
ಗ್ವಾಲಿಯರ್ (ಆ.16) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದೆ. ಇದೀಗ ತುರ್ತು ಸಂದರ್ಭದಲ್ಲಿ ಮನುಷ್ಯನ ಪ್ರಾಣ ಉಳಿಸಲು ಎಐ ಟೆಕ್ ನೆರವಾಗಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಮುಖ್ಯ ಪೊಲೀಸ್ ಪೇದೆಗೆ ಎರೆಡೆರಡು ಬಾರಿ ಹಾವು ಕಡಿದಿದೆ. ಅತ್ಯಂತ ವಿಷಕಾರಿ ಹಾವು ಕಡಿದ ಕಾರಣ ಪೊಲೀಸ್ ಪೇದೆ ಅಸ್ವಸ್ಥಗೊಂಡಿದ್ದಾರೆ. ಇದೇ ವೇಳೆ ಎಐ ತಂತ್ರಜ್ಞಾನದ ನೆರವು ಪೊಲೀಸ್ ಪೇದೆಯನ್ನು ಬದುಕಿಸಿದೆ. ತಕ್ಕ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಲ್ಲಿ ಎಐ ನೆರವು ನೀಡಿದ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಗ್ವಾಲಿಯರ್‌ನ ಬಿಜೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೆಡ್ ಕಾನ್‌ಸ್ಟೇಬಲ್ ಪೂರನ್ ಸಿಕರ್‌ವಾರ್ ಸರ್ಕಾರಿ ವಸತಿಗೃಹದಲ್ಲಿ ಮಲಗಿರುವಾಗ ಬೆಡ್ ಅಡಿಯಲ್ಲಿದ್ದ ವಿಷಕಾರಿ ಹಾವು ಎರಡು ಬಾರಿ ಕಡಿದಿದೆ. ಛಂಗನೆ ಎದ್ದ ಪೊಲೀಸ್ ಪೇದೆಗೆ ತನ್ನ ಪಕ್ಕದಲ್ಲೇ ಹಾವು ಕಂಡಿದೆ. ಮತ್ತೊಂದು ಬಾರಿ ದಾಳಿ ಮಾಡುವ ಮುನ್ನ ದೂರ ಸರಿದಿದ್ದಾರೆ. ವಿಷಕಾರಿ ಹಾವು ಅನ್ನೋದು ಗೊತ್ತಾಗಿದೆ. ಇತ್ತ ಪೊಲೀಸ್ ಪೇದೆ ಆತಂಕಗೊಂಡಿದ್ದಾರೆ. ಇತ್ತ ವಿಷಕಾರಿನ ಹಾವಿನ ವಿಷದಿಂದ ಪೊಲೀಸ್ ಪೇದೆ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಬಿಜೌಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಿಜೌಲಿ ಪೊಲೀಸ್ ಠಾಣಾಧಿಕಾರಿ ಸೌರಬ್ ಶ್ರೀವಾಸ್ತವ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು ವಸತಿ ಗೃಹದತ್ತ ಧಾವಿಸಿದ್ದಾರೆ. ಈ ವೇಳೆ ಬೆಡ್ ಪಕ್ಕದಲ್ಲೇ ಹಾವು ದಾಳಿಗೆ ಸನ್ನದ್ಧವಾಗಿ ನಿಂತಿತ್ತು. ಕೆಲ ಹೊತ್ತ ಕಳೆದ ಕಾರಣ ಪೂರನ್ ಆರೋಗ್ಯ ಕ್ಷೀಣಿಸತೊಡಗಿತ್ತು. ಕೋಣೆಯೊಳಗಿದ್ದ ಹಾವಿನ ಫೋಟೋ ತೆಗೆದ ಪೊಲೀಸ್ ಸಿಬ್ಬಂದಿ ಬಳಿಕ ಪೂರನ್ ಅವರನ್ನು ಎತ್ತಿ ಪೊಲೀಸ್ ಜೀಪಿನಲ್ಲಿ ಕೂರಿಸಿದ್ದಾರೆ.ಇತ್ತ ತೆಗೆದ ಹಾವಿನ ಫೋಟೋವನ್ನು ಎಐ ಟೂಲ್‌ನಲ್ಲಿ ಅಪ್ಲೋಡ್ ಮಾಡಿ ಹಾವಿನ ಮಾಹಿತಿ, ವಿಷದ ಅಂಶ, ಚಿಕಿತ್ಸೆ ಕುರಿತು ಮಾಹಿತಿ ಪಡೆದಿದ್ದಾರೆ. ಎಐ ಟೂಲ್ ಯಾವ ಹಾವು, ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡಿದೆ.
ಈ ಮಾಹಿತಿಯನ್ನು ಪೊಲೀಸ್ ಸಿಬ್ಬಂದಿಗಳು ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಪೂರನ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಅವರಿಗೆ ಬೇಕಾದ ಚಿಕಿತ್ಸೆ, ಆ್ಯಂಟಿ ವೆನೊಮ್ ಇಂಜೆಕ್ಷನ್ ಸಿದ್ದವಾಗಿತ್ತು. ಪೊಲೀಸ್ ಸಿಬ್ಬಂದಿ ಕಳುಹಿಸಿದ ಮಾಹಿತಿಯಿಂದ ಆಸ್ಪತ್ರೆ ವೈದ್ಯರಿಗೆ ಯಾವ ಇಂಜೆಕ್ಷನ್ ನೀಡಬೇಕು ಅನ್ನೋದು ಸ್ಪಷ್ಟವಾಗಿತ್ತು. ಹಾವಿನ ವಿಷದ ಪ್ರಮಾಣ ಎಲ್ಲಾ ಮಾಹಿತಿಯನ್ನು ಎಐ ನೀಡಿತ್ತು. ಹೀಗಾಗಿ ಪೂರನ್ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಚಿಕಿತ್ಸೆ ಆರಂಭಗೊಂಡಿದೆ.
ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಎಐ ನೆರವಾಗಿದೆ. ಇದರ ಪರಿಣಾಮ ಪೊಲೀಸ್ ಪೇದೆ ಪೂರನ್ ಪ್ರಾಣ ಉಳಿದಿದೆ. ಸದ್ಯ ಪೂರನ್ ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಚೇತರಿಸಿಕೊಳ್ಳುತ್ತಿರುವ ಪೊಲೀಸ್ ಪೇದೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ವೇಳೆ ಬಿಜೌಲಿ ಪೊಲೀಸರು, ಮಳೆಗಾಲದಲ್ಲಿ ಹಾವಿನ ಸಮಸ್ಯೆಗಳು ತೀವ್ರಗೊಂಡಿದೆ. ಹೀಗಾಗಿ ಎಚ್ಚರವಹಿಸಬೇಕಾಗಿ ಮನವಿ ಮಾಡಿದ್ದಾರೆ.