
ಬಿಹಾರದ ಒಂದು ಚಿಕ್ಕ ಹಳ್ಳಿಯಲ್ಲಿ ನಡೆದ ವಿಚಿತ್ರ, ವಿಲಕ್ಷಣ ಘಟನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅದರ ವಿಡಿಯೋಗಳು ಎಲ್ಲೆಡೆ ಹರಡಿ ಈಗ ಚರ್ಚೆಯಾಗ್ತಿದೆ. NEET (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ಮಗ ಉತ್ತೀರ್ಣನಾದ ಸಂತೋಷಕ್ಕೆ, ಒಬ್ಬ ತಂದೆ ಹಳ್ಳಿಯ ಮಧ್ಯದಲ್ಲೇ “ಐಟಂ ಡ್ಯಾನ್ಸ್” ಕಾರ್ಯಕ್ರಮ ಏರ್ಪಡಿಸಿ ಸಂಭ್ರಮಿಸಿದ್ದಾರೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.
ಹಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವೃತ್ತಿಪರ ನೃತ್ಯಗಾರರನ್ನು ಕರೆಸಿ, ಕುಣಿಸಿದ್ದಾನೆ ಅಪ್ಪ. ಸುತ್ತಮುತ್ತಲಿನ ಸಾವಿರಾರು ಜನ ಸೇರಿ ಐಟಂ ಡ್ಯಾನ್ಸ್ ನೋಡ್ತಾ ಜೋರಾಗಿ ಚಪ್ಪಾಳೆ ತಟ್ಟುತ್ತಾ, ವಿಡಿಯೋ ತೆಗೆಯುತ್ತಾ ಆನಂದಿಸಿದ್ದಾರೆ. ಮಗನ ಸಾಧನೆಯ ಬಗ್ಗೆ ತುಂಬಾ ಹೆಮ್ಮೆಪಟ್ಟ ತಂದೆ, ತನ್ನ ಖುಷಿಯನ್ನು ಬೇರೆ ರೀತಿಯಲ್ಲಿ, ದೊಡ್ಡ ಮಟ್ಟದಲ್ಲಿ ತೋರಿಸಬೇಕು ಅಂತ ಈ ರೀತಿ ಸಂಭ್ರಮಿಸಿದ್ದಾರೆ ಅನ್ನಲಾಗ್ತಿದೆ. ಗ್ರಾಮೀಣ ಭಾರತದಲ್ಲಿ ಈ ಥರದ ಸಂಭ್ರಮಗಳು ಸಾಮಾನ್ಯವಾದರೂ, ಈ ರೀತಿಯ ಐಟಂ ಡ್ಯಾನ್ಸ್ ಮಾಡಿಸಿದ್ದು ಮಾತ್ರ ಎಲ್ಲರಿಗೂ ಹೊಸದೇ ಆಗಿತ್ತು.
ಕಾರ್ಯಕ್ರಮದ ವಿಡಿಯೋ ಒಂದನ್ನು ಅಲ್ಲಿದ್ದವರಲ್ಲಿ ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ಮೇಲೆ, ಅದು ತಕ್ಷಣವೇ ವೈರಲ್ ಆಯ್ತು. ವಿಡಿಯೋದಲ್ಲಿ ನೃತ್ಯಗಾರ್ತಿ ವೇದಿಕೆ ಮೇಲೆ ನೃತ್ಯ ಮಾಡ್ತಿರೋದು, ಹಳ್ಳಿಯ ಜನರು ಕುಣಿತ ನೋಡಿ ಖುಷಿಪಡ್ತಾ, ಮೊಬೈಲ್‌ನಲ್ಲಿ ರೆಕಾರ್ಡ್ ಮಾಡ್ತಿರೋದು ಕಾಣಿಸುತ್ತೆ. ಒಂದು ಹಂತದಲ್ಲಿ ಡ್ಯಾನ್ಸರ್ ಮೈಮೇಲೆ ಹೊದ್ದ ಟವೆಲ್ ಅನ್ನು ಅರೆತರೆದು ತನ್ನ ಅರ್ಧನಗ್ನ ಶರೀರವನ್ನು ತೋರಿಸಿರೋದು ಕೂಡ ರೆಕಾರ್ಡ್ ಆಗಿದೆ. ಅಲ್ಲಿದ್ದ ಜನ ಕೂಡ ಇದನ್ನು ಆನಂದಿಸಿದ್ದಾರೆ.
ಇದನ್ನು ನೋಡಿ ದೇಶದಾದ್ಯಂತ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ತಂದೆಯ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, “ಮಗನ ಓದಿನ ಸಾಧನೆಗೆ ತಂದೆ ಇಷ್ಟು ಖುಷಿಪಟ್ಟರೆ ತಪ್ಪೇನಿಲ್ಲ” ಅಂತ ಹೇಳಿದ್ದಾರೆ. ಕೆಲವರು ಹಳ್ಳಿಯ ಒಗ್ಗಟ್ಟು, ಹಬ್ಬದ ವಾತಾವರಣ ನೋಡಿ ಖುಷಿಪಟ್ಟಿದ್ದಾರೆ. ಮಗ ನೀಟ್ ಪರೀಕ್ಷೆ ಪಾಸಾದದ್ದಕ್ಕೆ ಐಟಂ ಡ್ಯಾನ್ಸ್ ಏರ್ಪಡಿಸಿದ ತಂದೆ ಇನ್ನೆಂಥಾ ರಸಿಕ ಇರಬಹುದು ಅನ್ನೋದು ಕೆಲವು ರಸಿಕರ ಪ್ರಶ್ನೆ. ಹಾಗೇ ಈತ ಮುಂದೆ ಮಗನ ಮದುವೆಗೆ ಇನ್ನೇನೇನು ಮಾಡ್ತಾನೋ ಅಂದವರೂ ಉಂಟು.
ಆದರೆ ಇನ್ನು ಕೆಲವು ಮಂದಿ ಇದನ್ನು ಟೀಕಿಸಿದ್ದಾರೆ. NEET ತರಹದ ಗಂಭೀರ ರಾಷ್ಟ್ರಮಟ್ಟದ ಪರೀಕ್ಷೆಯ ಸಾಧನೆಯನ್ನು ಈ ರೀತಿಯ ಮನರಂಜನೆಯಿಂದ ಆಚರಿಸುವುದು ಸರಿಯಲ್ಲ, ಇದು ವಿದ್ಯೆಯ ಗೌರವಕ್ಕೆ ಧಕ್ಕೆಯಾಗುತ್ತದೆ ಅಂತ ಹೇಳಿದ್ದಾರೆ. ಮಕ್ಕಳ ಮೇಲೆ ತಪ್ಪು ಪ್ರಭಾವ ಬೀರುತ್ತೆ ಅನ್ನೋ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಭಾರತದಲ್ಲಿ ಯಶಸ್ಸನ್ನು ಆಚರಿಸುವ ರೀತಿಗಳು ಎಷ್ಟು ವಿಭಿನ್ನವಾಗಿರುತ್ತವೆ ಅನ್ನೋದನ್ನ ತೋರಿಸಿದೆ. ಬಿಹಾರ, ಉತ್ತರ ಪ್ರದೇಶದ ಹಲವು ಕಡೆ ಐಟಂ ಡ್ಯಾನ್ಸ್‌ನ ಸ್ಥಳೀಯ ಸಂಪ್ರದಾಯವೇ ಇದೆಯಂತೆ. ಅಲ್ಲಿ ಹಬ್ಬ ಹರಿದಿನವಾದರೂ ಅರೆನಗ್ನವಾಗಿ ಡ್ಯಾನ್ಸ್ ಮಾಡುವ ಡ್ಯಾನ್ಸರ್‌ಗಳನ್ನು ಕರೆಸಿ ಕುಣಿಸಿ ಜನ ನೋಡಿ ಎಂಜಾಯ್ ಮಾಡ್ತಾರೆ. ಭೋಜಪುರಿ ಮುಂತಾದ ಕಡೆ ನಗ್ನ ನರ್ತನ ಅಥವಾ ನಂಗಾ ನಾಚ್‌ಗಳೇ ನಡೆಯೋದುಂಟು. ಸಾಮಾನ್ಯವಾಗಿ ಶ್ರೀಮಂತರು ಇವುಗಳ ಏರ್ಪಾಡು ಮಾಡ್ತಾರೆ. ಅವರ ಅನುಯಾಯಿಗಳು, ಬಡ ಹಳ್ಳಿಯ ಜನತೆ ಇದನ್ನು ನೋಡಿ ಇದನ್ನು ಏರ್ಪಡಿಸಿದ ವ್ಯಕ್ತಿಯ ʼಉದಾರತೆಗೆʼ ಮರುಳಾಗ್ತಾರೆ. ತೀರಾ ಇತ್ತೀಚಿನವರೆಗೂ, ಅಂದರೆ ಮೊಬೈಲ್‌ಗಳು ಎಲ್ಲರ ಕೈ ಸೇರುವವರೆಗೂ ಈ ಡ್ಯಾನ್ಸ್‌ಗಳೇ ಪುರುಷ ಪ್ರಧಾನ ಹಳ್ಳಿಗಳ ಮನೋರಂಜನೆಯ ಪ್ರಮುಖ ವಿಧಾನಗಳಾಗಿದ್ದವು.