
‘₹10, ₹20 ಆದರೂ ಸಹಾಯ ಮಾಡಿ’ ಎಂದು ಮನವಿ
ಸಹೋದರ-ಸಹೋದರಿಯರ ನಡುವಿನ ಬಾಂಧವ್ಯ ಎಷ್ಟು ಗಾಢವಾಗಿರುತ್ತದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಉತ್ತರ ಪ್ರದೇಶದ 16 ವರ್ಷದ ಬಾಲಕನೊಬ್ಬ ತನ್ನ 12 ವರ್ಷದ ತಂಗಿಯ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣದಲ್ಲಿ ನೆರವು ಕೋರಿದ್ದಾನೆ. ಆತನ ಮನವಿಗೆ ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಕೇವಲ ಒಂದು ದಿನದಲ್ಲೇ ₹1.5 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ಆತ ತಿಳಿಸಿದ್ದಾನೆ.
ವರದಿಗಳ ಪ್ರಕಾರ, ಬಾಲಕನ ತಂಗಿಗೆ ಕೆಲವು ತಿಂಗಳ ಹಿಂದೆ ದೃಷ್ಟಿ ಮಸುಕಾಗಲು ಆರಂಭವಾಗಿತ್ತು. ಬಳಿಕ ದೆಹಲಿಯ ಡಾ. ಶ್ರಾಫ್ ಐಸ್ ಆಸ್ಪತ್ರೆಗೆ ಕರೆದೊಯ್ದಾಗ ಗ್ಲುಕೋಮಾ ಹಾಗೂ ಕಣ್ಣಿನೊಳಗಿನ ರಕ್ತಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆ ಪತ್ತೆಯಾಗಿದೆ ಎಂದು ಬಾಲಕ ತನ್ನ ಪೋಸ್ಟ್‌ನಲ್ಲಿ ಹೇಳಿದ್ದಾನೆ.
ಈಗ ಮುಂದಿನ ಶಸ್ತ್ರಚಿಕಿತ್ಸೆಗೆ ಸುಮಾರು ₹1.23 ಲಕ್ಷ ಅಗತ್ಯವಿದೆ ಎಂದು ಆಸ್ಪತ್ರೆಯ ಅಂದಾಜು ತಿಳಿಸಿದೆ. ಕುಟುಂಬದವರು ತಮ್ಮಿಂದ ಸಾಧ್ಯವಾದಷ್ಟು ಹಣ ಹೊಂದಿಸಿದ್ದರೂ ಇನ್ನೂ ಸುಮಾರು ₹73 ಸಾವಿರದ ಕೊರತೆ ಇತ್ತು ಎಂದು ಆತ ಮನವಿ ಮಾಡಿದ್ದ. ಈಗಾಗಲೇ ಚಿಕಿತ್ಸೆಗಾಗಿ ₹2.5 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ ಎಂದೂ ಆತ ತಿಳಿಸಿದ್ದಾನೆ.
ತಾನು 11ನೇ ತರಗತಿಯಲ್ಲಿ ಓದುತ್ತಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದೆ ಎಂದು ಬಾಲಕ ಹೇಳಿಕೊಂಡಿದ್ದಾನೆ. ದೊಡ್ಡ ಮೊತ್ತದ ಹಣ ಕೇಳುತ್ತಿಲ್ಲ, ಸಾಧ್ಯವಾದವರು ₹10 ಅಥವಾ ₹20 ನೀಡಿದರೂ ಸಾಕು. ಹಣ ನೀಡಲು ಸಾಧ್ಯವಾಗದಿದ್ದರೆ ಪೋಸ್ಟ್‌ನ್ನು ಶೇರ್ ಮಾಡುವಂತೆ ಮನವಿ ಮಾಡಿದ್ದ.
ಸೆಪ್ಟೆಂಬರ್ 21ರಂದು ಹಂಚಿಕೊಂಡ ಮನವಿಗೆ ಕೆಲವೇ ಗಂಟೆಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ಸಿಕ್ಕಿದೆ. ಮರುದಿನವೇ ₹1.5 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ಆತ ಅಪ್‌ಡೇಟ್ ಮಾಡಿದ್ದಾನೆ. ಅಗತ್ಯಕ್ಕಿಂತ ಹೆಚ್ಚಿನ ಹಣ ಬಂದಿರುವುದರಿಂದ ಪಾವತಿ ವಿವರಗಳನ್ನು ತೆಗೆದುಹಾಕಿದ್ದೇನೆ, ಇನ್ನು ಹಣ ಕಳುಹಿಸಬೇಡಿ ಎಂದು ಕೂಡ ತಿಳಿಸಿದ್ದಾನೆ.
ತನ್ನ ತಂಗಿಯ ಚಿಕಿತ್ಸೆಗಾಗಿ ನೆರವಾದವರು, ಪೋಸ್ಟ್ ಹಂಚಿಕೊಂಡವರು ಹಾಗೂ ಧೈರ್ಯ ತುಂಬಿದ ಪ್ರತಿಯೊಬ್ಬರಿಗೂ ಬಾಲಕ ಧನ್ಯವಾದ ತಿಳಿಸಿದ್ದಾನೆ. ಸಾಮಾಜಿಕ ಜಾಲತಾಣದ ಮೂಲಕ ಅಪರಿಚಿತರು ಒಗ್ಗೂಡಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ಈ ಘಟನೆ ಇದೀಗ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಎಂಬುದನ್ನೂ ವರದಿ ಉಲ್ಲೇಖಿಸಿದೆ.
Brothers, I’ve deleted all the posts containing my payment information, so please don’t send any more money. I’ve received more than I needed, and I’m genuinely overwhelmed by your kindness. ❤️
Thank you, every single person who helped, shared, donated, or even sent a kind msgs~ pic.twitter.com/8N1H7PeIGD— Jay Singh Rathore (@Jayrathore9068) September 22, 2026