ದಿನಕ್ಕೆ 14 ಗಂಟೆ ದುಡಿಸಿಕೊಂಡು ಶಾಕ್ ಕೊಟ್ಟ ಮ್ಯಾನೇಜರ್: ಆಫೀಸ್ ಕೆಲಸದ ಹೆಸರಲ್ಲಿ ಮಾಡಿಸಿದ್ದೇನು ಗೊತ್ತಾ?!

Published : Sep 06, 2026, 08:46 AM IST
Toxic Workplace

ಸಾರಾಂಶ

ಉದ್ಯೋಗಿಯೊಬ್ಬರು ದಿನಕ್ಕೆ 14 ಗಂಟೆಗಳ ಕಾಲ, ಸುಮಾರು ಎರಡು ವರ್ಷಗಳ ಕಾಲ ಹೆಚ್ಚುವರಿ ಕೆಲಸ ಮಾಡಿದ್ದಾರೆ. ಆದರೆ ಆ ಕೆಲಸ ಕಂಪನಿಯದ್ದಲ್ಲ, ಬದಲಿಗೆ ತಮ್ಮ ಮ್ಯಾನೇಜರ್ ಪತಿಯ ವೈಯಕ್ತಿಕ ಬ್ರ್ಯಾಂಡ್‌ಗೆ ಸಂಬಂಧಿಸಿದ್ದು ಎಂದು ತಿಳಿದು ಆಘಾತಕ್ಕೊಳಗಾಗಿದ್ದಾರೆ. ರೆಡ್ಡಿಟ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನವದೆಹಲಿ: ನೀವು ಆಫೀಸ್‌ನಲ್ಲಿ ದಿನಕ್ಕೆ 8 ಗಂಟೆ ಬದಲು ಹೆಚ್ಚುವರಿಯಾಗಿ ಎರಡು ಗಂಟೆ ಮ್ಯಾನೇಜರ್‌ ಹೇಳಿದರೆಂದು ಕಂಪನಿಗಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಪ್ರತಿ ದಿನವೂ ಎರಡು ತಾಸು ಕೆಲಸ ಮಾಡಿ ಸುಮಾರು ಎರಡು ವರ್ಷಗಳ ನಂತರ ಹೆಚ್ಚುವರಿಯಾಗಿ ಮಾಡಿದ ಎರಡು ತಾಸು ಕೆಲಸ ಕಂಪನಿಗೆ ಸಂಬಂಧಿಸಿದ್ದಲ್ಲ, ಮ್ಯಾನೇಜರ್ ಪತಿಯ ಬ್ರ್ಯಾಂಡ್‌ಗೆ ಸಂಬಂಧಿಸಿದ್ದು ತಿಳಿದಾಗ ಹೇಗೆನಿಸುತ್ತೆ? ಮೈಯೆಲ್ಲ ಉರಿದುಹೋಗುತ್ತಲ್ಲ? ಅಂತಹದ್ದೇ ಘಟನೆ ನಡೆದಿದ್ದು ಉದ್ಯೋಗಿಯೊಬ್ಬರು ರೆಡ್ಡಿಟ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.

ದಿನಕ್ಕೆ 14 ಗಂಟೆಗಳ ಕಾಲ ಕೆಲಸ ಮಾಡಿಸಿದರೂ ಅಪ್ರೈಸಲ್ ನೀಡಲಿಲ್ಲ. ತನ್ನ ಕೆಲಸದ ಜೊತೆಗೆ ಮ್ಯಾನೇಜರ್‌ನ ಕೆಲಸವನ್ನೂ ಮಾಡಿಸಿಕೊಂಡು, ಕೊನೆಗೆ ಆ ಕೆಲಸ ತನ್ನ ಪತಿಯ ವೈಯಕ್ತಿಕ ಬ್ರ್ಯಾಂಡ್‌ಗೆ ಸಂಬಂಧಿಸಿದ್ದೆಂದು ತಿಳಿದುಬಂದಿದೆ ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ಇದೀಗ ಈ ವಂಚನೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ..

ಬರೋಬ್ಬರಿ ಎರಡು ವರ್ಷ ಹೆಚ್ಚುವರಿ ಕೆಲಸ!

‘Toxic Workplace’ ಎಂಬ ರೆಡ್ಡಿಟ್ ಗ್ರುಪ್‌ನಲ್ಲಿ ಉದ್ಯೋಗಿಯೊಬ್ಬರು ತಮಗಾದ ಈ ಅನುಭವವನ್ನು ಹಂಚಿಕೊಂಡಿದ್ದಾರೆ. ಎರಡು ವರ್ಷಕ್ಕೂ ಹೆಚ್ಚು ಕಾಲ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿರುವ ಅವರು, ಕೆಲಸಕ್ಕೆ ಸೇರಿದ ಒಂದು ತಿಂಗಳಲ್ಲೇ ತಮ್ಮ ಮ್ಯಾನೇಜರ್ ಹೆಚ್ಚುವರಿ ಕೆಲಸಗಳನ್ನು ನೀಡಲು ಆರಂಭಿಸಿದ್ದರು ಎಂದು ತಿಳಿಸಿದ್ದಾರೆ.

ಆರಂಭದಲ್ಲಿ ಹೊಸದಾಗಿ ಕಂಪನಿ ಸೇರಿದ್ದರಿಂದ ಅದು ಮ್ಯಾನೇಜರ್‌ನ ಕೆಲಸ ಇರಬಹುದು ಎಂದು ಭಾವಿಸಿ ಹೆಚ್ಚುವರಿ ಕೆಲಸ ಮಾಡುತ್ತಿದ್ದೆ. ಆದರೆ ಬರಬರುತ್ತಾ ಆಕೆ ನನಗೆ ನೀಡುತ್ತಿದ್ದ ಕೆಲಸಗಳಲ್ಲಿ ಕೆಲವು ವೈಯಕ್ತಿಕ ಕೆಲಸಗಳೂ ಸೇರಿರುವುದು ಗೊತ್ತಾಯಿತು ಎಂದು ಉದ್ಯೋಗಿ ಹೇಳಿದ್ದಾರೆ.

ದಿನಕ್ಕೆ 14 ಗಂಟೆ ಕೆಲಸ!

ಮ್ಯಾನೇಜರ್ ಕೊಡುತ್ತಿದ್ದ ಈ ಹೆಚ್ಚುವರಿ ಕೆಲಸದಿಂದಾಗಿ ನನ್ನ ಕೆಲಸದ ಅವಧಿ ದಿನಕ್ಕೆ 14 ಗಂಟೆಗಳವರೆಗೆ ಹೆಚ್ಚಾಗಿತ್ತು. ಇಷ್ಟು ಒತ್ತಡದೊಂದಿಗೆ ಸುಮಾರು ಎರಡು ವರ್ಷ ಕೆಲಸ ಮಾಡಿದ್ದೇನೆ. ಪ್ರತಿದಿನ ನನ್ನ ಕೆಲಸದ ಜೊತೆಗೆ ಮತ್ತೊಬ್ಬರ ಕೆಲಸವನ್ನು ಮುಗಿಸಲು 9 ಗಂಟೆ ಸಾಕಾಗುತ್ತಿರಲಿಲ್ಲ. ಹೀಗಾಗಿ ರಾತ್ರಿ 10 ಗಂಟೆ ಆಗುತ್ತಿತ್ತು. ಕೆಲವೊಮ್ಮೆ ಅದು 11 ಗಂಟೆವರೆಗೂ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ಉದ್ಯೋಗವಾಗಿದ್ದರಿಂದ ಇದೆಲ್ಲ ಸಾಮಾನ್ಯ ಎಂದೇ ಭಾವಿಸಿದ್ದೆ. ಆದರೆ ನಿಧಾನವಾಗಿ ಕೆಲಸ ಒತ್ತಡ ತೀವ್ರತೆ ಹೆಚ್ಚುತ್ತ ಹೋಯ್ತು, ಯಾಕಿಷ್ಟು ಹೆಚ್ಚುವರಿ ಕೆಲಸ ಅಂತಾ ಆತಂಕ ಶುರುವಾಯಿತು ಎಂದು ಹೇಳಿದ್ದಾರೆ.

ಕಳಪೆ ರೇಟಿಂಗ್, ಅಪ್ರೈಸಲ್ ಕೂಡ ಇಲ್ಲ

ನೋಡಿ, ನನ್ನ ಕೆಲಸದ ಜೊತೆಗೆ ಮ್ಯಾನೇಜರ್ ಕೆಲಸವನ್ನು ಎರಡು ವರ್ಷಗಳ ಕಾಲ ಮಾಡಿದ್ದರೂ ಕಂಪನಿಯಲ್ಲಿ ನನಗೆ ಯಾವುದೇ ಉತ್ತಮ ಮಾನ್ಯತೆ ಸಿಗಲಿಲ್ಲ. ಸಿಕ್ಕಿದ್ದು ಕಳಪೆ ರೇಟಿಂಗ್, ಅಪ್ರೈಸಲ್ ಕೂಡ ಇಲ್ಲ. ವಿಪರ್ಯಾಸವೆಂದು ಆಫೀಸ್‌ ವರ್ಕ್ ಸರಿಯಾಗಿ ಮಾಡಿಲ್ಲವೆಂದು ರೇಟಿಂಗ್ ಕಡಿಮೆ ಮಾಡಿದ್ದಲ್ಲ, ಮ್ಯಾನೇಜರ್ ನೀಡಿದ್ದ ಹೆಚ್ಚುವರಿ ಪ್ರಾಜೆಕ್ಟ್‌ನ್ನು ಸಂಪೂರ್ಣವಾಗಿ ಮುಗಿಸಲು ಸಾಧ್ಯವಾಗದ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಉದ್ಯೋಗಿ ಆರೋಪಿಸಿದ್ದಾರೆ.

ಕಂಪನಿಯ ಪ್ರಾಜೆಕ್ಟ್‌ ಅಲ್ಲ, ಪತಿಯ ವೈಯಕ್ತಿಕ ಬ್ರ್ಯಾಂಡ್!

ಕಂಪನಿಯ ಹೆಚ್ಚುವರಿ ಕೆಲಸವೆಂದು ನಂಬಿ ನಾನು ಮಾಡುತ್ತಿದ್ದ ಪ್ರಾಜೆಕ್ಟ್ ವಾಸ್ತವವಾಗಿ ಅದು ಕಂಪನಿಯ ಕೆಲಸವಾಗಿರಲಿಲ್ಲ. ಮ್ಯಾನೇಜರ್‌ ಪತಿಯ ವೈಯಕ್ತಿಕ ಬ್ರ್ಯಾಂಡ್‌ಗೆ ಸಂಬಂಧಿಸಿದ್ದಾಗಿತ್ತು ಎಂಬುದು ಇತ್ತೀಚೆಗೆ ತಿಳಿದುಬಂದಿದೆ. ಆದರೆ ನಾನು ಸುಮಾರು ಎರಡು ವರ್ಷಗಳ ಕಾಲ ಯಾವುದೇ ಸಂಬಳವಿಲ್ಲದೆ ಫ್ರೀಲ್ಯಾನ್ಸ್‌ ಉದ್ಯೋಗಿ ರೀತಿ ನಾನು ಅವರಿಗಾಗಿ ಕೆಲಸ ಮಾಡಿದ್ದೇನೆ ಅದರ ಅದು ನನಗೆ ತಡವಾಗಿ ಗೊತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದೇ ದಿನ 40ಕ್ಕೂ ಹೆಚ್ಚು ಕ್ರಿಯೇಟಿವ್‌ಗಳ ಬೇಡಿಕೆ

ಮ್ಯಾನೇಜರ್‌ ದಿನಕ್ಕೆ 40ಕ್ಕೂ ಹೆಚ್ಚು ಕ್ರಿಯೇಟಿವ್‌ಗಳನ್ನು ಸಿದ್ಧಪಡಿಸುವಂತೆ ಒತ್ತಾಯಿಸುತ್ತಿದ್ದರು. ಇಷ್ಟೆಲ್ಲ ಕೆಲಸ ಮಾಡಿದ್ರೂ ನನ್ನ ವೀಕಾಫ್ ಬಿಡಿ, ನನ್ನ ಯಾವುದೇ ರಜೆ ಅರ್ಜಿಗಳನ್ನ ಅಪ್ರೋವ್ಡ್ ಮಾಡದೆ ಪದೇಪದೆ ತಿರಸ್ಕರಿಸುತ್ತಿದ್ದರು. ಡೆಡ್‌ಲೈನ್‌ಗಳ ನೆಪ ಹೇಳಿ ರಜೆ ನೀಡದೇ, ಕೆಲವೊಮ್ಮೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸುತ್ತಿದ್ದರು. ನಂತರ ಈ ಡೆಡ್‌ಲೈನ್‌ಗಳು ಕಂಪನಿಯ ಕೆಲಸಕ್ಕೋ ಅಥವಾ ಮ್ಯಾನೇಜರ್‌ ಅವರ ವೈಯಕ್ತಿಕ ಬ್ರ್ಯಾಂಡ್‌ಗೋ ಎಂಬ ಅನುಮಾನ ಬಂತು ಎಂದು ಉದ್ಯೋಗಿ ತಾನು ಅನುಭವಿಸಿದ ಹೆಚ್ಚುವರಿ ಕೆಲಸದ ನರಕಯಾತನೆ ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆ ಬ್ಯಾನ್ ಮಾಡಿಸಬೇಕೇ?

ಮ್ಯಾನೇಜರ್‌ ಅವರ ಪತಿಯ ಬ್ರ್ಯಾಂಡ್‌ಗೆ ಸಂಬಂಧಿಸಿದ ಖಾತೆ ಇನ್‌ಸ್ಟಾಗ್ರಾಂನಲ್ಲಿ ಇರುವುದನ್ನು ಕಂಡ ಉದ್ಯೋಗಿ, ಮುಂದೇನು ಮಾಡಬೇಕು ಎಂದು ರೆಡ್ಡಿಟ್ ಬಳಕೆದಾರರ ಸಲಹೆ ಕೇಳಿದ್ದಾರೆ. ಅವರ ಖಾತೆ ಇನ್‌ಸ್ಟಾಗ್ರಾಂನಲ್ಲಿದೆ. ನಾನು ಈಗ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇನೆ. ಅವರ ಖಾತೆಯನ್ನು ಬ್ಯಾನ್ ಮಾಡಿಸಬೇಕೇ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿಟ್ ಬಳಕೆದಾರರು, ಇನ್‌ಸ್ಟಾಗ್ರಾಂ ಖಾತೆಯನ್ನು ವರದಿ ಮಾಡುವ ಬದಲು ಕೆಲಸದ ಸ್ಥಳದಲ್ಲಿ ನಡೆದಿರುವ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಒಬ್ಬ ಬಳಕೆದಾರರು, 'ಯಾವುದೇ ಕೆಲಸವನ್ನು ಮ್ಯಾನೇಜರ್ ಹೇಳಿದರೆಂದು ಮಾಡ್ಬೇಡಿ, ಆ ಕೆಲಸ ಆಫೀಸ್‌ಗೆ ಸಂಬಂಧಿಸಿದ್ದೋ ಅಲ್ಲವೋ ಎಂಬುದನ್ನು ಲಿಖಿತವಾಗಿ ಕೇಳಿ ತಿಳಿದುಕೊಂಡು ಕೆಲಸ ಮಾಡಿ' ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬರು, 'ನಿಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಈ ದುರುಪಯೋಗ, ವಂಚನೆ ಬಗ್ಗೆ HRಗೆ ಏಕೆ ವರದಿ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ.

ಗಮನಿಸಿ: ಈ ವರದಿ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿರುವ ಮಾಹಿತಿಯನ್ನು ಆಧರಿಸಿದೆ. ಈ ಆರೋಪಗಳನ್ನುಸ್ವತಂತ್ರವಾಗಿ ಪರಿಶೀಲಿಸಿಲ್ಲ.

PREV
Read more Articles on
click me!

Recommended Stories

20 ವರ್ಷದ ಯುವತಿ ಹೊಟ್ಟೆಯಲ್ಲಿ 1.16 ಕೆಜಿ ಕೂದಲು; 11 ವರ್ಷಗಳಿಂದ ತನ್ನ ಕೂದಲನ್ನೇ ತಿನ್ನುತ್ತಿದ್ದ ಹುಡುಗಿ
ಅನ್ನ ನೀರು ಬಿಟ್ಟು ಕೂತ ಕುಟುಂಬ; ಕಾಣೆಯಾದ ಪ್ರೀತಿಯ ನಾಯಿ ಹುಡುಕಿ ಕೊಟ್ಟವರಿಗೆ ಬಹುಮಾನ