
ಶಾಲಾ ಶಿಕ್ಷಣವನ್ನು ಮಧ್ಯದಲ್ಲೇ ನಿಲ್ಲಿಸಿದ ವ್ಯಕ್ತಿಯೊಬ್ಬರು ಇಂದು ಬರೋಬ್ಬರಿ ₹10,000 ಕೋಟಿಗೂ ಹೆಚ್ಚು ಮೌಲ್ಯದ ಕಂಪನಿಯ ಸಂಸ್ಥಾಪಕರಾಗಿ ಬೆಳೆದಿದ್ದಾರೆ. ಇದು ತಮಿಳುನಾಡಿನ ಪ್ರಸಿದ್ಧ ಡೈರಿ ಬ್ರ್ಯಾಂಡ್ ಮಿಲ್ಕಿ ಮಿಸ್ಟ್ (Milky Mist) ಸಂಸ್ಥಾಪಕ ಟಿ. ಸತೀಶ್ ಕುಮಾರ್ ಅವರ ಉದ್ಯಮಶೀಲತೆಯ ಕಥೆ. ಇದೀಗ ಕಂಪನಿ IPOಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಅವರ ಈ ಜರ್ನಿ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.
ಸತೀಶ್ ಕುಮಾರ್ ಅವರಿಗೆ 16 ವರ್ಷ ವಯಸ್ಸಾಗಿದ್ದಾಗ ಕುಟುಂಬದ ಹಾಲಿನ ವ್ಯಾಪಾರ ಸಂಕಷ್ಟದಲ್ಲಿತ್ತು. ಕಡಿಮೆ ಲಾಭ, ಹಾಲಿನ ಬೇಗ ಹಾಳಾಗುವ ಸ್ವಭಾವ ಮತ್ತು ವಿತರಣೆಯ ಸಮಸ್ಯೆಗಳಿಂದ ಕುಟುಂಬದ ಉದ್ಯಮ ಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಓದನ್ನು ಮುಂದುವರಿಸುವ ಬದಲು ಕುಟುಂಬದ ಉದ್ಯಮಕ್ಕೆ ಕೈಜೋಡಿಸಲು ಸತೀಶ್ ಕುಮಾರ್ ಶಾಲೆ ತೊರೆದರು.
ಕುಟುಂಬದ ಹಾಲಿನ ವ್ಯಾಪಾರದಲ್ಲಿದ್ದ ಸಮಸ್ಯೆಗಳನ್ನು ಗಮನಿಸಿದ ಸತೀಶ್ ಕುಮಾರ್ ಹೊಸ ದಾರಿ ಹುಡುಕಿದರು. ಕೇವಲ ಹಾಲು ಮಾರಾಟ ಮಾಡುವ ಬದಲು ಮೌಲ್ಯವರ್ಧಿತ ಡೈರಿ ಉತ್ಪನ್ನಗಳನ್ನು ತಯಾರಿಸುವ ಆಲೋಚನೆ ಮಾಡಿದರು. ಅದರ ಭಾಗವಾಗಿ ಪನ್ನೀರ್ ತಯಾರಿಸಿ ಮಾರಾಟ ಮಾಡಲು ಆರಂಭಿಸಿದರು. 1990ರ ದಶಕದಲ್ಲಿ ಆರಂಭವಾದ ಈ ಸಣ್ಣ ಪ್ರಯತ್ನವೇ ಮುಂದೆ ‘ಮಿಲ್ಕಿ ಮಿಸ್ಟ್’ ಬ್ರ್ಯಾಂಡ್ ಆಗಿ ಬೆಳೆಯಿತು.
ಇಂದು ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಹೊಂದಿರುವ ಕಂಪನಿಯ ಹಿಂದೆ ಆರಂಭದಲ್ಲಿ ಇದ್ದದ್ದು ಬಹಳ ಸಣ್ಣ ಪ್ರಮಾಣದ ವ್ಯಾಪಾರ. ಸತೀಶ್ ಕುಮಾರ್ 10 ಕೆ.ಜಿ ಪನ್ನೀರ್ ಮಾರಾಟದಿಂದ ತಮ್ಮ ಉದ್ಯಮದ ಪಯಣ ಆರಂಭಿಸಿದ್ದರು ಎಂದು Moneycontrol ವರದಿ ಹೇಳುತ್ತದೆ. ನಂತರ ಕಂಪನಿ ಪನ್ನೀರ್ ಮಾತ್ರವಲ್ಲದೆ ಮೊಸರು, ಚೀಸ್, ಯೋಗರ್ಟ್, ಐಸ್‌ಕ್ರೀಂ ಸೇರಿದಂತೆ ಹಲವು ವ್ಯಾಲ್ಯೂ-ಆಡೆಡ್ ಡೈರಿ ಉತ್ಪನ್ನಗಳತ್ತ ವಿಸ್ತರಿಸಿತು.
ಸಣ್ಣ ಕುಟುಂಬದ ಉದ್ಯಮದಿಂದ ಆರಂಭವಾದ ಮಿಲ್ಕಿ ಮಿಸ್ಟ್ ಇಂದು ದೇಶದ ಪ್ರಮುಖ ಪ್ರೀಮಿಯಂ ಡೈರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಕಂಪನಿಯ IPO ಮೂಲಕದ ಮೌಲ್ಯಮಾಪನದ ಆಧಾರದ ಮೇಲೆ, ಮೇಲಿನ ಬೆಲೆ ಪಟ್ಟಿಯಲ್ಲಿ ಕಂಪನಿಯ ಪೋಸ್ಟ್-ಇಶ್ಯೂ ವ್ಯಾಲ್ಯುವೇಶನ್ ಸುಮಾರು ₹10,778 ಕೋಟಿ ಆಗಿದೆ. 2026ರ ಹಣಕಾಸು ವರ್ಷದಲ್ಲಿ ಕಂಪನಿಯ ಆದಾಯ ಸುಮಾರು ₹3,138 ಕೋಟಿ ಆಗಿದ್ದು, ಲಾಭದಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು Reuters ವರದಿ ಮಾಡಿದೆ.
ಮಿಲ್ಕಿ ಮಿಸ್ಟ್ ಈಗ ಷೇರು ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗಿದೆ. ಕಂಪನಿಯ IPO ಗಾತ್ರವನ್ನು ಪರಿಷ್ಕರಿಸಿ ಸುಮಾರು ₹1,553 ಕೋಟಿಗೆ ಇಳಿಸಲಾಗಿದೆ. IPO ಆಗಸ್ಟ್ 11ರಿಂದ 13ರವರೆಗೆ ತೆರೆಯಲಿದ್ದು, ಆಗಸ್ಟ್ 18ರಂದು ಷೇರುಗಳು BSE ಮತ್ತು NSEಯಲ್ಲಿ ಲಿಸ್ಟ್ ಆಗುವ ನಿರೀಕ್ಷೆಯಿದೆ. IPOಗೆ ಮುನ್ನ ಕಂಪನಿಯು ಆಂಕರ್ ಹೂಡಿಕೆದಾರರಿಂದ ₹465.29 ಕೋಟಿ ಸಂಗ್ರಹಿಸಿದೆ. 19 ಸಂಸ್ಥಾಪಕ ಹೂಡಿಕೆದಾರರಿಗೆ ಮೇಲಿನ ಬೆಲೆ ಬ್ಯಾಂಡ್ ₹140ರಂತೆ ಷೇರುಗಳನ್ನು ಹಂಚಿಕೆ ಮಾಡಲಾಗಿದೆ.
ಓದನ್ನು ಅರ್ಧದಲ್ಲೇ ನಿಲ್ಲಿಸಿದರೂ ಕಲಿಯುವುದನ್ನು ನಿಲ್ಲಿಸಬಾರದು ಎಂಬುದಕ್ಕೆ ಸತೀಶ್ ಕುಮಾರ್ ಅವರ ಕಥೆ ಉದಾಹರಣೆಯಾಗಿದೆ. ಕುಟುಂಬದ ಸಂಕಷ್ಟದಿಂದ ಆರಂಭವಾದ ಅವರ ಉದ್ಯಮ ಪಯಣ ಇಂದು ದೇಶದ ಪ್ರಮುಖ ಡೈರಿ ಬ್ರ್ಯಾಂಡ್‌ವೊಂದನ್ನು ಕಟ್ಟುವ ಮಟ್ಟಕ್ಕೆ ಬೆಳೆದಿದೆ.10 ಕೆ.ಜಿ ಪನ್ನೀರ್‌ನಿಂದ ಆರಂಭವಾದ ಉದ್ಯಮ.. ಇಂದು ₹10,000 ಕೋಟಿಗೂ ಹೆಚ್ಚು ಮೌಲ್ಯ! ಸತೀಶ್ ಕುಮಾರ್ ಅವರ ಈ ಕಥೆ ಉದ್ಯಮ ಕ್ಷೇತ್ರದಲ್ಲಿ ಹೊಸದಾಗಿ ಹೆಜ್ಜೆ ಇಡಲು ಬಯಸುವವರಿಗೆ ಪ್ರೇರಣೆಯಾಗಿದೆ