20 ವರ್ಷದ ಯುವತಿ ಹೊಟ್ಟೆಯಲ್ಲಿ 1.16 ಕೆಜಿ ಕೂದಲು; 11 ವರ್ಷಗಳಿಂದ ತನ್ನ ಕೂದಲನ್ನೇ ತಿನ್ನುತ್ತಿದ್ದ ಹುಡುಗಿ

Published : Sep 05, 2026, 11:44 PM IST
Hairball in stomach

ಸಾರಾಂಶ

ದೆಹಲಿಯ ದ್ವಾರಕಾದಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಹೊಟ್ಟೆಯಿಂದ ಸುಮಾರು 1.16 ಕೆಜಿ ತೂಕದ ಬೃಹತ್ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ.

ದೆಹಲಿಯ ದ್ವಾರಕಾದಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಹೊಟ್ಟೆಯಿಂದ ಸುಮಾರು 1.16 ಕೆಜಿ ತೂಕದ ಬೃಹತ್ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ. ಈ ಘಟನೆಯು ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದೆ.

11 ವರ್ಷಗಳ ವಿಚಿತ್ರ ಅಭ್ಯಾಸ!

ವರದಿಗಳ ಪ್ರಕಾರ..ಈ ಯುವತಿಗೆ ತನ್ನ 9ನೇ ವಯಸ್ಸಿನಿಂದಲೇ ತನ್ನ ಕೂದಲನ್ನು ತಾನೇ ಕಿತ್ತು ತಿನ್ನುವ ವಿಚಿತ್ರ ಅಭ್ಯಾಸವಿತ್ತು. ಕಳೆದ 11 ವರ್ಷಗಳಿಂದ ಈಕೆ ನಿರಂತರವಾಗಿ ಕೂದಲು ತಿನ್ನುತ್ತಿದ್ದಳು. ಕೂದಲು ಜೀರ್ಣವಾಗದ ಕಾರಣ, ಅವು ಹೊಟ್ಟೆಯಲ್ಲಿ ಒಂದಕ್ಕೊಂದು ಸಿಕ್ಕಿಹಾಕಿಕೊಂಡು ಕಾಲಕ್ರಮೇಣ ದೊಡ್ಡ ಮತ್ತು ಗಟ್ಟಿಯಾದ ಉಂಡೆಯಾಗಿ ಮಾರ್ಪಟ್ಟಿದ್ದವು.

ಕಂಡುಬಂದ ಲಕ್ಷಣಗಳು

ಕಳೆದ ಕೆಲವು ದಿನಗಳಿಂದ ಯುವತಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇದರೊಂದಿಗೆ ವಾಂತಿ, ವಾಕರಿಕೆ ಮತ್ತು ವಿಪರೀತ ಸುಸ್ತು ಕಾಣಿಸಿಕೊಳ್ಳುತ್ತಿತ್ತು. ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗದ ಕಾರಣ ಆಕೆಯ ತೂಕ ಗಣನೀಯವಾಗಿ ಇಳಿಕೆಯಾಗಿತ್ತು. ಇದರಿಂದ ಆತಂಕಗೊಂಡ ಪೋಷಕರು ಆಕೆಯನ್ನು ದ್ವಾರಕಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು.

ಪರೀಕ್ಷೆಯ ವೇಳೆ ಬಯಲಾದ ಸತ್ಯ

ವೈದ್ಯರು ಆರಂಭದಲ್ಲಿ ಯುವತಿಯ ಹೊಟ್ಟೆಯನ್ನು ಪರೀಕ್ಷಿಸಿದಾಗ ಗಟ್ಟಿಯಾದ ಗಡ್ಡೆ ಪತ್ತೆಯಾಗಿತ್ತು. ನಂತರ ಎಂಡೋಸ್ಕೋಪಿ (Endoscopy) ನಡೆಸಿದಾಗ ಹೊಟ್ಟೆಯ ತುಂಬೆಲ್ಲಾ ಕೂದಲು ತುಂಬಿಕೊಂಡಿರುವುದು ಕಂಡುಬಂದಿದೆ. ಯುವತಿಯನ್ನು ವಿಚಾರಿಸಿದಾಗ ತಾನು ಕಳೆದ 11 ವರ್ಷಗಳಿಂದ ಕೂದಲು ತಿನ್ನುತ್ತಿರುವುದನ್ನು ಒಪ್ಪಿಕೊಂಡಿದ್ದಾಳೆ.

ಜೀರ್ಣಾಂಗವ್ಯೂಹವನ್ನೇ ಆಕ್ರಮಿಸಿದ್ದ ಕೂದಲು

ಮಣಿಪಾಲ್ ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಸಂದೀಪ್ ಅಗರ್ವಾಲ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು. ಈ ಕೂದಲಿನ ಉಂಡೆ ಎಷ್ಟು ದೊಡ್ಡದಾಗಿತ್ತೆಂದರೆ ಅದು ಆಹಾರದ ನಳಿಕೆಯಿಂದ ಹಿಡಿದು ಸಣ್ಣ ಕರುಳಿನವರೆಗೆ ಹರಡಿಕೊಂಡಿತ್ತು. ಎಂಡೋಸ್ಕೋಪಿ ಮೂಲಕ ಇದನ್ನು ತೆಗೆಯಲು ಸಾಧ್ಯವಾಗದ ಕಾರಣ, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ 1.16 ಕೆಜಿ ತೂಕದ ಕೂದಲಿನ ರಾಶಿಯನ್ನು ಹೊರತೆಗೆದಿದ್ದಾರೆ.

ಏನಿದು ಕಾಯಿಲೆ?

ವ್ಯಕ್ತಿಯು ಪದೇ ಪದೇ ತನ್ನ ಕೂದಲನ್ನು ತಾನೇ ತಿನ್ನುವ ಅಭ್ಯಾಸವನ್ನು ವೈದ್ಯಕೀಯ ಭಾಷೆಯಲ್ಲಿ 'ಟ್ರೈಕೊಫೇಜಿಯಾ' ಎನ್ನಲಾಗುತ್ತದೆ. ಇದೊಂದು ಮಾನಸಿಕ ಒತ್ತಡ ಅಥವಾ ಅಸ್ವಸ್ಥತೆಯ ಲಕ್ಷಣವಾಗಿದೆ. ಹೊಟ್ಟೆಯಲ್ಲಿ ಶೇಖರಣೆಯಾದ ಕೂದಲಿನ ಗಟ್ಟಿಯಾದ ಉಂಡೆಯನ್ನು 'ಟ್ರೈಕೊಬೆಜೋವರ್' ಎಂದು ಕರೆಯಲಾಗುತ್ತದೆ. ಕೂದಲು ಮಾನವನ ಜೀರ್ಣಾಂಗವ್ಯೂಹದಲ್ಲಿ ಕರಗುವುದಿಲ್ಲ. ಹೀಗಾಗಿ ಇಂತಹ ಅಭ್ಯಾಸವಿದ್ದರೆ ಅದು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಸದ್ಯ ಯುವತಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾಳೆ.

PREV
Read more Articles on
click me!

Recommended Stories

ದೀಪಾವಳಿ ಸೀಲಿಂಗ್ ಫ್ಯಾನ್ ಕ್ಲೀನಿಂಗ್‌ಗೆ ಈ ಹೆಲ್ಮೆಟ್ ಐಡಿಯಾ ಸೂಪರ್: ಮಹಿಳೆಯ ವಿಡಿಯೋ ಭಾರೀ ವೈರಲ್!
ಬೆಂಗಳೂರು ಟ್ರಾಫಿಕ್ ಕರಾಮತ್ತು: ಜೆಪಿ ನಗರ ತಲುಪುವಷ್ಟರಲ್ಲಿ ಮುಂಬೈಗೇ ಹೋಗಿ ಇಳಿದ ಫ್ರೆಂಡ್!