
ಶುಭಾಂಶು ಶುಕ್ಲಾ ಅವರು ಗಗನಯಾನ ಮಾಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ (ಐಎಸ್‌ಎಸ್) ಕೇಂದ್ರವನ್ನು ಸೇರಿಕೊಂಡಿದ್ದಾರೆ. ಆ ಮೂಲಕ ಐಎಸ್‌ಎಸ್ ಸೇರಿದ ಮೊದಲ ಭಾರತೀಯ ಅನ್ನಿಸಿಕೊಂಡಿದ್ದಾರೆ. ಈ ಹಿಂದೆ ಭಾರತ ಮೂಲದ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಸಾಕಷ್ಟು ಕಾಲ ಇದ್ದರು ನಿಜ. ಆದರೆ ಅವರು ಹೆಸರಿನಿಂದ ಮಾತ್ರ ಭಾರತೀಯರು; ಅವರ ಹುಟ್ಟಿ ಬೆಳೆದದ್ದೆಲ್ಲಾ ಅಮೆರಿಕದಲ್ಲೇ. ಅವರ ಪೌರತ್ವವೂ ಅಮೆರಿಕದ್ದೇ. ಹೀಗಾಗಿ ಶುಭಾಂಶು ಶುಕ್ಲಾ ಅವರೇ ಅಧಿಕೃತವಾಗಿ ಮೊದಲ ಭಾರತೀಯ.
ವಿಚಿತ್ರ ಅಂದರೆ ಅವರ ಜಾತಿಯ ಬಗ್ಗೆ ಆನ್‌ಲೈನ್‌ನಲ್ಲಿ ಶುರುವಾಗಿರುವ ಚರ್ಚೆ. ಶುಭಾಂಶು ಶುಕ್ಲಾ ಎಂಬ ಹೆಸರಿನಿಂದಲೇ ಅವರು ಬ್ರಾಹ್ಮಣ ಎಂಬುದು ಗೊತ್ತಾಗುತ್ತೆ. ಇನ್ನು ಈ ಹಿಂದೆ ಬಾಹ್ಯಾಕಾಶಕ್ಕೆ ಹೋದ ಭಾರತದ ಮೊದಲ ವ್ಯೋಮಯಾನಿ ರಾಕೇಶ್ ಶರ್ಮಾ ಅವರೂ ಬ್ರಾಹ್ಮಣನೇ. 1984ರಲ್ಲಿ ಅವರನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿತ್ತು. ಇಸ್ರೋ ಹೀಗೆ 75 ವರ್ಷಗಳಲ್ಲಿ ಬಾಹ್ಯಾಕಾಶಕ್ಕೆ ಕಳಿಸಿರುವ ಗಗನಯಾನಿಗಳು ಇಬ್ಬರೂ ಬ್ರಾಹ್ಮಣರೇ. ಯಾಕೆ ಇಸ್ರೋಗೆ ಬೇರೆ ಜಾತಿಯವರು ಯಾರೂ ಸಿಗಲಿಲ್ಲವೇ? ಭಾರತದಲ್ಲಿ ಬ್ರಾಹ್ಮಣರ ಶೇಕಡಾವಾರು ಜನಸಂಖ್ಯೆ 3 ಶೇಕಡಾ ಮಾತ್ರ. ಆದರೆ ಬಾಹ್ಯಾಕಾಶ ಯಾನದಲ್ಲಿ ಅವರ ಪರ್ಸೆಂಟೇಜ್ ನೂರು ಆಗಿದೆಯಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ, ದಲಿತ, ಮುಸ್ಲಿಮರಲ್ಲಿ ಯಾರೂ ಸಿಗಲಿಲ್ಲವೇ?
ಇದು ತಮಾಷೆಯಲ್ಲ. ಹೀಗಂತ ಒಬ್ಬರು ಒಂದು ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ʼಇದು ಮೆರಿಟ್ ಅಲ್ಲ, ಅಘೋಷಿತ ಮೀಸಲಾತಿʼ ಎಂದು ಅವರು ಆರೋಪಿಸಿದ್ದಾರೆ. ಮೊದಲಿಗೆ ಇದು ವಿಡಂಬನೆಯ ಪೋಸ್ಟ್ ಇರಬಹುದು ಎಂದೇ ಜನ ಭಾವಿಸಿದ್ದಾರೆ. ಆದರೆ ಪೋಸ್ಟ್ ಹಾಕಿದವರು ನಿಜಕ್ಕೂ ಸೀರಿಯಸ್ಸಾಗಿ ಇದನ್ನು ಹಾಕಿದ್ದಾರೆ.
ಈ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳೂ ವಿಶಿಷ್ಟವಾಗಿವೆ. ʼನಿಮ್ಮ ಪ್ರಶ್ನೆ ಸರಿಯಾಗಿದೆ. ದಲಿತರು, ಹಿಂದುಳಿದವರನ್ನು ವಿಜ್ಞಾನದಲ್ಲಿ ಪರಿಗಣಿಸಲೇಬೇಕಿದೆʼ ಎಂದಿದ್ದಾರೆ ಒಬ್ಬರು. ʼಬುದ್ಧಿವಂತಿಕೆ ಬ್ರಾಹ್ಮಣರ ಸೊತ್ತು ಎಂಬ ಭಾವನೆ ಇಸ್ರೋ ಸೇರಿದಂತೆ ಹಲವಾರು ವೈಜ್ಞಾನಿಕ ಸಂಸ್ಥೆಗಳಲ್ಲಿ ಬಲವಾಗಿ ಬೇರೂರಿದೆ. ಇದನ್ನು ತೊಡೆದುಹಾಕಬೇಕಿದೆʼ ಎಂಬುದು ಮತ್ತೊಂದು ಅಭಿಪ್ರಾಯ.
ಬಾಹ್ಯಾಕಾಶ ಯಾನದಲ್ಲಿಯೂ ಜಾತಿವಾರು ಮೀಸಲಾತಿ ಒದಗಿಸಬೇಕಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ʼಬ್ರಾಹ್ಮಣ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿ ಅಲ್ಲಿ ಸಂಧ್ಯಾವಂದನೆ, ಪೂಜೆ ಮಾಡ್ತಾ ಇರ್ತಾರೆ ಅಂತ ನೀವು ಭಾವಿಸಿದ್ದೀರಾ? ಅವರೂ ಮಾಡುವುದು ಇತರರು ಮಾಡುವಂತೆ ವೈಜ್ಞಾನಿಕ ಸಂಶೋಧನೆಗಳನ್ನೇʼ ಎಂದು ಇನ್ನೊಬ್ಬರು ವ್ಯಗ್ರರಾಗಿ ಕುಟುಕಿದ್ದಾರೆ. ʼರಾಕೇಶ್ ಶರ್ಮಾ, ಶುಭಾಂಶು ಶುಕ್ಲಾ ಬ್ರಾಹ್ಮಣ ಜಾತಿಯಲ್ಲಿ ಜನಿಸಿರಬಹುದು. ಆದರೆ ಅವರು ಆ ಎತ್ತರ ಸಾಧಿಸಿರುವುದು ಪ್ರತಿಭೆಯಿಂದ. ಇಂಥ ಪ್ರತಿಭೆ ಇರುವ ದಲಿತರು ಬಾಹ್ಯಾಕಾಶಕ್ಕೆ ಹೋಗುವ ಕಾಲ ಬೇಗನೆ ಬರಲಿʼ ಎಂದು ಇನ್ನೊಬ್ಬರು ಹಾರೈಸಿದ್ದಾರೆ.
ಈಗ ಬಾಹ್ಯಾಕಾಶಕ್ಕೆ ಹಾರಿದವರು ಯಾರ್‍ಯಾರು? ಅವರ ಕೆಲಸವಾದರೂ ಏನು?
1984ರಲ್ಲಿ ರಾಕೇಶ್ ಶರ್ಮಾ “ರಷ್ಯಾ ಸೂಯೆಜ್ ನೌಕೆ” ಮೂಲಕ ಬಾಹ್ಯಾಕಾಶಕ್ಕೆ ಹೋಗಿದ್ದರು. ಆಗ ರಾಕೇಶ್ ಶರ್ಮಾ ಅವರ ಜೊತೆಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಾತುಕತೆ ನಡೆಸಿದ್ದರು. ಆಗ ಇಂದಿರಾ ಗಾಂಧಿ ಅವರು ರಾಕೇಶ್ ಶರ್ಮಾ ಅವರಿಗೆ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತಿದೆ ಅಂತ ಕೇಳಿದ್ದರು. ಅದಕ್ಕೆ ‘‘ಸಾರೆ ಜಹಾಸೆ ಅಚ್ಚಾ ಹಿಂದೂಸ್ತಾನ್ ಹಮಾರಾ’’ ಅಂತ ಪ್ರತಿಕ್ರಿಯೆ ಕೊಟ್ಟಿದ್ದರು.ಇದೇ ಜೂನ್ 25ರಂದು ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಇತರ ಮೂವರು ಗಗನಯಾತ್ರಿಗಳ ಜೊತೆ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿ ಐಎಸ್‌ಎಸ್‌ಗೆ ಹಾರಿದ್ದರು. ಈ ಮೂಲಕ 40 ವರ್ಷಗಳ ನಂತರ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಗಗನಯಾತ್ರಿಯೆನಿಸಿಕೊಂಡ ಶುಭಾಂಶು ಶುಕ್ಲಾ ಇತಿಹಾಸ ಸೃಷ್ಟಿಸಿದ್ದರು. ಬಾಹ್ಯಾಕಾಶ ನಿಲ್ದಾಣ ತಲುಪಿದ ಶುಭಾಂಶು ಶುಕ್ಲಾ ಅವರ ಜೊತೆ ಪ್ರಧಾನಿ ಮೋದಿಯವರು ಮಾತನಾಡಿದಾಗ ‘ಜೈ ಹಿಂದ್’ ಎಂದಿದ್ದಾರೆ. "ಈ ಬಾಹ್ಯಾಕಾಶ ಯಾತ್ರೆ ನನ್ನದಲ್ಲ, ನನ್ನ ದೇಶದ್ದು. ಬಾಹ್ಯಾಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತಿದೆ. ಭೂಮಿಯನ್ನು ಹೊರಗಿನಿಂದ ನೋಡಿದಾಗ, ಯಾವುದೇ ಗಡಿ ಇಲ್ಲ, ಯಾವುದೇ ರಾಜ್ಯ ಅಸ್ತಿತ್ವದಲ್ಲಿಲ್ಲ ಮತ್ತು ಯಾವುದೇ ದೇಶಗಳು ಅಸ್ತಿತ್ವದಲ್ಲಿಲ್ಲ ಎಂದು ತೋರುತ್ತದೆ. ನಾವೆಲ್ಲರೂ ಮಾನವೀಯತೆಯ ಭಾಗ, ಮತ್ತು ಭೂಮಿಯು ನಮ್ಮ ಒಂದೇ ಮನೆ, ಮತ್ತು ನಾವೆಲ್ಲರೂ ಅದರಲ್ಲಿದ್ದೇವೆ" ಎಂದಿದ್ದಾರೆ.
ಬಾಹ್ಯಾಕಾಶ ಕೇಂದ್ರದಲ್ಲಿ ಜಾತಿ ಭೇದ ಇರಲಿಕ್ಕಿಲ್ಲ. ಆದರೇನು, ಭೂಮಿಯಲ್ಲಿ ಇದೆಯಲ್ಲ!
ಆಗಸದಲ್ಲೊಂದು ಸಂಶೋಧನಾ ಅರಮನೆ - ದಿನಕ್ಕೆ 16 ಸೂರ್ಯೋದಯ, ಸೂರ್ಯಾಸ್ತ!