4 ವರ್ಷಗಳ ತಪಸ್ಸು, ಕೆಲಸ, ಪ್ರೀತಿ ಎಲ್ಲವೂ ಶೂನ್ಯ: ₹464ಕ್ಕೆ UPSC ಪುಸ್ತಕಗಳನ್ನು ಗುಜರಿಗೆ ಮಾರಿದ ಯುವಕನ ಕಣ್ಣೀರ ಕಥೆ!

Published : Aug 24, 2026, 10:07 PM IST
UPSC Aspirant Sells Notes

ಸಾರಾಂಶ

ಸತತ ನಾಲ್ಕು ವರ್ಷಗಳ ಯುಪಿಎಸ್‌ಸಿ ಪರೀಕ್ಷಾ ಪ್ರಯತ್ನದಲ್ಲಿ ವಿಫಲನಾದ ಯುವಕನೊಬ್ಬ, ತನ್ನೆಲ್ಲಾ ಪುಸ್ತಕಗಳು ಮತ್ತು ನೋಟ್ಸ್‌ಗಳನ್ನು ಗುಜರಿ ಅಂಗಡಿಗೆ ಮಾರಾಟ ಮಾಡಿದ್ದಾನೆ. ಈ ಪರೀಕ್ಷೆಗಾಗಿ ಕೆಲಸ, ಪ್ರೀತಿ ಕಳೆದುಕೊಂಡ ಆತ, ತನ್ನ ನೋವಿನ ಪಯಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ.

ನವದೆಹಲಿ (ಆ.24): ದೇಶದ ಅತ್ಯುನ್ನತ ಮತ್ತು ಕಠಿಣ ಪರೀಕ್ಷೆಯಾದ ಯುಪಿಎಸ್‌ಸಿ (UPSC Civil Services) ಪರೀಕ್ಷೆಯಲ್ಲಿ ಪಾಸಾಗಬೇಕೆಂದು ವರ್ಷಗಟ್ಟಲೆ ನಿದ್ದೆಗೆಟ್ಟು, ಊಟ-ತಿಂಡಿ ಮರೆತು ಓದುವ ಲಕ್ಷಾಂತರ ಆಕಾಂಕ್ಷಿಗಳಿದ್ದಾರೆ. ಆದರೆ ಎಲ್ಲರ ಕನಸೂ ನನಸಾಗುವುದಿಲ್ಲ. ಸತತ ನಾಲ್ಕು ವರ್ಷಗಳ ಪ್ರಯತ್ನದ ಬಳಿಕವೂ ಪರೀಕ್ಷೆ ಪಾಸ್ ಮಾಡಲಾಗದೆ ಹತಾಶನಾದ ಯುವಕನೊಬ್ಬ, ತಾನು ಜೀವದಂತೆ ಕಾಪಾಡಿಕೊಂಡಿದ್ದ ಸಾವಿರಾರು ರೂಪಾಯಿ ಬೆಲೆಯ ಎಲ್ಲಾ ಪುಸ್ತಕಗಳು, ಕೈಬರಹದ ನೋಟ್ಸ್‌ಗಳನ್ನು ಗುಜರಿ ಅಂಗಡಿಗೆ (ಕಬಾಡಿವಾಲಾ) ಕೇವಲ ₹464ಕ್ಕೆ ಮಾರಾಟ ಮಾಡಿರುವ ಮನಕಲಕುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

4 ವರ್ಷಗಳ ಸತತ ಹೋರಾಟ, ಕೈಹಿಡಿಯದ ಅದೃಷ್ಟ

ರೆಡ್ಡಿಟ್ (Reddit) ಸಾಮಾಜಿಕ ಜಾಲತಾಣದಲ್ಲಿ ಈ ಯುವಕ ತನ್ನ UPSC ಪಯಣದ ನೋವಿನ ಕಥೆಯನ್ನು ಹಂಚಿಕೊಂಡಿದ್ದಾನೆ. 2023, 2024 ಮತ್ತು 2025ರಲ್ಲಿ ಸತತವಾಗಿ UPSC ಮೇನ್ಸ್ (Mains) ಪರೀಕ್ಷೆ ಬರೆದಿದ್ದರೂ ಅಂತಿಮ ಹಂತ ತಲುಪಲು ಸಾಧ್ಯವಾಗಿರಲಿಲ್ಲ. 2026ರ ಪರೀಕ್ಷೆಯಲ್ಲಿ ಮೊದಲ ಹಂತವಾದ ಪ್ರಿಲಿಮ್ಸ್ (Prelims) ಪರೀಕ್ಷೆಯಲ್ಲೂ ಫೇಲ್ ಆಗಿದ್ದಾನೆ.

ಸತತ ವೈಫಲ್ಯಗಳಿಂದ ಮನನೊಂದ ಆತ, ಇನ್ನು ಮುಂದೆ ಎಂದಿಗೂ UPSC ಪರೀಕ್ಷೆಯ ಸಹವಾಸವೇ ಬೇಡ ಎಂದು ನಿರ್ಧರಿಸಿ, ತಾನು ಸಂಗ್ರಹಿಸಿದ್ದ NCERT ಪುಸ್ತಕಗಳು, ಎಂ. ಲಕ್ಷ್ಮೀಕಾಂತ್ ಅವರ 'ಇಂಡಿಯನ್ ಪಾಲಿಟಿ', ಮಾಕ್ ಟೆಸ್ಟ್ ಪೇಪರ್‌ಗಳು ಹಾಗೂ ಹಗಲಿರುಳು ಬರೆದ ಕೈಬರಹದ ನೋಟ್ಸ್‌ಗಳನ್ನೆಲ್ಲಾ ಮೂಟೆಕಟ್ಟಿ ಗುಜರಿಯವನಿಗೆ ತೂಕಕ್ಕೆ ಹಾಕಿದ್ದಾನೆ.

ತಕ್ಕಡಿಯಲ್ಲಿ ತೂಗಿದ್ದು ಕಾಗದವಲ್ಲ, ನನ್ನ 4 ವರ್ಷಗಳ ಪರಿಶ್ರಮ!

ಗುಜರಿ ಅಂಗಡಿಯವನಿಗೆ ಪುಸ್ತಕಗಳನ್ನು ಮಾರುವಾಗ ಉಂಟಾದ ಶೂನ್ಯ ಭಾವನೆಯನ್ನು ಯುವಕ ಭಾವುಕವಾಗಿ ಬರೆದುಕೊಂಡಿದ್ದಾನೆ: 'ಗುಜರಿಯವನು ನನ್ನ ಪುಸ್ತಕಗಳನ್ನು ಒಂದೊಂದಾಗಿ ತಕ್ಕಡಿಯಲ್ಲಿಟ್ಟು ತೂಕ ಮಾಡುತ್ತಿದ್ದಾಗ ನನ್ನಲ್ಲಿ ದೊಡ್ಡ ಶೂನ್ಯ ಆವರಿಸಿತ್ತು. ಅವು ಕೇವಲ ಹಾಳೆಗಳಾಗಿರಲಿಲ್ಲ. ಬೆಳಗಿನ ಜಾವ 4 ಗಂಟೆಗೆ ಎದ್ದು ಕಣ್ಣುಜ್ಜಿಕೊಂಡು ಸಿದ್ಧಪಡಿಸಿದ ಅನಾಲಿಸಿಸ್ ಶೀಟ್‌ಗಳು, ಬರೆದ ನೂರಾರು ಮಾಕ್ ಟೆಸ್ಟ್‌ಗಳು, ತಿದ್ದಿ ತೀಡಿದ ಉತ್ತರಗಳು... ನನ್ನ ಬದುಕಿನ ಅತ್ಯಮೂಲ್ಯ ವರ್ಷಗಳ ತ್ಯಾಗ ಆ ತಕ್ಕಡಿಯ ಮೇಲಿತ್ತು' ಎಂದು ಆತ ನೋವು ತೋಡಿಕೊಂಡಿದ್ದಾನೆ.

ಕೈತುಂಬಾ ಸಂಬಳದ ಕೆಲಸ ಹೋಯ್ತು, ಪ್ರೀತಿಯೂ ಮುರಿದುಬಿತ್ತು!

ಈ ಪರೀಕ್ಷೆಯ ಕನಸಿಗಾಗಿ ಆತ ಕಳೆದುಕೊಂಡದ್ದು ಕೇವಲ ಸಮಯವನ್ನಷ್ಟೇ ಅಲ್ಲ: 2022ರಲ್ಲಿ ಕೈತುಂಬಾ ಸಂಬಳ ಬರುತ್ತಿದ್ದ ಉತ್ತಮ ಕಾರ್ಪೊರೇಟ್ ಕೆಲಸವನ್ನು ರಿಸೈನ್ ಮಾಡಿ ಈತ ಓದಲು ಕುಳಿತಿದ್ದ. ಇದೇ ಸತತ ಒತ್ತಡ ಹಾಗೂ ಪರೀಕ್ಷೆಯ ತಯಾರಿಯ ನಡುವೆ ಆತನ ನಾಲ್ಕು ವರ್ಷಗಳ ಪ್ರೀತಿಯ ಸಂಬಂಧವೂ (Love Relationship) ಬ್ರೇಕಪ್ ಆಗಿತ್ತು.

ಗುಜರಿಯಿಂದ ಬಂದ ₹464 ಹಣ ದೇವಸ್ಥಾನ ಹುಂಡಿಗೆ!

ತನ್ನ ಎಲ್ಲಾ ಸ್ಟಡಿ ಮೆಟೀರಿಯಲ್ ಮಾರಿದಾಗ ಗುಜರಿಯವನು ಆತನ ಕೈಗಿಟ್ಟಿದ್ದು ಕೇವಲ ₹464 ರೂಪಾಯಿಗಳು. 'ಇನ್ನೊಂದು ₹200 ಹೆಚ್ಚಿಗೆ ಕೇಳಬಹುದಿತ್ತಲ್ಲವೇ?' ಎಂದು ನೆಟ್ಟಿಗರು ಕೇಳಿದಾಗ, 'ಇನ್ನೊಂದು ನೂರು-ಇನ್ನೂರು ರೂಪಾಯಿ ಹೆಚ್ಚು ಬಂದಿದ್ದರೂ ನನ್ನ ಕಳೆದುಹೋದ ಜೀವನ ಮರಳಿ ಬರುತ್ತಿರಲಿಲ್ಲ' ಎಂದು ಉತ್ತರಿಸಿದ್ದಾನೆ. ವಿಶೇಷವೆಂದರೆ, ಆ ₹464 ರೂಪಾಯಿಗಳನ್ನು ಆತ ನೇರವಾಗಿ ದೇವಸ್ಥಾನಕ್ಕೆ ಹೋಗಿ ಹುಂಡಿಗೆ ಹಾಕಿದ್ದಾನೆ. 'ಇದು ಮುಂದಿನ ಪ್ರಯತ್ನದ ಯಶಸ್ಸಿಗಾಗಿ ಹಾಕಿದ ಹರಕೆಯಲ್ಲ, ಏಕೆಂದರೆ ನನ್ನ UPSC ಅಧ್ಯಾಯ ಇಂದಿಗೆ ಸಂಪೂರ್ಣ ಮುಕ್ತಾಯವಾಗಿದೆ' ಎಂದು ಆತ ಬರೆದುಕೊಂಡಿದ್ದಾನೆ.

ಈ ಪೋಸ್ಟ್ ಈಗ ದೇಶಾದ್ಯಂತ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಕಣ್ಣಂಚಿನಲ್ಲಿ ನೀರು ತರಿಸಿದ್ದು, ಸ್ಪರ್ಧೆಯ ಹಿಂದಿನ ಮಾನಸಿಕ ಯಾತನೆ ಹಾಗೂ ತ್ಯಾಗದ ಬಗ್ಗೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.

PREV
Read more Articles on
click me!

Recommended Stories

ಲಕ್ಷಗಟ್ಟಲೆ ಜನರ ಮುಂದೆ ಕನ್ನಡ ನಟ 'ಯಶ್ ಸಿನಿಮಾ ಮಾಡೋದು ಫಿಕ್ಸ್‌' ಎಂದು ಘೋಷಿಸಿದ ತೆಲುಗು ನಿರ್ಮಾಪಕ ದಿಲ್‌ ರಾಜು!
ಟ್ರಾನ್ಸ್‌ಫಾರ್ಮರ್ ಕದಿಯೋಕೆ ಹೋದ್ರು; ಕೆಸರು ‘ನೋ ಎಂಟ್ರಿ’ ಅಂದಿತು! ಕಳ್ಳರ ಕಾರು-ಟ್ರಕ್‌ ಎರಡೂ ಸಿಕ್ಕಿಬಿತ್ತು