
ದೈಹಿಕ ನ್ಯೂನತೆ ಇದ್ದವರು ಸಾಧನೆ ಮಾಡಿದ ಸುದ್ದಿಗಳು ಆಗಾಗ ಸಮಾಜಕ್ಕೆ ಎಚ್ಚರಿಕೆ ಕೊಡುತ್ತಿದ್ದರೂ, ಅಂಥಹವನ್ನು ಕೀಳಾಗಿ ನೋಡುವ ಮನೋಭಾವ ಮಾತ್ರ ಬದಲಾಗಿಲ್ಲ. ಇಲ್ಲೊಬ್ಬ ಯುವತಿ 3 ಅಡಿ ಎತ್ತರವಿದ್ದಾಳೆಂದು ಮೂದಲಿಸುತ್ತಿದ್ದ ಜನರೇ ಇದೀಗ ಮುಟ್ಟಿ ನೋಡಿಕೊಳ್ಳುವಂತಹ ಸಾಧನೆಯನ್ನು ಮಾಡಿದ್ದಾಳೆ.
ಬಿಹಾರ ಸಾರ್ವಜನಿಕ ಸೇವಾ ಆಯೋಗ (BPSC) ನಡೆಸಿದ 67ನೇ ಜಂಟಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರೋಬ್ಬರಿ 330ನೇ ರ‍್ಯಾಂಕ್ (330th Rank) ಗಳಿಸುವ ಮೂಲಕ ಶ್ವೇತಾ ಕೌರ್ (Shweta Kaur), ಸಾಮಾಜಿಕ ಭದ್ರತಾ ಕೋಶದಲ್ಲಿ (Social Security Cell) ಸಹಾಯಕ ನಿರ್ದೇಶಕಿಯಾಗಿ (Assistant Director) ಆಯ್ಕೆಯಾಗಿದ್ದಾರೆ. ಅಪಹಾಸ್ಯ ಮಾತುಗಳನ್ನೇ ತಮ್ಮ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡ 27 ವರ್ಷದ ಶ್ವೇತಾ, ಇಂದು ಲಕ್ಷಾಂತರ ಯುವಜನತೆಗೆ ದಾರಿದೀಪವಾಗಿದ್ದಾರೆ.
ಶ್ವೇತಾ ಅವರ ಎತ್ತರ ಕೇವಲ 3.5 ರಿಂದ 4 ಅಡಿ. ಅವರು ದಿವ್ಯಾಂಗ (Differently Abled) ವರ್ಗಕ್ಕೆ ಸೇರಿದವರಾಗಿದ್ದರೂ, ತಮ್ಮ ಅದ್ಭುತ ಪ್ರತಿಭೆಯಿಂದ ಸಾಮಾನ್ಯ (General Merit) ವಿಭಾಗದಲ್ಲೇ ರ‍್ಯಾಂಕ್ ಪಡೆದು ಆಯ್ಕೆಯಾಗಿದ್ದಾರೆ. 'ಜನರು ನನ್ನ ಎತ್ತರವನ್ನು ನೋಡಿ ತಮಾಷೆ ಮಾಡುತ್ತಿದ್ದರು. ಆದರೆ, ನನ್ನ ಪೋಷಕರು ಎಂದಿಗೂ ನನ್ನಲ್ಲಿ ನಕಾರಾತ್ಮಕ ಭಾವನೆ ಮೂಡಲು ಬಿಡಲಿಲ್ಲ. ಎತ್ತರ ಎಂಬುದು ಒಂದು ಕೊರತೆಯೇ ಅಲ್ಲ ಎಂದು ಧೈರ್ಯ ತುಂಬಿದರು. ಇಂದು ನನ್ನನ್ನು ಹೀಯಾಳಿಸಿದವರೇ ಅಭಿನಂದಿಸುತ್ತಿದ್ದಾರೆ' ಎಂದು ಶ್ವೇತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಶ್ವೇತಾ ಅವರ ತಂದೆ ಓಂ ಪ್ರಕಾಶ್ ಲಾಲ್ ಸಣ್ಣ ಬಟ್ಟೆ ಅಂಗಡಿ ನಡೆಸುತ್ತಿದ್ದು, ತಾಯಿ ರೇಣು ದೇವಿ ಗೃಹಿಣಿಯಾಗಿದ್ದಾರೆ. ನಾಲ್ಕು ಹೆಣ್ಣುಮಕ್ಕಳಲ್ಲಿ ಶ್ವೇತಾ ಅವರೇ ಹಿರಿಯವರು. ಶಾಲಾ ದಿನಗಳಿಂದಲೂ ಶೇಕಡಾ 75 ಕ್ಕಿಂತ ಹೆಚ್ಚು ಅಂಕ ಪಡೆಯುತ್ತಿದ್ದ ಶ್ವೇತಾ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (BHU) ಪದವಿ ಮತ್ತು ಬಿ.ಎಡ್ (B.Ed) ಪೂರ್ಣಗೊಳಿಸಿದರು. ಯುಪಿಎಸ್‌ಸಿ (UPSC) ತರಬೇತಿಗಾಗಿ ದೆಹಲಿಗೆ ಹೋಗಬೇಕೆಂಬ ಆಸೆಯಿತ್ತಾದರೂ, ಕುಟುಂಬದ ಬಡತನ ಅದಕ್ಕೆ ಅಡ್ಡಿಯಾಯಿತು. ಆದರೂ ಧೃತಿಗೆಡದ ಅವರು ಮನೆಯಲ್ಲೇ ಕುಳಿತು ಸ್ವಯಂ ಅಧ್ಯಯನ (Self Study) ಆರಂಭಿಸಿದರು.
ತಮ್ಮ ಪರೀಕ್ಷಾ ಸಿದ್ಧತೆಯ ಬಗ್ಗೆ ಮಾತನಾಡುವ ಶ್ವೇತಾ, 'ನಾನು ಎಷ್ಟು ಗಂಟೆ ಓದಿದೆ ಎನ್ನುವುದಕ್ಕಿಂತ ಯಾವ ವಿಷಯವನ್ನು ಎಷ್ಟರಮಟ್ಟಿಗೆ ಅರ್ಥೈಸಿಕೊಂಡೆ ಎಂಬುದು ಮುಖ್ಯವಾಗಿತ್ತು. ದಿನಕ್ಕೆ 8 ರಿಂದ 10 ಗಂಟೆ ಓದುತ್ತಿದ್ದೆ. ಪ್ರಿಲಿಮ್ಸ್‌ಗೆ ತಥ್ಯಾತ್ಮಕ (Factual Approach) ಹಾಗೂ ಮೇನ್ಸ್ ಪರೀಕ್ಷೆಗೆ ವಿಶ್ಲೇಷಣಾತ್ಮಕ (Analytical Approach) ವಿಧಾನ ಬಳಸಿದೆ' ಎನ್ನುತ್ತಾರೆ. ಹಿಂದಿ ಸಾಹಿತ್ಯವನ್ನು ಐಚ್ಛಿಕ ವಿಷಯವನ್ನಾಗಿ (Optional Subject) ಆಯ್ದುಕೊಂಡಿದ್ದರು.
ಯಾವುದೇ ದೈಹಿಕ ಅಥವಾ ಆರ್ಥಿಕ ನ್ಯೂನತೆಗಳು ನಮ್ಮ ಗುರಿಗೆ ಅಡ್ಡಿಯಾಗಲು ಸಾಧ್ಯವಿಲ್ಲ ಎಂಬುದಕ್ಕೆ ಶ್ವೇತಾ ಕೌರ್ ಅವರ ಈ ಸಾಧನೆಯೇ ಜೀವಂತ ಸಾಕ್ಷಿ.