
ಮುಂಬೈ: ಆಶ್ರಯ ಅರಸಿ ಬಂದ ನಾಯಿಯೊಂದನ್ನು ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಕಿಟಕಿಯ ಮೂಲಕ ಓಡಿಸಿದ ಪರಿಣಾಮ ಅದು 15ನೇ ಮಹಡಿಯಿಂದ ಹಾರಿ ಸಾವಿಗೀಡಾದ ಮನಕಲುಕುವ ಘಟನೆ ಮುಂಬೈನಲ್ಲಿ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂಕ ಪ್ರಾಣಿಯ ಬಗ್ಗೆ ಅಮಾನವೀಯ ವರ್ತನೆ ತೋರಿದ ಗಾರ್ಡ್ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಡೆತ ತಾಳಲಾರದೇ ಕಿಟಕಿಯಿಂದ ಹಾರಿದ ನಾಯಿ
ವೈರಲ್ ಆದ ವೀಡಿಯೋದಲ್ಲಿ ನಾಯಿಯೊಂದು ಕಟ್ಟಡವನ್ನು ಪ್ರವೇಶಿಸಿ ಬಹುಶಃ ಆಹಾರ ಅರಸುತ್ತಾ 15ನೇ ಮಹಡಿಯನ್ನು ಏರಿತ್ತು. ಈ ವೇಳೆ ಆ ಬಿಲ್ಡಿಂಗ್‌ನಲ್ಲಿದ್ದ ವ್ಯಕ್ತಿಯೊಬ್ಬ ಬಹುಶಃ ಸೆಕ್ಯೂರಿಟಿ ಗಾರ್ಡ್ ನಾಯಿಯನ್ನು ಕೋಲಿನಿಂದ ಹಿಡಿದು ಓಡಿಸಿದ್ದಾನೆ. ಈ ವೇಳೆ ನಾಯಿ ಅಪಾರ್ಟ್‌ಮೆಂಟ್‌ನ ಕಿಟಕಿಯೊಂದರಿಂದ ಕೆಳಗೆ ಹಾರುವುದಕ್ಕೆ ನೋಡಿದೆ. ಆದರೆ ಬಹಳ ಆಳವಿದ್ದ ಕಾರಣ ಅಲ್ಲೆ ಕೆಲ ನಿಮಿಷ ಮುದುಡಿ ಸಾಯೋದ ಬದುಕೋದ ಎಂಬ ಅನುಮಾನದಲ್ಲಿ ಬೇರೆ ದಾರಿ ಕಾಣದೇ ನಿಂತಿದೆ. ಈ ವೇಳೆ ನಾಯಿಯನ್ನು ಓಡಿಸಿದ್ದ ವ್ಯಕ್ತಿ ನಾಯಿಯ ಬೆನ್ನಿಗೆ ಕೋಲಿನಿಂದ ಥಳಿಸುತ್ತಾನೆ. ಈ ವೇಳೆ ನಾಯಿ ಸೀದಾ ಕೆಳಗೆ ಹಾರಿದ್ದು, ಸಾವನ್ನಪ್ಪಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈನ ಕಂಡಿವಾಲಿ ಪ್ರದೇಶದಲ್ಲಿ ಜೂನ್ 18 ರಂದು ಈ ಘಟನೆ ನೆಡೆದಿದೆ. ಮುಂಜಾನೆ 8 ಗಂಟೆಗೆ ಈ ಘಟನೆ ನಡೆದಿದ್ದು, ಕಟ್ಟಡದ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದೆ.
ಆರೋಪಿ ವಿರುದ್ಧ ಎಫ್‌ಐಆರ್ ದಾಖಲು
ವೀಡಿಯೋ ನೋಡಿದ ಅನೇಕರು ಈ ರೀತಿ ಕೌರ್ಯ ತೋರಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. streetdogsofbombay ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದೆ. ಪಿಎಫ್‌ಎ(People For Animals)ಮುಂಬೈ ಸಂಘಟನೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನಾಯಿಯ ಸಾವಿಗೆ ಕಾರಣವಾದ ವಾಚ್‌ಮ್ಯಾನ್‌ನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ವೀಕ್ಷಿಸಿದ ಜನ ಕರ್ಮ ಈತನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಬೆಕ್ಕನ್ನು 9ನೇ ಮಹಡಿಯಿಂದ ಎಸೆದಿದ್ದ ಪಾಪಿ
ಹಾಗೆಯೇ ಈ ತಿಂಗಳ ಆರಂಭದಲ್ಲಿ ಮುಂಬೈನ ಮಲದ್‌ನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ವ್ಯಕ್ತಿಯೊಬ್ಬ ಮನೆಯೊಳಗೆ ಬಂದ ಬೇರೆಯವರ ಸಾಕುಬೆಕ್ಕನ್ನು ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಎಸೆದು ಕೊಂದಿದ್ದ. ಈ ದೃಶ್ಯವೂ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು. ಕಾಳು ಹೆಸರಿನ 15 ತಿಂಗಳ ಸಾಕು ಬೆಕ್ಕನ್ನು 9ನೇ ಮಹಡಿಯಿಂದ ಆರೋಪಿ ಕೆಳಗೆ ಎಸೆದಿದ್ದ. ಜೂನ್ 5ರಂದು ಸಂಜೆ 6.30 ಹಾಗೂ 6.45ರ ನಡುವೆ ಘಟನೆ ನಡೆದಿತ್ತು. ಮಲ್ವಾನಿ ಪ್ರದೇಶದ ಗ್ರೋಮೋರ್ ಒನಿಕ್ಸ್ ಸೊಸೈಟಿಯಲ್ಲಿ(GrowMore Onyx Society) ಈ ಘಟನೆ ನಡೆದಿತ್ತು.
ನಂತರ ಆರೋಪಿಯನ್ನು ಕಸಂ ಸೈಯದ್ ಎಂದು ಗುರುತಿಸಲಾಗಿತ್ತು. ಈ ಬೆಕ್ಕು ಕಟ್ಟಡದ 21ನೇ ಮಹಡಿಯಲ್ಲಿ ವಾಸ ಮಾಡುತ್ತಿದ್ದ ಗುರ್ಜನ್ ಮೊಹಮ್ಮದ್ ಉಮರ್ ಶಮ್ಶಿ ಎಂಬುವವರಿಗೆ ಸೇರಿದ್ದಾಗಿತ್ತು. ಆರಂಭದಲ್ಲಿ ಈ ಬೆಕ್ಕಿಗೆ ಯಾವುದೋ ವಾಹನ ಡಿಕ್ಕಿಯಾಗಿದೆ ಎಂದು ಆ ಬೆಕ್ಕಿನ ಮನೆಯವರು ಭಾವಿಸಿದ್ದರು. ಆದರೆ ಸಿಸಿಟಿವಿ ವೀಡಿಯೋ ನೋಡಿದಾಗ ಕಸಂ ಸೈಯದ್‌ನ ಕೃತ್ಯ ಅಲ್ಲಿ ಸೆರೆ ಆಗಿತ್ತು. ವಿಂಡೋ ಸಮೀಪದ ಶೂ ರಾಕ್ ಏರಿದ್ದ ಬೆಕ್ಕನ್ನು ಆತ ಕೈಯಲ್ಲಿ ಹಿಡಿದು ಕಿಟಕಿಯಿಂದ ಹೊರಗೆ ಎಸೆದಿದ್ದ. ಇದಾದ ನಂತರ ಶಂಶಿ ಈ ವೀಡಿಯೋ ನೀಡಿ ಪೊಲೀಸರಿಗೆ ( Malad police) ದೂರು ನೀಡಿದ್ದರು. ಬಳಿಕ ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರಾಣಿಗಳ ವಿರುದ್ಧ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.