
ಭಾರತೀಯರಿಗೆ ಅದರಲ್ಲೂ ಕೇರಳಿಗರಿಗೆ ದಿನ ಪ್ರಾರಂಭವಾಗುವುದೇ ಬಿಸಿ ಬಿಸಿ ಫಿಲ್ಟರ್ ಕಾಫಿ, ಇಡ್ಲಿ, ಗರಿ ಗರಿ ದೋಷೆ, ಕೊಬ್ರಿ ಚಟ್ನಿ ತಿನ್ನುವುದರಿಂದ, ಇಲ್ಲಂದ್ರೆ ಮುಂದಿನ ಕೆಲಸವೇ ನಡೆಯೋಲ್ಲ. ಕೇರಳದ ಬ್ರೇಕ್‌ಫಾಸ್ಟ್ ಅಂದ್ರೆನೇ ಒಂದು ರೀತಿ ವಿಶೇಷ. ಆ ವಿಶೇಷ ಸ್ವಾದವಿರುವ ರುಚಿ ರುಚಿಯಾದ ತಿಂಡಿ ಕೇರಳಕ್ಕೆ ಮಾತ್ರ ಸೀಮಿತ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ದೂರದ ಜಪಾನ್‌ನಲ್ಲೂ ಕೇರಳದ ಆಹಾರದ ಘಮ ಹರಡಿದೆ. ಅದೂ ಕೂಡ ಅಷ್ಟೇ ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡಿದ ತಿನಿಸು.
ಅರೇ ಜಪಾನೀಯರು ಮೀನು, ಫಾಸ್ಟ್‌ಪುಡ್ ಪ್ರಿಯರು, ಅವರಿಗೆಲ್ಲ ಇಡ್ಲಿ ದೋಸೆ ಒಗ್ಗುತ್ತಾ? ಅಂತೀರಾ? ಹೌದು. ಈಗ ಕೇರಳದ ಇಡ್ಲಿ ದೋಸೆ ಎಂದರೆ ಜಪಾನೀಯರ ಬಾಯಲ್ಲೂ ನೀರೂರುತ್ತೆ. ಪ್ರವಾಸಿ ವ್ಲಾಗರ್ ಸೋನಮ್ ಮಿಧಾ ಅವರು ಟೋಕಿಯೋದಲ್ಲಿರುವ 'ಕೇರಳ ನೋ ಕಾಜೆ ನೋ ಮಾರ್ನಿಂಗ್' ಎಂಬ ಕೇರಳ ಶೈಲಿಯ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಇನ್‌ಸ್ಟಾಗ್ರಾಂ(Instagram)ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ನಿವೃತ್ತ ಜಪಾನೀ ದಂಪತಿಯೊಬ್ಬರು ಈ ಹೋಟೆಲ್ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ದಂಪತಿ 40 ವರ್ಷಗಳ ಹಿಂದೆ, ಕೇವಲ 2 ವರ್ಷಗಳ ಕಾಲ ಕೇರಳದಲ್ಲಿದ್ದರಂತೆ. ಆಗಲೇ ಅವರಿಗೆ ಕೇರಳದ ಆಹಾರದ ಮೇಲೆ ಪ್ರೀತಿ ಹುಟ್ಟಿದೆ.
ಈ ದಂಪತಿ ನಿವೃತ್ತರಾದ ಮೇಲೆ, ಜಪಾನಿನ ಜನರಿಗೆ ಕೇರಳದ ಆಹಾರದ ರುಚಿ ತೋರಿಸಲು ಈ ರೆಸ್ಟೋರೆಂಟ್ ಶುರುಮಾಡಿದ್ದಾರೆ. ಇಲ್ಲಿ ದೋಸೆ, ಇಡ್ಲಿ, ವಡೆ, ಉತ್ತಪ್ಪ, ಉಪ್ಪಿಟ್ಟು ಮತ್ತು ಚಹಾದಂತಹ ಕೇರಳದ ಬ್ರೇಕ್‌ಫಾಸ್ಟ್‌ಗಳನ್ನು ಬಡಿಸಲಾಗುತ್ತದೆ.
ಈ ದಂಪತಿ ಪ್ರಸಿದ್ಧ ಜಪಾನೀ ಡ್ರಮ್ಮರ್ ಯೊಯೊಕಾ-ಸಾನ್ ಅವರ ಪೋಷಕರು. ಹಾಗಾಗಿಯೇ, ರೆಸ್ಟೋರೆಂಟ್‌ನ ಒಂದು ಮೂಲೆಯನ್ನು ಅವರಿಗಾಗಿ ವಿಶೇಷವಾಗಿ ಮೀಸಲಿಟ್ಟಿದ್ದಾರೆ' ಎಂದು ವ್ಲಾಗರ್ ವಿಡಿಯೋದಲ್ಲಿ ಹೇಳಿದ್ದಾರೆ.
ನೀವು ಜಪಾನ್‌ನಲ್ಲಿ ಕೇರಳ ರೆಸ್ಟೋರೆಂಟ್ ಯಾಕೆ ಶುರುಮಾಡಿದ್ರಿ ಎಂದು ಮಾಲೀಕರನ್ನು ಕೇಳಿದಾಗ, 'ನಾನು ಪ್ರತಿದಿನ ಈ ಊಟವನ್ನು ತಿನ್ನಬೇಕು ಅನ್ನೋ ಕಾರಣಕ್ಕೆ ಈ ರೆಸ್ಟೋರೆಂಟ್ ತೆರೆದೆ. ಅಷ್ಟೇ ಅಲ್ಲ, ಜಪಾನಿನ ಜನರಿಗೂ ಈ ಆಹಾರದ ಬಗ್ಗೆ ತಿಳಿಯಬೇಕು ಅನ್ನೋದು ನನ್ನ ಆಸೆ' ಎಂದು ಅವರು ಹೇಳಿದ್ದಾರೆ. ವಯಸ್ಸಾದ ಕಾರಣ, ಈಗ ಪೂರ್ತಿ ಊಟದ ಬದಲು ಕೇವಲ ಲಘು ಉಪಹಾರಗಳನ್ನು ಮಾತ್ರ ನೀಡುತ್ತಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ಈ ದಂಪತಿ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಆದರೀಗ ಸೋಷಿಯಲ್ ಮೀಡಿಯಾ ಮೂಲಕ ಹೆಚ್ಚು ಪರಿಚಿತರಾಗಿ ಭಾರತೀಯ ಆಹಾರ ಪ್ರಿಯರ ಮನಗೆದ್ದಿದ್ದು, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗಿದೆ. 'ನಾನು ಟೋಕಿಯೋದಲ್ಲಿ ಇದ್ದಾಗ, ಮನೆಯ ಊಟದ ಹಾಗೆ ಸಿಗುತ್ತಿದ್ದ ಕೇರಳದ ಊಟಕ್ಕೆ ಇಲ್ಲಿಗೆ ಬರುತ್ತಿದ್ದೆ. 1980ರ ದಶಕದ ರುಚಿಯನ್ನು ಇವರು ನೀಡುತ್ತಿದ್ದರು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
'ನಾನು ಓಮೋರಿಯಲ್ಲಿದ್ದಾಗ ಈ ರೆಸ್ಟೋರೆಂಟ್‌ಗೆ ಕೆಲವು ಬಾರಿ ಭೇಟಿ ನೀಡಿದ್ದೆ. ವಿಶೇಷವಾಗಿ ಇಡ್ಲಿ ಮತ್ತು ವಡೆಗಾಗಿ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು, 'ತುಂಬಾ ಒಳ್ಳೆ ಪ್ರಯತ್ನ! ದೋಸೆ, ಇಡ್ಲಿ, ಉತ್ತಪ್ಪ ಕೇವಲ ಕೇರಳದ್ದಲ್ಲ, ಇಡೀ ದಕ್ಷಿಣ ಭಾರತದ ತಿಂಡಿ. ಜಪಾನಿಯರಿಗೆ ದಕ್ಷಿಣ ಭಾರತದ ಆಹಾರ ಇಷ್ಟ ಅಂತ ಗೊತ್ತು. ಆದರೆ, ಕೇರಳದ ಅಪ್ಪಂ, ಪುಟ್ಟು, ಇಡಿಯಪ್ಪಂನಂತಹ ಅಪ್ಪಟ ತಿಂಡಿಗಳನ್ನೂ ಸೇರಿಸಿದರೆ ಚೆನ್ನಾಗಿರುತ್ತೆ' ಎಂದು ಸಲಹೆ ನೀಡಿದ್ದಾರೆ.