸಿವು ಮತ್ತು ಅನಿವಾರ್ಯತೆ ಇದೆ ಎಂಬುದನ್ನು ತಿಳಿದುಕೊಳ್ಳಲು ನಾವು ಪ್ರಯತ್ನಿಸುವುದಿಲ್ಲ. ಆದರೆ ಬಡತನ ಒಬ್ಬ ವ್ಯಕ್ತಿಯ ಗೌರವವನ್ನು ಕಸಿದುಕೊಳ್ಳುವುದಿಲ್ಲ. ಪ್ರತಿಯೊಬ್ಬರಿಗೂ ಪ್ರೀತಿ, ಗೌರವ ಮತ್ತು ಆತ್ಮೀಯತೆ ಬೇಕು. ಬಾಲಕಿ ಇದನ್ನೆಲ್ಲ ಯೋಚಿಸಿ ರಾಖಿ ಕಟ್ಟಿಲ್ಲ. ಆದ್ರೆ ಆಕೆಯ ಪುಟ್ಟ ಕೈಯಿಂದ ಕಟ್ಟಿದ ರಾಖಿ, ಆ ವ್ಯಕ್ತಿಗೆ ದೊಡ್ಡ ಸಂತೋಷ ನೀಡಿದೆ.
ಈ ವಿಡಿಯೋ ನೋಡಿದ ಬಳಕೆದಾರರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಒಳ್ಳೆಯ ಕೆಲಸ, ಇದು ಸನಾತನ ಧರ್ಮ ಅಂತ ಕಮೆಂಟ್ ಮಾಡಿದ್ದಾರೆ. ಕೆಲವರು ಇದು ಒಳ್ಳೆಯ ವಿಡಿಯೋ ಆದ್ರೆ ನೈಜ ಘಟನೆಯಲ್ಲ, ಕಂಟೆಂಟ್ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅದೇನೇ ಇರಲಿ ಮನುಷ್ಯನನ್ನು ಅವನ ಸ್ಥಿತಿಯಿಂದಲ್ಲ ಮನಸ್ಸಿನಿಂದ ನೋಡಬೇಕು ಎಂಬುದನ್ನು ಇದು ತೋರಿಸಿದೆ.