
ಹೈದರಾಬಾದ್(Hyderbad)ನಲ್ಲಿರುವ ಅಮೆಜಾನ್ ಕಂಪನಿಯ ಉದ್ಯೋಗ(Amazon employee) ಶ್ರೇಯಾಶಿ(Shreyashi), ತಮ್ಮ ಪೋಷಕರನ್ನು ಆಫೀಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಮಗಳು ಕೆಲಸ ಮಾಡುವ ಜಾಗವನ್ನು ನೋಡಿ ಪೋಷಕರು ಹೆಮ್ಮೆಪಟ್ಟಿದ್ದಾರೆ. ಈ ಸುಂದರ ಕ್ಷಣವನ್ನು ಶ್ರೇಯಾಶಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಮೆಜಾನ್‌ನಲ್ಲಿ ಕೆಲಸ ಗಿಟ್ಟಿಸಿದ್ದಕ್ಕಿಂತ, ಈ ಯಶಸ್ಸನ್ನು ಸಾಧ್ಯವಾಗಿಸಿದ ನನ್ನ ಪೋಷಕರಿಗೆ ನನ್ನ ಕೆಲಸದ ಜಾಗವನ್ನು ತೋರಿಸಿದ್ದೇ ನನಗೆ ದೊಡ್ಡ ಸಾಧನೆ ಅಂತಾ ಅವರು ಹೇಳಿಕೊಂಡಿದ್ದಾರೆ.
ಕ್ಯಾಪ್ಶನ್‌ನಲ್ಲಿ, 'ಈ ಪಯಣದಲ್ಲಿ ಇಲ್ಲಿಗೆ ತಲುಪಿದ್ದಷ್ಟೇ ಸಂತೋಷದ ಭಾಗವಲ್ಲ. ಪೋಷಕರ ಕಣ್ಣಲ್ಲಿ ಹೆಮ್ಮೆಯನ್ನು ನೋಡಿದಾಗ, ಪಟ್ಟ ಶ್ರಮವೆಲ್ಲಾ ಸಾರ್ಥಕ ಎನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ, 'ಪ್ರತಿಯೊಬ್ಬ ಮಗಳಿಗೂ ತನ್ನ ಕೆಲಸದ ಜಾಗವನ್ನು ಕುಟುಂಬಕ್ಕೆ ತೋರಿಸಬೇಕು ಎಂಬ ಕನಸಿರುತ್ತದೆ' ಎಂಬ ಸಂದೇಶವೂ ಇದೆ.
ಅಮೆಜಾನ್‌ನಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ನಂತರ, ಶ್ರೇಯಾಶಿಗೆ ಕೊನೆಗೂ ತನ್ನ ಜೀವನದ ಪ್ರಮುಖ ಭಾಗವಾಗಿರುವ ಕಚೇರಿಗೆ ಪೋಷಕರನ್ನು ಸ್ವಾಗತಿಸುವ ಅವಕಾಶ ಸಿಕ್ಕಿದೆ.
ಈ ಭಾವುಕ ವಿಡಿಯೋದಲ್ಲಿ ಹಲವು ಮರೆಯಲಾಗದ ಕ್ಷಣಗಳಿವೆ. ವಿಶಾಲವಾದ ಕ್ಯಾಂಪಸ್ ನೋಡುವಾಗ ಪೋಷಕರ ಮುಖದಲ್ಲಿ ಅರಳಿದ ನಗು, ಅಲ್ಲಿ ತೆಗೆಸಿಕೊಂಡ ಫೋಟೋಗಳು ಮತ್ತು ಕಂಪನಿಯ ಕ್ಯಾಫೆಟೇರಿಯಾದಲ್ಲಿ ಒಟ್ಟಿಗೆ ಊಟ ಮಾಡಿದ ದೃಶ್ಯಗಳು ಇದರಲ್ಲಿವೆ.
ಈ ರೀಲ್ ಆನ್‌ಲೈನ್‌ನಲ್ಲಿ, ವಿಶೇಷವಾಗಿ ತಮ್ಮ ವೃತ್ತಿಜೀವನದ ಸಾಧನೆಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳಲು ಬಯಸುವ ಅನೇಕ ಉದ್ಯೋಗಿಗಳಿಗೆ ಬಹಳ ಇಷ್ಟವಾಗಿದೆ. ಶ್ರೇಯಾಶಿ ಸೃಷ್ಟಿಸಿದ ಈ ನೆನಪನ್ನು ಅನೇಕ ಬಳಕೆದಾರರು ಶ್ಲಾಘಿಸಿದ್ದಾರೆ. 'A real life perfect moment' ಎಂದು ಒಬ್ಬರು ಕಾಮೆಂಟ್ ಮಾಡಿದರೆ, 'ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಖುಷಿ ಕಣ್ಣೀರು ಬಂತು ಎಂದು ಮತ್ತೊಬ್ಬರು ಬರೆದಿದ್ದಾರೆ.