'​ಚಪ್ಪಲಿ ಹೊಲಿದು ಹಣ ಉಳಿಸೋ 19ರ ಯುವತಿ': Gen Z ಹುಡುಗಿಯ ಮಾತು ಕೇಳಿ ಬೆರಗಾದ ಜೋಹೋ ಸಿಇಒ ಶ್ರೀಧರ್ ವೆಂಬು

Published : Aug 03, 2026, 04:44 PM IST
Gen Z job

ಸಾರಾಂಶ

ಜೋಹೋ ಸಿಇಒ ಶ್ರೀಧರ್ ವೆಂಬು ಅವರು, ತಮ್ಮ ಕುಟುಂಬಕ್ಕಾಗಿ ದುಡಿಯುವ ಮತ್ತು ಪ್ರತಿ ರೂಪಾಯಿ ಉಳಿಸುವ 19 ವರ್ಷದ ಝೆನ್‌ ಜಿ ಉದ್ಯೋಗಿಯೊಬ್ಬರ ಕಥೆಯನ್ನು ಹಂಚಿಕೊಂಡಿದ್ದಾರೆ. ಕಠಿಣ ಪರಿಶ್ರಮ ಮತ್ತು ಜವಾಬ್ದಾರಿಯಂತಹ ಮೌಲ್ಯಗಳು ಯಾವುದೇ ಪೀಳಿಗೆಗೆ ಸೀಮಿತವಲ್ಲ ಎಂದು ಅವರು ಈ ಮೂಲಕ ಪ್ರತಿಪಾದಿಸಿದ್ದಾರೆ.

ಬೆಂಗಳೂರು: ಇತ್ತೀಚಿಗೆ ಝೆನ್‌ ಜಿಗಳು ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಕಾಂಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಗಳ ಬಳಿಕವಂತೂ ಝೆನ್‌-ಜಿಗಳು ಇದೀಗ ಮನೆಮಾತಾಗಿದ್ದಾರೆ. ಇದೀಗ ಜೋಹೋ ಸಿಇಒ ಶ್ರೀಧರ್ ವೆಂಬು ಅವರ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್‌, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, Gen Z ಯುವ ಸಮುದಾಯವನ್ನು ನಾವು ನೋಡುವ ದೃಷ್ಟಿಯೇ ಬದಲಾಗುವಂತೆ ಮಾಡಿದೆ.

Gen Z ಯುವತಿಯ ಮಾತು ಕೇಳಿ ಬೆರಗಾದ ಶ್ರೀಧರ್ ವೆಂಬು

ಈ ಕುರಿತಂತೆ ಸೋಷಿಯಲ್ ಮೀಡಿಯಾವಾದ 'ಎಕ್ಸ್‌'ನಲ್ಲಿ ಬರೆದುಕೊಂಡಿರುವ ಶ್ರೀಧರ್ ವೆಂಬು, 'ನಾನು ವಿವಿಧ ವಯೋಮಾನದ ಅನೇಕ ಜನರನ್ನು ಭೇಟಿಯಾಗುತ್ತಿರುತ್ತೇನೆ; ಹೀಗಾಗಿ, ವಯಸ್ಸಿನ ಆಧಾರದ ಮೇಲೆ ತಲೆಮಾರುಗಳನ್ನು ವರ್ಗೀಕರಿಸುವುದರಲ್ಲಿ ನನಗೆ ಅಷ್ಟೇನೂ ಅರ್ಥಪೂರ್ಣತೆ ಕಂಡುಬರುವುದಿಲ್ಲ' ಎಂದು ಹೇಳಿದ್ದಾರೆ.

 

ತಮ್ಮ ಪೋಷಕರು ಸಾಲವನ್ನು ತೀರಿಸಲು ಮತ್ತು ತಮ್ಮ ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳಲು ಸಾಧ್ಯವಾಗುವಂತೆ ಹಣ ಸಂಪಾದಿಸಲು ತಾನು ಕಷ್ಟಪಟ್ಟು ದುಡಿಯುತ್ತಿರುವುದಾಗಿ 19 ವರ್ಷದ ಉದ್ಯೋಗಿಯೊಬ್ಬರು ಕಳೆದ ವಾರ ನನಗೆ ಹೇಳಿದರು. ಅದು ಆಕೆಯ ಜೀವನದ ಅತ್ಯಂತ ಪ್ರಮುಖ ಆದ್ಯತೆಯಾಗಿದೆ. ಆಕೆ ಕಡಿಮೆ ಬೆಲೆಯ ಬಟ್ಟೆಗಳನ್ನು ಮಾತ್ರ ಖರೀದಿಸುತ್ತಾಳೆ, ಹಾಳಾದ ಚಪ್ಪಲಿಯನ್ನು ತಾನೇ ಹೊಲಿದುಕೊಂಡು ಸರಿಪಡಿಸಿಕೊಳ್ಳುತ್ತಾಳೆ. ಏಕೆಂದರೆ ಆಕೆ ಪ್ರತಿಯೊಂದು ರೂಪಾಯಿಯನ್ನೂ ಉಳಿಸಲು ಬಯಸುತ್ತಾಳೆ. ನಾನು ನಿಮ್ಮ ಹೆತ್ತವರನ್ನು ಭೇಟಿ ಮಾಡಿ, ತಮ್ಮ ಮಗಳ ಬಗ್ಗೆ ನೀವು ಹೆಮ್ಮೆಪಡಿ ಎಂದು ಹೇಳಬೇಕು ಎಂದು ಆಕೆಯ ಬಳಿ ಹೇಳಿದೆ ಎಂದು ಶ್ರೀಧರ್ ವೆಂಬು ಬರೆದುಕೊಂಡಿದ್ದಾರೆ.

ಇನ್ನು ಮತ್ತೊಂದು ಘಟನೆಯನ್ನು ಉಲ್ಲೇಖಿಸಿರುವ ಶ್ರೀಧರ್, 'ಇತ್ತೀಚೆಗೆ ನಮ್ಮ ಇಬ್ಬರು ಉದ್ಯೋಗಿಗಳ (ಸುಮಾರು 25 ವರ್ಷ ವಯಸ್ಸಿನವರು) ವಿವಾಹಗಳು ನಡೆದವು. ಮದುವೆಯನ್ನು ಸರಳವಾಗಿ ಇಟ್ಟುಕೊಳ್ಳಬೇಕು ಮತ್ತು ಹೆಚ್ಚು ಹಣ ಖರ್ಚು ಮಾಡಬಾರದು ಎಂಬ ನನ್ನ ಸಲಹೆಯನ್ನು ತಾವು ಪಾಲಿಸಿದ್ದಾಗಿ ಅವರಿಬ್ಬರೂ ನನಗೆ ತಿಳಿಸಿದರು. ಈ ಮನೋಭಾವಗಳು ಕಾಲಾತೀತವಾದವು. Gen-Z ನವರಲ್ಲೂ ಇವುಗಳನ್ನು ನಾನು ಸಮಾನವಾಗಿ ಕಾಣುತ್ತೇನೆ ಎಂದು ಶ್ರೀಧರ್ ಹೇಳಿದ್ದಾರೆ.

ಶ್ರೀಧರ್ ಪೋಸ್ಟ್‌ ಬಗ್ಗೆ ಪರ-ವಿರೋಧ ಚರ್ಚೆ

ಶ್ರೀಧರ್ ಅವರು ಹಂಚಿಕೊಂಡಿರುವ ಈ ಸೋಷಿಯಲ್ ಮೀಡಿಯಾ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪರವಿರೋಧದ ಚರ್ಚೆ ಹುಟ್ಟು ಹಾಕಿದೆ. 'ಸರಿಯಾದ ಮಾತು👍 'ಜೆನ್-ಝಡ್' ​​(Gen-Z) ನಂತಹ ವರ್ಗೀಕರಣಗಳು ಮೂಲ ವಿಷಯವನ್ನೇ ತಪ್ಪಿಸುತ್ತವೆ. ಕಠಿಣ ಪರಿಶ್ರಮ, ಹಣ ಉಳಿತಾಯ ಮತ್ತು ಕುಟುಂಬದ ಬಗ್ಗೆ ಕಾಳಜಿ ವಹಿಸುವುದು - ಇವೆಲ್ಲವೂ ಕಾಲಾತೀತ ಮಾನವ ಮೌಲ್ಯಗಳೇ ಹೊರತು, ಕೇವಲ ನಿರ್ದಿಷ್ಟ ವಯೋಮಾನದವರಿಗೆ ಸೀಮಿತವಾದ ಪ್ರವೃತ್ತಿಗಳಲ್ಲ. ನಾವು ಜನರನ್ನು ವ್ಯಕ್ತಿಗಳಾಗಿಯೇ ನೋಡಬೇಕು.' ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

'ಪುಷ್ಪ-ಧುರಂಧರ್' ದಾಖಲೆ ಅಳಿಸಿಹಾಕಿದ 'ರಾಮಾಯಣ'.. ಯಶ್ ಚಿತ್ರಕ್ಕೆ ಇಷ್ಟೊಂದು ಆಡಿಯೋ ರೈಟ್ಸ್!
ಸೊಳ್ಳೆಗಳು ಕೆಲವರನ್ನೇ ಹುಡುಕಿ ಹುಡುಕಿ ಕಚ್ಚೋದು ಯಾಕೆ? ಅದಕ್ಕೆ ಐದು ರಹಸ್ಯಗಳು..!