ಸ್ವಿಗ್ಗಿ ಡೆಲಿವರಿ ಕೆಲಸ ಮಾಡಿ ಕೂಡಿಟ್ಟ ದುಡ್ಡಲ್ಲಿ ಅಮ್ಮನಿಗೆ ಸ್ಮಾರ್ಟ್‌ ಟಿವಿ ಗಿಫ್ಟ್! ಮಗನ ಪ್ರೀತಿಗೆ ಕಣ್ಣೀರಾದ ಕುಟುಂಬ, ವಿಡಿಯೋ ವೈರಲ್

Published : Aug 25, 2026, 07:22 PM IST
Swiggy delivery boy gifts new tv to mother

ಸಾರಾಂಶ

ಸ್ವಿಗ್ಗಿ ಡೆಲಿವರಿ ಏಜೆಂಟ್ ಆಗಿ ದುಡಿದ ಹಣದಲ್ಲಿ ಯುವಕನೊಬ್ಬ ತನ್ನ ತಾಯಿಗೆ ಹೊಸ ಟಿವಿ ಉಡುಗೊರೆಯಾಗಿ ನೀಡಿದ್ದಾನೆ. ಈ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಾಯಿ ಮತ್ತು ಅಜ್ಜಿಯ ಆನಂದಭಾಷ್ಪ ಲಕ್ಷಾಂತರ ಜನರ ಮನಗೆದ್ದಿದೆ.

ಸ್ವಿಗ್ಗಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುವ ಯುವಕನೊಬ್ಬ, ತನ್ನ ದುಡಿಮೆಯ ಹಣದಿಂದ ಅಮ್ಮನಿಗೆ ಹೊಸ ಟಿವಿ ಗಿಫ್ಟ್ ಕೊಟ್ಟಿದ್ದಾನೆ. ಈ ಭಾವುಕ ಕ್ಷಣದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ಸ್ಮಾರ್ಟ್ ಟಿವಿ ಖರೀದಿಸಿ ಮನೆಗೆ ತಂದಿದ್ದಾನೆ. ಆ ಟಿವಿಯನ್ನು ತನ್ನ ತಾಯಿ ಮತ್ತು ಅಜ್ಜಿ ಮುಂದೆ ಓಪನ್ ಮಾಡಿದಾಗ ಅವರಿಬ್ಬರೂ ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಈ ದೃಶ್ಯ ಲಕ್ಷಾಂತರ ಜನರ ಮನಗೆದ್ದಿದೆ.

ಸ್ವಿಗ್ಗಿ ದುಡಿಮೆಯಿಂದ ಬಂದ ಗಿಫ್ಟ್

‘ರಾ ಇಂಡಿಯಾ’ (Raw India) ಅನ್ನೋ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ, ಯುವಕ ಹೊಸ ಟಿವಿಯನ್ನು ಮನೆಗೆ ತಂದು ತನ್ನ ಕುಟುಂಬದವರಿಗೆ ಈ ಖುಷಿಯ ಸುದ್ದಿ ಹಂಚಿಕೊಳ್ಳುವುದನ್ನು ನೋಡಬಹುದು. ಸ್ವಿಗ್ಗಿಯಲ್ಲಿ ಕೆಲಸ ಮಾಡಿ ದಿನದ ಸಂಪಾದನೆಯಿಂದ ಸ್ವಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ಈ ಟಿವಿ ಖರೀದಿಸಿದ್ದಾಗಿ ಆತ ಹೇಳಿದ್ದಾನೆ. ತನ್ನ ಸ್ವಂತ ದುಡಿಮೆಯಿಂದ ಅಮ್ಮನಿಗೆ ಏನಾದರೊಂದು ಖುಷಿ ಕೊಡಬೇಕೆಂಬ ಆಸೆಯೇ ಈ ಪ್ರಯತ್ನದ ಹಿಂದಿದೆ.

ಖುಷಿಗೆ ಕಣ್ಣೀರಿಟ್ಟ ತಾಯಿ-ಅಜ್ಜಿ

ಮನೆಗೆ ಹೊಸ ಟಿವಿ ಬಂದ ಖುಷಿಯನ್ನು ತಾಯಿ ಮತ್ತು ಅಜ್ಜಿ ಮುಚ್ಚಿಡಲಿಲ್ಲ. ಅವರಿಬ್ಬರೂ ಭಾವುಕರಾಗಿ ಕಣ್ಣೀರು ಹಾಕಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಯಾವುದೇ ದೊಡ್ಡ ಆಡಂಬರವಿಲ್ಲದ ಸಾಮಾನ್ಯ ಮನೆಯಲ್ಲಿ ನಡೆದ ಈ ಪುಟ್ಟ ಸಂಭ್ರಮವೇ ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಹೆಚ್ಚು ಆಕರ್ಷಿಸಿದೆ. ಕುಟುಂಬದ ಮೇಲಿನ ಯುವಕನ ಪ್ರೀತಿ ಮತ್ತು ಆತನ ಕಠಿಣ ಪರಿಶ್ರಮವನ್ನು ಅನೇಕರು ಹೊಗಳಿದ್ದಾರೆ.

ಈ ವಿಡಿಯೋ ಅಪ್‌ಲೋಡ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಈಗಾಗಲೇ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ. ಸುಮಾರು ಒಂದು ಲಕ್ಷ ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ. 3,000ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. 'ಯಾವಾಗಲೂ ಹೀಗೆ ಯಶಸ್ಸಿನತ್ತ ಮುನ್ನಡೆಯಲಿ' ಎಂದು ಅನೇಕರು ಹಾರೈಸಿದ್ದಾರೆ. 'ಸಣ್ಣಪುಟ್ಟ ಸಾಧನೆಗಳನ್ನೂ ದೊಡ್ಡ ಯಶಸ್ಸಿನಂತೆ ಸಂಭ್ರಮಿಸಿ, ನಿರಂತರವಾಗಿ ಶ್ರಮಿಸಬೇಕು' ಎಂದು ಕೆಲವರು ಸಲಹೆ ನೀಡಿದ್ದಾರೆ. 'ಹಣದ ಪ್ರಮಾಣ ಮುಖ್ಯವಲ್ಲ, ಅದರಿಂದ ಸಿಗುವ ಸಂತೋಷವೇ ಮುಖ್ಯ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಹೀಗಿದೆ ನೋಡಿ ಆ ವೈರಲ್ ವಿಡಿಯೋ:

PREV
Read more Articles on
click me!

Recommended Stories

ಕೆಲಸದಿಂದ ನಿವೃತ್ತಿ? ಸಚಿವ ಗಡ್ಕರಿ ಹೇಳಿದ್ದೇ ಒಂದು, ವೈರಲ್​ ಆಗ್ತಿರೋದೇ ಇನ್ನೊಂದು! ಏನಿದರ ಅಸಲಿಯತ್ತು
ವಿಶೇಷ ಚೇತನನ ಬದುಕನ್ನೇ ಬದಲಿಸಿದ 10 ಸೆಕೆಂಡ್​ ವಿಡಿಯೋ: 10 ವರ್ಷಗಳಿಂದ ಕಾಣೆಯಾದವನ ಮನಕಲುಕುವ ಸ್ಟೋರಿ