
ಸೂರತ್ (ಗುಜರಾತ್): ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗು 'ಚಿನ್ನದ ಮಗು'ವಾಗಿರಬಹುದು, ಆದರೆ ಆ ಪ್ರೀತಿಯ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ? ಸೂರತ್‌ನಲ್ಲಿ ಉದ್ಯಮಿಯೊಬ್ಬ ಮಗನ ಹುಟ್ಟುಹಬ್ಬದ ಹೆಸರಿನಲ್ಲಿ ನಡುರಸ್ತೆಯಲ್ಲೇ ಪುಂಡಾಟಿಕೆ ನಡೆಸಿ, ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಸೂರತ್‌ನ ಡುಮಾಸ್ ಪ್ರದೇಶದಲ್ಲಿ ದೀಪಕ್ ಇಜಾರ್ದಾರ್ ಎಂಬ ಉದ್ಯಮಿ ತನ್ನ ಮಗನ ಹುಟ್ಟುಹಬ್ಬವನ್ನು ಆಚರಿಸಲು ಸಾರ್ವಜನಿಕ ರಸ್ತೆಯನ್ನೇ ಆಯ್ಕೆ ಮಾಡಿಕೊಂಡಿದ್ದ. ಜನನಿಬಿಡ ರಸ್ತೆಯಲ್ಲಿ ವಾಹನಗಳನ್ನು ತಡೆದು ನಿಲ್ಲಿಸಿದ ಈತ, ರಸ್ತೆಯ ಮಧ್ಯದಲ್ಲೇ ಪಟಾಕಿಗಳನ್ನು ಸಿಡಿಸಿ ಅಟ್ಟಹಾಸ ಮೆರೆದಿದ್ದಾನೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪಟಾಕಿಯ ಅಬ್ಬರಕ್ಕೆ ಬೆದರಿ ಹೋದರೂ, ಈತ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಂಭ್ರಮಾಚರಣೆಯಲ್ಲಿ ಮಗ್ನನಾಗಿದ್ದ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ದೀಪಕ್ ತನ್ನ ಕೈಯಲ್ಲಿ ಉರಿಯುತ್ತಿರುವ ಸ್ಪಾರ್ಕ್ಲರ್‌ಗಳನ್ನು (ಮತಾಪು) ಹಿಡಿದು ಆಕಾಶಕ್ಕೆ ತೋರಿಸುತ್ತಾ ರಸ್ತೆಯ ಮಧ್ಯೆ ನಿಂತಿರುವುದು ಕಂಡುಬಂದಿದೆ. ಈ ವೇಳೆ ದಾರಿ ಬಿಡುವಂತೆ ಕಾರು ಚಾಲಕನೊಬ್ಬ ಹಾರ್ನ್ ಮಾಡಿದಾಗ, ಉದ್ಯಮಿ ದೀಪಕ್ ಕೋಪಗೊಂಡು ಕೈಯಲ್ಲಿದ್ದ ಉರಿಯುವ ಮತಾಪನ್ನು ಕಾರಿನತ್ತಲೇ ಹಿಡಿದು ಚಾಲಕನಿಗೆ ಬೆದರಿಕೆ ಹಾಕಿದ್ದಾನೆ. ಈ ಉದ್ಧಟತನದ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಾನೊಬ್ಬ ಸೆಲೆಬ್ರಿಟಿ' ಎಂದು ಪೊಲೀಸರ ಮುಂದೆ ವಾದ
ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸೂರತ್ ಪೊಲೀಸರು ದೀಪಕ್ ಇಜಾರ್ದಾರ್‌ನನ್ನು ಬಂಧಿಸಿ ಲಾಕಪ್‌ಗೆ ಹಾಕಿದ್ದಾರೆ. ಆದರೆ, ಪೊಲೀಸರ ಎದುರೂ ತನ್ನ ದರ್ಪ ಮುಂದುವರಿಸಿದ ಈತ, ನಾನೊಬ್ಬ ಸೆಲೆಬ್ರಿಟಿ, ನಿಮ್ಮನ್ನು ಐದು ನಿಮಿಷ ತಡೆದರೆ ಯಾವ ಗಂಭೀರ ಅಪರಾಧ ಮಾಡಿದೆ? ಎಂದು ಪ್ರಶ್ನಿಸಿದ್ದಾನೆ. ಸಾರ್ವಜನಿಕ ಶಾಂತಿಗೆ ಭಂಗ ತಂದ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೆಟ್ಟಿಗರ ಆಕ್ರೋಶ ಮತ್ತು ಎಚ್ಚರಿಕೆ
ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಕೃತ್ಯಗಳನ್ನು ಎಸಗುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸೌಜನ್ಯವಿಲ್ಲದ ಸೆಲೆಬ್ರಿಟಿಗಿರಿ ಮನೆಯಲ್ಲಿರಲಿ, ರಸ್ತೆಯಲ್ಲಲ್ಲ ಎಂದು ಜನ ಕಿಡಿ ಕಾರುತ್ತಿದ್ದಾರೆ. ಈ ಘಟನೆಯು ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ವರ್ತನೆ ತೋರುವವರಿಗೆ ಒಂದು ಎಚ್ಚರಿಕೆಯ ಪಾಠವಾಗಿದೆ.